ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಎರಡು ವರ್ಷಗಳಿಂದ ಜೈಲಿನಲ್ಲಿರುವ ಕ್ರಾಂತಿಕಾರಿ ಕವಿ- ಸಾಮಾಜಿಕ ಹೋರಾಟಗಾರ ವರವರ ರಾವ್ ಅವರ ಆರೋಗ್ಯ ಹದಗೆಡುತ್ತಿದ್ದು ಆದ್ದರಿಂದ ಅವರನ್ನು ಬಿಡುಗಡೆ ಮಾಡಿ ಆಸ್ಪತ್ರಗೆ ಸೇರಿಸಬೇಕು ಎಂದು ಬಾಂಬೆ ಹೈಕೋರ್ಟ್‌ಗೆ ಅವರ ಕುಟುಂಬ ಮನವಿ ಮಾಡಿದ್ದ ಹಿನ್ನಲೆಯಲ್ಲಿ ನ್ಯಾಯಾಲಯವು, ಕವಿಯ ಆರೋಗ್ಯವನ್ನು ವೈದ್ಯರ ಸಮಿತಿಯೊಂದು ವಿಡಿಯೋ ಕರೆ ಮೂಲಕ ಪರಿಶೀಲಿಸಲಿದೆ ಎಂದು ಹೇಳಿದೆ.
ಸಾಮಾಜಿಕ ಕಾರ್ಯಕರ್ತೆ ವಕೀಲೆ ಇಂದಿರಾ ಜೈಸಿಂಗ್ ಹೈಕೋರ್ಟ್‌ನಲ್ಲಿ, ಅವರ ಆರೋಗ್ಯವು ಕ್ಷೀಣಿಸುತ್ತಿದೆ. ಅಷ್ಟೆ ಅಲ್ಲದೆ ಅವರಿಗೆ ಬುದ್ಧಿಮಾಂದ್ಯತೆ ಇದ್ದು, ಹಾಸಿಗೆ ಹಿಡಿದಿದ್ದಾರೆ. ಅವರು ನ್ಯಾಯದಿಂದ ಓಡಿ ಹೋಗಲಿದ್ದಾರೆಯೆ ಎಂದು ಪ್ರಶ್ನಿಸಿದರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಿದ್ದು, ಖಾಸಗಿ ಆಸ್ಪತ್ರೆಯ ವೈದ್ಯರೊಂದಿಗೆ ವೀಡಿಯೊ ಕರೆಯನ್ನು ಶೀಘ್ರದಲ್ಲಿಯೇ ವ್ಯವಸ್ಥೆಗೊಳಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್ ಪ್ರಕರಣ: ಸಾಕ್ಷ್ಯ ಸಂಗ್ರಹಿಸಲು ಹೆಣಗುತ್ತಿರುವ NIA!
80 ವರ್ಷದ ವರವರಾ ರಾವ್ ಅವರನ್ನು 2018 ರ ಜನವರಿಯಲ್ಲಿ ಬಂಧಿಸಿ, ಭಯೋತ್ಪಾದನಾ-ವಿರೋಧಿ ಕಾನೂನಾದ ಯುಎಪಿಎ ಯನ್ನು ದಾಖಲಿಸಲಾಗಿದೆ. ಅನಾರೋಗ್ಯ ಪೀಡಿತರಾದ ಅವರು ನಿರಂತರವಾಗಿ ಸೆರೆವಾಸ ಅನುಭವಿಸುವುದು ಸಂವಿಧಾನದ 21 ನೇ ಪರಿಚ್ಚೇದದ ಉಲ್ಲಂಘನೆಯಾಗಿದೆ ಮತ್ತು ಅದು ಅವರ ಬದುಕುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯಾಗಿದೆ ಎಂದು ಹೇಳಿತ್ತು.
ಮುಂಬೈ ಬಳಿಯ ತಾಲೋಜ ಜೈಲಿನಲ್ಲಿರುವ ಪ್ರಕರಣದ ಸಹ-ಆರೋಪಿ ಸ್ಟಾನ್ ಸ್ವಾಮಿ ವಕೀಲರಿಗೆ ಕರೆ ಮಾಡಿ ವರವರ ರಾವ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ತಿಳಿಸಿದ್ದಾರೆಂದು ಇಂದಿರಾ ಜೈಸಿಂಗ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
“ವರವಾರ ರಾವ್ ಅವರನ್ನು ತಲೋಜಾ ಜೈಲಿನಿಂದ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲು ನಾನು ತುರ್ತು ಮಧ್ಯಂತರ ಪರಿಹಾರವನ್ನು ಕೋರುತ್ತೇನೆ. ಅವರ ಹಕ್ಕುಗಳ ಉಲ್ಲಂಘಿಸಲಾಗುತ್ತಿರುವುದರಿಂದ ಅವರನ್ನು ಬಿಡುಗಡೆ ಮಾಡಬೇಕು ಎಂಬುದೇ ನನ್ನ ಬಯಕೆಯಾಗಿದೆ” ಎಂದು ವಕೀಲೆ ನ್ಯಾಯಾಲಯಕ್ಕೆ ಹೇಳಿದ್ದಾರೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA
ವರವಾರ ರಾವ್ ಅವರ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ತಲೋಜಾ ಜೈಲಿನಲ್ಲಿ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಯ ಮೂಲಸೌಕರ್ಯಗಳಿಲ್ಲ ಮತ್ತು ಈ ಸಮಯದಲ್ಲಿ ಅವರು ತಮ್ಮ ಕುಟುಂಬದೊಂದಿಗೆ ಇರಬೇಕಾಗಿದೆ. ಈ ಸ್ಥಿತಿಯಲ್ಲಿ ಅವರು ವಿಚಾರಣೆಗೆ ನಿಲ್ಲಲು ಸಹ ಸಾಧ್ಯವಿಲ್ಲ. ಒಂದು ವೇಳೆ ಅವರು ಜೈಲಿನಲ್ಲಿ ಸತ್ತರೆ ಅದು ಕಸ್ಟೋಡಿಯಲ್ ಸಾವು ಆಗುತ್ತದೆ” ಎಂದು ಅವರು ನ್ಯಾಯಾಲಯಕ್ಕೆ ಹೇಳಿದರು.
ಟಿವಿ ಆಂಕರ್ ಅರ್ನಾಬ್ ಗೋಸ್ವಾಮಿ ಅವರನ್ನು 2018 ರ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿಸಿದ್ದರಿಂದ, ಈ ವಾರದಾದ್ಯಂತ ತಲೋಜಾ ಜೈಲು ಸುದ್ದಿಯಲ್ಲಿತ್ತು. ಅರ್ನಾಬ್‌ಗೆ ನಿನ್ನೆ ಸುಪ್ರೀಂ ಕೋರ್ಟ್ ಜಾಮೀನು ನೀಡಿ, ವೈಯಕ್ತಿಕ ಸ್ವಾತಂತ್ರ್ಯದ ತತ್ವವನ್ನು ಎತ್ತಿಹಿಡಿಯ ಬೇಕು ಎಂದು ಹೈಕೋರ್ಟ್‌ಗೆ ಸಂದೇಶ ಕಳುಹಿಸಿದೆ.
ವರವರ ರಾವ್ ಸೇರಿದಂತೆ ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇತರ ಸಾಮಾಜಿಕ ಕಾರ್ಯಕರ್ತರಾದ ಸುಧಾ ಭರದ್ವಾಜ್ ಮತ್ತು ಸ್ಟಾನ್ ಸ್ವಾಮಿಯನ್ನೂ ಸಹ ಇದೇ ಮಾನದಂಡದಡಿ ಯಾಕೆ ಬಿಡುಗಡೆ ಮಾಡಬಾರದು ಎಂದು ಪ್ರಶ್ನಿಸಲಾಗುತ್ತಿದೆ.
ಇದನ್ನೂ ಓದಿ: ಭೀಮಾ ಕೋರೆಂಗಾವ್ ವಿಜಯೋತ್ಸವದಲ್ಲಿ ನೆರೆದ 5 ಲಕ್ಷಕ್ಕೂ ಹೆಚ್ಚು ಜನ: ಇಂಟರ್‌ನೆಟ್ ಸ್ಥಗಿತ
ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿದ್ದು, ಡಿಸೆಂಬರ್ 31, 2017 ರಂದು ಪುಣೆಯ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದರಿಂದ ಮರುದಿನ ಭೀಮಾ ಕೊರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ನಡೆಯಿತು ಎಂದು ಪೊಲೀಸರು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ, ವರವರ ರಾವ್ ಸೇರಿದಂತೆ ಹಲವಾರು ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಇದೇ ಪ್ರಕರಣದಲ್ಲಿ ತೀರಾ ಇತ್ತೀಚೆಗೆ ಬಂಧಿಸಲ್ಪಟ್ಟ ಮತ್ತೊಬ್ಬ ಸಾಮಾಜಿಕ ಕಾರ್ಯಕರ್ತರಾದ ಫಾದರ್ ಸ್ಟಾನ್ ಸ್ವಾಮಿ, ತನಗೆ ಪಾರ್ಕಿನ್ಸನ್ ಕಾಯಿಲೆ ಇರುವುದರಿಂದ ಲೋಟಗಳನ್ನು ಹಿಡಿಯಲು ಕೈನಡುಗುತ್ತದೆ, ಆದ್ದರಿಂದ ಸ್ಟ್ರಾ ಬಳಸಿ ನೀರು ಕುಡಿಯಲು ಅನುಮತಿ ನೀಡಬೇಕು ಎಂದು ವಿನಂತಿಸಿಕೊಂಡಿದ್ದರು, ಆದರೆ ಎನ್ಐಎ ಇದಕ್ಕೆ ಪ್ರತಿಕ್ರಿಯಿಸಲು 20 ದಿನಗಳ ಕಾಲಾವಕಾಶ ಕೇಳಿತು.
ಇದನ್ನೂ ಓದಿ: ಪಾರ್ಕಿನ್ಸನ್ ಕಾಯಿಲೆ: ನೀರು ಕುಡಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬಂಧಿತ ಹೋರಾಟಗಾರ ಸ್ಟಾನ್ ಸ್ವಾಮಿ!


