ಪದವಿ ಕಾಲೇಜುಗಳ ಶೈಕ್ಷಣಿಕ ವರ್ಷದ ಪರಿಷ್ಕೃತ ವೇಳಾಪಟ್ಟಿಯನ್ನು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ಬಿಡುಗಡೆ ಮಾಡಿದೆ. ನವೆಂಬರ್ 1ರಿಂದ ಪದವಿ ಕಾಲೇಜುಗಳು ಆರಂಭವಾಗಲಿವೆ. ಈ ಕುರಿತು ಕೇಂದ್ರ ಶಿಕ್ಷಣ ಸಚಿವ ಡಾ.ರಮೇಶ್ ಪೋಖ್ರಿಯಲ್ ನಿಶಾಂಕ್ ಟ್ವೀಟ್ ಮಾಡಿದ್ದು, ವೇಳಾಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಈ ವೇಳಾಪಟ್ಟಿಯ ಪ್ರಕಾರ ನವೆಂಬರ್ 1 ರಿಂದ ಪದವಿ ತರಗತಿಗಳು ಆರಂಭವಾಗಲಿದ್ದು, 2021ರ ಆಗಸ್ಟ್ 30ಕ್ಕೆ ಶೈಕ್ಷಣಿಕ ವರ್ಷ ಮುಕ್ತಾಯಗೊಳ್ಳಲಿದೆ. ಮೊದಲ ಸೆಮಿಸ್ಟರ್ ಪರೀಕ್ಷೆಗಳು 2021ರ ಮಾರ್ಚ್ 8 ರಿಂದ 26ರ ನಡುವೆ ನಡೆಯಲಿದೆ. ಎರಡನೇ ಸೆಮಿಸ್ಟರ್ ಏಪ್ರಿಲ್ 5ರಿಂದ ಆರಂಭವಾಗಲಿದ್ದು, ಆಗಸ್ಟ್‌ನಲ್ಲಿ ಪರೀಕ್ಷೆಗಳು ನಡೆಯಲಿವೆ.
ಪರಿಷ್ಕೃತ ವೇಳಾಪಟ್ಟಿಯನ್ನು ಹಂಚಿಕೊಂಡಿರುವ ಶಿಕ್ಷಣ ಸಚಿವರು ಜೊತೆಗೆ ಇನ್ನೊಂದು ಟ್ವೀಟ್ ಮಾಡಿದ್ದಾರೆ. ’ಲಾಕ್ ಡೌನ್ ಮತ್ತು ಅದಕ್ಕೆ ಸಂಬಂಧಿತ ಅಂಶಗಳಿಂದಾಗಿ ಪೋಷಕರು ಎದುರಿಸುತ್ತಿರುವ ಹಣಕಾಸಿನ ಹೊರೆ ತಪ್ಪಿಸಲು, ನವೆಂಬರ್ 30 ರವರೆಗೆ ವಿದ್ಯಾರ್ಥಿಗಳ ಪ್ರವೇಶ ರದ್ದತಿ / ವಲಸೆ ಮುಂತಾದವುಗಳ ಸಂದರ್ಭದಲ್ಲಿ ವಿದ್ಯಾರ್ಥಿ ಕಟ್ಟಿದ ಶುಲ್ಕವನ್ನು ಪೂರ್ಣ ಮರುಪಾವತಿ ಮಾಡಲಾಗುವುದು ಎಂದಿದ್ದಾರೆ.
ಇದನ್ನೂ ಓದಿ: ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ: ಸೆ. 21ರಿಂದ ಶಾಲಾ-ಕಾಲೇಜು ತೆರೆಯುವುದಿಲ್ಲ!
To avoid financial hardship being faced by the parents due to lockdown and related factors, a full refund of fees will be made on account of all cancellation of admissions/ migration of students, up to 30.11.2020, for this very session as a special case.#UGCGuidelines
— Dr. Ramesh Pokhriyal Nishank (@DrRPNishank) September 22, 2020
ಯುಜಿಸಿ ಏಪ್ರಿಲ್ 29ರಂದು ಬಿಡುಗಡೆ ಮಾಡಿದ್ದ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 1ರಿಂದ ಪದವಿ ಕಾಲೇಜುಗಳು ಆರಂಭವಾಗಬೇಕಿತ್ತು. ಜುಲೈನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್‌ಆರ್‌ಡಿ) ಕಾಲೇಜುಗಳ ವೇಳಾಪಟ್ಟಿಯ ದಿನಾಂಕ ಪರಿಷ್ಕರಿಸಿ, ವಿಶ್ವವಿದ್ಯಾನಿಲಯಗಳಲ್ಲಿ ಸೆಮಿಸ್ಟರ್ / ಅಂತಿಮ ವರ್ಷದ ಪರೀಕ್ಷೆಗಳನ್ನು ಸೆಪ್ಟೆಂಬರ್ ಅಂತ್ಯದ ವೇಳೆಗೆ ನಡೆಸಲಾಗುವುದು ಎಂದು ತಿಳಿಸಿತ್ತು.
“ಕೊನೆಯ ಸೆಮಿಸ್ಟರ್ ಅನ್ನು 2020 ರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಆಫ್‌ಲೈನ್ (ಪೆನ್ ಮತ್ತು ಪೇಪರ್) ಅಥವಾ ಆನ್‌ಲೈನ್ ಅಥವಾ ಎರಡು (ಆನ್‌ಲೈನ್ + ಆಫ್‌ಲೈನ್) ವಿಧಾನದಲ್ಲಾದರೂ ನಡೆಸಲಾಗುವುದು” ಎಂದು ಯುಜಿಸಿ ಪತ್ರವೊಂದರಲ್ಲಿ ತಿಳಿಸಿದೆ. ಸದ್ಯ ಸೆಪ್ಟಂಬರ್ 1ಕ್ಕೆ ಆರಂಭವಾಗಬೇಕಿದ್ದ ಪದವಿ ತರಗತಿಗಳನ್ನು ನವೆಂಬರ್ 1ಕ್ಕೆ ಮುಂದೂಡಿದೆ.
ರಾಜ್ಯದಲ್ಲೂ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಸೆಪ್ಟೆಂಬರ್ 21ರಿಂದ ಹಿನ್ನೆಲೆ ಶಾಲೆ ಮತ್ತು ಪಿಯು ಕಾಲೇಜುಗಳನ್ನು ರೀಓಪನ್ ಮಾಡುವ ನಿರ್ಧಾರವನ್ನು ವಾಪಾಸ್ ತೆಗೆದುಕೊಳ್ಳಲಾಗಿದೆ.


