ಕೇಂದ್ರ ಸರ್ಕಾರ ಜಾರಿಗೊಳಿಸುತ್ತಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ರೈತರ ಚಳವಳಿ ದಿನೇ ದಿನೇ ಗಟ್ಟಿಗೊಳ್ಳುತ್ತಿದೆ. ಇಂದು ಬೆಳಿಗ್ಗೆಯೇ ಕೇಂದ್ರದೆಹಲಿಯ ಇಂಡಿಯಾ ಗೇಟ್ ಬಳಿ ಜಮಾಯಿಸಿದ ರೈತರು ಟ್ರಾಕ್ಟರ್‌ಗೆ ಬೆಂಕಿ ಹಾಕಿ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬೆಳಿಗ್ಗೆ 7.15ರ ಸಮಯಕ್ಕೆ ಜಮಾಯಿಸಿದ 15-20 ರಷ್ಟಿದ್ದ ರೈತರ ಗುಂಪು ಹಳೆಯ ಟ್ರಾಕ್ಟರ್ ಒಂದಕ್ಕೆ ಬೆಂಕಿ ಹಚ್ಚಿದ್ದಾರೆ. ಇಂಡಿಯಾ ಗೇಟ್ ಎದುರು ಹುತಾತ್ಮ ಭಗತ್ ಸಿಂಗ್ ಫೋಟೊ ಹಿಡಿದು ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ನರೇಂದ್ರ ಮೋದಿಯವರ ಪ್ರತಿಕೃತಿಯನ್ನು ನೇಣಿಗೇರಿಸಿದ್ದಾರೆ. ವಿಷಯ ಕಾಳ್ಗಿಚ್ಚಿನಂತೆ ಹಬ್ಬಿದ್ದು ಪೊಲೀಸರು 7.30ರ ಸಮಯಕ್ಕೆ ಎಲ್ಲಾ ಹೋರಾಟ ನಿರತ ರೈತರು ಅಲ್ಲಿಂದ ತೆರಳಿದರೆ, ಅಗ್ನಿಶಾಮಕ ದಳದ ಸಿಬ್ಬಂದಿ ನೀರು ಹಾರಿಸಿ ಟ್ರಾಕ್ಟರ್ ಅವಶೇಷಗಳನ್ನು ತೆರವುಗೊಳಿಸಿದ್ದಾರೆ.

ಇಂಡಿಯಾ ಗೇಟ್ ಎದುರು ನಡೆದಿರುವ ಈ ಐತಿಹಾಸಿಕ ಪ್ರತಿಭಟನೆಯನ್ನು ಪಂಜಾಬ್ ಯೂತ್ ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್ ಪುಟದಿಂದ ಲೈವ್ ಸ್ಟ್ರೀಮ್ ಮಾಡಲಾಗಿದೆ. ಸೆಪ್ಟಂಬರ್ 20 ರಂದು ಹರಿಯಾಣದ ಅಂಬಾಲದಲ್ಲಿ ಸಹ ಟ್ರಾಕ್ಟರ್ ಸುಟ್ಟು ಪ್ರತಿಭಟನೆ ಯುವ ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರು ಎನ್ನಲಾಗಿದೆ.
ರೈತರ ಮತ್ತು ವಿರೋಧ ಪಕ್ಷಗಳ ವ್ಯಾಪಕ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಮಸೂದೆಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್‌ರವರು ನಿನ್ನೆ ಸಹಿ ಮಾಡಿದ್ದಾರೆ. ಇದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಪಂಜಾಬ್ ಮತ್ತು ಹರಿಯಾಣದ ರೈತರನ್ನು ರೊಚ್ಚಿಗೆಬ್ಬಿಸಿದೆ. ಕೇಂದ್ರದ ಕಾಯ್ದೆಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಇಂದು ಭಗತ್ ಸಿಂಗ್ ಜನ್ಮದಿನದ ನೆನಪಿನಲ್ಲಿ ಅವರ ಹುಟ್ಟೂರು ಕಾತ್ಕರ್ ಕಲನ್‌ನಲ್ಲಿ ಧರಣಿ ನಡೆಸುತ್ತಿದ್ದಾರೆ.

ಇಂದು ಕರ್ನಾಟಕದ ರೈತ ಸಂಘಟನೆಗಳು ಬಂದ್‌ಗೆ ಕರೆ ನೀಡಿದ್ದು ರಾಜ್ಯದೆಲ್ಲೆಡೆ ಬಂದ್ ಆರಂಭವಾಗಿದೆ. ಬೆಳಿಗ್ಗೆ 4 ಗಂಟೆಯಿಂದಲೇ ಕನ್ನಡಪರ ಸಂಘಟನೆಗಳು ಬಸ್ ತಡೆದು, ರೈಲ್ವೇ ನಿಲ್ದಾಣ ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ರೈತ-ದಲಿತ-ಕಾರ್ಮಿಕರ ಐಕ್ಯವೇದಿಕೆಯು ಬೆಂಗಳೂರಿನ ಟೌನ್ ಹಾಲ್ ಬಳಿ ಧರಣಿ ಆರಂಭಿಸಿದೆ. ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ರೈತರ ಬಂದ್‌ಗೆ ಸಂಪೂರ್ಣ ಬೆಂಬಲ ಘೋಷಿಸಿವೆ.
ಇದನ್ನೂ ಓದಿ: ಕೃಷಿ ಮಸೂದೆಗಳ ವಿರುದ್ಧ ಆಕ್ರೋಶ: ರಾಜ್ಯದ್ಯಂತ ಕರ್ನಾಟಕ ಬಂದ್ ಆರಂಭ – ವಿಡಿಯೋ ನೋಡಿ


