ನಾನು ಈ ಮೊದಲೇ ಹೇಳಿದ್ದೇ. ಸುಪ್ರೀಂ ಕೋರ್ಟ್ ಯಾವ ಶಿಕ್ಷೆ ನೀಡಿದರೂ ಅದನ್ನು ಖುಷಿಯಿಂದ ಒಪ್ಪಿಕೊಳ್ಳುತ್ತೇನೆ ಎಂದು. ಏಕೆಂದರೆ ಸುಪ್ರೀಂಕೋರ್ಟು ಜನರು ನ್ಯಾಯಕ್ಕಾಗಿ ತಲುಪಬಲ್ಲ ಅತ್ಯುನ್ನತ ಅಂಗವಾಗಿದ್ದು, ಅದು ದುರ್ಬಲವಾದರೆ, ಗಣರಾಜ್ಯವೇ ದುರ್ಬಲವಾದಂತೆ.
ಆದರೆ, ನಾನು ಯಾವ ಟ್ವೀಟ್ ಗಳನ್ನು ಮಾಡಿದ್ದಕ್ಕಾಗಿ ನನ್ನನ್ನು ತಪ್ಪಿತಸ್ಥನೆಂದು ಘೋಷಿಸಿದೆಯೋ, ಅದು ಈ ದೇಶದ ನಾಗರಿಕನ ಅತ್ಯುನ್ನತ ಕರ್ತವ್ಯವಾಗಿತ್ತು ಎಂದೇ ನಾನು ಭಾವಿಸುತ್ತೇನೆ ಎಂದು ತಮ್ಮ ಈ ಹಿಂದಿನ ನಿಲುವನ್ನು ಅವರು ಪುನರುಚ್ಚರಿಸಿದ್ದಾರೆ.
ತನ್ನ ಪರವಾಗಿ ನಿಂತ ನಾಗರಿಕರು ಮತ್ತು ವಕೀಲರಿಗೆ ಅವರು ಕೃತಜ್ಞತೆಗಳನ್ನು ಸಲ್ಲಿಸಿ, ಸುಪ್ರೀಂಕೋರ್ಟು ಪ್ರಬಲವಾಗಬೇಕು ಮತ್ತು ಸ್ವತಂತ್ರವಾಗಿರಬೇಕು ಎಂದು ನಾನು ಬಯಸುತ್ತೇನೆ.
ಹಾಲಿ ಮುಖ್ಯ ನ್ಯಾಯಮೂರ್ತಿ ಮತ್ತು ಸುಪ್ರೀಂ ಕೋರ್ಟ್ ಕಾರ್ಯವೈಖರಿ ಹಾಗೂ ಹಿಂದಿನ ನಾಲ್ಕು ಮುಖ್ಯ ನ್ಯಾಯಮೂರ್ತಿಗಳ ಬಗ್ಗೆ ಟೀಕಿಸಿದ್ದಕ್ಕಾಗಿನ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಭೂಷಣ್ “ಸೆಪ್ಟಂಬರ್ 15 ರೊಳಗೆ 1 ರೂ ದಂಡ ಕಟ್ಟಬೇಕು, ತಪ್ಪಿದ್ದಲ್ಲಿ ಮೂರು ತಿಂಗಳ ಜೈಲುವಾಸ ಮತ್ತು ಮೂರು ವರ್ಷಗಳ ವಕೀಲ ವೃತ್ತಿಗೆ ನಿಷೇಧ” ಎಂದು ಸುಪ್ರೀಂ ಕೋರ್ಟ್ ಇಂದು ಬೆಳಿಗ್ಗೆ ತೀರ್ಪು ನೀಡಿತ್ತು.
ತೀರ್ಪಿನಲ್ಲಿ 1 ರೂ ದಂಡ ಅಥವಾ ಮೂರು ತಿಂಗಳ ಜೈಲು ಹಾಗೂ ವಕೀಲಿ ವೃತ್ತಿ ನಿಷೇಧಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಯಾವುದು ಆಯ್ದುಕೊಳ್ಳಲಿದ್ದಾರೆ ಎಂದು ಹಲವರು ಚರ್ಚಿಸಿದ್ದರು. ಅದಕ್ಕೆ ತೆರೆ ಎಳೆದಿರುವ ಪ್ರಶಾಂತ್ ಭೂಷಣ್‌ರವರು “1 ರೂ ದಂಡವನ್ನು ಕಟ್ಟುತ್ತೇನೆಂದು’ ಘೋಷಿಸಿದ್ದಾರೆ.
ತೀರ್ಪಿನ ಕುರಿತು ಪ್ರತಿಕ್ರಿಯಿಸಿರುವ ಪ್ರಶಾಂತ್ ಭೂಷಣ್‌ರವರ ತಂದೆ ಶಾಂತಿ ಭೂಷಣ್ “ದೇಶದ ದನಿಯನ್ನು ಸುಪ್ರೀಂಕೋರ್ಟು ಕೇಳಲಿ ಎಂದು ನಾನು ಕೋರಿದ್ದೆ. ಈಗ ನಾನು ದೇಶದ ಪ್ರತಿಯೊಬ್ಬ ನಾಗರಿಕರು ಒಂದು ರೂಪಾಯಿಯನ್ನು ಸುಪ್ರೀಂಕೋರ್ಟಿಗೆ ಕಳಿಸಲಿ ಎಂದು ಕೋರುತ್ತೇನೆ” ಎಂದು ಭಾರತದ ಮಾಜಿ ಕಾನೂನು ಸಚಿವರು ಹಾಗೂ ಇಂದಿರಾಗಾಂಧಿಯವರ ವಿರುದ್ಧ ಐತಿಹಾಸಿಕ ಮೊಕದ್ದಮೆಯಲ್ಲಿ ವಾದಿಸಿದ್ದ ಶಾಂತಿ ಭೂಷಣ್ ಹೇಳಿದ್ದರು.
“ಇಂದಿನ ನ್ಯಾಯಾಂಗ ನಿಂದನೆಯ ತೀರ್ಪು ಹೊರಬಂದ ಕೂಡಲೇ ನನ್ನ ವಕೀಲರೂ ಮತ್ತು ಹಿರಿಯ ಸಹೋದ್ಯೋಗಿಗಳೂ ಆದ ರಾಜೀವ್ ಧವನ್ ಅವರು ನನಗೆ 1 ರೂಪಾಯಿ ದೇಣಿಗೆ ನೀಡಿದರು, ಮತ್ತು ನಾನದನ್ನು ಕೃತಜ್ಞಾಪೂರ್ವಕವಾಗಿ ಸ್ವೀಕರಿಸಿದೆ” ಎಂದು ಪ್ರಶಾಂತ್ ಭೂಷಣ್ ಟ್ವೀಟ್ ಮಾಡಿದ್ದರು. ಇದಕ್ಕೆ ನ್ಯಾಯಾಂಗವನ್ನು ಟೀಕೆ ಮಾಡಬೇಕು, ಅಪಹಾಸ್ಯ ಮಾಡಬಾರದು ಎಂದು ಪರ ವಿರೋಧದ ಅಭಿಪ್ರಾಯಗಳು ದಾಖಲಾಗಿದ್ದವು.
My lawyer & senior colleague Rajiv Dhavan contributed 1 Re immediately after the contempt judgement today which I gratefully accepted pic.twitter.com/vVXmzPe4ss
— Prashant Bhushan (@pbhushan1) August 31, 2020
ಪತ್ರಿಕಾ ಗೋಷ್ಟಿಯಲ್ಲಿ ಸ್ವರಾಜ್ ಇಂಡಿಯಾ ಪಕ್ಷದ ಅಧ್ಯಕ್ಷರಾದ ಯೋಗೇಂದ್ರ ಯಾದವ್ ಮತ್ತು ಅಂಜಲಿ ಭಾರದ್ವಾಜ್ ಭಾಗವಹಿಸಿದ್ದರು.
ಇದನ್ನೂ ಓದಿ: ಪ್ರಶಾಂತ್ ಭೂಷಣ್‌ಗೆ 1 ರೂ ದಂಡ ಅಥವಾ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದ ಸುಪ್ರೀಂ


