ವಿವಾದಿತ ರೈತ ಮಸೂದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಾಣಾವತ್ ವಿರುದ್ಧ ತುಮಕೂರಿನ ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರಿಗೆ ಹೋಲಿಸಿ ಕಂಗನಾ ರಾಣಾವತ್ ಟ್ವೀಟ್ ಮಾಡಿದ್ದನ್ನು ಉಲ್ಲೇಖಿಸಿ ಕಳೆದ ವಾರ ತುಮಕೂರು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಬಾಲನಾಯಕ್ ಕ್ಯಾತ್ಸಂದ್ರ ಪೊಲೀಸರಿಗೆ ಎಫ್‌ಐಆರ್ ದಾಖಲಿಸಲು ನಿರ್ದೇಶನ ನೀಡಿದ್ದರು.
People who spread misinformation and rumours about CAA that caused riots are the same people who are now spreading misinformations about Farmers bill and causing terror in the nation, they are terrorists. You very well know what I said but simply like to spread misinformation ? https://t.co/oAnBTX0Drb
— Kangana Ranaut (@KanganaTeam) September 21, 2020
2020 ರ ಸೆಪ್ಟೆಂಬರ್ 21 ರಂದು ರಾಣಾವತ್ ತನ್ನ ಟ್ವಿಟ್ಟರ್ ಖಾತೆ ‘ಕಂಗನಾಟೀಮ್’ ನಿಂದ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಪ್ರೊಸೀಜರ್ ಸೆಕ್ಷನ್ 156 (3) ರ ಅಡಿಯಲ್ಲಿ ಕಂಗನಾ ವಿರುದ್ಧ ಡಿಜಿಪಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಲಾಗಿತ್ತು. ಆ ಟ್ವೀಟ್‌ಗೆ ಗಲಭೆಗಳನ್ನು ಪ್ರಚೋದಿಸುವ ಮತ್ತು ಸಮಾಜದ ಶಾಂತಿಗೆ ಭಂಗ ತರುವ ಉದ್ದೇಶವಿದೆ ಎಂದು ತುಮಕೂರು ತಾಲ್ಲೂಕು ಕದರನಹಳ್ಳಿ ತಾಂಡಾ ವಾಸಿ ಹಾಗೂ ಹೈಕೋರ್ಟ್ ವಕೀಲ ಎಲ್.ರಮೇಶ್ ನಾಯಕ್ ಇ–ಮೇಲ್ ಮೂಲಕ ದೂರು ಸಲ್ಲಿಸಿದ್ದರು.
ಈಗ ಕಂಗನಾ ವಿರುದ್ಧ ಭಾರತೀಯ ದಂಡ ಸಂಹಿತೆ, 1860 (ಐಪಿಸಿ) ಅಡಿಯಲ್ಲಿ 44, 108, 153, 153 (ಎ), 504 ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.
ಈ ಟ್ವೀಟ್ ಲಕ್ಷಾಂತರ ರೈತರ ಭಾವನೆಗಳನ್ನು ನೋಯಿಸಿದೆ. ಸೆಲೆಬ್ರಿಟಿಗಳ ಈ ರೀತಿಯ ಹೇಳಿಕೆಗಳು ಸಮಾಜದ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉಂಟುಮಾಡುತ್ತವೆ ಮತ್ತು ಅಹಿತಕರ ಘಟನೆಗಳಿಗೆ ಕಾರಣವಾಗುತ್ತವೆ, ಇದು ಸಮಾಜದ ಶಾಂತಿ ಮತ್ತು ಸಹನೆಯನ್ನು ಹಾಳು ಮಾಡುತ್ತದೆ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ನಟಿ ಕಂಗನಾ ವಿರುದ್ಧ ಕರ್ನಾಟಕದಲ್ಲಿ FIR ದಾಖಲಿಸಲು ಕೋರ್ಟ್ ನಿರ್ದೇಶನ


