ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿಕೆಗೆ ತಿರುಗೇಟು ನೀಡಿದ ಶಿವಸೇನೆ ಮುಖಂಡ ಸಂಜಯ್ ರಾವತ್, “ಬಿಜೆಪಿಯು ಮೊದಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಮರಳಿ ತರಲಿ. ನಂತರ ಕರಾಚಿಯ ಬಗ್ಗೆ ಮಾತನಾಡಿ” ಎಂದು ಹೇಳಿದ್ದಾರೆ.
ಇಂದು ಪತ್ರಕರ್ತರೊಂದಿಗೆ ಮಾತನಾಡಿದ ದೇವೇಂದ್ರ ಫಡ್ನವೀಸ್, “ನಮಗೆ ಅಖಂಡ ಭಾರತದಲ್ಲಿ ನಂಬಿಕೆಯಿದೆ. ಜೊತೆಗೆ ಮುಂದೊಂದು ದಿನ ಕರಾಚಿ ಭಾರತದ ಭಾಗವಾಗಲಿದೆ ಎನ್ನುವ ನಂಬಿಕೆಯೂ ಇದೆ” ಎಂದು ಹೇಳಿದ್ದರು.
ಇದನ್ನೂ ಓದಿ: ಡ್ರಗ್ಸ್ ಪ್ರಕರಣ: ಆರೋಪಿಗಳಿಗೆ ಸಹಕರಿಸಿದ ಬೆಂಗಳೂರಿನ ಕಾನ್‌ಸ್ಟೇಬಲ್ ಬಂಧನ!
ಇದಕ್ಕೆ ತಿರುಗೇಟು ನೀಡಿ ಸಂಜಯ್ ರಾವತ್ ವಾಗ್ದಾಳಿ ನಡೆಸಿ, “ಮೊದಲು ಪಾಕಿಸ್ತಾನ ಆಕ್ರಮಿತ ಭಾರತದ ಕಾಶ್ಮೀರದ ಭೂ ಪ್ರದೇಶವನ್ನು ಮರಳಿ ತನ್ನಿ. ನಂತರ ಕರಾಚಿಯನ್ನು ಭಾರತಕ್ಕೆ ಸೇರಿಸಿಕೊಳ್ಳೋಣ” ಎಂದು ಹೇಳಿದ್ದಾರೆ.
ಇತ್ತೀಚೆಗೆ ಮುಂಬೈನಲ್ಲಿನ ಕರಾಚಿ ಸ್ವೀಟ್ಸ್ ಅಂಗಡಿಯ ಹೆಸರನ್ನು ಬದಲಾಯಿಸುವಂತೆ ಶಿವಸೇನೆಯ ಮುಖಂಡರು ಒತ್ತಾಯಿಸಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ ದೇವೇಂದ್ರ ಫಡ್ನವೀಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ‘ಕರಾಚಿ ಸ್ವೀಟ್ಸ್’ ಅಂಗಡಿ ಹೆಸರು ಬದಲಿಸುವಂತೆ ಶಿವಸೇನೆ ಮುಖಂಡನ ಧಮಕಿ!
‘ಕರಾಚಿ ಸ್ವೀಟ್ಸ್ ಅಂಗಡಿ’ಯ ಹೆಸರನ್ನು ಬದಲಾಯಿಸುವಂತೆ ಶಿವಸೇನೆಯ ಮುಖಂಡ ನಿತಿನ್ ನಂದಗಾಂವ್ಕರ್ ಅಂಗಡಿ ಮಾಲೀಕನನ್ನು ಒತ್ತಾಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಕರಾಚಿ ಎನ್ನುವುದು ಪಾಕಿಸ್ತಾನದ ಒಂದು ಸ್ಥಳದ ಹೆಸರಾಗಿದೆ. ಹಾಗಾಗಿ ಇದನ್ನು ಬದಲಾಯಿಸಿ, ಮರಾಠಿಯಲ್ಲಿ ಯಾವುದಾದರೂ ಹೆಸರಿಡುವಂತೆ ಶಿವಸೇನೆ ಮುಖಂಡ ಒತ್ತಾಯಿಸಿದ್ದರು.
ಈ ಘಟನೆಗೆ ಈ ಹಿಂದೆಯೇ ಪ್ರತಿಕ್ರಿಯಿಸಿದ ಸಂಜಯ್ ರಾವತ್, “ಅಂಗಡಿಯ ಹೆಸರನ್ನು ಬದಲಾಯಿಸುವ ಬೇಡಿಕೆ ಪಕ್ಷದ ಅಧಿಕೃತ ನಿಲುವಲ್ಲ. ಕರಾಚಿ ಬೇಕರಿ ಮತ್ತು ಕರಾಚಿ ಸಿಹಿತಿಂಡಿಗಳು ಕಳೆದ 60 ವರ್ಷಗಳಿಂದ ಮುಂಬೈನಲ್ಲಿದೆ. ಅವರಿಗೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ. ಈಗ ಅವರ ಹೆಸರುಗಳನ್ನು ಬದಲಾಯಿಸುವುದರಲ್ಲಿ ಯಾವುದೇ ಅರ್ಥವಿಲ್ಲ” ಎಂದು ಸ್ಪಷ್ಟಪಡಿಸಿದ್ದರು.
ಇದನ್ನೂ ಓದಿ: ಪಾಕಿಸ್ತಾನದ ಕರಾಚಿ ಭಾರತದ ಭಾಗವಾಗಲಿದೆ: ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್


