ಮರಾಠ ಅಭಿವೃದ್ದಿ ನಿಗಮ ರಚನೆ ವಿರೋಧಿಸಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಆರಂಭವಾಗಿದೆ. ಇಂದು ಬೆಳಿಗ್ಗೆಯೇ ಬೆಂಗಳೂರಿನ ಟೌನ್ ಹಾಲ್ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಚೇರಿ ಬಳಿ ಜಮಾಯಿಸಿದ ನೂರಾರು ಕನ್ನಡಪರ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಾರಿ ಮೂಲಕ ಬೆಂಗಳೂರಿನ ಟೌನ್ ತಲುಪಿದ 50 ಕ್ಕೂ ಹೆಚ್ಚು ಕಾರ್ಯಕರ್ತರು ರಾಜ್ಯ ಸರ್ಕಾರ ಮತ್ತು ಬಿ.ಎಸ್ ಯಡಿಯೂರಪ್ಪನವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅನುಮತಿ ಪಡೆಯದೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಕಾರಣವೊಡ್ಡಿ ಪೊಲೀಸರು ಅವರನ್ನು ಬಂಧಿಸಿ ಕರೆದೊಯ್ದರು.
ಮುಖ್ಯಮಂತ್ರಿಗಳು ಬಸವಕಲ್ಯಾಣದಲ್ಲಿ ಉಪಚುನಾವಣೆ ಗೆಲ್ಲುವ ಕಾರಣದಿಂದ ಮರಾಠ ಅಭಿವೃದ್ದಿ ನಿಗಮ ಮಾಡಲಾಗಿದೆ. ಆದರೆ ಇದನ್ನೆ ನೆಪವಾಗಿಟ್ಟುಕೊಂಡು ನಾಳೆ ಎಲ್ಲಾ ಭಾಷಿಕರು, ಎಲ್ಲಾ ಸಮುದಾಯಗಳು ಅಭಿವೃದ್ದಿ ನಿಗಮ ಕೇಳಿದರೆ ಸರ್ಕಾರ ಮಾಡುತ್ತದೆಯೇ? ಇವತ್ತು ಬಂದ್‌ಗೆ ಕರೆ ಕೊಟ್ಟಿರುವುದು ವಾಟಾಳ್ ನಾಗರಾಜ್‌ರವರು. ಇದಕ್ಕೆ ಕಾರಣ ಕರ್ನಾಟಕ ಸರ್ಕಾರವಾಗಿದೆ. ಹಾಗಾಗಿ ನಾವು ಬಂದ್‌ಗೆ ಬೆಂಬಲ ನೀಡಿದ್ದು ಮುಂದೆಯೇ ನಾವು ಕನ್ನಡ ನಾಡಿನ ಪರವಾಗಿ ಹೋರಾಟ ಮುಂದುವರೆಸುತ್ತೇವೆ. ಇಂದು ಮುಖ್ಯಮಂತ್ರಿಗಳ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ ನಾರಾಯಣ ಗೌಡ ತಿಳಿಸಿದ್ದಾರೆ. ಮುಖ್ಯಮಂತ್ರಿ ಕಚೇರಿ ಕಡೆ ಹೊರಾಟಾಗ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ.
ಕನ್ನಡಪರ ಹೋರಾಟಗಾರರಾದ ಮುಖ್ಯಮಂತ್ರಿ ಚಂದ್ರುರವರು ಮಾತನಾಡಿ “ಈ ನಿಗಮ ರಚಿಸಿರುವುದು ವಿವೇಕರಹಿತವಾದ ತೀರ್ಮಾನವಾಗಿದೆ. ಕನ್ನಡ ನಾಡನ್ನು ಹರಾಜು ಹಾಕುವ ಪರಿಸ್ಥಿತಿ ಬಂದಿದೆ. ಕರ್ನಾಟಕದಲ್ಲಿ 250ಕ್ಕೂ ಹೆಚ್ಚು ಜಾತಿಗಳಿವೆ, ನಾಳೆ ಅವರೆಲ್ಲಾ ನಿಗಮ ಕೇಳಿದರೆ ಮಾಡುತ್ತಾರೆಯೇ? ಇದು ಕನ್ನಡಿಗರಿಗೆ ಸರ್ಕಾರ ಮಾಡಿದ ದ್ರೋಹವಾಗಿದೆ” ಎಂದಿದ್ದಾರೆ.
ಹಲವು ಜಿಲ್ಲೆಗಳಲ್ಲಿ ಬಂದ್ ಆರಂಭವಾಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲೆವೆಡೆ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರೆ, ಕೆಲವೆಡೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕೃತಿ ದಹಿಸಿ ಅಸಮಾಧಾನ ತೋರ್ಪಡಿಸಿದ್ದಾರೆ.
ಇದನ್ನೂ ಓದಿ: ದರ್ಪ ಮುಂದುವರೆಸಿದ ಟೊಯೋಟಾ ಕಿರ್ಲೋಸ್ಕರ್; ಮತ್ತೇ 20 ಕಾರ್ಮಿಕರ ಅಮಾನತು


