ಸೈನ್ಯದಿಂದ ಹೊರಬಂದಿರುವ ಇಬ್ಬರು ಸೈನಿಕರು ‘ರೋಹಿಂಗ್ಯಾ ಅಲ್ಪಸಂಖ್ಯಾತರ’ ವಿರುದ್ದ ಮ್ಯಾನ್ಮಾರ್ ಸೈನ್ಯ ಎಸಗಿರುವ ಅಮಾನವೀಯ ಘಟನೆಗಳ ಬಗ್ಗೆ ಮಾತನಾಡಿದ್ದು, ಅಲ್ಪಸಂಖ್ಯಾತರು ವಾಸಿಸುತ್ತಿದ್ದ ಹಳ್ಳಿಗಳಲ್ಲಿ ನೀವು ಏನನ್ನು ನೋಡುತ್ತೀರೋ, ಕೇಳುತ್ತೀರೋ ಎಲ್ಲವನ್ನೂ ಶೂಟ್ ಮಾಡಿ ಎಂದು ಅಧಿಕಾರಿಗಳು ಆದೇಶಿಸಿದ್ದರು ಎಂದು ಮಾನವ ಹಕ್ಕುಗಳ ಗುಂಪು ಹೇಳಿದ್ದಾಗಿ ಎಪಿ ನ್ಯೂಸ್ ವರದಿ ಮಾಡಿದೆ.
ಬೌದ್ಧ- ಬಹುಸಂಖ್ಯಾತ ದೇಶವಾದ ಮ್ಯಾನ್ಮಾರ್‌ನಲ್ಲಿ ಸೈನ್ಯದಿಂದಲೇ ನಡೆದ ಹತ್ಯಾಕಾಂಡಗಳು, ಅತ್ಯಾಚಾರಗಳು ಮತ್ತು ಹಿಂಸಾಚಾರಗಳ ಬಗ್ಗೆ ಸೈನಿಕರು ಮಾಡಿರುವ ಮೊದಲ ಸಾರ್ವಜನಿಕ ತಪ್ಪೊಪ್ಪಿಗೆ ಇದಾಗಿದೆ ಎಂದು ಎಪಿ ನ್ಯೂಸ್ ಉಲ್ಲೇಖಿಸಿದೆ.
ಇದನ್ನೂ ಓದಿ: ಮ್ಯಾನ್ಮಾರ್ ಹಿಂಸಾಚಾರದಲ್ಲಿ ಫೇಸ್‌ಬುಕ್ ಪಾತ್ರವಿದೆ: ರೋಹಿಂಗ್ಯಾ ಹಕ್ಕುಗಳ ಸಂಘಟನೆ ಆರೋಪ
ಫೋರ್ಟಿಫೈ ರೈಟ್ಸ್ ಎಂಬ ಮಾನವ ಹಕ್ಕುಗಳ ಗುಂಪು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಕ್ರಿಮಿನಲ್ ಕೋರ್ಟ್ ತನಿಖೆಗೆ ಪ್ರಮುಖ ಪುರಾವೆಯಾಗಿ ಇದನ್ನು ಒದಗಿಸಬಹುದೆಂದು ಸೂಚಿಸಿದೆ. ಇಬ್ಬರು ಸೈನಿಕರು ಮ್ಯಾನ್ಮಾರ್‌ನ ರಾಖೈನ್‌ನಲ್ಲಿ ಜನರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಗಿ ಫ್ರೋರ್ಟಿಫೈ ಹೇಳಿದೆ.
ರೋಹಿಂಗ್ಯಾಗಳ ವಿರುದ್ಧದ ಹಿಂಸಾಚಾರದ ವಿಚಾರಣೆಯನ್ನು ನೆದರ್‌ಲ್ಯಾಂಡ್ಸ್‌ನಲ್ಲಿರುವ ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯ ನಡೆಸುತ್ತಿದೆ. ಇಬ್ಬರು ಸೈನಿಕರು ಕಳೆದ ತಿಂಗಳು ತಮ್ಮ ದೇಶದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ. ಹತ್ಯಾಕಾಂಡದಲ್ಲಿ ನೇರವಾಗಿ ಭಾಗವಹಿಸಿದ 19 ಸೈನಿಕರು ಹಾಗೂ ಆದೇಶಗಳನ್ನು ನೀಡಿದ 6 ಹಿರಿಯ ಕಮಾಂಡರ್‌ಗಳ ಹೆಸರುಗಳು ಮತ್ತು ಅವರ ಹುದ್ದೆಗಳ ವಿವರಗಳನ್ನು ಈ ಸೈನಿಕರು ನೀಡಿದ್ದಾರೆ.
‘‘ನನಗೆ 2017 ರಲ್ಲಿ ಸ್ಫಷ್ಟ ಆದೇಶ ನೀಡಲಾಗಿತ್ತು, ನಿಮಗೆ ಏನು ಕಾಣುತ್ತದೋ ಮತ್ತು ಏನು ಕೇಳುತ್ತದೋ ಅಲ್ಲಿಗೆ ಗುಂಡು ಹೊಡೆಯಿರಿ, ನಾವು ಮಹಿಳೆಯರು ಮತ್ತ ಮಕ್ಕಳು ಸೇರಿದಂತೆ 30 ಜನರನ್ನು ಕೊಂದು ಸಾಮೂಹಿಕ ಸಮಾಧಿ ಮಾಡಿದ್ದೇವೆ” ಎಂದು ಎಂದು ಮ್ಯ ವಿನ್ ಟುನ್ ಎಂಬ ಸೈನಿಕ ವೀಡಿಯೊ ಸಂದೇಶದಲ್ಲಿ ಹೇಳಿದ್ದು, “ಮಹಿಳೆಯರನ್ನು ಕೊಲ್ಲುವ ಮೊದಲು ಅತ್ಯಾಚಾರ ಮಾಡಲಾಗಿತ್ತು” ಎಂದಿದ್ದಾರೆ.
ಇದನ್ನೂಓದಿ: ನೀರಿಗೆ ಹಾರಿದ ಮಲೇಷ್ಯಾದ 24 ರೋಹಿಂಗ್ಯಾ ವಲಸಿಗರು! ಬದುಕಿದ್ದ ಒಬ್ಬ ಮಾತ್ರ.
ಮತ್ತೊಬ್ಬ ಸೈನಿಕ ಝಾವ್ ನೈಂಗ್ ಟುನ್ ತನ್ನ ಘಟಕವು 20 ರೋಹಿಂಗ್ಯಾ ಗ್ರಾಮಗಳನ್ನು ಹೇಗೆ ಅಳಿಸಿಹಾಕಿತು ಎಂಬುದನ್ನು ವಿವರಿಸಿದ್ದಾರೆ. ಮಕ್ಕಳು, ವಯಸ್ಕರು ಮತ್ತು ವೃದ್ಧರು ಸೇರಿದಂತೆ ಸುಮಾರು 80 ಜನರ ಹತ್ಯೆಗಳನ್ನು ಅವರ ಬೆಟಾಲಿಯನ್ ಕಮಾಂಡರ್ ಲೆಫ್ಟಿನೆಂಟ್ ಕರ್ನಲ್ ಅನುಮೋದಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
2017 ರ ಆಗಸ್ಟ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆಯು ‘ಜನಾಂಗೀಯ ಶುದ್ಧೀಕರಣ’ ಎಂಬ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ ಆ ದೇಶದಿಂದ 7 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ನಿರಾಶ್ರಿತರು ನೆರೆಯ ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ. ಸೇನೆ ನಡೆಸಿರುವ ಈ ಹತ್ಯಾಕಾಂಡದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ.
ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿ ಇದು ಜನಾಂಗೀಯ ಹತ್ಯೆಗೆ ಪರಿಪೂರ್ಣ ಉದಾಹರಣೆ ಎಂಬುದಾಗಿ ಬಣ್ಣಿಸಿದೆ.
ರೋಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದಾರೆ ಎಂದು ಮ್ಯಾನ್ಮಾರ್ ಬಹಳ ಹಿಂದಿನಿಂದಲೂ ಪ್ರತಿಪಾದಿಸುತ್ತಿದೆ. ಅವರ ಕುಟುಂಬಗಳು ಮ್ಯಾನ್ಮಾರ್‌ನಲ್ಲಿ ತಲೆಮಾರುಗಳಿಂದ ವಾಸಿಸುತ್ತಿದ್ದರೂ ಸಹ 1982 ರಿಂದ ಬಹುತೇಕ ಎಲ್ಲರಿಗೂ ಪೌರತ್ವ ನಿರಾಕರಿಸಲಾಗಿದೆ. ಮೂಲಭೂತ ಹಕ್ಕುಗಳನ್ನು ಸಹ ನಿರಾಕರಿಸಲಾಗಿದೆ.
ಓದಿ: ಪೌರತ್ವ ತಿದ್ದುಪಡಿ ಕಾಯ್ದೆ: ಮತ್ತೊಂದು ದೇಶವಿಭಜನೆಯ ಹೊಸ್ತಿಲಿನಲ್ಲಿ? – ಡಿ.ಉಮಾಪತಿ


