ಬಿಜೆಪಿ-ಫೇಸ್‌ಬುಕ್ ಸಖ್ಯದ ವಿವಾದವು ತೀವ್ರವಾಗಿರುವ ಹಿನ್ನೆಲೆಯಲ್ಲಿ, ಮಾಹಿತಿ ತಂತ್ರಜ್ಞಾನದ ಸಂಸದೀಯ ಸಮಿತಿಯ ಬಿಜೆಪಿ ಮತ್ತು ಬಿಜೆಪಿಯೇತರ ಸದಸ್ಯರ ನಡುವೆ ಪರ-ವಿರೋಧಗಳ ವಾಕ್ಸಮರ ಭುಗಿಲೆದ್ದಿದೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಅಧ್ಯಕ್ಷತೆಯ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಅಮೇರಿಕಾದ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದ್ದ ‘ಭಾರತದಲ್ಲಿ ಫೇಸ್‌ಬುಕ್ ಬಿಜೆಪಿ ಪರವಾಗಿ ಕೆಲಸ ಮಾಡಿದೆ’ ಎಂಬ ಆರೋಪಗಳ ಕುರಿತು ವಿಚಾರಣೆ ನಡೆಸುತ್ತಿದೆ.
ಸಾಮಾಜಿಕ ಜಾಲತಾಣ ಪ್ಲಾಟ್‌ಫಾರ್ಮ್‌ಗಳ ದುರುಪಯೋಗವನ್ನು ತಡೆಗಟ್ಟುವ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ದಾಖಲಿಸಲು ಮೀಡಿಯಾನಾಮ ಸಂಸ್ಥಾಪಕ ಮತ್ತು ಡಿಜಿಟಲ್ ಹಕ್ಕುಗಳ ಕಾರ್ಯಕರ್ತ ನಿಖಿಲ್ ಪಹ್ವಾ ಮತ್ತು ಹಿರಿಯ ಪತ್ರಕರ್ತ ಪರಂಜಾಯ್ ಗುಹಾ ಠಾಕೂರ್ತಾ ಅವರನ್ನು ಸಮಿತಿ ಆಹ್ವಾನಿಸಿದೆ.
ಈ ಸಮಿತಿಯು 30 ಸದಸ್ಯರನ್ನು ಹೊಂದಿದ್ದು, ಅವರಲ್ಲಿ 15 ಮಂದಿ ಎನ್‌ಡಿಎಯಿಂದ ಮತ್ತು ಉಳಿದ 15 ಮಂದಿ ವಿರೋಧ ಪಕ್ಷಗಳಿಗೆ ಸೇರಿದ್ದಾರೆ.
ಕಾಂಗ್ರೆಸ್ ಮೂರು ಸದಸ್ಯರನ್ನು ಹೊಂದಿದ್ದರೆ, ಇತರ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ (ಟಿಎಂಸಿ), ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ), ತೆಲಂಗಾಣ ರಾಷ್ಟ್ರೀಯ ಸಮಿತಿ (ಟಿಆರ್‌ಎಸ್), ಶಿವಸೇನೆ, ಯುವಜನ ಶ್ರಮಿಕ, ರೈತ ಕಾಂಗ್ರೆಸ್ ಪಕ್ಷ (ವೈಎಸ್ಆರ್‌ಸಿಪಿ) ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಪಕ್ಷಗಳು ತಲಾ ಒಬ್ಬರು ಸದಸ್ಯರನ್ನು ಹೊಂದಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ಅಮೇರಿಕಾದ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ “ಭಾರತದಲ್ಲಿ ಬಿಜೆಪಿ ನಾಯಕರ ದ್ವೇಷ ಭಾಷಣವನ್ನು ನಿಯಂತ್ರಿಸುವಲ್ಲಿ ಫೇಸ್‌ಬುಕ್ ಕ್ರಮ ತೆಗೆದುಕೊಂಡಿಲ್ಲ. ಆಡಳಿತ ಪಕ್ಷದ ವಿರುದ್ಧ ಕ್ರಮ ತೆಗೆದುಕೊಂಡರೆ ಕಂಪನಿಯ ಭವಿಷ್ಯದ ವ್ಯವಹಾರಗಳಿಗೆ ತೊಂದರೆಯಾಗಬಹುದು ಎಂದು ಫೇಸ್‌ಬುಕ್ ಭಾರತದ ಮುಖ್ಯಸ್ಥರು ಹೇಳಿದ್ದಾರೆ” ಎಂದು ವರದಿ ಮಾಡಿತ್ತು.
ಇದನ್ನೂ ಓದಿ: ಬಿಜೆಪಿ ಪರ ಚುನಾವಣಾ ಪ್ರಚಾರ ಮಾಡಿದ್ದ ಫೇಸ್‌ಬುಕ್‌ನ ಅಂಖಿದಾಸ್: ವಾಲ್ ಸ್ಟ್ರೀಟ್ ಜರ್ನಲ್ ತೆರೆದಿಟ್ಟ ಸ್ಪೋಟಕ ಸತ್ಯ!
ವಿರೋಧ ಪಕ್ಷಗಳಾದ ಡಿಎಂಕೆ, ಟಿಆರ್‌ಎಸ್, ಟಿಎಂಸಿ ಮತ್ತು ಸಿಪಿಐ (ಎಂ) ಡಬ್ಲ್ಯುಎಸ್‌ಜೆ ವರದಿಗಳ ಬಗ್ಗೆ ಫೇಸ್‌ಬುಕ್‌ನಿಂದ ವಿವರಣೆ ಪಡೆಯಲು ಶಶಿ ತರೂರ್ ಅವರನ್ನು ಬೆಂಬಲಿಸಿದೆ.
ಮಂಗಳವಾರ ನಡೆಯಬೇಕಿದ್ದ ಸಮಿತಿಯ ಸಭೆಯನ್ನು ದಿವಂಗತ ಪ್ರಣಬ್ ಮುಖರ್ಜಿ ಅವರ ಗೌರವಾರ್ಥವಾಗಿ ಮೊಟಕುಗೊಳಿಸಲಾಯಿತು.
“ಸಭೆಯಲ್ಲಿ ಬಿಜೆಪಿ ಉತ್ತಮ ಚರ್ಚೆ ನಡೆಯಲು ಬಿಡುತ್ತದೆ ಎಂದು ನಮಗೆ ಅನಿಸುತ್ತಿಲ್ಲ. ಇದು ವಾಲ್ ಸ್ಟ್ರೀಟ್ ಜರ್ನಲ್ ಮತ್ತು ಟೈಮ್ ನಿಯತಕಾಲಿಕವು ಪ್ರಕಟಿಸಿದ ಸುದ್ದಿ ಲೇಖನವಾಗಿದೆ. ಇವುಗಳು ನಮ್ಮಿಂದ ಸೃಷ್ಟಿಸಲ್ಪಟ್ಟ ಕಥೆಗಳಲ್ಲ. ಹಾಗಾಗಿ ನಾವು ಫೇಸ್‌ಬುಕ್ ಅನ್ನು ವಿಚಾರಣೆ ನಡೆಸಿದ್ದರೆ ಅದಕ್ಕೆ ಬಿಜೆಪಿ ಏಕೆ ತಡೆಯೊಡ್ಡುತ್ತದೆ ಎಂದು ನನಗೆ ಅರ್ಥವಾಗುತ್ತಿಲ್ಲ” ಎಂದು ಪ್ರತಿಪಕ್ಷದ ಸದಸ್ಯರೊಬ್ಬರು ಹೇಳಿದ್ದಾರೆ.
“ಸಾಕ್ಷಿಯನ್ನು ಕರೆಸಲು ಸಮಿತಿಗೆ ಅಧಿಕಾರವಿಲ್ಲ. 17 ನೇ ಲೋಕಸಭೆಯ ಪ್ರಧಾನ ಕಾರ್ಯದರ್ಶಿ ಸ್ನೇಹಲತಾ ಶ್ರೀವಾಸ್ತವ ಮಾತ್ರ ಈ ಅಧಿಕಾರ ಹೊಂದಿದ್ದಾರೆ” ಎಂದು ಬಿಜೆಪಿ ಸಂಸದರಾದ ನಿಶಿಕಾಂತ್ ದುಬೆ ವಾದಿಸಿ, ತರೂರ್ ವಿರುದ್ಧ ಸ್ಪೀಕರ್ ಗೆ ದೂರು ನೀಡಿದ್ದಾರೆ. ಸಮಿತಿಯ ಸದಸ್ಯರೂ ಆಗಿರುವ ಬಿಜೆಪಿ ಸಂಸದ ರಾಜ್ಯವರ್ಧನ್ ರಾಥೋಡ್ ಅವರು ಸ್ಪೀಕರ್‌ಗೆ ಪತ್ರ ಬರೆದು, ತರೂರ್ ಅವರ ನಿಯಮಗಳ ಉಲ್ಲಂಘನೆಯ ಬಗ್ಗೆ ದೂರಿದ್ದಾರೆ.
ಇದನ್ನೂ ಓದಿ: ತನ್ನ ವಿರುದ್ದದ 44 ಪೇಜ್‌ಗಳನ್ನು ಡಿಲೀಟ್ ಮಾಡುವಂತೆ ಫೇಸ್‌ಬುಕ್‌ಗೆ ಬಿಜೆಪಿ ತಾಕೀತು!
“ಇಡೀ ವಿಷಯದ ಬಗ್ಗೆ ಬಿಜೆಪಿ ಏಕೆ ಭಾವನಾತ್ಮಕವಾಗಿದೆ ಎಂದು ನಮಗೆ ತಿಳಿದಿಲ್ಲ. ಫೇಸ್‌ಬುಕ್‌ನ ಪಕ್ಷಪಾತಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲದಿದ್ದರೆ ಅವರು ಚಿಂತಿಸಬಾರದು. ಫೇಸ್‌ಬುಕ್ ಒಳಗೊಂಡ ಸಮಸ್ಯೆಗಳು ಭಾರತಕ್ಕೆ ನಿರ್ದಿಷ್ಟವಾದದ್ದಲ್ಲ. ಅದು ಪ್ರಪಂಚದಾದ್ಯಂತ ಎದ್ದಿವೆ” ಎಂದು ಬಿಜೆಪಿಯೇತರ ಸದಸ್ಯರು ಹೇಳಿದ್ದಾರೆ.
ಭಾರತ, ದಕ್ಷಿಣ ಮತ್ತು ಮಧ್ಯ ಏಷ್ಯಾದ ಫೇಸ್‌ಬುಕ್‌ನ ಸಾರ್ವಜನಿಕ ನೀತಿ ನಿರ್ದೇಶಕರಾದ ಅಂಕಿ ದಾಸ್ ಅವರನ್ನು ಆ ಸ್ಥಾನದಿಂದ ತೆಗೆದುಹಾಕಲು ಒತ್ತಾಯಿಸುವುದಾಗಿ ವಿರೋಧ ಪಕ್ಷದ ಸಂಸದರು ಪ್ರತಿಪಾದಿಸಿದ್ದಾರೆ.
ಈ ಎಲ್ಲಾ ಚರ್ಚೆಗಳಿಂದ ಸಮಿತಿಯ ಬಿಜೆಪಿ ಮತ್ತು ಬಿಜೆಪಿಯೇತರ ಸದಸ್ಯರ ನಡುವಿನ ಬಿರುಕು, ವಾಕ್ಸಮರ ವ್ಯಾಪಕವಾಗಿ ನಡೆಯುತ್ತಿದೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್‌ಗೆ ಪತ್ರ ಬರೆದು, ಸಾಮಾಜಿಕ ಮಾಧ್ಯಮ ದೈತ್ಯ ಫೇಸ್‌ಬುಕ್ ಭಾರತದಲ್ಲಿ ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡುವಾಗ ಪ್ರಧಾನಿ ಮತ್ತು ಭಾರತದ ಹಿರಿಯ ಕ್ಯಾಬಿನೆಟ್ ಮಂತ್ರಿಗಳನ್ನು ನಿಂದಿಸುತ್ತಿದೆ ಎಂದು ಇತ್ತೀಚೆಗೆ ಆರೋಪಿಸಿದ್ದರು.
ಭಾನುವಾರ ಸಂಜೆ ಪ್ರಕಟವಾದ ಡಬ್ಲ್ಯುಎಸ್‌ಜೆ ಹೊಸ ವರದಿಯ ಪ್ರಕಾರ, “ಫೇಸ್‌ಬುಕ್ ಉದ್ಯೋಗಿಗಳನ್ನು ಮಾತ್ರ ಒಳಗೊಂಡಿರುವ ಕಂಪನಿಯ ಆಂತರಿಕ ಗುಂಪಿನಲ್ಲಿ ಅಂಖಿ ದಾಸ್ ಹಲವು ವರ್ಷಗಳಿಂದ ಸತತವಾಗಿ ಬಿಜೆಪಿ ಪರವಾದ ಮತ್ತು ವಿರೋಧ ಪಕ್ಷ ಕಾಂಗ್ರೆಸ್ ವಿರುದ್ಧದ ಪೂರ್ವಗ್ರಹದ ಪೋಸ್ಟ್‌ಗಳನ್ನು ಹಾಕುತ್ತಿದ್ದರು” ಎಂದು ಹೇಳಲಾಗಿದೆ.
ನರೇಂದ್ರ ಮೋದಿಯವರು 2014ರ ಚುನಾವಣೆಯಲ್ಲಿ ಗೆಲುವನು ಪಡೆದ ಹಿಂದಿನ ದಿನ, ದೇಶದ ಫೇಸ್‌ಬುಕ್‌ನ ಸಾರ್ವಜನಿಕ ನೀತಿಯ ಮುಖ್ಯಸ್ಥರಾದ ಅಂಖಿ ದಾಸ್ ಈ ರೀತಿ ಸಂದೇಶ ಕಳಿಸಿದ್ದರು “ನಾವು ಅವರ (ಮೋದಿಯವರ) ಸೋಷಿಯಲ್ ಮೀಡಿಯಾ ಕ್ಯಾಂಪೇನ್‌ಗೆ ಅಗತ್ಯವಿದ್ದ ಕಾವನ್ನು ಹೊತ್ತಿಸಿದೆವು. ಅಲ್ಲಿಂದಾಚೆಗಿನದ್ದು ಇತಿಹಾಸ”.
ಆಡಳಿತ ಪಕ್ಷದೊಂದಿಗಿನ ಫೇಸ್‌ಬುಕ್ ಇಂಡಿಯಾದ ಸಂಬಂಧಗಳ ಬಗ್ಗೆ ಡಬ್ಲ್ಯುಎಸ್‌ಜೆ ವರದಿಯಿಂದ ಎದ್ದುಕಾಣುವ ಕೆಲವು ಅಂಶಗಳನ್ನು ಟೈಮ್ ವರದಿ ಪ್ರತಿಧ್ವನಿಸಿದೆ. ಪಕ್ಷದ 2014 ರ ಚುನಾವಣಾ ಪ್ರಚಾರಕ್ಕೆ ಸಹಾಯ ಮಾಡಲು ಶಿವನಾಥ್ ತುಕ್ರಲ್ ಬಿಜೆಪಿ ನಾಯಕರೊಂದಿಗೆ ಕೆಲಸ ಮಾಡಿದ್ದಾರೆ ಎಂದು ಲೇಖನದಲ್ಲಿ ಹೇಳಲಾಗಿದೆ.
ಕೃಪೆ: ದಿ ಕ್ವಿಂಟ್
ಇದನ್ನೂ ಓದಿ: ’ಪ್ರಧಾನಿಯನ್ನು ಫೇಸ್‌ಬುಕ್ ನಿಂದಿಸುತ್ತಿದೆ’ ಎಂದು ಜುಕರ್‌ಬರ್ಗ್‌ಗೆ ಪತ್ರ ಬರೆದ ಕೇಂದ್ರ ಸರ್ಕಾರ


