2017ರಲ್ಲಿ ನಡೆದ ಮ್ಯಾನ್ಮಾರ್ ಹಿಂಸಾಚಾರದಲ್ಲಿ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್ ದೊಡ್ಡ ಪಾತ್ರವಹಿಸಿದೆ. ಇದರಿಂದ ಸಾವಿರಾರು ರೋಹಿಂಗ್ಯಾಗಳು ನಿರಾಶ್ರಿತರಾಗಬೇಕಾಯಿತು ಎಂದು ರೋಹಿಂಗ್ಯಾ ಹಕ್ಕುಗಳ ಸಂಘಟನೆ ಆರೋಪಿಸಿವೆ.
ಆ ರೋಹಿಂಗ್ಯಾ ನಿರಾಶ್ರಿತರಿಗೆ ನ್ಯಾಯ ದೊರಕಿಸಲು ಫೇಸ್‌ಬುಕ್ ಮುಂದಾಗಬೇಕು ಎಂದು ರೋಹಿಂಗ್ಯಾ ಹಕ್ಕುಗಳ ಸಂಘಟನೆಗಳು ಭಾನುವಾರ ಜಂಟಿ ಹೇಳಿಕೆಯಲ್ಲಿ ಒತ್ತಾಯಿಸಿವೆ.
ವಾಯ್ಸ್ ಆಫ್ ರೋಹಿಂಗ್ಯಾ ಪ್ರತಿನಿಧಿಗಳು, ಅರಾಕನ್ ರೋಹಿಂಗ್ಯಾ ಸೊಸೈಟಿ ಫಾರ್ ಪೀಸ್ ಅಂಡ್ ಹ್ಯೂಮನ್ ರೈಟ್ಸ್, ರೋಹಿಂಗ್ಯಾ ಯೂತ್ ಫಾರ್ ಲೀಗಲ್ ಆಕ್ಷನ್ ಮತ್ತು ರೋಹಿಂಗ್ಯಾ ವುಮೆನ್ ಫಾರ್ ಜಸ್ಟೀಸ್ ಅಂಡ್ ಪೀಸ್ ಸಂಘಟನೆಗಳು ಫೇಸ್‌ಬುಕ್‌ನ ಮಾನವ ಹಕ್ಕುಗಳ ನಿರ್ದೇಶಕ ಮಿರಾಂಡಾ ಸಿಸ್ಸನ್ಸ್ ಮತ್ತು ಅವರ ಸಹೋದ್ಯೋಗಿ ಅಲೆಕ್ಸ್ ವರೋಫ್ಕಾ ಅವರೊಂದಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ಒತ್ತಾಯಿಸಿದ್ದಾರೆ.
“ಮ್ಯಾನ್ಮಾರ್‌ನಲ್ಲಿ ನಡೆದ ಹಿಂಸಾಚಾರದ ನಂತರ ನಾವು ಮ್ಯಾನ್ಮಾರ್‌ನಿಂದ ಬಾಂಗ್ಲಾದೇಶದ ಕಾಕ್ಸ್ ಬಜಾರ್‌ಗೆ ವಲಸೆ ಹೋಗಬೇಕಾಯಿತು. ಈ ಹಿಂಸಾಚಾರದಲ್ಲಿ ಫೇಸ್‌ಬುಕ್ ಪಾತ್ರವಿದೆ. ಈಗ, ನಮಗೆ ನ್ಯಾಯ ಪಡೆಯಲು ಸಹಾಯ ಮಾಡುವುದು ಮತ್ತು ನಿರಾಶ್ರಿತರ ಶಿಬಿರದಲ್ಲಿ ನಮ್ಮ ಜೀವನವನ್ನು ಸುಧಾರಿಸುವಂತೆ ಮಾಡುವುದು ಫೇಸ್‌ಬುಕ್‌ನ ಕರ್ತವ್ಯ” ಎಂದು ಅವರು ಒತ್ತಾಯಿಸಿದ್ದಾರೆ.
ಅಂತರರಾಷ್ಟ್ರೀಯ ನ್ಯಾಯ ಕಾರ್ಯವಿಧಾನಗಳು ನಮಗೆ ಸಾಕಷ್ಟು ಸಹಾಯ ಮಾಡಿಲ್ಲ. ಹಾಗಾಗಿ ಫೇಸ್‌ಬುಕ್ ತನ್ನಲಿರುವ ಮಾಹಿತಿಯನ್ನು ಅವರೊಂದಿಗೆ ಹಂಚಿಕೊಳ್ಳಬೇಕು ಎಂದು ಒತ್ತಾಯಿಸಲಾಗಿದೆ.
“ಕಾನೂನು ಪ್ರಕರಣಗಳಲ್ಲಿ ಬಳಸಬಹುದಾದ ಮಾಹಿತಿಗಳ ಕುರಿತು ಮ್ಯಾನ್ಮಾರ್‌ನ ಸ್ವತಂತ್ರ ತನಿಖಾ ಕಾರ್ಯವಿಧಾನದೊಂದಿಗೆ ಫೇಸ್‌ಬುಕ್ ಕಾರ್ಯನಿರ್ವಹಿಸುತ್ತಿದೆ ಎಂದು ಸಿಸ್ಸನ್ಸ್ ನಮಗೆ ಮಾಹಿತಿ ನೀಡಿದ್ದಾರೆ” ಎಂದು ರೋಹಿಂಗ್ಯಾ ಪ್ರತಿನಿಧಿಗಳು ಹೇಳಿದ್ದಾರೆ.
ನಿರಾಶ್ರಿತರ ಶಿಬಿರಗಳಲ್ಲಿನ ಸೇವೆಗಳು ಮತ್ತು ಚಟುವಟಿಕೆಗಳಿಗೆ ಉದಾ ಯುವಜನರು ಮತ್ತು ಹಿರಿಯರಿಗೆ ಶಿಕ್ಷಣ ಮತ್ತು ತರಬೇತಿಯನ್ನು ವ್ಯವಸ್ಥೆಗೊಳಿಸಲು ಫೇಸ್‌ಬುಕ್ ಹಣಕಾಸಿನ ನೆರವು ನೀಡುವಂತೆ ಸಂಘಟನೆಗಳು ಮನವಿ ಮಾಡಿವೆ.
“ಹಿಂಸಾತ್ಮಕ ದ್ವೇಷದ ಮಾತನ್ನು ಎದುರಿಸಲು ಫೇಸ್‌ಬುಕ್ ಸಾಕಷ್ಟು ಕೆಲಸ ಮಾಡುತ್ತಿದೆ. ವಿಶೇಷವಾಗಿ ನವೆಂಬರ್ 8 ರಂದು ನಡೆಯುವ ಚುನಾವಣೆಗಳ ಸಂದರ್ಭದಲ್ಲಿ ಜಾಗರೂಕರಾಗಿದ್ದೇವೆ ಎಂದು ಫೇಸ್‌ಬುಕ್‌ನ ಮಾನವ ಹಕ್ಕುಗಳ ನಿರ್ದೇಶಕ ಮಿರಾಂಡಾ ಸಿಸ್ಸನ್ಸ್ ಹೇಳಿದ್ದಾರೆ.
ಯುಎನ್ ನಿರಾಶ್ರಿತರ ಸಂಸ್ಥೆ (UNHRC) ಕಳೆದ ವಾರ ಅಂತರರಾಷ್ಟ್ರೀಯ ಸಮುದಾಯವು ನಿರಾಶ್ರಿತ ಮತ್ತು ಸ್ಥಳಾಂತರಗೊಂಡವರಿಗೆ ತನ್ನ ಸಹಾಯ ನೀಡಬೇಕೆಂದು ಮನವಿ ಮಾಡಿದೆ.
UNHRC ವಕ್ತಾರ ಆಂಡ್ರೆಜ್ ಮಹೇಸಿಕ್, ಯುಎನ್ ನಿರಾಶ್ರಿತರ ಸಂಸ್ಥೆ ಮತ್ತು ಬಾಂಗ್ಲಾದೇಶ ಸರ್ಕಾರವು ಪ್ರತ್ಯೇಕವಾಗಿ 860,000 ರೋಹಿಂಗ್ಯಾ ನಿರಾಶ್ರಿತರನ್ನು ಕಾಕ್ಸ್ ಬಜಾರ್ ವಸಾಹತುಗಳಲ್ಲಿ ದಾಖಲಿಸಿಕೊಂಡಿದೆ ಎಂದು ಹೇಳಿದ್ದಾರೆ.
ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ನೋಂದಾಯಿತ 10 ರೋಹಿಂಗ್ಯಾ ನಿರಾಶ್ರಿತರಲ್ಲಿ ದೇಶವು ಈಗ 9ಜನರ ಆತಿಥ್ಯ ವಹಿಸಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನೀರಿಗೆ ಹಾರಿದ ಮಲೇಷ್ಯಾದ 24 ರೋಹಿಂಗ್ಯಾ ವಲಸಿಗರು! ಬದುಕಿದ್ದ ಒಬ್ಬ ಮಾತ್ರ..


