ಇಸ್ಲಾಮೋಫೋಬಿಕ್, ಅಶ್ಲೀಲ ಮತ್ತು ದಲಿತ ವಿರೋಧಿ ಪೋಸ್ಟ್ ಗಳನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದ ಕರ್ನಲ್ ರಾಕೇಶ್ ಮೋಹನ್ ಜೋಶಿಯನ್ನು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (TISS)ನ ರಿಜಿಸ್ಟ್ರಾರ್ ಆಗಿ ನೇಮಕ ಮಾಡಿರುವುದನ್ನು ವಿರೋಧಿಸಿ ಮುಂಬೈನ ವಿದ್ಯಾರ್ಥಿಗಳು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ.
“ದಲಿತ ವಿರೋಧಿ ವ್ಯಕ್ತಿ TISS ರಿಜಿಸ್ಟ್ರಾರ್ ಆಗಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿರುವ ವಿದ್ಯಾರ್ಥಿಗಳು, ಅವರು ಹಂಚಿಕೊಂಡಿರುವ ಪೋಸ್ಟ್ ಗಳನ್ನು ಡಿಲಿಟ್ ಮಾಡಿದರೆ ಮಾತ್ರ ಸಾಲದು” ಎಂದು ಸುಮಾರು 1,200ಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಿ ಪತ್ರ ಚಳುವಳಿ ಮಾಡುತ್ತಿದ್ದಾರೆ.
ಕರ್ನಲ್ ರಾಕೇಶ್ ಮೋಹನ್ ಜೋಶಿಯಂತಹ ಕೋಮುದ್ವೇಷಿ ಮತ್ತು ದಲಿತ ವಿರೋಧಿ ವ್ಯಕ್ತಿ TISSನಂತಹ ಸಂಸ್ಥೆಗೆ ನೇಮಕಗೊಂಡಿರುವುದು ಸಮಸ್ಯಾತ್ಮಕವಾಗಬಹುದು ಎಂಬುದಾಗಿ ಪ್ರಗತಿಪರ ವಿದ್ಯಾರ್ಥಿಗಳ ವೇದಿಕೆ (PSF) ಹೇಳಿದೆ ಎಂದು ನ್ಯಾಷನಲ್ ಹೆರಾಲ್ಡ್ ವರದಿ ಮಾಡಿದೆ.
ರಾಕೇಶ್ ಮೋಹನ್ ಜೋಶಿ ಹಂಚಿಕೊಂಡಿರುವ ಕೆಲವು ಪೋಸ್ಟ್ ಗಳು ಯಾವುದೋ ಒಂದು ಧರ್ಮದ ವಿರುದ್ಧ ಪ್ರಚೊದನಾಕಾರಿ ನಿಲುವನ್ನು ಹೊಂದಿದ್ದು, ಕೋಮುಪ್ರಚೋದನೆಯನ್ನು ಉತ್ತೇಜಿಸುವಂತದ್ದಾಗಿದೆ ಎಂದು ವಿದ್ಯಾರ್ಥಿಗಳು ಪತ್ರದಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಬದುಕಿದ್ದರೆ ಗೌರಿ ಮೇಡಂ ಹೀಗನ್ನುತ್ತಿದ್ದರೇನೋ..
“ಹೊಸದಾಗಿ ನೇಮಕಗೊಂಡ ರಿಜಿಸ್ಟ್ರಾರ್, ಕೇಂದ್ರ ವಿಶ್ವವಿದ್ಯಾಲಯಗಳಲ್ಲಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು, ಸಿಎಎ ವಿರೋಧಿ ಪ್ರತಿಭಟನಾಕಾರರನ್ನು ದೂಷಿಸಿದ್ದು, ಮಾಧ್ಯಮದ ಹಲವು ವ್ಯಕ್ತಿಗಳನ್ನು ಪ್ರಾಸ್ಟಿಟ್ಯೂಟ್ (ವ್ಯಭಿಚಾರಿಗಳು) ಎಂದು ಕರೆದಿದ್ದಾರೆ. ಹಾಸ್ಯನಟ-ಕಾರ್ಯಕರ್ತ ವರುಣ್ ಗ್ರೋವರ್ ಅವರನ್ನು ಕೀಳಾಗಿ ನಿಂದಿಸಿದ್ದಾರೆ” ಎಂದು ಆರೋಪಿಸಲಾಗಿದೆ.
ಅವರು ತಬ್ಲಿಘಿ ಜಮಾಅತ್ ವಿರುದ್ಧ ಪ್ರಚೋದನಕಾರಿ ಮತ್ತು ಕೋಮುವಾದದ ಪೋಸ್ಟ್ ಮಾಡಿದ್ದು, “ಭಾರತವು ಇನ್ನೂ ಕೊರೊನಾ ವೈರಸ್ ವಿರುದ್ಧ ಲಸಿಕೆ ಕಂಡುಹಿಡಿದಿಲ್ಲ. ಏಕೆಂದರೆ 90% ಅಂಕಗಳನ್ನು ಪಡೆದ ಜನರು ಪಕೋಡಾ ಮಾರಾಟ ಮಾಡುತ್ತಿದ್ದಾರೆ ಮತ್ತು 40% ಗಳಿಸಿದವರು ಪ್ರಯೋಗಾಲಯಗಳಲ್ಲಿ ಪ್ರಯೋಗ ನಡೆಸುತ್ತಿದ್ದಾರೆ” ಎಂದು ಟ್ವೀಟ್ ಮಾಡುವ ಮೂಲಕ ಮೀಸಲಾತಿಯನ್ನು ಗೇಲಿ ಮಾಡಿದ್ದರು.
“ನಮ್ಮ ಹೊಸ ರಿಜಿಸ್ಟ್ರಾರ್ ನೀಡಿರುವ, ದಲಿತ ಸಮುದಾಯದ ವಿರುದ್ಧ ಇಂತಹ ಪೂರ್ವಗ್ರಹಪೀಡಿತ ದೃಷ್ಟಿಕೋನಗಳು ಮತ್ತು ಕೋಮು ದ್ವೇಷದ ಹೇಳಿಕೆಗಳನ್ನು ಗಮನಿಸಿದ ನಂತರ, ವಿದ್ಯಾರ್ಥಿಗಳು ತಮ್ಮ ವಿಭಾಗಗಳ ಭವಿಷ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ” ಎಂದು PSF ಸದಸ್ಯ ರಾಮದಾಸ್ ಹೇಳಿದರು.
“ರಿಜಿಸ್ಟ್ರಾರ್ ಆಡಳಿತದ ಮುಖ್ಯಸ್ಥರಾಗಿದ್ದು, ಸಣ್ಣ ಸಣ್ಣ ಕಾರ್ಯಕ್ರಮಗಳಿಗೆ ಅನುಮೋದನೆ ನೀಡುವಂತಹ ಕರ್ತವ್ಯಗಳಿಂದ ಹಿಡಿದು ದೊಡ್ಡ ಮಟ್ಟದ ನಿರ್ಧಾರಗಳನ್ನು ತೆಗೆದುಕೊಳ್ಳುವವರೆಗೂ ಅಧಿಕಾರ ಹೊಂದಿರುತ್ತಾರೆ. ಹಾಗಾಗಿ ಅವರ ಏಕಪಕ್ಷೀಯ ದೃಷ್ಟಿಕೋನಗಳು ಈ ಎಲ್ಲದರ ಮೇಲೆ ಪರಿಣಾಮ ಬೀರಬಹುದು. ರಿಜಿಸ್ಟ್ರಾರ್ ವಿದ್ಯಾರ್ಥಿವೇತನವನ್ನೂ ಸಹ ತಡೆಹಿಡಿಯಬಹುದು” ಎಂದು ಅವರು ಹೇಳಿದರು.
TISSನಲ್ಲಿ ಮನೋವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿರುವ ಅವಿನಾಶ್ ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿ, “ಈ ಸಂಸ್ಥೆ ನಡೆಯುತ್ತಿರುವುದೇ Activism Based Social Sience ಮೇಲೆ. ಇಲ್ಲಿ ವಿದ್ಯಾರ್ಥಿಗಳಿಂದ-ಪ್ರಾಧ್ಯಾಪಕರುಗಳ ತನಕ ನೂರಾರು ಹೋರಾಟಗಾರರಿದ್ದಾರೆ. ಇಂತಹ ಸ್ಥಳಕ್ಕೆ ಏಕಪಕ್ಷೀಯ ದೃಷ್ಟಿಕೋನವುಳ್ಳವರು, ನಿರ್ಧಾರ ತೆಗೆದುಕೊಳ್ಳುವ ಸ್ಥಾನಕ್ಕೆ ನೇಮಕಗೊಂಡರೆ, ಖಂಡಿತ ಅವುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ” ಎಂದು ಹೇಳಿದರು.
ಇದನ್ನೂ ಓದಿ: ಸಂಘರ್ಷವಿರುವುದು 99% ಭಾರತೀಯರು v/s 1% ಕೋಮುವಾದಿ ಗ್ಯಾಂಗ್ ನಡುವೆ – ದೇವನೂರ ಮಹಾದೇವ


