Homeಮುಖಪುಟಅರ್ನಬ್ ಪತ್ರಿಕೋದ್ಯಮ ಪೊಳ್ಳಾಗಿರುವ ಸಂದರ್ಭದಲ್ಲಿ ಪೊಲೀಸ್ ಅತಿರೇಕ ಸಮರ್ಥಿಸಬಾರದು, ದಿಟ ಮಾಧ್ಯಮ ಕಟ್ಟಬೇಕು

ಅರ್ನಬ್ ಪತ್ರಿಕೋದ್ಯಮ ಪೊಳ್ಳಾಗಿರುವ ಸಂದರ್ಭದಲ್ಲಿ ಪೊಲೀಸ್ ಅತಿರೇಕ ಸಮರ್ಥಿಸಬಾರದು, ದಿಟ ಮಾಧ್ಯಮ ಕಟ್ಟಬೇಕು

ಪ್ರಸಕ್ತ ಬಿಜೆಪಿ ಮುಖಂಡರು ಇದೊಂದು ಪ್ರಕರಣದಲ್ಲಿಯಾದರೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ, ಸರ್ವಾಧಿಕಾರ, ಫ್ಯಾಸಿಸಂ ಬಗ್ಗೆ ಮಾತನಾಡುತ್ತಿರುವುದು ಸೋಜಿಗವಲ್ಲದೆ ಮತ್ತೇನು?

- Advertisement -
- Advertisement -

ಬಾಲ್ಯದ ಶಾಲೆಯ ಕೋಣೆಯಲ್ಲಿ ನಡೆಯುವ ಇಂತಹ ಘಟನೆ ಎಲ್ಲರೂ ಕಂಡಿರಲು ಸಾಧ್ಯ. ಮುಂದಿನ ಬೆಂಚಿನಲ್ಲಿ ಕೂತ ಸಹಪಾಠಿಗೆ ಕೈಯಿಂದ ಮೊಟಕುವುದು. ಹೊಡೆಸಿಕೊಂಡವನು ಅದೇ ರಭಸದಲ್ಲಿ ಹಿಂತಿರುಗಿ ಹೊಡೆಯಲು ಬಂದಾಗ ’ಮಿಸ್ ನೋಡಿ ಹೊಡಿತಾ ಇದಾನೆ’ ಎಂದು ದೂರು ಹೇಳುವುದು.
ಏನಿದು ಬಾಲ್ಯದ ಆಟದ ಬಗ್ಗೆ ಎಂದುಕೊಂಡರೆ, ಇವತ್ತು ಪತ್ರಿಕೋದ್ಯಮವನ್ನು ಇಂತಹ ಬಾಲ್ಯದ ಆಟಕ್ಕಿಂತಲೂ ಅಬೌದ್ಧಿಕಗೊಳಿಸಿ ಕಿರುಚಾಟವನ್ನೇ ಪತ್ರಿಕಾವೃತ್ತಿ ಎನ್ನುವ ಪತ್ರಕರ್ತನಿಗೆ ಸೇರಿದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಮೇಲಿನ ಮಕ್ಕಳಾಟ ನೆನಪಿಗೆ ಬಂತು.

ನವೆಂಬರ್ 4ರಂದು ಪಾಪ್ಯುಲಿಸ್ಟ್ ಟಿವಿ ಚಾನೆಲ್ ರಿಪಬ್ಲಿಕ್‌ನ ಸಂಪಾದಕ ಮತ್ತು ಸಂಸ್ಥಾಪಕ ಅರ್ನಬ್ ಗೋಸ್ವಾಮಿಯನ್ನು, ಈಗಾಗಲೇ ಮುಚ್ಚಿಹೋಗಿದ್ದ ಒಂದು ಪ್ರಕರಣವನ್ನು ಮತ್ತೆ ರಿ-ಓಪನ್ ಮಾಡಿ, ಮುಂಬೈ ಪೊಲೀಸರು ಸೂರ್ಯಹುಟ್ಟುವ ಸಮಯಕ್ಕೇ ಆತನ ಮನೆಗೆ ತೆರಳಿ ಬಂಧಿಸಿದ್ದು ಹಲವು ವಲಯಗಳಿಂದ ಟೀಕೆಗೆ ಒಳಗಾಗಿತ್ತು. ಆ ಹಲವು ವಲಯಗಳನ್ನು ಊಹಿಸುವುದು ಸುಲಭವಾದರೂ, ಬಿಜೆಪಿ ಮತ್ತು ಬಿಜೆಪಿ ಬೆಂಬಲಿಗರು ಘಟನೆಯ ಬಗ್ಗೆ ಉಗ್ರ ಕೋಪದಿಂದ ಪ್ರತಿಕ್ರಿಯಿಸಿದರಾದರೆ, ’ಲಿಬರಲ್ ಧೋರಣೆಯುಳ್ಳ ಹಲವರು ಕೂಡ ಪೊಲೀಸರ ವರ್ತನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವರಾದ ಅಮಿತ್ ಶಾ, ಪ್ರಕಾಶ್ ಜಾವಡೇಕರ್, ಸ್ಮೃತಿ ಇರಾನಿ ಅವರುಗಳಿಂದ ಹಿಡಿದು ಪಟ್ಟಿ ಇಲ್ಲಿ ರಾಜ್ಯ ಸರ್ಕಾರದಲ್ಲಿ ಸಚಿವರಾದ ಸುರೇಶ್ ಕುಮಾರ್, ಸಂಸದ ತೇಜಸ್ವಿ ಸೂರ್ಯ, ಆರ್‌ಎಸ್‌ಎಸ್‌ನ ಸಂತೋಷ್ ಹೀಗೆ ಕೋಪದಿಂದ ಪ್ರತಿಕ್ರಿಯಿಸಿದವರ ಪಟ್ಟಿ ದೀರ್ಘವಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹರಣ ಎಂದೂ, ಇದು ಸರ್ವಾಧಿಕಾರ, ಫ್ಯಾಸಿಸ್ಟ್ ಸರ್ಕಾರ ಎಂದೂ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಸಕ್ತ ಬಿಜೆಪಿ ಮುಖಂಡರು ಇದೊಂದು ಪ್ರಕರಣದಲ್ಲಿಯಾದರೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ, ಸರ್ವಾಧಿಕಾರ, ಫ್ಯಾಸಿಸಂ ಬಗ್ಗೆ ಮಾತನಾಡುತ್ತಿರುವುದು ಸೋಜಿಗವಲ್ಲದೆ ಮತ್ತೇನು? ಬಿಜೆಪಿ ಒಕ್ಕೂಟ ಸರ್ಕಾರದ (ಉತ್ತರ ಪ್ರದೇಶದಂತಹ ರಾಜ್ಯ ಸರ್ಕಾರಗಳನ್ನು ಸೇರಿಸಿ) ಯಶಸ್ಸು ಅಡಗಿರುವುದೇ ಮಾಧ್ಯಮಗಳನ್ನು ತಮ್ಮ ಅಜೆಂಡಾದ ಭಾಗವಾಗಿ ಕೈಗೊಂಬೆಗಳನ್ನಾಗಿಸಿಕೊಂಡಿರುವುದರಿಂದ! ಒಂದು ಕಡೆ ತಮ್ಮ ಪ್ರತಿಗಾಮಿ ಪಾಪ್ಯುಲಿಸಂ ಅನ್ನು ಪ್ರಚಾರ ಮಾಡಲು, ತಮ್ಮ ಬೆಂಬಲಿಗ ಬಂಡವಾಳದಾರರ ಸಹಾಯದಿಂದ ಅಥವಾ ಬೆದರಿಕೆಯಿಂದ ಹಲವು ಟಿವಿ ಮತ್ತು ಪ್ರಿಂಟ್ ಮಾಧ್ಯಮವನ್ನು ಪಾಪ್ಯುಲಿಸ್ಟ್ ಮಾಧ್ಯಮಗಳಾಗಿ ಬದಲಾಯಿಸಿರುವುದು. ಇದು ಸಾಧ್ಯವಾಗದೆ ಹೋದರೆ ದಿಟ್ಟ ಪತ್ರಕರ್ತರನ್ನು ಬೆದರಿಕೆಯಿಂದ ಬಾಯಿಮುಚ್ಚಿಸುವುದು. ಅದು ದೇಶದ್ರೋಹ ಪ್ರಕರಣ ದಾಖಲು ಮಾಡುವುದಾಗಲಿ ಅಥವಾ ಯುಎಪಿಎ ಕರಾಳ ಕಾಯ್ದೆಯನ್ನು ಹೇರುವುದಾಗಲಿ ಬಿಜೆಪಿ ಕೈಯ್ಯಲ್ಲಿರುವ ಹಲವು ಸರ್ಕಾರಗಳ ಕಾರ್ಯನೀತಿಯಾಗಿ ಹೋಗಿದೆ. ಈಗ ಇದ್ದಕ್ಕಿದ್ದಂತೆ ಬಿಜೆಪಿ ಮುಖಂಡರಿಗೆ ಜ್ಞಾನೋದಯ ಆಗಿರುವುದು ಏಕೆ?

ಇಂತಹ ಪಾಪ್ಯುಲಿಸ್ಟ್ ಮಾಧ್ಯಮಕ್ಕೆ ಅತ್ಯುತ್ತಮ ಉದಾಹರಣೆ ಎಂದರೆ ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮೂಡಿ ಬರುವ ರಿಪಬ್ಲಿಕ್ ಟಿವಿ. ಬಹಳ ಸರಳವಾಗಿ ಪಾಪ್ಯುಲಿಸಂ ಅನ್ನು ವ್ಯಾಖ್ಯಾನಿಸಬಹುದಾದರೆ, ಜನಸಮೂಹದ (ಮಾಸಸ್) ಆಶಯ ಆಗಿರುತ್ತದೋ ಇಲ್ಲವೋ, ಆದರೆ ತಮ್ಮ ರಾಜಕೀಯ ಪ್ರಣಾಳಿಕೆಯನ್ನು ಜನಸಮೂಹದ ಆಶಯ ಎಂಬಂತೆ ಬಿಂಬಿಸಿ ವ್ಯಾಪಕ ಪ್ರಚಾರ ಮಾಡುವುದು. ಬಿಜೆಪಿಯಂತಹ ಬಲಪಂಥೀಯ ಸರ್ಕಾರಗಳು ಪ್ರಗತಿಪರವಾದ ಪಾಪ್ಯುಲಿಸಂಅನ್ನು ಕೂಡ ಪಾಲಿಸುವುದಿಲ್ಲ. ’ಮಂದಿರ ಕಟ್ಟುವುದು ಎಲ್ಲ ಭಾರತೀಯರ ಕನಸು’ ಎಂಬಂತಹ ರಿಯಾಕ್ಷನರಿ ಮತ್ತು ರಿಗ್ರೆಸಿವ್ ಪಾಪ್ಯುಲಿಸಂನಲ್ಲಿಯೇ ತಮ್ಮ ರಾಜಕೀಯದ ಯಶಸ್ಸನ್ನು ಕಂಡಿವೆ. ಹಾಗೂ ಅರ್ನಬ್ ಅಂತಹವರು ’ನೇಶನ್ ವಾಂಟ್ಸ್ ಟು ನೊ’ ಎಂಬ ಸ್ಲೋಗನ್ ಅಡಿಯಲ್ಲಿ ಇಂತಹ ಬಲಪಂಥೀಯ ಪ್ರೊಪೊಗಾಂಡದಲ್ಲಿ ತೊಡಗಿಕೊಂಡಿರುವುದು ಇಂದು ಗುಟ್ಟಾಗೇನೂ ಉಳಿದಿಲ್ಲ.

ಇದನ್ನೂ ಓದಿ: ನಾನೊಬ್ಬ ಪತ್ರಕರ್ತೆ, ಹಾಗಾಗಿ ಅರ್ನಾಬ್ ಪರ ನಿಲ್ಲುವುದಿಲ್ಲ!- ಅರ್ಫಾ ಖಾನಮ್ ಶೇರ್ವಾನಿ

ಈ ಹಿಂದೆ ಟೈಮ್ಸ್ ಪತ್ರಿಕಾ ಬಳಗದ ’ಟೈಮ್ಸ್ ನೌ’ ಟಿವಿ ವಾಹಿನಿಯಲ್ಲಿ ಸಂಪಾದಕರಾಗಿ ಕೆಲಸ ನಿರ್ವಹಿಸುತ್ತಿದ್ದ ಅರ್ನಬ್, ಅಲ್ಲಿ ಕೆಲಸ ತೊರೆದು ರಿಪಬ್ಲಿಕ್ ಟಿವಿ ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾಗಿ ಸಂಪಾದಕರೂ ಆಗಿದ್ದರು. 2017ರಲ್ಲಿ ಪ್ರಾರಂಭವಾದಾಗಿಂದಲೂ ಟಿಆರ್‌ಪಿಯಲ್ಲಿ ತಾವೇ ಮುಂದು ಎಂದು ಪ್ರಚಾರ ಮಾಡಿಕೊಂಡೇ ಬಂದಿತ್ತು ಆ ಟಿವಿ ಚಾನೆಲ್. ಆದರೆ ಈ ಟಿಆರ್‌ಪಿ ದಿಟದ ಪತ್ರಿಕೋದ್ಯಮವನ್ನು ಪ್ರತಿಫಲಿಸುತ್ತಿತ್ತೇ ಎಂಬುದೇ ಪ್ರಶ್ನೆ? ಅದಕ್ಕೆ ನಕಾರಾತ್ಮಕ ಉತ್ತರಗಳು ದೊರೆಯುತ್ತವೆ. ಬಹಳ ಇತ್ತೀಚಿನ ಉದಾಹರಣೆಗಳನ್ನೇ ನೋಡಿದರೆ, ರಿಪಬ್ಲಿಕ್ ’ದ್ವೇಷದ ಪ್ರಚಾರದಲ್ಲಿ ಚಾಂಪಿಯನ್ ಆಗಿ ಬೆಳೆದಿತ್ತು. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಒಂದು ಕೋಮಿನ ವಿರುದ್ಧ ಕಕ್ಕಿದ ದ್ವೇಷ ಬಿಜೆಪಿ ಮುಖಂಡರನ್ನು ಮೀರಿಸುವಂತಿತ್ತು. ’ತಬ್ಲೀಘಿ ಜಮಾತ್ ಸದಸ್ಯರೇ ಭಾರತದಲ್ಲಿ ಕೋವಿಡ್ ಹರಡುವುದಕ್ಕೆ ಕಾರಣ ಎಂಬ ಸುಳ್ಳು ಕೋನದಲ್ಲಿ ರಿಪೋರ್ಟ್ ಮಾಡಿದ್ದಾಗಲೀ, ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ನಡೆದ ಆದಿವಾಸಿ ಸನ್ಯಾಸಿಗಳ ಲಿಂಚಿಂಗ್ ಪ್ರಕರಣದಲ್ಲಿ ಸುಳ್ಳು ಸುಳ್ಳೇ ಕೋಮು ಕೋನ ನೀಡಿದ್ದಾಗಲೀ, ಅದಕ್ಕೆ ಮಹಾರಾಷ್ಟ್ರ ರಾಜ್ಯದ ಸರ್ಕಾರದಲ್ಲಿ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ವಿಚ್ ಹಂಟ್ ಮಾಡಿದ ವರದಿಯಾಗಲೀ, ನಂತರ ಅತಿ ದೊಡ್ಡ ಮಟ್ಟದಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ಆತ್ಮಹತ್ಯೆ ಪ್ರಕರಣವನ್ನು ಪೊಲಿಟಿಸೈಸ್ ಮಾಡಿ ಮಹಾರಾಷ್ಟ್ರ ಪೊಲೀಸರ ತನಿಖೆಯನ್ನು ಮತ್ತು ರಾಜ್ಯ ಸರ್ಕಾರವನ್ನು ತೀವ್ರ ಅಪಪ್ರಚಾರ ಮಾಡುವುದರಲ್ಲಿ ತೊಡಗಿದ್ದು ಹೀಗೆ ಪಟ್ಟಿ ಮುಂದುವರೆಯುತ್ತದೆ. ಇದರಲ್ಲಿ ಕೊನೆಯ ಪ್ರಕರಣ ರಾಜ್ಯ ಸರ್ಕಾರ ಮತ್ತು ಒಕ್ಕೂಟ ಸರ್ಕಾರದ (ಮತ್ತೊಂದು ರಾಜ್ಯ ಸರ್ಕಾರವನ್ನು ಬಳಸಿ) ನಡುವೆ ಸಾಂವಿಧಾನಿಕ ಬಿಕ್ಕಟ್ಟಿಗೂ ಕಾರಣವಾಗಿದ್ದು ನಮಗೆಲ್ಲಾ ನೆನಪಿದೆ.
ಸುಶಾಂತ್ ಸಿಂಗ್ ರಾಜಪೂತ್‌ರ ಪ್ರಕರಣದಲ್ಲಿ ಆತ್ಮಹತ್ಯೆ ಆದದ್ದು ಮಹಾರಾಷ್ಟ್ರದ ವ್ಯಾಪ್ತಿಯಲ್ಲಿ ಆದರೂ, ಮಹಾರಾಷ್ಟ್ರದ ಪೊಲೀಸರು ತನಿಖೆ ನಡೆಸುವ ಮಧ್ಯದಲ್ಲಿಯೇ, ಸುಶಾಂತ್ ಅವರ ತವರು ರಾಜ್ಯವಾದ ಬಿಹಾರದಲ್ಲಿ (ಎನ್‌ಡಿಎ ಸರ್ಕಾರ ಆಡಳಿತ ನಡೆಸುತ್ತಿದೆ) ಪ್ರಕರಣ ದಾಖಲಿಸಿ ಸಿಬಿಐಗೆ ವಹಿಸಲಾಯಿತು. ಬಿಜೆಪಿ ಪರೋಕ್ಷವಾಗಿ ಈ ಪ್ರಕರಣವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಲು ಮುಂದಾಯಿತು.

ಇದಕ್ಕೆ ಬೆಂಬಲವಾಗಿ ನಿಂತಿದ್ದು ರಿಪಬ್ಲಿಕ್ ಟಿವಿ. ಒಂದು ಪಕ್ಷದ ವಕ್ತಾರನಂತೆ, ಪತ್ರಿಕೋದ್ಯಮದಲ್ಲಿ ಫ್ಯಾಕ್ಟ್‌ಗಳು ಸೇಕ್ರೆಡ್ ಎಂಬ ತತ್ವವನ್ನು ಗಾಳಿಗೆ ತೂರಿ ಕಿರುಚಾಟವನ್ನೆ ಬಂಡವಾಳವನ್ನಾಗಿಸಿಕೊಂಡು ಮುಂದುವರೆದಿದ್ದ ಅರ್ನಬ್ ಗೋಸ್ವಾಮಿ, ರಾಜ್ಯ ಸರ್ಕಾರದ ಜೊತೆಗೆ ಅಗತ್ಯವೇ ಇಲ್ಲದೆ ತೊಡೆ ತಟ್ಟಿ ನಿಂತರು. ಅವರ ಟಿವಿ ಮಾಡುತ್ತಿದ್ದ ವರದಿಯಲ್ಲಿ ಸುಶಾಂತ್ ಅವರದ್ದು ಆತ್ಮಹತ್ಯೆ ಅಲ್ಲ ಎನ್ನುವುದನ್ನು ಹೇಳಬಲ್ಲ ವ್ಯತಿರಿಕ್ತ ಪುರಾವೆಗಳೇನೇನೂ ಇಲ್ಲದೆ, ಹಲವು ನಟರ ಚಾರಿತ್ರ್ಯವಧೆಯನ್ನೇ ಬಂಡವಾಳವನ್ನಾಗಿಸಿಕೊಂಡಿತ್ತು. ಇದೇ ಸಮಯದಲ್ಲಿ ಮುಂಬೈ ಪೊಲೀಸರು ಟಿಆರ್‌ಪಿ ತಿರುಚಿದ ಪ್ರಕರಣವನ್ನು ತನಿಖೆ ಮಾಡಲು ತೊಡಗಿ ರಿಪಬ್ಲಿಕ್ ಟಿವಿ ಟಿಆರ್‌ಪಿ ತಿರುಚುತ್ತಿದೆ ಎಂಬ ಹೇಳಿಕೆ ನೀಡಿ ಪ್ರಕರಣ ದಾಖಲಿಸಿಕೊಂಡರು. ಇಲ್ಲಿಯೂ, ಮತ್ತೆ ಒಕ್ಕೂಟ ಮತ್ತು ರಾಜ್ಯ ಸರ್ಕಾರಗಳ ನಡುವೆ ಬಿಕ್ಕಟ್ಟು ಸೃಷ್ಟಿಸುವಂತಹ ವಾತಾವರಣ ಸೃಷ್ಟಿ ಮಾಡಲಾಯಿತು. ಬಿಜೆಪಿ ಆಡಳಿತದ ಉತ್ತರಪ್ರದೇಶದಲ್ಲಿ ಟಿಆರ್‌ಪಿ ತಿರುಚುವಿಕೆಯ ಬಗ್ಗೆ ಪ್ರತ್ಯೇಕ ಪ್ರಕರಣ ದಾಖಲಿಸಿ ಸಿಬಿಐಗೆ ವಹಿಸಲಾಯಿತು. ಕೆಲವೇ ತಿಂಗಳುಗಳಲ್ಲಿ ಎರಡನೇ ಬಾರಿಗೆ ರಾಜ್ಯ ಸರ್ಕಾರದ ಪೊಲೀಸರ ತನಿಖೆಯೊಂದರ ಮೇಲೆ ಒಕ್ಕೂಟ ಸರ್ಕಾರ ಪರೋಕ್ಷ ಪ್ರಾಬಲ್ಯ ಮೆರೆದಿತ್ತು. ’ಇದು ಫೆಡರಲಿಸಂ ದೃಷ್ಟಿಯಿಂದ ಸರಿಯಲ್ಲ ಎಂದು ಶಿವಸೇನೆಯ ಮುಖಂಡರೊಬ್ಬರು ಹೇಳಿಕೆ ನೀಡುವವರೆಗೂ ಗಂಭೀರವಾಗಿತ್ತು.

ಈ ಹಿನ್ನೆಲೆಯಲ್ಲಿ ಅರ್ನಬ್ ಗೋಸ್ವಾಮಿಯವರ ಮೇಲೆ ಮಹಾರಾಷ್ಟ್ರ ರಾಜ್ಯ ಸರ್ಕಾರ ಮುಗಿಬಿದ್ದಿರುವುದು ಸ್ಪಷ್ಟವಾಗಿಯೇ ಕಾಣುತ್ತದೆ. ಆದರೆ ಈಗ ಅವರು ಬಂಧನವಾಗಿರುವುದು ಮೇಲಿನ ಯಾವುದೇ ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪ್ರಕರಣದ ಸಲುವಾಗಿ ಅಲ್ಲ. 2018ರಲ್ಲಿ ಒಳಾಂಗಣ ವಿನ್ಯಾಸಕಾರ ಅನ್ವಯ್ ನಾಯಕ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಸಿಕ್ಕ ಡೆತ್ ನೋಟ್‌ನಲ್ಲಿ, ಅರ್ನಬ್ ತಮಗೆ ಹಣ ನೀಡದೆ ಮೋಸ ಮಾಡಿದ್ದಾನೆಂದು ತಿಳಿಸಿದ್ದ ಕಾರಣಕ್ಕೆ ಬಂಧಿಸಲಾಗಿದೆ. ಹಿಂದಿನ ಬಿಜೆಪಿ ಸರ್ಕಾರದ ಸಮಯದಲ್ಲಿ ಈ ಪ್ರಕರಣವನ್ನು ಕ್ಲೋಸ್ ಮಾಡಲಾಗಿತ್ತು. ಮರುತನಿಖೆಗಾಗಿ ಈಗ ಅರೆಸ್ಟ್ ಮಾಡಲಾಗಿದೆ. ಕೋರ್ಟ್ ದೀಪಾವಳಿ ರಜೆಯಲ್ಲಿ ಇರುವಾಗ ನಡೆದಿರುವ ಈ ಬಂಧನ, ಬಂಧನದ ವೇಳೆ ಅರ್ನಬ್ ನಡೆಸಿರುವ ನಾಟಕೀಯ ಘರ್ಷಣೆ ಇವೆಲ್ಲ ಮುನ್ನೆಲೆಗೆ ಬಂದಿವೆ. ಯಾವುದೇ ಪ್ರಕರಣ ಆಗಲಿ ಪೊಲೀಸರ ಹೈಹ್ಯಾಂಡೆಡ್‌ನೆಸ್‌ಅನ್ನು ಯಾರೂ ಸಮರ್ಥಿಸಿಕೊಳ್ಳಲು ಬರುವುದಿಲ್ಲ. ಆದರೆ ಇದು ತಮಿಳುನಾಡಿನ ಸಾತಾನ್‌ಕುಳಂನಲ್ಲಿ ಕ್ಷುಲ್ಲಕ ಕಾರಣಕ್ಕೆ ಪೊಲೀಸರು ಕಿರುಕುಳ ನೀಡಿ ಜಯರಾಜ ಮತ್ತು ಬೆನ್ನಿಕ್ಸ್ ಅವರನ್ನು ಕೊಂದ ಪ್ರಕರಣದಂತೆಯೂ ಅಲ್ಲ. ಏಕೆಂದರೆ ಅಷ್ಟು ಒಕ್ಕೂಟ ಸರ್ಕಾರದ ಸಂಸದರು, ಸಚಿವರ ಬೆಂಬಲ ಇರುವ ಅರ್ನಬ್ ಯಾವುದೇ ರೀತಿಯಲ್ಲಿ ದುರ್ಬಲನಲ್ಲ. ರಾಜ್ಯಪಾಲರು ಖುದ್ದು ಮಹಾರಾಷ್ಟ್ರದ ಗೃಹಸಚಿವರಿಗೆ ಕರೆ ಮಾಡಿ ಅರ್ನಬ್ ಅವರ ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಅಲ್ಲದೆ ಇದು ಆತನ ಪತ್ರಿಕಾ ವೃತ್ತಿಗೆ ಸಂಬಂಧಿಸಿದ ಪ್ರಕರಣವೂ ಅಲ್ಲ. ಬಿಜೆಪಿ ಮತ್ತು ಬೆಂಬಲಿಗರು ಪ್ರಶ್ನೆ ಎತ್ತಿರುವ ಗ್ರೌಂಡ್ಸ್‌ನಲ್ಲಿಯೇ ಸಮಸ್ಯೆ ಇರುವುದು. ಪ್ರಶ್ನೆ ಈಗ ಎತ್ತಿರುವುದರಿಂದ ಈ ದೇಶದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಮತ್ತು ಪತ್ರಕರ್ತರ ಮೇಲೆ ನಡೆಯುತ್ತಿರುವ ದಾಳಿಗಳ ಬಗ್ಗೆಯೂ ಅವರು ಗಮನವಹಿಸಬೇಕಿದೆ. ಅವುಗಳಲ್ಲಿ ಕೆಲವನ್ನು ಅವರಿಗೆ ನೆನಪಿಸಬಹುದಾದರೆ-

ಇತ್ತೀಚೆಗಷ್ಟೇ ಹಾಥ್ರಸ್ ರೇಪ್ ಮತ್ತು ಹಲ್ಲೆಯ ಪ್ರಕರಣವನ್ನು ವರದಿ ಮಾಡಲು ಬಂದಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಸುಳ್ಳು ಸುಳ್ಳೇ ಆರೋಪ ಹೊರಿಸಿ ಯುಎಪಿಎ ಅಡಿಯಲ್ಲಿ ಬಂಧಿಸಿದೆ. ಸಿಎಎ-ಎನ್‌ಆರ್‌ಸಿ ಪ್ರತಿಭಟನೆಗಳನ್ನು ವರದಿ ಮಾಡುತ್ತಿದ್ದ ಪತ್ರಕರ್ತರ ಮೇಲೆ ದೆಹಲಿ ಪೊಲೀಸರು (ಕೇಂದ್ರ ಸರ್ಕಾರದ ಆಡಳಿತಕ್ಕೆ ಒಳಪಡುವ) ನಡೆಸಿದ ಹಲ್ಲೆಗಳಿಗೆ ಎಲ್ಲೆಯೇ ಇಲ್ಲ. ಮಕ್ತೂಬ್ ಮೀಡಿಯಾದ ಶಹೀನ್ ಅಬ್ದುಲ್ಲಾ, ಬಿಬಿಸಿಯ ಬುಶ್ರ ಶೇಕ್, ಪಲ್ ಪಲ್ ನ್ಯೂಸ್‌ನ ಶಾರಿಕ್ ಆದಿಲ್ ಯೂಸಫ್, ದ ಪ್ರಿಂಟ್‌ನ ಆಜಾನ್ ಜಾವೇದ್ ಜೊತೆಗೆ ವಿವಿಧ ಮಾಧ್ಯಮಗಳ ಮುಜೀಬ್, ಶಬ್ಬೀರ್, ಅನೀಸ್ ಹೀಗೆ ಹಲ್ಲೆಗೊಳಗಾದವರ ಪಟ್ಟಿ ಮಾಡುತ್ತಾ ಹೋದರೆ ಕೇಂದ್ರ ಸರ್ಕಾರದ ಕಣ್ಣಳತೆಯಲ್ಲಿ ನಡೆದಿರುವ ಪತ್ರಿಕಾ ಸ್ವಾತಂತ್ರ್ಯ ಹರಣಗಳು ಅಮಿತ್ ಶಾ, ಪ್ರಕಾಶ್ ಜಾವಡೇಕರ್ ಅವರುಗಳಿಗೆ ಕಾಣಿಸುವುದಿಲ್ಲವೇ? ಅಷ್ಟೆಲ್ಲಾ ಏಕೆ – ಗುಜರಾತ್‌ನಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗಲಿದ್ದಾರೆ ಎಂಬ ವರದಿ ಮಾಡಿದ್ದಕ್ಕೆ ’ಫೇಸ್ ಆಫ್ ನೇಶನ್ನ ಧವಲ್ ಪಟೇಲ್ ಅವರನ್ನು ದೇಶದ್ರೋಹ ಪ್ರಕರಣದಲ್ಲಿ ಸಿಲುಕಿಸಲಾಗಿತ್ತು. ಅವರಿಗೆ ಕ್ಷಮೆ ಕೋರುವಂತೆ ಒತ್ತಡಕ್ಕೆ ಸಿಲುಕಿಸಲಾಗಿತ್ತು. ಇತ್ತೀಚೆಗಷ್ಟೇ ನ್ಯಾಯಾಲಯ ಅವರನ್ನು ಆರೋಪಮುಕ್ತಗೊಳಿಸಿದೆ. ಬಿಜೆಪಿ ಮುಖಂಡರಿಗೆ ತಾವು ಮಾಡುತ್ತಿರುವ ’ಕೃತ್ಯಗಳ ಮತ್ತು ಈಗ ಅರ್ನಬ್ ಬೆಂಬಲಕ್ಕೆ ನಿಂತು ಮಾತನಾಡುತ್ತಿರುವ ’ಮಾತು’ಗಳ ನಡುವಿನ ಅಂತರದ ಅರಿವಿಲ್ಲವೇ?

ಇದನ್ನೂ ಓದಿ: ಅರ್ನಾಬ್ ಬಂಧನ ಖಂಡಿಸಿ ಟ್ರೋಲ್‌ಗೊಳಗಾದ ಬೆಂಗಳೂರು ಎಡಿಟರ್ಸ್‌ ಗಿಲ್ಡ್!

ಪ್ಯಾಟರ್ನ್ ಒಂದನ್ನು ಗಮನಿಸಿದರೆ, ಈ ಹಿಂದೆ ಸಮಾಜದಲ್ಲಿ ಕೋಮುಗಳ ಧ್ರುವೀಕರಣಕ್ಕಾಗಿ ಸಾಮಾನ್ಯವಾಗಿ ಬಲಪಂಥೀಯ ಪಕ್ಷದ ದೊಡ್ಡ ಮುಖಂಡನೊಬ್ಬ ದ್ವೇಷಪೂರಿತ, ಪ್ರಚೋದನಕಾರಿ ಭಾಷಣ ಮಾಡುವುದು ಸಾಮಾನ್ಯವಾಗಿತ್ತು. ಈಗ ಆ ರೋಲ್‌ಅನ್ನು ಈ ಬಲಪಂಥೀಯ ಪಕ್ಷಗಳ ಸಮರ್ಥಕ ಮೀಡಿಯಾಗಳು ತಲೆಯ ಮೇಲೆ ಹೊತ್ತಿಕೊಂಡು ರಾಜಕೀಯ ನಾಯಕರ ಭಾರ ಇಳಿಸಿದ್ದಾರೆ. ಅವರಿಗಿಂತಲೂ ಪ್ರಚೋದನಕಾರಿಯಾಗಿ ಮತ್ತು ಮೊದಲೇ ದ್ವೇಷ ಹರಡಲು ಸನ್ನದ್ಧರಾಗಿದ್ದಾರೆ. 21ನೇ ಶತಮಾನದಲ್ಲಿ ಫ್ಯಾಸಿಸಂ ಸಾಂಪ್ರದಾಯಿಕ ರೀತಿಯದ್ದಾಗಿರುವುದಿಲ್ಲ. ಅದಕ್ಕೆ ಸ್ಟೇಟ್‌ನ ಎಲ್ಲ ಸಂಸ್ಥೆಗಳನ್ನು ಮ್ಯಾನಿಪ್ಯುಲೇಟ್ ಮಾಡುವ ಅಗತ್ಯ ಇರುವುದಿಲ್ಲ. ಮಾಧ್ಯಮದ ದೊಡ್ಡ ವರ್ಗವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅದನ್ನು ನಿಯಂತ್ರಿಸಿ ಜನರನ್ನು ಮ್ಯಾನಿಪುಲೇಟ್ ಆಡುವ ಕಲೆ ಕರಗತ ಮಾಡಿಕೊಳ್ಳುವುದರೊಂದಿಗೆ ಅದನ್ನು ಸಾಧಿಸಬಹುದಾಗಿದೆ.

21ನೇ ಶತಮಾನದಲ್ಲಿ ವಿಶ್ವ ಕಂಡ ಸರ್ವಾಧಿಕಾರಿ ಧೋರಣೆಯ ಮುಖಂಡರಲ್ಲಿ ಒಬ್ಬರಾದ, ದೇಶದ ಜನತೆಯಲ್ಲಿ ಒಡಕು ಮೂಡಿಸುವಲ್ಲಿ ಯಶಸ್ವಿ ಪೋಲರೈಸಿಂಗ್ ಫಿಗರ್ ಆಗಿದ್ದ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಎರಡನೇ ಬಾರಿಗೆ ಆಯ್ಕೆಯಾಗಲು ಸಾಧ್ಯವಾಗದೆ ಸೋಲುಂಡಿದ್ದಾನೆ. ಆತ ಆಯ್ಕೆ ಆದ ದಿನದಿಂದಲೂ ಪ್ರಾಮಾಣಿಕ ಮಾಧ್ಯಮಗಳನ್ನು ಹಳಿತಪ್ಪಿಸಲು ಅವಿರತ ಪ್ರಯತ್ನ ಮಾಡಿದ್ದ. ಅಲ್ಲಿನ ಸಂವಿಧಾನದಲ್ಲಿ ಪತ್ರಿಕಾ ಸ್ವಾತಂತ್ರ್ಯಕ್ಕೆ ಇರುವ ಹೆಚ್ಚಿನ ರಕ್ಷಣೆಯ ಕಾರಣದಿಂದಲೂ, ಜನರು ಬೆಂಬಲಿಸಿ ಜನಪರ ಮಾಧ್ಯಮಗಳನ್ನು ಉಳಿಸಿಕೊಂಡ ಕಾರಣದಿಂದಲೂ, ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಿಟ್ಟ ಪತ್ರಕರ್ತರು ಉಳಿದುಕೊಂಡಿರುವುದರಿಂದಲೂ ಟ್ರಂಪ್ ಸೋಲಿನಲ್ಲಿ ಮಾಧ್ಯಮ ಮಹತ್ವದ ಪಾತ್ರವನ್ನು ವಹಿಸಿತು. ಕಾಲಕಾಲಕ್ಕೆ ಟ್ರಂಪ್‌ನ ತಪ್ಪು ಮಾಹಿತಿಗಳನ್ನು ಪ್ರಶ್ನಿಸುತ್ತಾ, ಪ್ರಭುತ್ವಕ್ಕೆ ಸಹಾಯ ಮಾಡುವ ರೀತಿಯಲ್ಲಿ ಬೆಳೆದಿದ್ದ ಫೇಸ್ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳ ಪಕ್ಷಪಾತದ ಬಗ್ಗೆ ಅಭಿಯಾನ ನಡೆಸುತ್ತಾ ಜನರಿಗೆ ತಿಳಿವಳಿಕೆ ಮೂಡಿಸಲು ಅವು ಯಶಸ್ವಿಯಾಗಿದ್ದವು. ಅದು ಫಲ ಕೊಟ್ಟಿದೆ.

ನಾವೂ ಅಂತಹ ಜವಾಬ್ದಾರಿಯುತ ಮಾಧ್ಯಮಗಳನ್ನು ಕಟ್ಟುವ, ಉಳಿಸಿಕೊಳ್ಳುವ ಮತ್ತು ಬೆಳೆಸುವತ್ತ ಕನಸುಕಾಣಬೇಕಿದೆ.

* ಗುರುಪ್ರಸಾದ್.ಡಿ.ಎನ್, ಕಾರ್ಯಕಾರಿ ಸಂಪಾದಕರು, ನ್ಯಾಯಪಥ ವಾರಪತ್ರಿಕೆ.


ಇದನ್ನೂ ಓದಿ; ಕುನಾಲ್ ಕಮ್ರ ಟ್ವೀಟ್ ಇಷ್ಟವಾಗದಿದ್ದರೆ, ಓದಬೇಡಿ ಅಷ್ಟೇ: ಟ್ವಿಟ್ಟರ್‌ನಲ್ಲಿ ಮತ್ತಷ್ಟು ಟ್ರೋಲ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...