ಕೊರೊನಾ ವಿರುದ್ಧ ರಾಜ್ಯದ ಹೋರಾಟವನ್ನು ಮುನ್ನಡೆಸಿದ್ದಕ್ಕಾಗಿ ವಿಶ್ವದಾದ್ಯಂತ ಶ್ಲಾಘಿಸಲ್ಪಟ್ಟ ಕೇರಳದ ಆರೋಗ್ಯ ಸಚಿವೆ ಕೆ. ಕೆ. ಶೈಲಾಜಾ ಅವರನ್ನು ಬ್ರಿಟಿಷ್ ನಿಯತಕಾಲಿಕೆ ಪ್ರಾಸ್ಪೆಕ್ಟ್ ವಿಶ್ವದ ‘ಟಾಪ್ ಥಿಂಕರ್-2020’ ಎಂದು ಗೌರವಿಸಿದೆ.
ಪ್ರಾಸ್ಪೆಕ್ಟ್ ನಿಯತಕಾಲಿಕವು ತತ್ವಜ್ಞಾನಿಗಳು, ಬುದ್ಧಿಜೀವಿಗಳು, ಕಲಾವಿದರು, ವಿಜ್ಞಾನಿಗಳು ಮತ್ತು ಬರಹಗಾರರನ್ನು ಒಳಗೊಂಡಂತೆ ‘ಟಾಪ್ 50 ಚಿಂತಕರು-2020’ ಅನ್ನು ಓದುಗರ ಮತದಾನ, ತಜ್ಞರು ಮತ್ತು ಸಂಪಾದಕರ ಸಮಿತಿಯ ಅಭಿಪ್ರಾಯದ ಆಧಾರದ ಮೇಲೆ ಆಯ್ಕೆ ಮಾಡಿತ್ತು.
ಇದೀಗ ಸಚಿವೆ ಕೆ.ಕೆ. ಶೈಲಜ ಮೊದಲ ಸ್ಥಾನಿಯಾಗಿದ್ದು, ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಈ ಪಟ್ಟಿಯಲ್ಲಿ 2 ನೇ ಸ್ಥಾನಿ ಹಾಗೂ ಮೂರನೇ ಸ್ಥಾನಿಯಾಗಿ ಬಾಂಗ್ಲಾದೇಶದ ವಾಸ್ತುಶಿಲ್ಪಿ ಮರೀನಾ ತಬಸ್ಸುಮ್ ಇದ್ದಾರೆ.
ಇದನ್ನೂ ಓದಿ: ಕೊರೊನಾ ವಿರುದ್ದದ ಹೋರಾಟ: ಕೇರಳದ ಆರೋಗ್ಯ ಮಂತ್ರಿಗೆ ವಿಶ್ವಸಂಸ್ಥೆಯಿಂದ ಗೌರವ
ವಿಶೇಷವೆಂದರೆ, ಇದರ ಅಗ್ರ 50 ರ ಪಟ್ಟಿಯಲ್ಲಿ ಒಟ್ಟು 26 ಮಹಿಳೆಯರು ಸ್ಥಾನ ಪಡೆದಿದ್ದಾರೆ, ಶೈಲಾಜಾ ಅದರಲ್ಲಿರುವ ಏಕೈಕ ಭಾರತೀಯರಾಗಿದ್ದಾರೆ.
“2018 ರ ಮಾರಣಾಂತಿಕ ನಿಪಾ ಕಾಯಿಲೆ ನಿಭಾಯಿಸಲು ತೋರಿದ ಚತುರತೆಯನ್ನು ’ವೈರಸ್’ ಸಿನಿಮಾದಲ್ಲಿ ಸ್ಮರಿಸಲಾಯಿತು” ಎಂದು ಪತ್ರಿಕೆ ಕೇರಳ ಆರೋಗ್ಯ ಸಚಿವರನ್ನು ಹೊಗಳಿದೆ.

ಪ್ರಾಸ್ಪೆಕ್ಟ್ ಪ್ರಕಾರ, “ಶೈಲಾಜಾ ಟೀಚರ್ 2020 ರ ಸರಿಯಾದ ಸ್ಥಳದಲ್ಲಿರುವ ಸರಿಯಾದ ಮಹಿಳೆ, ಜನವರಿಯಲ್ಲಿ ಕೊರೊನಾ ಇನ್ನೂ ಚೀನಾದಲ್ಲಿದ್ದಾಗ ಅದರ ಅನಿವಾರ್ಯ ಆಗಮನವನ್ನು ನಿಖರವಾಗಿ ಮುನ್ಸೂಚನೆ ನೀಡಿದ್ದಲ್ಲದೆ, ಅದರ ಪರಿಣಾಮಗಳನ್ನು ಸಂಪೂರ್ಣವಾಗಿ ಗ್ರಹಿಸಿದ್ದರು. ಅವರು ಶೀಘ್ರವಾಗಿ ವಿಶ್ವ ಆರೋಗ್ಯ ಸಂಸ್ಥೆಯ “ಪರೀಕ್ಷೆ, ಜಾಡು ಮತ್ತು ಪ್ರತ್ಯೇಕಿಸುವ” ಕಾರ್ಯಕ್ರಮವನ್ನು ರಾಜ್ಯದಲ್ಲಿ ಜಾರಿಗೆ ತಂದರು. ಮತ್ತು ವಿಮಾನ ನಿಲ್ದಾಣಗಳಲ್ಲಿ ಹಿಡಿತ ಸಾಧಿಸುವ ಮೂಲಕ ನಿರ್ಣಾಯಕ ಸಮಯವನ್ನು ಪಡೆದರು” ಎಂದು ಅದು ಹೇಳಿದೆ.
ಇದನ್ನೂ ಓದಿ: ಕೊರೊನಾ ವಿರುದ್ದ ಕೇರಳದ ಹೋರಾಟ: ಅಮೆರಿಕಾದಿಂದ ನೈಜೀರಿಯಾವರೆಗಿನ ಮಾಧ್ಯಮಗಳಲ್ಲಿ ಮೆಚ್ಚುಗೆ!
ಸಾಂಕ್ರಮಿಕವು ಆರಂಭಿಕ ಹಂತದಲ್ಲಿರುವಾಗ ಕೆ.ಕೆ.ಶೈಲಜಾ ರಾಜ್ಯದಲ್ಲಿ ಕೊರೊನಾ ವೈರಸನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿದ್ದಲ್ಲದೆ, ವೈರಸ್ ಹರಡುವ ರೇಖೆಯನ್ನು ಚಪ್ಪಟೆಗೊಳಿಸುವುದಕ್ಕೆ ಜಾಗತಿಕ ಮನ್ನಣೆ ಪಡೆದರು. ಯುಕೆ ಪತ್ರಿಕೆ ‘ದಿ ಗಾರ್ಡಿಯನ್’ ತನ್ನ ಲೇಖನದಲ್ಲಿ ಸಚಿವರನ್ನು ‘ಕೊರೊನಾ ವೈರಸ್ ಸ್ಲೇಯರ್’ ಮತ್ತು ’ರಾಕ್ ಸ್ಟಾರ್ ಆರೋಗ್ಯ ಮಂತ್ರಿ ’ಎಂದು ಶ್ಲಾಘಿಸಿದೆ.
ಕೊರೊನಾ ಸಾಂಕ್ರಾಮಿಕ ವಿರುದ್ದ ಹೋರಾಡುತ್ತಿರುವ ಸಾರ್ವಜನಿಕ ಸೇವಕರನ್ನು ಗೌರವಿಸಲು ಆಯೋಜಿಸಲಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಲು ವಿಶ್ವಸಂಸ್ಥೆಯು ಶೈಲಾಜಾ ಅವರನ್ನು ಆಹ್ವಾನಿಸಿ ಗೌರವಿಸಿತ್ತು.
ಫ್ರೆಂಚ್ ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಎಸ್ತರ್ ಡುಫ್ಲೋ, ಬರಹಗಾರ ಮತ್ತು ಬುಕರ್ ಪ್ರಶಸ್ತಿ ವಿಜೇತ ಹಿಲರಿ ಮಾಂಟೆಲ್ ಮತ್ತು ಪರಿಸರವಾದಿ ಡೇವಿಡ್ ಅಟೆನ್‌ಬರೋ ಈ ಪಟ್ಟಿಯಲ್ಲಿರುವ ಇತರ ಕೆಲವು ಹೆಸರುಗಳು.
ಇದನ್ನೂ ಓದಿ: ಕೊರೊನಾ ವಿರುದ್ಧದ ಸಮರದಲ್ಲಿ ಕೇರಳ ಸರ್ಕಾರ ಮತ್ತು ಜನತೆಯ ಪ್ರಬುದ್ಧತೆ


