ಪ್ರಧಾನಿ ಮೋದಿಯವರ ವಿಡಿಯೋಗಳಿಗೆ ಇನ್ನಿಲ್ಲದಂತೆ ಡಿಸ್‌ಲೈಕ್‌ಗಳು ಬರುತ್ತಲೇ ಇವೆ. ಇಂದಿನ ಬೀದಿ ಬದಿ ಪ್ಯಾಪಾರಿಗಳ ಜೊತೆಗಿನ ಇಂದಿನ ಸಂವಾದಕ್ಕೂ ಜನಸಾಮಾನ್ಯರು ಡಿಸ್‌ಲೈಕ್ ಒತ್ತುವ ಮೂಲಕ ನಿನ್ನೆಯ ದಾಖಲೆ ಮುರಿದು ಪ್ರತಿರೋಧ ತೋರಿದ್ದಾರೆ.
ಮಧ್ಯಪ್ರದೇಶದಲ್ಲಿರುವ, ಪ್ರಧಾನ ಮಂತ್ರಿ ಬೀದಿ ಬದಿ ಪ್ಯಾಪಾರಿಗಳ ಆತ್ಮನಿರ್ಭರ ನಿಧಿ ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಿದರು. ಈ ವೇಳೆ ಪ್ರಧಾನ ಮಂತ್ರಿ ಕಚೇರಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಭಾರತೀಯ ಜನತಾ ಪಾರ್ಟಿಯ ಚಾನೆಲ್‌ಗಳಲ್ಲಿ ಈ ವಿಡಿಯೋ ಪ್ರಸಾರ ಮಾಡಲಾಗಿದೆ.
ಭಾರತೀಯ ಜನತಾ ಪಾರ್ಟಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರವಾದ ಇಂದಿನ ವಿಡಿಯೋ ಕೇವಲ 7 ಗಂಟೆಗಳಲ್ಲಿ, ಈ ವರದಿ ತಯಾರಿಸುವ ವೇಳೆಗೆ 2.9 ಸಾವಿರ ಲೈಕ್ ಪಡೆದಿದ್ದರೆ, 24 ಸಾವಿರ ಡಿಸ್‌ಲೈಕ್ ಪಡೆಯುವ ಮೂಲಕ ನಿನ್ನೆಯ ವಿಡಿಯೋದ ದಾಖಲೆ ಮುರಿದಿದೆ. ಪ್ರತಿ ದಿನಕ್ಕೂ ಪ್ರಧಾನಿಯವರ ವಿಡಿಯೋಗಳಿಗೆ ಡಿಸ್‌ಲೈಕ್ ಮಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.
ಇದನ್ನೂ ಓದಿ: ಮೋದಿಯವರ ಯಾವ ವಿಡಿಯೋ ಸಹ ಬಿಡುತ್ತಿಲ್ಲ: ಇಂದೂ ಡಿಸ್‌ಲೈಕ್‌ಗಳ ಸುರಿಮಳೆ!
“ಸಂವಾದದಲ್ಲಿ ಪ್ರಧಾನಿ ಮೋದಿ ಆನ್‌ಲೈನ್ ಡೆಲಿವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬೀದಿಬದಿ ವ್ಯಾಪಾರಿಗಳು ಮುಂದೆ ಬರಬೇಕು. ದೊಡ್ಡ ರೆಸ್ಟೋರೆಂಟ್‌ಗಳಂತೆ ಬೀದಿಬದಿ ಆಹಾರ ತಯಾರಿಸಿ ಮಾರಾಟ ಮಾಡುವವರಿಗೂ ಆನ್‌ಲೈನ್ ಡೆಲಿವರಿ ವ್ಯವಸ್ಥೆಯಂಥ ವೇದಿಕೆ ಕಲ್ಪಿಸುವ ಪ್ರಯತ್ನ ನಡೆದಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗ್ವಾಲಿಯರ್‌ನ ಅರ್ಚನಾ ಶರ್ಮಾ, ಇಂದೋರ್ ಜಿಲ್ಲೆಯ ಸಾಂವೇರ್‌ನ ಬೀದಿಬದಿ ವ್ಯಾಪಾರಿ ಛಗನ್‌ಲಾಲ್ ಮತ್ತು ಆತನ ಪತ್ನಿ ಮತ್ತು ರೈಸೆನ್ ಜಿಲ್ಲೆಯ ತರಕಾರಿ ವ್ಯಾಪಾರಿ ದಲ್ಚಂದ್ ಎಂಬುವರೊಡನೆ ಸಂವಾದ ನಡೆಸಿದರು. ಎರಡು ತಿಂಗಳ ಅವಧಿಯಲ್ಲಿ ಲಕ್ಷಕ್ಕೂ ಅಧಿಕ ವ್ಯಾಪಾರಿಗಳು ಈ ಯೋಜನೆ ಲಾಭ ಪಡೆದಿದ್ದಾರೆ ಎಂದು ತಿಳಿಸಿದರು.
ಈ ಬಾರಿಯ ಆಗಸ್ಟ್ 30ರ ಮನ್ ಕಿ ಬಾತ್ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿ ಹತ್ತು ಲಕ್ಷಕ್ಕೂ ಡಿಸ್‌ಲೈಕ್ ಗಳಿಸಿ, ದಾಖಲೆ ಬರೆದಿತ್ತು. ಅಲ್ಲಿಂದಿಚೀಗೆ ಮೋದಿಯವರ ಯಾವ ವಿಡಿಯೋವನ್ನೂ ಸಹ ಬಿಡದ ಜಾಲತಾಣಿಗರು ಡಿಸ್‌ಲೈಕ್ ಸುರಿಮಳೆ ಮುಂದುವರೆಸಿದ್ದಾರೆ.


