ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಒಂದಿಲ್ಲೊಂದು ವಿವಾದದಲ್ಲಿರುವ ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಖ್ಯಾತ ಯೂಟ್ಯೂಬರ್, ಯುವಚಿಂತಕ ಧೃವ್ ರಾಠೀ ನನ್ನ ಚಾರಿತ್ರ್ಯ ಹರಣ ಮಾಡುವ ವಿಡಿಯೋ ಮಾಡಲು 65 ಲಕ್ಷ ಹಣ ಪಡೆದಿದ್ದಾರೆ ಎಂದು ಕಂಗನಾ ಆರೋಪಿಸಿದ್ದಾರೆ.
ಅಸಲಿಗೆ ಈ ಜಟಾಪಟಿ ಆರಂಭವಾದದ್ದೇ ನಿರ್ದೇಶಕ ಎರೆ ಕ್ಯಾಥರ್ ಮಾಡಿದ್ದ ಟ್ವೀಟ್ ಮೂಲಕ. ಅಕ್ಟೋಬರ್ 31 ರಂದು ಟ್ವೀಟ್ ಮೂಲಕ ಯೂಟ್ಯೂಬರ್ ಧೃವ್ ರಾಠೀ ವಿರುದ್ಧ ಅವರ ಹೆಸರನ್ನು ಉಲ್ಲೇಖಿಸದೆ ಆರೋಪ ಮಾಡಿದ್ದ ಎರೆ ಕ್ಯಾಥರ್, “ದಿವಂಗತ ನಟ ಸುಶಾಂತ್ ಸಿಂಗ್ ಸಾವಿನ ಹಿಂದೆ ಆತನ ಕುಟುಂಬಸ್ಥರ ಪಾತ್ರ ಎಂಬ ಹೆಸರಿನಲ್ಲಿ 40 ಲಕ್ಷ ಚಂದಾದಾರರನ್ನು ಹೊಂದಿರುವ ಖ್ಯಾತ ಯೂಟ್ಯೂಬರ್ ಓರ್ವ ವಿಶ್ಲೇಷನಾತ್ಮಕ ವಿಡಿಯೋ ಒಂದನ್ನು ಮಾಡಲು ಮುಂದಾಗಿದ್ದಾರೆ. ಅಲ್ಲದೆ, ಈ ವಿಡಿಯೋ ಮಾಡಲು ಅವರು 65 ಲಕ್ಷ ಹಣ ಸ್ವೀಕರಿಸಿದ್ದಾರೆ. ಇದೇ ಯೂಟ್ಯೂಬರ್ ಈ ಹಿಂದೆ ನಟಿ ಕಂಗನಾ ಮತ್ತು ಅರ್ನಾಬ್ ವಿರುದ್ಧವೂ ವಿಡಿಯೋ ಮಾಡಿದ್ದರು” ಎಂದು ಆರೋಪಿಸಿದ್ದರು.
ಅಲ್ಲದೆ ಎರೆ ಕ್ಯಾಥರ್ ಮತ್ತೊಂದು ಟ್ವೀಟ್‌ನಲ್ಲಿ, “ಈ ಯೂಟ್ಯೂಬರ್ ಯಾವುದೇ ವಿಡಿಯೋಗೆ 30 ರಿಂದ 40 ಲಕ್ಷ ಪಡೆಯುತ್ತಾರೆ. ಆದರೆ, ಕಂಗನಾ ಮತ್ತು ಅರ್ನಾಬ್ ವಿರುದ್ಧದ ವಿಡಿಯೋಗೆ ತಲಾ 35 ಲಕ್ಷ ಪಡೆದಿದ್ದಾರೆ” ಎಂದು ಆರೋಪಿಸಿದ್ದರು.
Lol, is this bullshit fake news referring to me?
First of all no one paid me any money to make Kangana video. Secondly, I’m not planning to make any video on SSR.
And thirdly, I really wish my sponsoring fees was 30 Lakh per video, how rich would I be ? https://t.co/HAI5vZi2Qu
— Dhruv Rathee ?? (@dhruv_rathee) October 31, 2020
ನಿರ್ದೇಶಕ ಎರೆ ಕ್ಯಾಥರ್ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಯೂಟ್ಯೂಬರ್ ಧೃವ್ ರಾಠೀ, “ನನ್ನನ್ನು ಹೆಸರಿಸಿ ಈ ಸುಳ್ಳು ಸುದ್ದಿಯನ್ನು ಬರೆಯಲಾಗಿದೆ. ಮೊದಲನೇಯದಾಗಿ ನಟಿ ಕಂಗನಾ ವಿರುದ್ಧ ನಾನು ಮಾಡಿದ್ದ ವಿಡಿಯೋಗೆ ಯಾರಿಂದಲೂ ಹಣ ಪಡೆದಿಲ್ಲ. ಎರಡನೇಯದಾಗಿ ಮೃತ ನಟ ಸುಶಾಂತ್ ಸಿಂಗ್ ಸಾವಿನ ಕುರಿತು ವಿಡಿಯೋ ಮಾಡುವ ಯಾವ ಉದ್ದೇಶವೂ ನನಗಿಲ್ಲ. ಮೂರನೇಯದಾಗಿ ನಾನು ಮಾಡುವ ವಿಡಿಯೋಗಳಿಗೆ 30 ಲಕ್ಷ ಹಣದ ಪ್ರಾಯೋಜತ್ವ ಸಿಗಲಿ ಎಂದು ನಾನು ಆಶಿಸುತ್ತೇನೆ. ಅಷ್ಟು ಹಣ ಸಿಕ್ಕರೆ ನಾನು ಎಷ್ಟು ಶ್ರೀಮಂತ ವ್ಯಕ್ತಿಯಾಗಬಹುದು” ಎಂದು ಉತ್ತರಿಸಿದ್ದಾರೆ.
ಇದನ್ನೂ ಓದಿ: ರಾಜಕೀಯಾರ್ಥಿಕ ವಿಶ್ಲೇಷಕ ಧೃವ್ ರಾಠೀ ಬಗ್ಗೆ ನಿಮಗೆಷ್ಟು ಗೊತ್ತು?
ಈ ನಡುವೆ ಕಂಗನಾ ರಣಾವತ್, “ಎರೆ ಕ್ಯಾಥರ್ ಸರಿಯಾಗಿಯೇ ಹೇಳಿದ್ದಾರೆ. ಈತ ಹಣ ಪಡೆದು ನನ್ನ ವಿರುದ್ಧ ವಿಡಿಯೋಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಟ್ಟಿದ್ದಾನೆ. ಮುಂಬೈ ಮಹಾನಗರ ಪಾಲಿಕೆ ನನ್ನ ಕಚೇರಿಯನ್ನು ಧ್ವಂಸಗೊಳಿಸಿದ್ದ ಪ್ರಕರಣದ ಕುರಿತು ಈತ 60 ಲಕ್ಷ ಹಣ ಪಡೆದು ಸುಳ್ಳು ವಿಡಿಯೋ ಮಾಡಿದ್ದಾನೆ. ಈತನನ್ನು ನಾನು ಕಂಬಿ ಎಣಿಸುವಂತೆ ಮಾಡುತ್ತೇನೆ. ಸರ್ಕಾರ ಮತ್ತು ಹಣದ ಬಲ ಇಲ್ಲದೆ ಓರ್ವ ವ್ಯಕ್ತಿ ಹೀಗೆ ಕಾನೂನಾತ್ಮಕ ವಿಚಾರಗಳ ಬಗ್ಗೆ ಬಹಿರಂಗವಾಗಿ ಸುಳ್ಳು ಹೇಳಲು ಸಾಧ್ಯವೇ?” ಎಂದು ಹೇಳುವ ಮೂಲಕ ನಟಿ ಕಂಗನಾ ಮಹಾರಾಷ್ಟ್ರ ಸರ್ಕಾರದ ವಿರುದ್ಧವೂ ಮತ್ತೊಮ್ಮೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಧೃವ್ ರಾಠೀ “ನೀವು ಈ ವೀಡಿಯೊ ಬಗ್ಗೆ ಮಾತನಾಡುತ್ತಿದ್ದೀರಾ? ಸ್ನೇಹಿತರೆ, ಅವರು ಈ ವೀಡಿಯೊದ ಬಗ್ಗೆ ಮಾತನಾಡುತ್ತಿದ್ದಾರೋ, ಇಲ್ಲವೋ ಎಂದು ತಿಳಿಯಲು ದಯವಿಟ್ಟು ಈ ವೀಡಿಯೊವನ್ನು ವೀಕ್ಷಿಸಿ ಮತ್ತು ಹಂಚಿಕೊಳ್ಳಬಹುದೇ? ಏಕೆಂದರೆ ನಾನು ಯಾವುದೇ ಹಣವನ್ನು ಸ್ವೀಕರಿಸಿಲ್ಲ” ಎಂದು ತಮ್ಮ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
Oh acha, aisa hai kya?
Are you talking about this video? Guys, can you please watch and share this video to know if she’s talking about this video or not?
Because I didn’t receive any payment https://t.co/Reu72RUQ3V
— Dhruv Rathee ?? (@dhruv_rathee) November 2, 2020
ಅಲ್ಲದೇ “ನನ್ನ ಮೇಲೆ ಸುಳ್ಳು ಆರೋಪ ಹೊರಿಸುವ ಮೂಲಕ, ನನ್ನ ಕಂಗನಾ ವಿಡಿಯೋಗೆ ಹೆಚ್ಚಿನ ಪ್ರಚಾರ ನೀಡಿದ ನಂತರ ಇಂದು 1 ಲಕ್ಷಕ್ಕೂ ಹೆಚ್ಚು ಜನರು ಅದನ್ನು ನೋಡಿದ್ದಾರೆ. ಇದನ್ನು ‘ಸ್ಟ್ರೈಸೆಂಡ್ ಎಫೆಕ್ಟ್’ (ಯಾವುದಾದರೂ ಮಾಹಿತಿಯನ್ನು ಮರೆಮಾಚಲು, ತೆಗೆದುಹಾಕಲು ಅಥವಾ ಸೆನ್ಸಾರ್ ಮಾಡಲು ಪ್ರಯತ್ನಿಸಿದಾಗ ಆ ಮಾಹಿತಿಯು ಇಂಟರ್ನೆಟ್‌ನಲ್ಲಿ ಮತ್ತಷ್ಟು ಪ್ರಚಾರ ಪಡೆದು ವೈರಲ್ ಆಗುವುದು) ಎಂದು ಕರೆಯಲಾಗುತ್ತದೆ” ಎಂದು ತಮ್ಮ ವಿಡಿಯೋ ವೀಕ್ಷಣೆಯ ಅನಾಲಿಟಿಕ್ ಗ್ರಾಫ್ ಅನ್ನು ಷೇರ್ ಮಾಡಿದ್ದಾರೆ.
ಕಂಗಾನಾ ಕುರಿತು ಧೃವ್ ರಾಠೀ ಮಾಡಿರುವ ಆ ವಿಡಿಯೋವನ್ನು ಇದುವರೆಗೂ 39 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, 4.4 ಲಕ್ಷ ಜನ ಲೈಕ್ ಮಾಡಿದ್ದಾರೆ.
ಇದನ್ನೂ ಓದಿ: ಕೆಲವರು ಮುಂಬೈಗೆ ಬಂದು ದ್ರೋಹವೆಸಗುತ್ತಾರೆ: ಕಂಗನಾ ವಿರುದ್ಧ ಉದ್ಧವ್ ಠಾಕ್ರೆ ಕಿಡಿ


