ಕರ್ನಾಟಕ ಸೇರಿದಂತೆ ಬಿಜೆಪಿ ನೇತೃತ್ವದ ಸರ್ಕಾರಗಳು ಲವ್ ಜಿಹಾದ್ ನಡೆಯುತ್ತಿದೆ, ಅದನ್ನು ತಡೆಯಲು ಕಾನೂನು ತರುವುದಾಗಿ ಹೇಳಿಕೆ ನೀಡುತ್ತಿರುವುದನ್ನು ವಿರೋಧಿಸಿ ಬೆಂಗಳೂರಿನಲ್ಲಿ ನಾಳೆ ಪ್ರೀತಿಗಾಗಿ ಪ್ರತಿಭಟನೆ ನಡೆಯುತ್ತಿದೆ.
ದ್ವೇಷ ಬಿಟ್ಟು ಪ್ರೀತಿಯನ್ನು ಆಯ್ಕೆ ಮಾಡೋಣ. ಲವ್ ಜಿಹಾದ್‌ನಂತಹ ಇಲ್ಲದಿರುವ ಬಿಕ್ಕಟ್ಟುಗಳನ್ನು ನಿಯಂತ್ರಿಸುವ ನೆಪದಲ್ಲಿ ತರುತ್ತಿರುವ ಕೋಮುವಾದಿ ಕಾನೂನುಗಳನ್ನು ತಿರಸ್ಕರಿಸೋಣ ಎಂದು ಕರ್ನಾಟಕದ ಮಹಿಳಾ, ದಲಿತ, ಮುಸ್ಲಿಂ, ಲಿಂಗತ್ವ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ, ಮಾನವ ಹಕ್ಕುಗಳ ಸಂಘಟನೆಗಳು ಜಂಟಿ ಆಂದೋಲನ ಸಮಿತಿ ಕರೆ ನೀಡಿದೆ.
ಡಿಸೆಂಬರ್ 01 ರ ಮಂಗಳವಾರ ಮಧ್ಯಾಹ್ನ 3:30 ಗಂಟೆಗೆ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಪ್ರೀತಿಸುವುದು ಅಪರಾಧವಲ್ಲ, ನಮ್ಮ ಬಾಳಸಂಗಾತಿಯಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಕ್ಕೆ ಬಿಜೆಪಿಯ ಅನುಮತಿ ಬೇಕಿಲ್ಲ ಎಂದು ಸಾರಲು ಸಮಿತಿ ಸಿದ್ದವಾಗಿದೆ.
**CHANGE OF VENUE**
Dear all,
Please note the change of venue for our protest tomorrow, it will now happen at MYSORE BANK CIRCLE on 01.12.2020 at 3.30 p.m. pic.twitter.com/qXt0S7WGUS
— ಪ್ರೀತಿಸೋದು ತಪ್ಪಾ? (@ourright2love) November 30, 2020
ಬಿಜೆಪಿಯ ಆಡಳಿತ ವೈಫಲ್ಯದಿಂದಾಗಿ ದೇಶದಲ್ಲಿ ನಾನಾ ಸಮಸ್ಯೆಗಳು ತಲೆದೋರಿವೆ. ಕೋವಿಡ್ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ. ದೇಶದ ಆರ್ಥಿಕತೆ ಕುಸಿದಿದೆ. ಕೃಷಿ ಮಸೂದೆಗಳ ವಿರುದ್ಧ ರೈತರು ಧೀರೋದಾತ್ತವಾಗಿ ಹೋರಾಡುತ್ತಿದ್ದಾರೆ. ಇಂತಹ ಸಮಯದಲ್ಲಿ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿಯು ಇಲ್ಲದ ಲವ್ ಜಿಹಾದ್ ಚರ್ಚೆಯನ್ನು ಮುನ್ನಲೆಗೆ ತಂದಿದೆ ಎಂದು ಸಮಿತಿ ಕಿಡಿಕಾರಿದೆ.
ಮಹಿಳೆಯರ ರಕ್ಷಣೆಯ ಹೆಸರಿನಲ್ಲಿ ಮಹಿಳೆಯರು ಯಾರನ್ನು ಪ್ರೀತಿಸಬೇಕು, ಯಾರನ್ನು ಮದುವೆಯಾಗಬೇಕು ಎಂದು ಬಿಜೆಪಿ ನಿಯಂತ್ರಿಸುವ ಹುನ್ನಾರ ನಡೆಸುತ್ತಿದೆ. ಇಂತಹ ಕಾನೂನುಗಳ ಮೂಲಕ ನಮ್ಮ ಸಮಾಜವನ್ನು ಜಾತಿ, ಧರ್ಮಗಳ ಆಧಾರಲ್ಲಿ ಮತ್ತಷ್ಟು ವಿಭಜಿಸುವ, ಸಮುದಾಯದ ನಾಗರಿಕತೆಗೆ ಧಕ್ಕೆ ತರುವುದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಚೆನ್ನಯ್ಯನ ಮನೆಯ ದಾಸನ ಮಗನು
ಕಕ್ಕಯ್ಯನ ಮನೆಯ ದಾಸಿಯ ಮಗಳು
ಇವರಿಬ್ಬರು ಹೊಲದಲು ಬೆರಣಿಗೆ ಹೋಗಿ
ಸಂಗವ ಮಾಡಿದರು. ಇವರಿಬ್ಬರಿಗೆ ಹುಟ್ಟಿದ ಮಗ ನಾನು
ಕೂಡಲಸಂಗಮದೇವ ಸಾಕ್ಷಿಯಾಗಿ–ಬಸವಣ್ಣ
ಪ್ರೀತಿಗಾಗಿ ಪ್ರತಿಭಟನೆ
ಬೆಂಗಳೂರು#loveisnotacrime #ಪ್ರೀತಿಸೋದುತಪ್ಪಾ pic.twitter.com/ePnYEl9dg4— ಸ್ವರಾಜ್ ಅಭಿಯಾನ್ ಕರ್ನಾಟಕ Swaraj Abhiyan Karnataka (@SwarajAbhiyanKA) November 30, 2020
“ಲವ್ ಜಿಹಾದ್ ಎಂಬ ಪದವನ್ನು ಈಗಿರುವ ಯಾವುದೇ ಕಾನೂನುಗಳ ಅಡಿಯಲ್ಲಿ ವ್ಯಾಖ್ಯಾನಿಸಲಾಗಿಲ್ಲ. ಅಲ್ಲದೇ ಇದುವರೆಗೂ ‘ಲವ್ ಜಿಹಾದ್’ ಪ್ರಕರಣವನ್ನು ಯಾವುದೇ ಕೇಂದ್ರ ಏಜೆನ್ಸಿಗಳು ವರದಿ ಮಾಡಿಲ್ಲ” ಎಂದು ಬಿಜೆಪಿ ಮುಖಂಡ ಮತ್ತು ಗೃಹ ವ್ಯವಹಾರಗಳ ಸಚಿವ ಜಿ. ಕಿಶನ್ ರೆಡ್ಡಿಯವರು 2020ರ ಫೆಬ್ರವರಿಯಲ್ಲಿ ಲೋಕಸಭೆಗೆ ತಿಳಿಸಿದ್ದಾರೆ. ಕರ್ನಾಟಕ ಸೇರಿದಂತೆ ಹಲವು ಹೈಕೋರ್ಟ್‌ಗಳು ಲವ್ ಜಿಹಾದ್ ಎಂಬುದು ಇಲ್ಲವೇ ಇಲ್ಲ ಎಂದು ತೀರ್ಪು ನೀಡಿವೆ. ಆದರೂ ಬಿಜೆಪಿ ರಾಜಕೀಯ ಲಾಭಕ್ಕಾಗಿ ಸಮಾಜದಲ್ಲಿ ದ್ವೇಷ ಹರಡುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ದೇಶದ ಸರ್ವೋಚ್ಛ ನ್ಯಾಯಾಲಯವು “ವಯಸ್ಸಿಗೆ ಬಂದ ಪ್ರತಿ ಪ್ರಜೆಗೂ ತಮ್ಮ ಬಾಳಸಂಗಾತಿ ಯಾರೆಂದು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಇದನ್ನು ನಿರ್ಬಂಧಿಸಲು ಸರ್ಕಾರ ಅಥವಾ ಬೇರೆ ಯಾರಿಗೂ ಅಧಿಕಾರವಿಲ್ಲ ಎಂದಿದೆ. ಅಲ್ಲದೇ ದೇಶದಲ್ಲಿ ನಡೆಯುವ ಅಂತರ್‌ಜಾತಿ-ಅಂತರ್ ಧರ್ಮೀಯ ವಿವಾಹಿತರಿಗೆ ಸರ್ಕಾರ ರಕ್ಷಣೆ ನೀಡಬೇಕೇಂದು ತೀರ್ಪು ನೀಡಿದೆ. ಆದರೆ ಸರ್ಕಾರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ” ಎಂದು ಸಮಿತಿ ಕಿಡಿಕಾರಿದೆ. ಅಲ್ಲದೆ ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ಕೂಡ ಬಿಜೆಪಿಯ ಲವ್ ಜಿಹಾದ್ ಕಾಯ್ದೆಗೆ ವಿರುದ್ಧವಾಗಿ ತೀರ್ಪು ನೀಡಿದ್ದನ್ನು ಸ್ಮರಿಸಬಹುದು.
ಹಾಗಾಗಿ ಬಸವಣ್ಣ, ಪೆರಿಯಾರ್, ಗಾಂಧಿ, ಅಂಬೇಡ್ಕರ್, ಮತ್ತು ಇತರ ನಾಯಕ-ನಾಯಕಿಯರು ಅಂರ್ತಜಾತಿ ಮತ್ತು ಅಂತರ್‌ಧರ್ಮೀಯ ವಿಹಾಗಳನ್ನು ಪ್ರೋತ್ಸಾಹಿಸಿ, ಇವುಗಳಿಂದಲೇ ಭಾತೃತ್ವ ಮತ್ತು ಸಮಾನತಾವಾದದ ಸಮಾಜ ಸಾಧ್ಯ ಎಂದಿದ್ದರು. ಅದನ್ನು ಸಾಕಾರಗೊಳಿಸಲು ಹೋರಾಡೋಣ ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಇದುವರೆಗೂ ಯಾವುದೇ ಲವ್ ಜಿಹಾದ್ ನಡೆದಿಲ್ಲವೆಂದ ಮೋದಿ ಸರ್ಕಾರ : ಇದು ಬಿಜೆಪಿ V/S ಬಿಜೆಪಿಯ ಕದನ..


