Homeಮುಖಪುಟಅಮರೇಶ ನುಗಡೋಣಿ ಅವರ ಹೊಸ ಕಾದಂಬರಿ `ಕೊರೊನಾ ಕಥೆ’ಗೆ ಕಾದಂಬರಿಕಾರನ ಮುನ್ನುಡಿ

ಅಮರೇಶ ನುಗಡೋಣಿ ಅವರ ಹೊಸ ಕಾದಂಬರಿ `ಕೊರೊನಾ ಕಥೆ’ಗೆ ಕಾದಂಬರಿಕಾರನ ಮುನ್ನುಡಿ

ವಿಶ್ವವ್ಯಾಪಿ ನಡೆದ ಈ ದುರಂತವನ್ನು ಚಿತ್ರಿಸಲು ಸಾವಿರಾರು ಕವಿತೆ, ಕತೆ, ಕಾದಂಬರಿ, ಲೇಖನಗಳಿಗೂ ಸಾಧ್ಯವಿಲ್ಲ. ಹತ್ತಾರು ಮಹಾಕಾವ್ಯ, ಮಹಾಕಾದಂಬರಿಗಳು ರಚನೆಗೆ ವಸ್ತುವನ್ನು ಒದಗಿಸಲಿದೆ ಈ ಕೊರೊನಾ ವೈರಸ್ ಆಕ್ರಮಣ.

- Advertisement -
- Advertisement -

ಲಾಕ್‌ಡೌನ್ ಆದ ದಿನದಿಂದ ಎಲ್ಲರಂತೆ ನಾನೂ ಅನಿವಾರ್ಯವಾಗಿ ಮನೆಯಲ್ಲೇ ಉಳಿಯಬೇಕಾಯಿತು. ಜನವರಿ ಮುಗಿಯುವ ಹೊತ್ತಿಗೆ ಕೋವಿಡ್-19 ಅಥವಾ ಕೊರೊನಾ ವೈರಸ್ ಹಬ್ಬುತ್ತಾ ವಿಶ್ವದ ಜನರನ್ನು ನಿಟ್ಟುಸಿರು ಬಿಡುವಂತೆ ಮಾಡುತ್ತಿತ್ತು. ಭಾರತಕ್ಕೆ ಹಬ್ಬುವ ಸುದ್ದಿಗಳು ಮೆಲ್ಲಗೆ ಶುರುವಾದವು. ನಾನು ಜನವರಿ 13 ರಿಂದ 16 ರವರೆಗೆ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಆಹ್ವಾನದ ಮೇರೆಗೆ ಹೋಗಿದ್ದಾಗಲೇ ಕೊರೊನಾ ವೈರಸ್ಸಿನ ಅಪಾಯದ ಬಗ್ಗೆ ಕೇರಳದಲ್ಲಿ ಸುದ್ದಿಗಳು ಕೇಳಿಬಂದವು. ಮಾರ್ಚ್ ಮೊದಲ ವಾರ ಮೈಸೂರಿಗೆ ಸವಿತಾ, ಸಮಯನ ಜೊತೆಗೆ ಹೋಗಿದ್ದೆ.

ವಿದ್ಯಾರ್ಥಿ ಗೆಳೆಯ ಸುದೀಪ್ ತನ್ನ ಕಾಲೇಜಿನಲ್ಲಿ ಉಪನ್ಯಾಸ ಏರ್ಪಡಿಸಿದ್ದ. ಜೆ.ಎಸ್.ಎಸ್ ಕಾಲೇಜಿನಲ್ಲಿ ಕಾರ್ಯಕ್ರಮ ಮುಗಿಸಿದ ರಾತ್ರಿಯೇ ಪ್ರಾಧ್ಯಾಪಕ ಶಿವಸ್ವಾಮಿ ಬಂದು, ನಂಜನಗೂಡಿನ ಕಾಲೇಜು ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಿಮ್ಮ ಕತೆಗಳನ್ನು ಓದಿದ್ದಾರೆ. ನಾಳೆ ಬಂದು ಮಾತಾಡಿ, ನಮಗೆ ಖುಷಿಯಾಗುತ್ತದೆ- ಎಂದು ಮರುದಿನ ಮುಂಜಾನೆಯೇ ಬಂದು ಕರೆದೊಯ್ದು ಉಪನ್ಯಾಸ ಮಾಡಿಸಿ ಸಂಜೆ ಮೈಸೂರಿಗೆ ತಲುಪಿಸಿದ್ದ. ನಾನು, ಸಮಯ ಮರಳಿ ಹೊಸಪೇಟೆಗೆ ಬಂದೆವು. ತಂಗಿ ಮನೆಯಲ್ಲಿದ್ದ ಸವಿತಾ ಮೂರು ದಿನ ತಡವಾಗಿ ಬಂದಳು. ಬರುವಾಗ ರೈಲಿನಲ್ಲಿ ಮಾಸ್ಕ್ ಹಾಕಿಕೊಂಡೇ ಬಂದಳು. ನಂಜನಗೂಡಿನ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಂದ ಮೈಸೂರಿಗೆ ಕೊರೊನಾ ವೈರಸ್ ಹಬ್ಬುತ್ತಿತ್ತು.

ಯಾವಾಗೊ ಒಪ್ಪಿಕೊಂಡಿದ್ದ ವಿಚಾರ ಸಂಕಿರಣಕ್ಕೆ ನಾನು ಮಾರ್ಚ್ 15 ರಂದು ಬೆಟ್ಟಂಪಾಡಿಗೆ ಹೋಗುವುದು ಬಂತು. ಮಂಗಳೂರು ವಿ.ವಿ.ಯ ಧನಂಜಯ ಕುಂಬ್ಳೆ ಅವರು ಬರಲು ಒತ್ತಡ ತಂದರು. ಹೊಸಪೇಟೆಯಿಂದ ಬೆಟ್ಟಂಪಾಡಿಗೆ ಹದಿನೈದು ತಾಸು ಪ್ರಯಾಣ ಮಾಡಬೇಕಿತ್ತು. ಉಜಿರೆಯ ರಾಜಶೇಖರ, ಇಪ್ಪತ್ತು ಇಪ್ಪತೈದು ನಿಮಿಷದ ಉಪನ್ಯಾಸ ಮಾಡಲು ತ್ರಾಸ್ ತಗಂಡು ಬರಬೇಡ ಎಂದು ಗದರಿಸಿದ. ನನಗೆ ಹೋಗಲು- ಬಿಡಲು ಸಂಕಟವಾಯ್ತು. ನುಗಡೋಣಿ ಬಸವ ನನ್ನ ಪಾಲಿಗೆ ಬಂದ. ಕಾರ್ಯಕ್ರಮವು ಕೊರೊನಾದಿಂದಲೇ ರದ್ದಾಯಿತು, ಸಂತೋಷವಾಯ್ತು. ನಮ್ಮ ಕನ್ನಡ ವಿಶ್ವವಿದ್ಯಾಲಯವು ಬೋಧಕರಿಗೆ ಏಪ್ರಿಲ್ 15ರಿಂದ ರಜೆ ನೀಡಲಿತ್ತು. ಕೊರೊನಾ ವೈರಸ್ ಹಬ್ಬುವ ಸುದ್ದಿಗಳು ದಟ್ಟವಾಗುತ್ತಿದ್ದವು. ಇನ್ನೂ ಒಂದು ತಿಂಗಳು ಡ್ಯೂಟಿಗೆ ಹೋಗಿ ಬರುವುದಿತ್ತು.

ಆದರೆ ಮಾರ್ಚ್ 25ರಂದೇ ಲಾಕ್‌ಡೌನ್ ಘೋಷಿಸಲಾಯಿತು. ಮನೆಯಲ್ಲೇ ಇರಬೇಕೆಂಬ ಆಜ್ಞೆಯನ್ನು ವಿಧಿಸಲಾಯಿತು. ಖುಷಿಯ ವಿಷಯವೆಂದರೆ, ನನಗೆ ಮನೆಯೆಂದರೆ ಸ್ವರ್ಗ ಯಾವಾಗಲೂ. ಮೂರು ವರ್ಷದಿಂದ ಕಾಡುತ್ತಿದ್ದ ಕತೆಯನ್ನು ಬರೆದರಾಯಿತೆಂದು ಮಾನಸಿಕವಾಗಿ ಸಿದ್ಧತೆ ನಡೆಸಿದೆ. ಕತೆಗೆ ಬೇಕಾದ ವಸ್ತು-ವಿಷಯವಿತ್ತು. ರೂಪ ನೀಡಲು ತಂತ್ರ ಸಿಕ್ಕಿರಲಿಲ್ಲ. ವಾರಕಾಲ ಯೋಚಿಸುವುದರಲ್ಲಿ ರೂಪದ ಸುಳಿವು ಸಿಕ್ಕಿತು, ಬರೆಯತೊಡಗಿದೆ. ಹದಿನಾರು ದಿನನಿತ್ಯ ಏಳೆಂಟು ತಾಸು ಕುಳಿತು ಬರೆದೆ. ಕಾದಂಬರಿಯಾಗಿ ಬೆಳೆಯಿತು. ತಾತ್ಕಾಲಿಕವಾಗಿ ‘ಗೌರಿಯರು’ ಎಂದು ಶೀರ್ಷಿಕೆ ನೀಡಿರುವೆ. ನಾನು ಬರೆದಿರುವ ಮೊದಲ ಕಾದಂಬರಿಯಿದು. ಇನ್ನೂ ಪ್ರಕಟಿಸಿಲ್ಲ. ಇರಲಿ.

ಆದರೆ ‘ಕೊರೊನಾ ಕಥನ’ ಕಾದಂಬರಿಯನ್ನು ಬರೆಯಬೇಕೆಂದು ನನ್ನ ಮನಸ್ಸಿನಲ್ಲಿ ಇರಲೇ ಇಲ್ಲ. ಯಾಕೆಂದರೆ, ಲಾಕ್‌ಡೌನ್ ಆದ ಮೇಲೆಯೇ ಅದರ ದಂದುಗ ಆರಂಭವಾದುದ್ದು. ಪತ್ರಿಕೆ ಓದುವುದು, ಬಹಳ ಹೊತ್ತು ಕನ್ನಡ ನ್ಯೂಸ್ ಚಾನಲ್‌ಗಳನ್ನು ನೋಡಲಾಗುತ್ತಿರಲಿಲ್ಲ. ಕೊರೊನಾ ಬಗ್ಗೆ ಭಯಾನಕ ಸುದ್ದಿ ಬಿತ್ತರಿಸುತ್ತಿದ್ದವು. ಬೆಂಗಳೂರು ನಗರವನ್ನೇ ಕೇಂದ್ರೀಕರಿಸಿ ಸುದ್ದಿಗಳನ್ನು ನೀಡುತ್ತಿದ್ದರು. ಸುಮಾರು ನಾಡಿನ ಮೂವ್ವತ್ತು ಜಿಲ್ಲೆಗಳಲ್ಲಿ ಏನಾಗುತ್ತದೆ ಎಂಬುದನ್ನು ಮಾಧ್ಯಮಗಳಿಂದ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಲಾಕ್‌ಡೌನ್‌ನಿಂದ ಏನಾಗುತ್ತದೆ ಎಂಬ ಅಲ್ಪ ಸ್ವಲ್ಪ ಚಿತ್ರಣಗಳು ಪತ್ರಿಕೆಗಳಿಂದ ತಿಳಿಯುತ್ತಿತ್ತು. ದಿನದ ಒಂದು ಗಂಟೆ ಪತ್ರಿಕೆ, ಟಿ.ವಿ. ಗಮನಿಸಲು ಸಾಕಾಗುತ್ತಿತ್ತು. ಹೀಗಾಗಿ ಲಾಕ್‌ಡೌನ್ ಸಮಯದಲ್ಲಿ ಓದಲು ಹತ್ತಾರು ಅನುವಾದಗೊಂಡ ಪುಸ್ತಕಗಳನ್ನು ಎತ್ತಿಕೊಂಡು ಓದತೊಡಗಿದೆ. ಅನ್ನಾಕರೇನಿನಾ, ಪ್ಲೇಗ್, ಪಾಬ್ಲೊ ನೆರೂಡ ನೆನಪುಗಳು ಮುಂತಾದವು.

ಮಾರ್ಚ್ ಮೂರನೆ ವಾರದಿಂದ ಏಪ್ರಿಲ್ ಎರಡನೆ ವಾರ ಶುರುವಾಗುವ ಹೊತ್ತಿಗೆ ಲಾಕ್‌ಡೌನ್, ಸೀಲ್‌ಡೌನ್, ಕಂಟೋನ್ಮೆಂಟ್ ಜೋನ್ ವಿಷಯಗಳು ನನ್ನ ಗಮನ ಸೆಳೆದವು. ಈ ಪದಗಳು, ಇವುಗಳಲ್ಲಿ ಅಡಗಿದ್ದ ಕ್ರಿಯೆಗಳು ಅಪರಿಚಿತದಿಂದ ಪರಿಚಿತದ ಕಡೆಗೆ ತೆರೆದುಕೊಂಡವು. ಕೊರೊನಾ ವೈರಸ್ ಸೋಂಕಿತ ಜನರು ಅವರ ಸ್ಥಿತಿಗತಿ ಯಾವ ಯಾವ ದೇಶಗಳಲ್ಲಿ, ನಮ್ಮ ದೇಶದಲ್ಲಿ, ರಾಜ್ಯಗಳಲ್ಲಿ, ಜಿಲ್ಲಾ- ತಾಲ್ಲೂಕುಗಳಲ್ಲಿ, ಊರುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಏರುತ್ತಿದೆ ಎಂಬುದನ್ನು ಪತ್ರಿಕೆ, ಟಿ.ವಿ., ನಮ್ಮ ವಾಟ್ಸಾಪ್‌ಗಳಲ್ಲಿ ಬರುತ್ತಿದ್ದ ಚಿಕ್ಕ ಚಿಕ್ಕ ವಿಡಿಯೋಗಳಿಂದ ಗಮನಿಸುವುದು, ಭಯಗೊಳ್ಳುವುದು ಅನಿವಾರ್ಯವಾಗಿ ಹೋಯಿತು.

ಬೆಂಗಳೂರು, ಮೈಸೂರು, ಕಲಬುರಗಿ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಮಾಣ ಮೆಲ್ಲಗೆ ಏರುತ್ತ ಸಾಗುವುದನ್ನು ನೋಡುತ್ತಿದ್ದೆ. ಪತ್ರಿಕೆಗಳಲ್ಲಿ ಬರುತ್ತಿದ್ದ ಕೊರೊನಾ ವೈರಸ್ ಹಾವಳಿಯಿಂದ ಸಾವುನೋವುಗಳ ಬವಣೆಗಳನ್ನು ಓದುತ್ತಿದ್ದರೆ ಚಿಂತನೆಗೆ ಹಚ್ಚುತ್ತಿದ್ದವು. ಟಿ.ವಿ.ಯ ಸುದ್ದಿ ಚಾನಲ್‌ಗಳಲ್ಲಿ ಬರುತ್ತಿದ್ದ ವರದಿ, ವಿಶ್ಲೇಷಣೆ ಕೇಳಲು ಬೇಸರವಾಗುತ್ತಿತ್ತು. ಹೇಳಿದ್ದನ್ನೇ ಹೇಳುವುದು, ತೋರಿಸಿದ್ದನ್ನೇ ತೋರಿಸುವುದು, ರೋಚಕತೆಯ ಮೇಲೆ ವಿಶ್ವಾಸವಿರಿಸಿಕೊಂಡು ಸೋಂಕಿತರನ್ನು, ಸಾವುಗಳನ್ನು ಟಿ.ವಿ. ನೋಡುವವರ ಮೇಲೆಯೇ ಎಸೆದುಬಿಡುವಂತೆ ಮಾಡುವುದನ್ನು ಗಮನಿಸಿದರೆ ವಿಮುಖನಾಗುವಂತೆ ಮಾಡುತ್ತಿದ್ದವು. ಚೀನಾ ದೇಶವೇ ಈ ಕೊರೊನಾ ವೈರಸ್ ಸೃಷ್ಟಿಸಿ ತನ್ನ ವೈರಿ ದೇಶಗಳಿಗೆ ರವಾನಿಸುತ್ತದೆ ಎಂಬಂತೆ ಕೂಗಿದವು. ಅದಾದನಂತರ ತಬ್ಲೀಘಿ ಜಮಾತ್ ಈ ಕೊರೊನಾ ವೈರಸನ್ನು ಭಾರತದಲ್ಲಿ ಹಬ್ಬಿಸುತ್ತಿದೆ ಎಂಬ ವರದಿಗಳು ಯಾರಿಗೂ ಪ್ರಿಯವಾಗಲಿಲ್ಲ. ತಬ್ಲೀಘಿ ವೈರಸ್, ನಿಜಾಮುದ್ದಿನ್ ವೈರಸ್, ಜಿಹಾದಿ ವೈರಸ್, ಜಮಾತಿ ವೈರಸ್ ಎಂದು ನಾನಾ ಬಗೆಯಲ್ಲಿ ಹೆಸರಿಸಿ ಪ್ರಚಾರ ಮಾಡಿದವು. ನೋಡುವ, ಕೇಳುವ ಜನರ ವಿಶ್ವಾಸ ಕಮ್ಮಿಯಾಯಿತು.

ಕೊರೊನಾ

ಒಂದು ದಿನ ಪತ್ರಿಕೆಯಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲೇ ಮೂವರು ಕೊರೊನಾ ವೈರಸ್ ಸೋಂಕಿತರು ಪತ್ತೆಯಾದದ್ದು ಬಂತು. ಭಯ ಹುಟ್ಟಿಸುವ ಸುದ್ದಿಯೇ ಇದಾಗಿತ್ತು. ಪತ್ತೆಯಾದ ವ್ಯಕ್ತಿಗಳು ವಾಸಿಸುತ್ತಿದ್ದ ಏರಿಯಾವನ್ನು ಸೀಲ್‌ಡೌನ್ ಮಾಡಿದರು. ಕಠಿಣ ನಿಯಮಗಳನ್ನೇ ಜಿಲ್ಲಾಡಳಿತ ವಿಧಿಸಿತು. ಈ ಏರಿಯಾದ ಜನರ ಬವಣೆಗಳು ಭಯಾನಕವಾಗಿದ್ದವು. ಸೀಲ್‌ಡೌನ್ ಅವಧಿ ಹದಿನಾಲ್ಕು ದಿನಗಳಿಗಿಂತ ಹೆಚ್ಚು ದಿನಗಳಾಗಿದ್ದವು. ಬಡವರಿರುವ ಏರಿಯಾವಿದು. ‘ಬರಿ ಅಕ್ಕಿ ಕೊಡುತ್ತಾರೆ’ ಏನು ಮಾಡುವುದೆಂದು ಜನರ ಅಳಲು. ಸಂಡೂರು ತಾಲ್ಲೂಕಿನ ಕೃಷ್ಣಾನಗರದಲ್ಲಿ ಒಬ್ಬ ಮಹಿಳೆಗೆ ಸೋಂಕು ತಗುಲಿದ್ದನ್ನು ಪತ್ತೆ ಹಚ್ಚಲಾಯಿತು. ತಕ್ಷಣ ಸೀಲ್‌ಡೌನ್ ಮಾಡಿದರೆಂಬ ಸುದ್ದಿ ಪ್ರಕಟವಾಯಿತು. ಸೋಂಕಿತಳ ಸಂಪರ್ಕ ಹೊಂದಿದವರನ್ನು ಪತ್ತೆ ಹಚ್ಚುತ್ತ ಹೋದಂತೆ ಎಂಬತ್ತು ಜನ ಸಿಕ್ಕರು. ಅವರೆಲ್ಲರನ್ನೂ ಕ್ವಾರಂಟೈನ್ ಮಾಡಿದರು. ಸಂಪರ್ಕಕ್ಕೆ ಒಳಗಾಗುವ ವ್ಯಕ್ತಿಗಳ ವಿಷಯ ತಮಾಷೆಯಾಗಿ ಕಾಣತೊಡಗಿತು.

ಕೊರೊನಾ ವೈರಸ್ ಹಬ್ಬುವುದನ್ನು ತಡೆಗಟ್ಟಲು ಭಾರತ ಸರ್ಕಾರ ಲಾಕ್‌ಡೌನ್ ಘೋಷಿಸಿತು. ಒಂದು ಚಿಕ್ಕ ನಿರ್ಧಾರ ಕೈಗೊಳ್ಳುವಾಗ, ಕೈಗೊಳ್ಳುವ ಮುನ್ನ, ಕೈಗೊಂಡರೆ ಆಗುವ ಪರಿಣಾಮಗಳನ್ನು ಯೋಚಿಸುವುದು ವಿವೇಕದ ಲಕ್ಷಣ. ಲಾಕ್‌ಡೌನ್ ಘೋಷಿಸುವಾಗ, ಅದರಿಂದಾಗುವ ಪರಿಣಾಮಗಳನ್ನು ಸ್ವಲ್ಪವೂ ಆಲೋಚಿಸಿದಂತೆ ಕಾಣುವುದಿಲ್ಲ. ಭಾರತದಲ್ಲಿ ನಲವತ್ತು ಕೋಟಿ ವಲಸೆ ಕಾರ್ಮಿಕರಿದ್ದಾರೆ ಎಂಬ ಅಂಕಿ ಅಂಶಗಳು ಸರ್ಕಾರಕ್ಕೆ ಇರಲಿಲ್ಲವೆಂದೇ ಕಾಣುತ್ತದೆ. ಲಾಕ್‌ಡೌನ್ ಆದ ಕ್ಷಣದಿಂದಲೇ ನಲವತ್ತು ಕೋಟಿ ವಲಸೆ
ಕಾರ್ಮಿಕರು ಕೆಲಸ ಕಳೆದುಕೊಂಡರು. ಆಶ್ರಯವನ್ನು ಕಳೆದುಕೊಂಡರು. ಕೇಂದ್ರ, ರಾಜ್ಯಗಳ ಸರ್ಕಾರಿ ನೌಕರರಿಗೆ ಮತ್ತು ಇತರೆ ಖಾಸಗಿ ಕಂಪೆನಿಗಳ ಮೇಲ್ಮಧ್ಯಮ ನೌಕರರಿಗೆ ನಷ್ಟವೇನೂ ಆಗಲಿಲ್ಲ. ರಜೆ ಸಿಕ್ಕವು. ಸಂಬಳವೂ ಬರುತ್ತಿತ್ತು.

ಪ್ರಧಾನಿ ಹೇಳಿದಂತೆ ‘ಮನೆಯಲ್ಲೇ ಇರಿ. ರುಚಿರುಚಿಯಾದದ್ದನ್ನು ಅಡುಗೆ ಮಾಡಿಕೊಂಡು ಊಟ ಮಾಡಿರಿ. ಹೆಂಡತಿ, ಮಕ್ಕಳು, ಬಂಧುಗಳ ಜತೆ ಖುಷಿಯಾಗಿರಿ’ ಅದರಂತೆ ಇರತೊಡಗಿದರು. ಲಾಕ್‌ಡೌನ್ ಅವಧಿ ಇಂತಹವರಿಗೆ ಐವತ್ತೈದು ದಿನವಲ್ಲ ಮೂನ್ನೂರ ಅರವತ್ತೈದು ದಿನಗಳಿದ್ದರೂ ಖುಷಿಪಡುವುದಕ್ಕೆ ಅಡ್ಡಿಗಳೆ ಇರಲಿಲ್ಲ. ದಿನಗೂಲಿಯೇ ಆಸ್ತಿಯಾಗಿದ್ದ ವಲಸೆ ಕಾರ್ಮಿಕರು ಹೆಚ್ಚೆಂದರೆ ಒಂದು ವಾರ ತಡೆದುಕೊಳ್ಳಬಲ್ಲರು. ಈ ಸಾಮಾನ್ಯ ಅರಿವು ಆಡಳಿತಕ್ಕೆ ಇರಲಿಲ್ಲವೆಂದರೇನರ್ಥ? ಎಲ್ಲ ವಿವೇಕಸ್ಥರು ಹೇಳುವಂತೆ ‘ಲಾಕ್‌ಡೌನ್ ಮಾಡಲಾಗುತ್ತಿದೆ. ಲಾಕ್‌ಡೌನಿನ ಸ್ವರೂಪ ಹೀಗಿರುತ್ತದೆ. ಸಿದ್ಧತೆ ಮಾಡಿಕೊಳ್ಳಿರಿ. ನಿಮ್ಮ ನಿಮ್ಮ ಮೂಲ ಮನೆಗೆ ಹೋಗಬಹುದು’ ಎಂದು ವಾರ ಹತ್ತು ದಿನಗಳ ಕಾಲ ಅವಕಾಶ ನೀಡುವಂತಹ ವಿವೇಚನೆ ಆಡಳಿತಕ್ಕೆ ಬರಲಿಲ್ಲವೆಂದರೇನರ್ಥ?

ನಲವತ್ತು ಕೋಟಿಗೂ ಮಿಕ್ಕಿದ ವಲಸೆ ಕಾರ್ಮಿಕರು ವಾರ ಹತ್ತು ದಿನ ಚರ-ಸ್ಥಿರ ಆಸ್ತಿಯಾದ ದಿನಗೂಲಿ ಕೆಲಸ ಕಳೆದುಕೊಂಡು, ಆಶ್ರಯವೂ ಇಲ್ಲದೆ ಅನಾಥರಾಗಿ ಯಾವುದೋ ರಾಜ್ಯದಲ್ಲಿ, ಯಾವುದೋ ನಗರದಲ್ಲಿ, ಯಾವುದೋ ನಿರ್ಮಾಣ ಹಂತದ ಗಗನಮುಖಿ ಕಟ್ಟಡದ ಒಂದು ಮೂಲೆಯಲ್ಲಿ ಕ್ರಿಮಿ ಕೀಟಗಳು ಸಾಯುವಂತೆ ಸಾಯಬಾರದು. ಸತ್ತರೆ ತಾವು ಹುಟ್ಟಿದ, ಬಾಳಿದ ಊರಲ್ಲಿಯೇ ಹೋಗಿ ಪ್ರಾಣ ಬಿಡುವ ನಿರ್ಧಾರ ಮಾಡುವುದು ಸಣ್ಣ ಮಾತಲ್ಲ. ನಿರ್ಧರಿಸಿದ ಕ್ಷಣವೇ ಸಂಸಾರ ಸಮೇತ, ಸಾಮಾನು ಸರಂಜಾಮಿನೊಂದಿಗೆ ಕಾಲ್ನಡಿಗೆಯಲ್ಲಿ ಹೊರಟರಲ್ಲ, ಈ ವಲಸಿಗರ ತವರು ಮನೆಯ ಹಂಬಲವನ್ನು ವ್ಯಾಖ್ಯಾನಿಸಲು ಸಾಧ್ಯವೇ? ತಮ್ಮೂರಿನ ದಿಕ್ಕು ಬಲ್ಲವರಲ್ಲ ಇವರು. ಎಷ್ಟು ದೂರವಿದೆ? ಎಷ್ಟು ದಿನ ನಡೆಯಬೇಕು? ದಾರಿಯಲ್ಲಿ ನೀರು, ಅನ್ನ ಸಿಗಬಲ್ಲುದೇ? ಲೆಕ್ಕಾಚಾರವಿಲ್ಲದೆ ತಮ್ಮೂರ ಸೆಳೆತದಿಂದ ಹೊರಟರು. ನಡೆಯುವಾಗ ಚಪ್ಪಲಿ ಸವೆದುಹೋದವು. ಬಿಸಿಲಿಗೆ ಬಟ್ಟೆಬರೆ ಸುಟ್ಟು ಹೋದವು. ಜೀವಗಳು ಸವೆದುಹೋದವು. ನಡೆವ ದಾರಿಯನ್ನೇ ಬಳಲುವಂತೆ ಮಾಡಿತು ಈ ವಲಸಿಗರ ಕಾಲ್ನಡಿಗೆ.

ಈ ವಲಸಿಗರನ್ನು ಸಾವಿರಾರು ಕಿಲೋಮೀಟರ್ ನಡೆಯುವಂತೆ ಮಾಡಿದ ವ್ಯವಸ್ಥೆಯನ್ನು ಮುಂದಿನ ಶತಮಾನವೂ ಕ್ಷಮಿಸುವುದಿಲ್ಲ.

ದಿನಗೂಲಿ ಎಂಬ ಆಸ್ತಿ ಇರುವವರೆಗೆ ದುಡಿವ ಜೀವಗಳು ಕೈ ಒಡ್ಡಿ ಬೇಡಿ ತಿನ್ನುವುದಕ್ಕೆ ಆಶೆ ಪಡುವುದಿಲ್ಲ. ಸರ್ಕಾರವೊಂದು ಇದೆ ಎಂಬುದನ್ನು ತೋರಿಸಲು ‘ಪೈಲ್‌ವಾನನಿಗೆ ಒಂದು ಗ್ಲಾಸ್ ಮಜ್ಜಿಗೆ ಕೊಟ್ಟಂತೆ’ ದುಡಿವ ವರ್ಗಕ್ಕೆ ಪರಿಹಾರ ಘೋಷಿಸಿದೆ. ಶ್ರೀಮಂತರ ಹಗೆವು ತೆಗೆಯುವುದರಲ್ಲಿ ಬಡವರ ಪ್ರಾಣ ಹಾರಿ ಹೋದವು ಎಂಬಂತಾಯಿತು. ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲಿ ನಡೆದು ಊರು ತಲುಪಿದವರೆಷ್ಟು? ಕನಿಷ್ಠ ಜವಾಬ್ದಾರಿ ಇರುವ ಸರ್ಕಾರ ಈ ಲೆಕ್ಕ ಕೊಡಬಲ್ಲದೆ?. ಹುಟ್ಟಿ ಬೆಳೆದ ತಾಯ್ನೆಲಕ್ಕೆ ಹೊರಟ ವಲಸಿಗರು ದಾರಿಯಲ್ಲಿ ಅನುಭವಿಸಿದ ನೋವು ಕೇಳಿದರೆ, ನೋಡಿದರೆ ನಮಗೇ ಉಸಿರುಗಟ್ಟುತ್ತದೆ. ಒಂದು ವಿಡಿಯೋದಲ್ಲಿ ನೋಡಿದೆ. ವರ್ಷದ ಮಗುವನ್ನು ಸೈಕಲ್ ಹ್ಯಾಂಡಲ್‌ಗಳ ನಡುವೆ ಒಂದು ಬಟ್ಟೆ ಗಂಟುಯಿಟ್ಟು, ಅದರ ಮೇಲೆ ಬೋರಲು ಮಲಗಿಸಿದ್ದರು. ಇನ್ನೊಂದರಲ್ಲಿ ಸೂಟ್‌ಕೇಸ್ ಮೇಲೆ ಮಗುವನ್ನು ಬೋರಲು ಮಲಗಿಸಿ, ತಾಯಿ ಅದಕ್ಕೆ ಕಟ್ಟಿದ ಹಗ್ಗವನ್ನು ಎಳೆದುಕೊಂಡು ಹೊರಟಿದ್ದಾಳೆ.

ತೀರದ ವಲಸೆ ಕಾರ್ಮಿಕರ ಬವಣೆ

ಪಂಜಾಬ್‌ನಿಂದ ಝಾನ್ಸಿವರೆಗೂ ಕಾಲ್ನಡಿಗೆ ಹೊರಟ ಅಮ್ಮನ ಸೂಟ್‌ ಕೇಸ್‌ ಮೇಲೆ ನಿದ್ರಿಸುತ್ತಿರುವ ಮಗು. ಉತ್ತರ ಪ್ರದೇಶದ ಆಗ್ರದಲ್ಲಿ ಸೆರೆಹಿಡಿದ ವಿಡಿಯೋ.. ವಲಸೆ ಕಾರ್ಮಿಕರಿಗೆ ಕನಿಷ್ಟ ಬಸ್‌ ವ್ಯವಸ್ಥೆ ಮಾಡದ ಸರ್ಕಾರಗಳು..

Posted by Naanu Gauri on Thursday, May 14, 2020

ಕ್ಷಣಕ್ಷಣ ಆ ಮಗುವನ್ನು ಹಿಂತಿರುಗಿ ನೋಡಬೇಕು. ಮುಂದ ನೋಡುತ್ತ ಎಳೆಯುತ್ತಿದ್ದರೆ ಮಗು ಹೊರಳಿ ಬಿದ್ದರೆ ಗತಿಯೇನು? ಒಂದು ಮಗುವನ್ನು ಲಾರಿಗೆ ಎತ್ತಿ ಕೊಡುವ ಚಿತ್ರವಿದೆ. ವಾಲಿಬಾಲ್ ಅನ್ನು ಎಸೆದಂತಿತ್ತು. ಚಪ್ಪಲಿ ಇಲ್ಲದೆ ನಡೆದ ಪಾದಗಳು ಬೊಬ್ಬೆಯೆದ್ದದ್ದನ್ನು ನೋಡಿದರೆ ಮೈ ಜುಂ ಅನ್ನುತ್ತಿತ್ತು. ಬುದ್ಧನು ಇದ್ದಿದ್ದರೆ ಈ ಮಕ್ಕಳನ್ನು ಎತ್ತಿಕೊಂಡು ವಲಸಿಗರ ಜತೆ ಹೆಜ್ಜೆ ಹಾಕುತ್ತಿದ್ದ.

ಕೊರೊನಾ ಸಂಬಂಧ ಏಪ್ರಿಲ್ 2020 ತಿಂಗಳಲ್ಲಿ ನಡೆದ ಘಟನೆಗಳು ಸಾವಿರಾರು. ಲಾಕ್‌ಡೌನ್ ತಂದಿಟ್ಟ ಸಂಕಷ್ಟಗಳೆಲ್ಲ ದುಡಿವ ಜೀವಗಳಿಗೆ ಒದಗಿಕೊಂಡವು. ದೇಶದುದ್ದಗಲಕ್ಕೂ ನೋವನ್ನು ಅನುಭವಿಸಿದವರು ದಿನಗೂಲಿ ಎಂಬ ಆಸ್ತಿಯನ್ನೇ ಕಳೆದುಕೊಂಡ ಬಡವರು. ಮನೆಯಲ್ಲಿ ಕುಳಿತು ಜೀವಂತ ದುರಂತವನ್ನು ಪತ್ರಿಕೆಗಳಲ್ಲಿ ಓದುತ್ತಿರುವಾಗಲೇ ‘ಕೊರೊನಾ ಕಥನ‘ ಎಂಬ ಕಾದಂಬರಿಯ ವಿನ್ಯಾಸ ಮನಸ್ಸಿನಲ್ಲಿ ರೂಪುಗೊಂಡಿತು. ಕಾದಂಬರಿ ಬರೆಯುವ ದುರಿತ ನನ್ನ ಪಾಲಿಗೆ ಬಂತು. ಇನ್ನೂ ದುರಂತ ಉರಿಯುತ್ತಿದೆ. ವಿಶ್ವವ್ಯಾಪಿ ಕೊರೊನಾ ವೈರಸ್ಸಿನ ದಾಳಿಗೆ ಮನುಷ್ಯ ಕುಲ ಪ್ರತಿರೋಧವಿಲ್ಲದೆ ಬಲಿಯಾಗುತ್ತಿದೆ. ನಾಡಿನ ಸಂದಿಗೊಂದಿಗಳಲ್ಲಿ ಸದ್ದಿಲ್ಲದೆ ನಡೆದ ದಾಳಿಗೆ ಅಸ್ತ್ರವಿಲ್ಲದ ಮನುಷ್ಯ ಜೀವಕೊಟ್ಟು ವಿರಮಿಸುವುದು ಬಿಟ್ಟರೆ ಬೇರೆ ದಾರಿಯಿರಲಿಲ್ಲ. ಸತ್ತ ಮನುಷ್ಯನ ಹೆಣಕ್ಕೆ ಕಿಂಚಿತ್ ಗೌರವ ಸಿಗಲಿಲ್ಲ. ಅರಸ ಸತ್ತರೆ ಆ ಹೆಣ ಒಂದು ಅಡಿಕೆ ಕಿಮ್ಮತ್ತಿಗೆ ಬಾಳುವುದಿಲ್ಲ. ಇನ್ನೂ ದುಡಿವ ಬಡಜೀವದ ಹೆಣಕ್ಕೆ ಯಾವ ಗೌರವ ಸಿಕ್ಕೀತು? ಕೊರೊನಾ ವೈರಸ್ಸಿಗೆ ಶ್ರೀಮಂತ, ಬಡವ ಎಂಬ ಭೇದವಿಲ್ಲ. ಜಾತಿ, ಮತ,, ಪಂಥಗಳ ಭೇದವೆಣಿಸದೆ ಸೋಂಕು ತಗುಲುತ್ತದೆ. ಅದಕ್ಕೆ ಎಲ್ಲರೂ ಒಂದೇ ಎಂಬ ಮಾತುಗಳನ್ನು ಬಲ್ಲವರು ಹೇಳಿದರು. ನಿಜ ಆದರೆ ದುರ್ದೈವದ ಸಂಗತಿ ಎಂದರೆ ಬಡವರ ಬಲಿಯೇ ಅಧಿಕವಾದದ್ದು ಸತ್ಯ ಸಂಗತಿ.

ಭಾರತದಲ್ಲಿ ಲಾಕ್‌ಡೌನ್ ಆದ ಸುಮಾರು ಐವತ್ತೈದು ದಿನಗಳ ಕಾಲ ದೇಶವು ಸದ್ದನ್ನು ಕಳೆದುಕೊಂಡಿತ್ತು. ಜನರ ಓಡಾಟವಿಲ್ಲ. ವಾಹನ, ಯಂತ್ರಗಳ ಸಂಚಾರವಿರಲಿಲ್ಲ. ವಾಯುಮಾಲಿನ್ಯವಿರಲಿಲ್ಲ. ಸಸ್ಯಸಂಕುಲಕ್ಕೆ ಧಕ್ಕೆ ಇರಲಿಲ್ಲ. ಪಕ್ಷಿ, ಪ್ರಾಣಿ ಜೀವಸಂಕುಲಕ್ಕೆ ಮನುಷ್ಯನ ಭಯವಿರಲಿಲ್ಲ. ಕಾಡು-ಬಯಲು ನಮ್ಮದಾಯಿತೆಂದು ಭಾವಿಸಿರಬೇಕು. ಕೊರೊನಾ ವೈರಸ್ ನಿಯಂತ್ರಿಸಲು ಸರ್ಕಾರ ಕೈಗೊಂಡ ಲಾಕ್‌ಡೌನ್‌ನಿಂದಾಗಿ ಎಲ್ಲ ಬಗೆಯ ಅಭಿವೃದ್ಧಿ ಕಾರ್ಯಗಳು ನಿಂತವು. ಅನ್‌ಲಾಕ್ ಜೀವನ ಪುನಃ ಆರಂಭವಾಯ್ತು.

ಕೊರೊನಾ ವೈರಸ್ ದಾಳಿಯಿಂದ ಮನುಷ್ಯ ಕುಲ ಬಲಿಯಾಗಿದೆ. ಸರ್ಕಾರಗಳು ಕರ್ತವ್ಯ ನಿರ್ವಹಿಸಿವೆ. ನಿಯಂತ್ರಣ ಕೈ ಮೀರುವಂತೆ ಆಗಲು ಸರ್ಕಾರವೂ ಕಾರಣವಾದಂತೆ, ಮನುಷ್ಯನೂ ಕಾರಣವಾಗಿದ್ದಾನೆ. ನುರಿತ ವೈದ್ಯರು, ವಿಜ್ಞಾನಿಗಳು, ಚಿಂತಕರು ಕೊರೊನಾ ವೈರಸ್ ತರುವ ಅಪಾಯಗಳನ್ನು ಮನೋಬಲದಿಂದ ಮತ್ತು ಆಹಾರ ಕ್ರಮದಿಂದ, ತಕ್ಕಮಟ್ಟಿಗೆ ನೆರವಾಗುವ ಪೂರಕ ಔಷಧಿಗಳ ನೆರವಿನಿಂದ ಪಾರಾಗಬಹುದೆಂದು ಧೈರ್ಯ ತುಂಬಿದರು. ಆದರೆ ಸಾಮಾನ್ಯ ಜನರು ನಿರ್ಲಕ್ಷಿಸಿದರು. ಮಾಸ್ಕ್ ಹಾಕಿಕೊಳ್ಳಲಿಲ್ಲ. ಸ್ಯಾನಿಟೈಸರ್ ಬಳಸಲಿಲ್ಲ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಿಲ್ಲ. ನಿತ್ಯ ದುಡಿವ ದಂದುಗದ ನಡುವೆಯೇ ಈ ನಿಯಮಗಳನ್ನು ಪಾಲಿಸದೆ ಸಾಮಾನ್ಯ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ನಮ್ಮ ಅಕ್ಕಪಕ್ಕದಲ್ಲಿ ಈ ನೋಟ ಸಾಮಾನ್ಯವಾಗಿದೆ. ಉತ್ತರ ಕರ್ನಾಟಕದ ಜನರ ನಿರ್ಲಕ್ಷ್ಯೆ ಹೆಚ್ಚೆನೋ ಅನ್ನಿಸ್ತಿದೆ. ‘ಬದುಕಿ ಯಾವ ರಾಜ್ಯ ಆಳಬೇಕಿದೆ?’ ಎಂಬ ಪ್ರಶ್ನೆ ಎತ್ತುತ್ತಾರೆ.

ಸರ್ಕಾರದ ವ್ಯವಸ್ಥೆ ಈ ಕೊರೊನಾ ವೈರಸ್ ಸೋಂಕಿತರನ್ನು ನಿಯಂತ್ರಿಸಲು ತಕ್ಕಮಟ್ಟಿನ ಪ್ರಯತ್ನ ಮಾಡಿದೆ. ಕೊರೊನಾ ವಾರಿಯರ್ಸ್ ಶ್ರಮ, ಶ್ರದ್ಧೆಯನ್ನು ಮರೆಯಲಾಗದು. ಆದರೆ ಖಾಸಗಿ ವೈದ್ಯರು, ಆಸ್ಪತ್ರೆಗಳು ಈ ದುರಂತ ಸಂದರ್ಭದಲ್ಲಿ ಮಾನವೀಯತೆಯನ್ನು ತೋರಿಸಲಿಲ್ಲವೆಂಬ ಅಳುಕು ಅವರಿಗೆ ಇತ್ತೆ? ಎಂಬ ಪ್ರಶ್ನೆ ಇದೆ. ಮಾನವೀಯತೆ ಬಿಕ್ಕಟ್ಟನ್ನು ಅನುಭವಿಸುವಂತಾಯಿತು.

ಲಾಕ್‌ಡೌನ್ ಸಂದರ್ಭದಲ್ಲಿ ನೋವಿನ ನೆನಪುಗಳು ಹತ್ತಾರು. ಶಾಲಾ, ಕಾಲೇಜ್, ವಿಶ್ವವಿದ್ಯಾಲಯಗಳು ಮುಚ್ಚಿದವು. ಖಾಸಗಿ ಶಿಕ್ಷಣ ಸಂಸ್ಥೆಗಳು ತಮ್ಮ ವ್ಯಾಪಾರ ನಿಲ್ಲಲಾರದಂತೆ ಕಾಯ್ದುಕೊಂಡಿವೆ, ಆನ್‌ಲೈನ್ ತರಗತಿಗಳು ನಡೆಸುತ್ತೇವೆಂಬ ನೆಪದಿಂದ ಶುಲ್ಕವನ್ನು ವಸೂಲಿ ಮಾಡುತ್ತಿವೆ. ಶಾಲೆಗಳು ಖಾಲಿ ಖಾಲಿ, ಪಡೆಯುವ ಶುಲ್ಕವನ್ನು ಪಡೆದಾಗಿದೆ. ಸಿಬ್ಬಂದಿಗಳಿಗೆ ಕೋವಿಡ್-19 ನೆಪದಲ್ಲಿ ಸಂಬಳವನ್ನು ತಕ್ಕಮಟ್ಟಿಗೆ ನೀಡುತ್ತಿವೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಅಧಿಕೃತ ದರೋಡೆ ಮಾಡುತ್ತಿರುವುದನ್ನು ನಾವು ಅಸಹಾಯಕರಾಗಿ ನೋಡುತ್ತಿದ್ದೇವೆ. ನಮ್ಮ ಮಕ್ಕಳನ್ನು ಕಳುಹಿಸಿ ಬೆಂಬಲಿಸುತ್ತಿದ್ದೇವೆ. ಭಾರತದಂತಹ ದೇಶದಲ್ಲಿ ನಲವತ್ತು ಕೋಟಿಗೂ ಮೀರಿ ದುಡಿವ ವಲಸೆ ಕಾರ್ಮಿಕರಿರುವ ನೆಲದಲ್ಲಿ ಆರೋಗ್ಯ, ಶಿಕ್ಷಣ, ಸಾರಿಗೆ, ಬೆಳಕು (ವಿದ್ಯುತ್) ಇವು ಖಾಸಗೀಕರಣವಾಗಬಾರದಿತ್ತು.

ಮಾರ್ಚ್ 25ರಿಂದ ಇಲ್ಲಿಯವರೆಗೆ ಎಸ್.ಸಿ., ಎಸ್.ಟಿ., ಓ.ಬಿ.ಸಿ., ಹಾಸ್ಟೆಲ್‌ಗಳು ಮುಚ್ಚಿದವು. ಇನ್ನೂ ತೆರೆದಿಲ್ಲ. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಶಾಲಾ, ಕಾಲೇಜ್, ವಿಶ್ವವಿದ್ಯಾಲಯಗಳು ತಾತ್ಕಾಲಿಕವಾಗಿ ಬಂದ್ ಆದರೆ ತಡೆದುಕೊಳ್ಳಬಲ್ಲರು. ಹಾಸ್ಟೆಲ್‌ಗಳು ತಾತ್ಕಾಲಿಕವಾಗಿ ಬಂದ್ ಆದರೂ ತಡೆದುಕೊಳ್ಳುವುದು ಬಲು ಕಷ್ಟ. ಐದು ತಿಂಗಳಿಂದ ಊಟದ ನಿಲಯಗಳು ಮುಚ್ಚಿರುವುದರಿಂದ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ತಮ್ಮ ಊರುಗಳಿಗೆ ಹೋದರು. ಮನೆಯಲ್ಲಿ ಬಡತನ. ನಮ್ಮ ಹುಡುಗ-ಹುಡುಗಿಯರು ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಾರಂತೆ. ನರೇಗಾ, ಮನರೇಗಾದಡಿಗಳಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾರೆಂದು ತಿಳಿಯಿತು. ಎಂ.ಎ., ಮುಗಿಸಿ ಪಿಎಚ್.ಡಿ ಮಾಡುತ್ತಿರುವವರು ಇವರು. ಸರ್ಕಾರ ಅವರವರ ಅದೃಷ್ಟಕ್ಕೆ ಬಿಟ್ಟುಬಿಟ್ಟಿದೆಯಲ್ಲ. ಇದನ್ನು ಇನ್ನಾರಿಗೆ ದೂರುವುದು ನುಗಡೋಣಿ ಬಸವಾ?

ಕೊರೊನಾ ಕುರಿತು ಪತ್ರಿಕೆಗಳು ನೀಡಿದ ಅರಿವು ದೊಡ್ಡದು. ನಾನು ‘ಕೊರೊನಾ ಕಥನ’ ಬರೆಯಲು ನೆಲೆ ಒದಗಿಸಿದವು. ವಿಶ್ವವ್ಯಾಪಿ ನಡೆದ ಈ ದುರಂತವನ್ನು ಚಿತ್ರಿಸಲು ಸಾವಿರಾರು ಕವಿತೆ, ಕತೆ, ಕಾದಂಬರಿ, ಲೇಖನಗಳಿಗೂ ಸಾಧ್ಯವಿಲ್ಲ. ಹತ್ತಾರು ಮಹಾಕಾವ್ಯ, ಮಹಾಕಾದಂಬರಿಗಳು ರಚನೆಗೆ ವಸ್ತುವನ್ನು ಒದಗಿಸಲಿದೆ ಈ ಕೊರೊನಾ ವೈರಸ್ ಆಕ್ರಮಣ. ನನ್ನ ಈ ಕಾದಂಬರಿ ಕೇವಲ ಒಂದು ಪ್ರಯೋಗ ಅಷ್ಟೇ. ಕಾದಂಬರಿ ಪ್ರಕಾರದಲ್ಲಿ ಬರೆದು ನನಗೆ ಅನುಭವವಿರಲಿಲ್ಲ. ಕೊರೊನಾ ದಾಳಿಯನ್ನು ನೋಡುತ್ತ, ಆ ಅನುಭವಗಳ ಮುಷ್ಠಿ ಕಾಳುಗಳನ್ನು ಈ ಕಾದಂಬರಿಯಲ್ಲಿ ಬಿತ್ತಿದ್ದೇನೆ. ಈ ಕಾದಂಬರಿಯಿಂದ ನಾನು ಏನನ್ನೂ ನಿರೀಕ್ಷಿಸುವುದಿಲ್ಲ. ಕಾದಂಬರಿ ಉಂಟು: ಓದುಗರು ಉಂಟು.

– ಅಮರೇಶ ನುಗಡೋಣಿ


ಇದನ್ನೂ ಓದಿ: ಸರ್ವಾಧಿಕಾರಿ ಹಿಡಿತದಲ್ಲಿ ನಲುಗುತ್ತಿರುವ ಆಫ್ರಿಕಾದ ಎರಿಟ್ರಿಯಾ ದೇಶದ ಪತ್ರಕರ್ತರು, ಬರಹಗಾರರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...