2018 ರ ಆತ್ಮಹತ್ಯೆ ಪ್ರಕರಣವೊಂದಕ್ಕೆ ಸಂಬಂಧಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಬಾಂಬೆ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆಯಲು ವಿಫಲರಾಗಿದ್ದಾರೆ.
ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಎಸ್ ಎಸ್ ಶಿಂಧೆ ಮತ್ತು ನ್ಯಾಯಮೂರ್ತಿ ಎಂ ಎಸ್ ಕಾರ್ನಿಕ್ ಅವರ ವಿಭಾಗೀಯ ನ್ಯಾಯಪೀಠ, ಎರಡೂ ಕಡೆಯ ವಿಚಾರಣೆ ನಡೆಸಿ ನಾಳೆ ಸೂಕ್ತ ಆದೇಶ ಹೊರಡಿಸುವುದಾಗಿ ತಿಳಿಸಿದೆ.
ಇದನ್ನೂ ಓದಿ: ಅರ್ನಾಬ್ ಬಂಧನ ಖಂಡಿಸಿ ಟ್ರೋಲ್‌ಗೊಳಗಾದ ಬೆಂಗಳೂರು ಎಡಿಟರ್ಸ್ ಗಿಲ್ಡ್!
ತಮ್ಮ ವಕೀಲರುಗಳಾದ ಆದಾರ್ ಪೊಂಡ ಹಾಗೂ ಹರೀಶ್ ಸಾಳ್ವೆ ಮೂಲಕ ಅಪೀಲು ಸಲ್ಲಿಸಿರುವ ಅರ್ನಬ್ ತಮ್ಮನ್ನು ಕನಿಷ್ಠ ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆ ಕೋರಿದ್ದರು. ಈ ನಿರ್ದಿಷ್ಟ ಪ್ರಕರಣವನ್ನು ಎಪ್ರಿಲ್ 2019 ರಲ್ಲಿಯೇ ಮುಚ್ಚಲಾಗಿರುವುದರಿಂದ ಮರು ತನಿಖೆ ನಡೆಸುವುದು ಹಾಗೂ ಬಂಧನ ಅಕ್ರಮವಾಗಿದೆ ಎಂದು ಅವರು ತಿಳಿಸಿದ್ದರು.
ಅರ್ನಬ್ ಪರ ಅಪೀಲನ್ನು ತಿರಸ್ಕರಿಸಿದ ನ್ಯಾಯಾಲಯ, ’ರಾಜ್ಯ ಸರಕಾರ, ಇತರ ಪ್ರತಿವಾದಿಗಳು ಹಾಗೂ ಈ ಪ್ರಕರಣದ ಮಾಹಿತಿದಾರರ (ಅನ್ವಯ್ ನಾಯ್ಕ್ ಅವರ ಪತ್ನಿ ಅಕ್ಷತಾ) ವಾದವನ್ನು ಆಲಿಸದೆ ಅಪೀಲನ್ನು ಮನ್ನಿಸಲು ಸಾಧ್ಯವಿಲ್ಲ. ಅವರಿಗೆ ತಡವಾಗಿ ನೋಟಿಸ್ ಜಾರಿಯಾಗಿರುವುದರಿಂದ ಇಂದು ವಿಚಾರಣೆ ಸಾಧ್ಯವಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ರಿಪಬ್ಲಿಕ್ ಟಿವಿ ಅರ್ನಾಬ್ ಬಂಧನ ಸಂತೋಷ ತಂದಿದೆ: ಅನ್ವಯ್ ನಾಯಕ್ ಕುಟುಂಬ!
2018 ರಲ್ಲಿ ನಡೆದ ಇಂಟೀರಿಯರ್ ಡಿಸೈನರ್ ಅನ್ವಯ್ ನಾಯಕ್ ಮತ್ತು ಅವರ ತಾಯಿ ಕುಮುದ್ ನಾಯಕ್ ಸಾವಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಿಐಡಿ ಪೊಲೀಸರು ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿಯನ್ನು ನಿನ್ನೆ ಮುಂಜಾನೆ ವಶಕ್ಕೆ ಪಡೆದುಕೊಂಡಿದ್ದರು.
ಜೊತೆಗೆ, ಬಂಧನದ ಸಮಯದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅರ್ನಾಬ್ ಗೋಸ್ವಾಮಿ, ಅವರ ಪತ್ನಿ, ಮಗ ಮತ್ತು ಇನ್ನಿಬ್ಬರ ವಿರುದ್ಧ ಮುಂಬೈ ಪೊಲೀಸರು ಹೊಸ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಇದನ್ನೂ ಓದಿ: ಅರ್ನಾಬ್ ಬಂಧನ: ಸಾಮಾಜಿಕ ಮಾಧ್ಯಮಗಳಲ್ಲಿ ಭುಗಿಲೆದ್ದ ಪರ-ವಿರೋಧದ ಚರ್ಚೆ!


