“ಈ ಸರ್ಕಾರವು ರೈತ, ದಲಿತ ಮತ್ತು ಕಾರ್ಮಿಕ ವಿರೋಧಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಈ ನಾಡಿನ ರೈತರು, ಕಾರ್ಮಿಕರು ಮತ್ತು ದಲಿತರನ್ನು ಕಾರ್ಪೋರೇಟ್ ಗಳಿಗೆ, ಕೈಗಾರಿಕೆಗಳಿಗೆ ಜೀತ ಮಾಡುವ ಗುಲಾಮರನ್ನಾಗಿಸುವ ಹುನ್ನಾರ ಮಾಡುತ್ತಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷರಾದ ಡಾ. ಪ್ರಕಾಶ್ ಕಮ್ಮರಡಿ ಆರೋಪಿಸಿದ್ದಾರೆ.
ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ನಡೆದ ರೈತ-ದಲಿತ-ಕಾರ್ಮಿಕರ ಐಕ್ಯ ಹೋರಾಟದ ಪರ್ಯಾಯ ಜನತಾ ಅಧಿವೇಶನದ ಪ್ರಸ್ತಾವಿಕ ಮಾತುಗಳನ್ನಾಡಿದ ಅವರು, “ಕೊರೋನಾಗಿಂತ ದೊಡ್ಡ ಆತಂಕವನ್ನು ಸರ್ಕಾರ ನಮ್ಮ ಮುಂದಿಟ್ಟಿದೆ. ಜನವಿರೋಧಿ ಕಾನೂನುಗಳನ್ನು ನೀವು ಚರ್ಚಿಸಬಾರದು, ವಿರೋಧಿಸಬಾರದು ಎಂಬ ಕಾರಣಕ್ಕೆ ಸುಗ್ರೀವಾಜ್ಞೆಗಳನ್ನು ತಂದು ಮಸೂದೆಗಳನ್ನು ಜಾರಿಗೊಳಿಸಲು ಹೊರಟಿದೆ” ಎಂದು ಆರೋಪಿಸಿದ್ದಾರೆ.
“ಕೊರೊನಾದ ಆತಂಕದ ನಡುವೆ ಈ ಮೂರೂ (ರೈತ, ದಲಿತ, ಕಾರ್ಮಿಕ) ಕೈಗಳು ಸೇರಿವೆ. ಈ ಬಾರಿ ಅವು ಒಟ್ಟು ಸೇರಿರುವುದಷ್ಟೇ ಅಲ್ಲದೇ ತಮ್ಮ ಕೈಗಳಲ್ಲಿ ತಂತಿ ಬೇಲಿಯನ್ನು ಹಿಡಿದುಕೊಂಡಿವೆ. ಈ ತಂತಿಬೇಲಿ ರಕ್ಷಣೆಯ ಸಂಕೇತವಾಗಿದೆ. ಈ ಮೂರೂ ಕೈಗಳು ಇಂದು ಸೇರಿ ಇಡೀ ವ್ಯವಸ್ಥೆಯನ್ನು ರಕ್ಷಣೆ ಮಾಡುತ್ತಿವೆ. ಈ ರಕ್ಷಣೆಗಾಗಿ ಇಂದು ಎಲ್ಲಾ ಹೋರಾಟಗಾರರೂ ಇಲ್ಲಿ ಸೇರಿದ್ದೀವಿ. ಹಾಗಾಗಿ ಇದು ಅತ್ಯಂತ ಮಹತ್ವದ ದಿನವಾಗಿದೆ. ಈ ದಿನದಂದು ನಮ್ಮ ಪೂರ್ವಜರು ನಮ್ಮ ಒಳಿತಿಗಾಗಿ ಒಂದಾಗಿದ್ದರು ಎಂದು, ನಮ್ಮ ಮುಂದಿನ ಪೀಳಿಗೆಯವರು ನಮ್ಮನ್ನು ನೆನಪಿಕೊಳ್ಳಲಿದ್ದಾರೆ” ಎಂದು ಪ್ರಕಾಶ್ ಕಮ್ಮರಡಿ ಅಭಿಪ್ರಾಯಪಟ್ಟರು.

‘ಭೂ ಸುಧಾರಣೆ, ಎಪಿಎಂಸಿ ಮತ್ತು ಕಾರ್ಮಿಕ ಭದ್ರತೆಯಂತಹ ಕಾಯ್ದೆಗಳಿಗೆ ಸರ್ಕಾರ ತಿದ್ದುಪಡಿ ಮಾಡುತ್ತಿದೆ. ಇದನ್ನು ಚರ್ಚೆ ಮಾಡದೇ ಜಾರಿಗೆ ತರುವ ಅಗತ್ಯವೇನಿತ್ತು? ಆತುರ ಬೇಡ, ಚರ್ಚಿಸಿದ ನಂತರ ಜಾರಿಗೆ ತನ್ನಿ. ಅಂಬೇಡ್ಕರ್ ಆಶಯದ ಸಂಸತ್ತು ಇದೆ. ಇಂತಹ ನೀಚ ಕೆಲಸಗಳಿಂದ ಅದನ್ನು ಅಪವಿತ್ರ ಮಾಡಬೇಡಿ. ಯಾವುದೇ ಕಾನೂನ್ನಾದರೂ ಚರ್ಚಿಸಿ ಜಾರಿ ಮಾಡಬೇಕು” ಎಂದು ಅವರು ಒತ್ತಾಯಿಸಿದರು.
ಜನತಾ ಅಧಿವೇಶನದ ಉದ್ಘಾಟನೆಯನ್ನು, ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರಾಧ್ಯಕ್ಷರಾದ ಯೋಗೇಂದ್ರ ಯಾದವ್‌ರವರು ಕಾಗೋಡು ಹೋರಾಟದ ನೆನಪಿನಲ್ಲಿ ಮಡಿಕೆಯಲ್ಲಿರುವ ಪವಿತ್ರ ಮಣ್ಣನ್ನು ಯುವ ರೈತರಿಗೆ ನೀಡುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ, “ನಮ್ಮ ಪೂರ್ವಿಕರ ರಕ್ತ ಮತ್ತು ಬೆವರಿನಿಂದ ಮಿಂದಿರುವ ಈ ಪವಿತ್ರ ಮಣ್ಣನ್ನು ಕಳ್ಳ ಖದೀಮರ ಪಾಲಾಗಲು ಬಿಡುವುದಿಲ್ಲ” ಎಂದು ಭೂ ಸ್ವಾಧೀನ ಕಾಯ್ದೆಯನ್ನು ವಿರೋಧಿಸುವ ಪ್ರತಿಜ್ಞೆ ಮಾಡಿದರು.
ಇದನ್ನೂ ಓದಿ: ರಸ್ತೆಯಲ್ಲಿ ಅರೆಬೆತ್ತಲೆ ಕುಳಿತ ರೈತರು; ಸರ್ಕಾರದ ವಿರುದ್ಧ ತೀವ್ರಗೊಂಡ ಪ್ರತಿಭಟನೆ


