Homeಚಳವಳಿಭೂಸುಧಾರಣಾ ಮಸೂದೆಗೆ ಸಹಿ ಇಲ್ಲ, ರೈತರೊಡನೆ ಚರ್ಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ: ರಾಜ್ಯಪಾಲ ವಾಜುಬಾಯಿ ವಾಲಾ

ಭೂಸುಧಾರಣಾ ಮಸೂದೆಗೆ ಸಹಿ ಇಲ್ಲ, ರೈತರೊಡನೆ ಚರ್ಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ: ರಾಜ್ಯಪಾಲ ವಾಜುಬಾಯಿ ವಾಲಾ

ಇಂದಿನ ಸಭೆಯಲ್ಲಿ ರಾಜ್ಯಪಾಲರು ಸಕರಾತ್ಮಕವಾಗಿ ಸ್ಪಂದಿಸಿದರು. ನಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ಮಸೂದೆಯ ಕುರಿತು ರೈತರೊಂದಿಗೆ ವಿವರವಾಗಿ ಚರ್ಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ ಎಂದು ತಿಳಿಸಿದ್ದಾರೆ.

- Advertisement -
- Advertisement -

ವಿವಾದಾತ್ಮಕ ಕೃಷಿ ಮಸೂದೆಗಳನ್ನು ಅಂಗೀಕರಿಸಿರುವ ರಾಜ್ಯ ಸರ್ಕಾದ ವಿರುದ್ಧ ಇಂದು ಬೆಂಗಳೂರಿನಲ್ಲಿ ರಾಜಭವನ ಚಲೋ ನಡೆಸಿದ ರೈತ ಮುಖಂಡರೊಂದಿಗೆ ಮಾತುಕತೆ ನಡೆಸಿದ ರಾಜ್ಯಪಾಲ ವಾಜುಬಾಯಿ ವಾಲಾರವರು ಸದ್ಯಕ್ಕೆ ಭೂಸುಧಾರಣಾ ಮಸೂದೆಗೆ ಸಹಿ ಹಾಕುವುದಿಲ್ಲ ಮತ್ತು ರೈತ ಮುಖಂಡರೊಂದಿಗೆ ವಿವರವಾಗಿ ಚರ್ಚಿಸಲು ಸರ್ಕಾರಕ್ಕೆ ಸೂಚಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ಐಕ್ಯ ಹೋರಾಟ ಸಮಿತಿ ತಿಳಿಸಿದೆ.

ಮಂಗಳವಾರ ವಿಧಾನ ಪರಿಷತ್‌ನಲ್ಲಿ ಬಿಜೆಪಿಯು ಭೂಸುಧಾರಣಾ ತಿದ್ದಪಡಿ ಮಸೂದೆ 2020 ಅನ್ನು ಮಂಡಿಸಿತು. ಅದಕ್ಕೆ ಜೆಡಿಎಸ್ ಬೆಂಬಲ ನೀಡಿದ್ದರಿಂದ 37 ಮತಗಳೊಂದಿಗೆ ಅಂಗೀಕಾರಗೊಂಡಿತ್ತು. ಇದರಿಂದ ಕ್ರೋಧಗೊಂಡ ಐಕ್ಯ ಹೋರಾಟ ಸಮಿತಿಯು ತೀವ್ರ ಪ್ರತಿಭಟನೆ ನಡೆಸಿತ್ತು. ರಾಜ್ಯಪಾಲರು ಮಸೂದೆಗೆ ಸಹಿ ಹಾಕಬಾರದು ಎಂದು ಒತ್ತಾಯಿಸಿ ರೈತ-ದಲಿತ-ಕಾರ್ಮಿಕ ಸಂಘಟನೆಗಳ ಐಕ್ಯಹೋರಾಟ ಸಮಿತಿಯಿಂದ ಇಂದು ರಾಜಭವನ ಚಲೋ ನಡೆದಾಗ 20 ರೈತ ಮುಖಂಡರನ್ನು ರಾಜ್ಯಪಾಲರು ಮಾತುಕತೆಗೆ ಆಹ್ವಾನಿಸಿದ್ದರು.

ಇಂದಿನ ಸಭೆಯಲ್ಲಿ ರಾಜ್ಯಪಾಲರು ಸಕರಾತ್ಮಕವಾಗಿ ಸ್ಪಂದಿಸಿದರು. ನಮ್ಮ ಮಾತುಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ಮಸೂದೆಯ ಕುರಿತು ರೈತರೊಂದಿಗೆ ವಿವರವಾಗಿ ಚರ್ಚಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುತ್ತೇನೆ ಎಂದು ತಿಳಿಸಿದ್ದಾರೆ ಎಂದು ರೈತ ಮುಖಂಡ ಕುರುಬುರು ಶಾಂತಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಐಕ್ಯಹೋರಾಟ ಸಮಿತಿಯ ಪರವಾಗಿ ಗುರುಪ್ರಸಾದ್ ಕೆರಗೋಡು ಮಾತನಾಡಿ “ಇಲ್ಲಿಗೆ ನಾವು ಗೆದ್ದಿದ್ದೇವೆ ಎಂದು ಸಂಭ್ರಮಿಸುವುದಿಲ್ಲ. ರಾಜ್ಯಪಾಲರು ಭರವಸೆ ನೀಡಿದರೂ ಸಹ ಮಸೂದೆ ವಾಪಸ್ ಹೋಗುವವರೆಗೂ ನಾವು ಹಿಂದೆ ಸರಿಯಬಾರದು. ಸೂಕ್ತ ರೀತಿಯಲ್ಲಿ ಹೋರಾಟವನ್ನು ಜಾರಿಯಲ್ಲಿಡಬೇಕು” ಎಂದು ತಿಳಿಸಿದ್ದಾರೆ.

ಹೋರಾಟವನ್ನು ಜಾರಿಯಲ್ಲಿಡಲು ಮತ್ತು ದೆಹಲಿಯಲ್ಲಿ ಹೋರಾಟನಿರತ ರೈತರಿಗೆ ಬೆಂಬಲ ಸೂಚಿಸುವುದಾಗಿ ರೈತರು ಹಸಿರು ಪ್ರತಿಜ್ಞೆ ಕೈಗೊಂಡರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ, ಚಾಮರಸ ಮಾಲೀಪಾಟೀಲ್, ಬಿ.ಆರ್ ಪಾಟೀಲ್, ಕುರುಬುರು ಶಾಂತಕುಮಾರ್, ಗುರುಪ್ರಸಾದ್ ಕೆರಗೋಡು, ಪ್ರಕಾಶ್ ಕಮ್ಮರಡಿ, ವಿ.ಗಾಯತ್ರಿ, ಮಾವಳ್ಳಿ ಶಂಕರ್, ಹಣ್ಣು ಮಾರಾಟಗಾರರ ಸಂಘದ ಸೈಯ್ಯದ್, ಸಿರಿಮನೆ ನಾಗರಾಜ್, ನೂರ್ ಶ್ರೀಧರ್, ಕೆ.ವಿ ಭಟ್, ನಂಜೇಗೌಡ, ನಾರಾಯಣಸ್ವಾಮಿ ರಾಜ್ಯಪಾಲರನ್ನು ಭೇಟಿ ಮಾಡಿದ ನಿಯೋಗದಲ್ಲಿದ್ದಾರೆ.

ಇಂದು ಸಾವಿರಾರು ಜನ ಬೆಳಿಗ್ಗೆಯಿಂದಲೇ ರಸ್ತೆಯಲ್ಲಿಯೇ ಕುಳಿತು ರಾಜ್ಯ ಮತ್ತು ಕೇಂದ್ರ ಸರ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಸದನ ಬಹಿಷ್ಕರಿಸಿ ಕಾಂಗ್ರೆಸ್ ಮುಖಂಡರೊಡನೆ ವಿಧಾನಸೌಧದಿಂದ ಫ್ರೀಡಂ ಪಾರ್ಕ್‌ವರೆಗೂ ಪಾದಯಾತ್ರೆ ನಡೆಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು.


ಇದನ್ನೂ ಓದಿ: ರೈತವಿರೋಧಿ ಮಸೂದೆಗಳಿಗೆ ರಾಜ್ಯಪಾಲರು ಸಹಿ ಹಾಕಬಾರದು: ಬೆಂಗಳೂರಿನಲ್ಲಿ ರೈತರು ಗುಡುಗು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯರಿಗೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು: ಸುರ್ಜೇವಾಲ

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ರಾಜ್ಯ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ...