ಹಾಲಿ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ಕಾರ್ಯವೈಖರಿ ಬಗ್ಗೆ ಟೀಕಿಸಿದ್ದಕ್ಕಾಗಿನ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ “ಸೆಪ್ಟಂಬರ್ 15 ರೊಳಗೆ 1 ರೂ ದಂಡ ಕಟ್ಟಬೇಕು, ತಪ್ಪಿದ್ದಲ್ಲಿ ಮೂರು ತಿಂಗಳ ಜೈಲುವಾಸ ಮತ್ತು ಮೂರು ವರ್ಷಗಲ ಕಾಲ ವಕೀಲ ವೃತ್ತಿಗೆ ನಿಷೇಧ” ಎಂದು ಸುಪ್ರೀಂ ಕೋರ್ಟ್ ಇಂದು ತೀರ್ಪಿತ್ತಿದೆ.
ಬೇಷರತ್ ಕ್ಷಮೆ ಕೇಳಿದ್ದಲ್ಲಿ ಪ್ರಕರಣ ರದ್ದು ಮಾಡುವುದಾಗಿ ಮೂರು ಬಾರಿ ಸುಪ್ರೀಂ ಅವಕಾಶ ನೀಡಿದಾಗಲೂ ಪ್ರಶಾಂತ್ ಭೂಷಣ್ ದಿಟ್ಟ ದನಿಯಲ್ಲಿ ಶಿಕ್ಷೆ ಎದುರಿಸುತ್ತೇನೆ, ಕ್ಷಮೆ ಕೇಳುವುದಿಲ್ಲ ಎಂದು ನುಡಿದಿದ್ದರು.
“ತನ್ನ ಹೇಳಿಕೆಗಳು ನ್ಯಾಯಾಲಯದ ‘ರಚನಾತ್ಮಕ ವಿಮರ್ಶೆ’ಯಾಗಿದೆ. ಆದ್ದರಿಂದ ಅದನ್ನು ಹಿಂತೆಗೆದುಕೊಳ್ಳುವುದು ‘ಅಪ್ರಾಮಾಣಿಕ ಕ್ಷಮೆಯಾಚನೆ’ಯಾಗುತ್ತದೆ, ನಾನು ಕ್ಷಮೆ ಕೇಳುವುದಿಲ್ಲ, ಅದು ನನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆ” ಎಂದು ಭೂಷಣ್ ಪದೇ ಪದೇ ಹೇಳಿದ್ದರು.
ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಪ್ರಶಾಂತ್ ಭೂಷಣ್‌ರವರ ತಂದೆ ಶಾಂತಿ ಭೂಷಣ್ “ದೇಶದ ದನಿಯನ್ನು ಸುಪ್ರೀಂಕೋರ್ಟು ಕೇಳಲಿ ಎಂದು ನಾನು ಕೋರಿದ್ದೆ. ಈಗ ನಾನು ದೇಶದ ಪ್ರತಿಯೊಬ್ಬ ನಾಗರಿಕರು ಒಂದು ರೂಪಾಯಿಯನ್ನು ಸುಪ್ರೀಂಕೋರ್ಟಿಗೆ ಕಳಿಸಲಿ ಎಂದು ಕೋರುತ್ತೇನೆ” ಎಂದು ಭಾರತದ ಮಾಜಿ ಕಾನೂನು ಸಚಿವರು ಹಾಗೂ ಇಂದಿರಾಗಾಂಧಿಯವರ ವಿರುದ್ಧ ಐತಿಹಾಸಿಕ ಮೊಕದ್ದಮೆಯಲ್ಲಿ ವಾದಿಸಿದ್ದ ಶಾಂತಿ ಭೂಷಣ್ ಹೇಳಿದ್ದಾರೆ.
ದೇಶಾದ್ಯಂತ ಪ್ರಶಾಂತ್ ಭೂಷಣ್ ಅವರನ್ನು ಬೆಂಬಲಿಸಿ ಇಂದು ಆನ್‌ಲೈನ್‌ನಲ್ಲಿ ನಡೆದ ‘ಸತ್ಯಮೇವ ಜಯತೇ’ ಕಾರ್ಯಕ್ರಮದಲ್ಲಿ ಅವರು ಮನವಿ ಮಾಡಿದ್ದಾರೆ.
“1 ರೂ ರಾಷ್ಟ್ರೀಯ ಚಳವಳಿಯಾಗಲಿ” ಎಂದು ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರು ಮತ್ತು ಪ್ರಶಾಂತ್ ಭೂಷಣ್‌ರವರ ಆತ್ಮೀಯ ಒಡನಾಡಿ ಯೋಗೇಂದ್ರ ಯಾದವ್ ಘೋಷಿಸಿದ್ದಾರೆ.
ತೀರ್ಪಿನಲ್ಲಿ 1 ರೂ ದಂಡ ಅಥವಾ ಮೂರು ತಿಂಗಳ ಜೈಲು ಹಾಗೂ ವಕೀಲಿ ವೃತ್ತಿ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಯಾವುದು ಆಯ್ದುಕೊಳ್ಳಲಿದ್ದಾರೆ ಎಂಬ ಪ್ರಶ್ನೆ ಸಹಜವಾಗಿ ಎದ್ದಿದೆ. ಅವರ ಒಡನಾಡಿಗಳು ಖಂಡಿತ ಅವರು ಜೈಲು ಶಿಕ್ಷೆಯನ್ನು ಆಯ್ದುಕೊಂಡು ದೇಶಕ್ಕೆ, ಹೊರಾಟಕ್ಕೆ, ಸತ್ಯಕ್ಕೆ ಮಾದರಿಯಾಗಿ ನಿಲ್ಲುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಲು ಸಂಜೆ ಪತ್ರಿಕಾಗೋಷ್ಠಿ ನಡೆಸುವುದಾಗಿ ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಕ್ಷಮೆ ಕೇಳುವುದಿಲ್ಲ, ಅದು ನನ್ನ ಆತ್ಮಸಾಕ್ಷಿಯ ನಿಂದನೆಯಾಗುತ್ತದೆ: ಪ್ರಶಾಂತ್ ಭೂಷಣ್


