ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನೂರಾರು ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟ 19ನೇ ದಿನಕ್ಕೆ ಕಾಲಿಟ್ಟಿದೆ. ನವೆಂಬರ್ 26-27 ರಂದು ದೆಹಲಿ ಚಲೋ ನಡೆಸುವುದಾಗಿ ರೈತರು ಘೋಷಿಸಿದ್ದರು. ಆದರೆ ಕೇಂದ್ರ ಸರ್ಕಾರದ ಅಡಿಯಲ್ಲಿರುವ ದೆಹಲಿ ಪೊಲೀಸ್ ಅವರನ್ನು ದೆಹಲಿ ಗಡಿಗಳಲ್ಲಿಯೇ ತಡೆದಿತ್ತು. ಹೋರಾಟನಿರತ ರೈತರ ಮೇಲೆ ಲಾಠೀ ಚಾರ್ಜ್ ಮಾಡಿ, ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿತ್ತು. ಇದರಿಂದ ಕ್ರೋಧಗೊಂಡ ರೈತರು ಸರ್ಕಾರ ಈ ವಿವಾದಾತ್ಮಕ ಕಾಯ್ದೆಗಳನ್ನು ವಾಪಸ್ ಪಡೆಯುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದೆ. ರಸ್ತೆ ತಡೆ, ಭಾರತ್ ಬಂದ್ ನಡೆಸಿರುವ ರೈತರು ಹೋರಾಟ ತೀವ್ರಗೊಳಿಸಲು ಇಂದು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
- ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸುತ್ತಿರುವ 33 ಪ್ರಮುಖ ರೈತ ಸಂಘಟನೆಗಳ ಮುಖಂಡರು ಇಂದು ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ತಾವು ಹೊರಾಟ ನಡೆಸುತ್ತಿರುವ ಗಡಿಗಳಲ್ಲಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ.
- ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ಅಲ್ಲದೇ ತಮ್ಮ ಪಕ್ಷದ ಎಲ್ಲಾ ಕಾರ್ಯಕರ್ತರು ಸಹ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾರೆ.
- ಈ 3 ಕೃಷಿ ಕಾಯ್ದೆಗಳು ಬೇಡ. ಬದಲಿಗೆ ಕನಿಷ್ಟ ಬೆಂಬಲ ಬೆಲೆ (ಎಂಎಸ್ಪಿ) ಕಾಯ್ದೆ ಬೇಕು ಎಂದು ಕೇಳುತ್ತಿದ್ದೇವೆ. ಆದರೆ ಕೇಂದ್ರ ಈ ವಿಚಾರದಲ್ಲಿ ರೈತರ ದಾರಿ ತಪ್ಪಿಸುತ್ತಿದೆ. ಡಿಸೆಂಬರ್ 8 ರಂದು ನಡೆದ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ‘ಎಲ್ಲಾ 23 ಬೆಳೆಗಳನ್ನು ಎಂಎಸ್ಪಿ ನೀಡಿ ಕೊಂಡುಕೊಳ್ಳಲು ಸಾಧ್ಯವಿಲ್ಲ, ಇದರಿಂದ ಕೇಂದ್ರಕ್ಕೆ 17 ಲಕ್ಷ ಕೋಟಿ ಹೊರೆಯಾಗುತ್ತದೆ’ ಎಂದು ಹೇಳಿದ್ದಾರೆ ಎಂದು ಹರಿಯಾಣದ ಭಾರತೀಯ ಕಿಸಾನ್ ಯೂನಿಯನ್ ಅಧ್ಯಕ್ಷ ಗುರ್ನಮ್ ಸಿಂಗ್ ಚಾದುನಿ ಹೇಳಿದ್ದಾರೆ.
- ಈಗಿರುವ ಬೆಲೆಗೆ ಬೆಳೆಗಳನ್ನು ಕೊಂಡುಕೊಂಡು ಅದನ್ನು ಎಂಎಸ್ಪಿ ಎಂದು ಕರೆಯಲು ಕೇಂದ್ರ ಸರ್ಕಾರ ಹೊರಟಿದೆ. ಅಲ್ಲದೇ ಎಲ್ಲಾ ರಾಜ್ಯಗಳಿಂದ ಎಂಎಸ್ಪಿ ನೀಡಿ ಬೆಳೆಗಳನ್ನು ಕೊಂಡುಕೊಳ್ಳಲು ಕೇಂದ್ರ ಹಿಂದೇಟು ಹಾಕುತ್ತಿದೆ. ಇದು ನಮಗೆ ಒಪ್ಪಿಗೆಯಿಲ್ಲ. ಹಾಗಾಗಿ ನಾವು ಹೋರಾಟ ಮುಂದುವರೆಸುತ್ತೇವೆ ಎಂದು ಗುರ್ನಮ್ ಸಿಂಗ್ ಚಾದುನಿ ಹೇಳಿದ್ದಾರೆ.
- ದೆಹಲಿಯಲ್ಲಿ ಹೋರಾಟ ಆರಂಭವಾದಾಗಿನಿಂದ ಇದುವರೆಗೆ ರೈತ ಮುಖಂಡರು ಮತ್ತು ಕೇಂದ್ರ ಸಚಿವರೊಂದಿಗೆ 5 ಸುತ್ತಿನ ಮಾತುಕತೆ ನಡೆದಿದೆ. ಆದರೆ ಅವೆಲ್ಲವೂ ವಿಫಲವಾಗಿವೆ. ಡಿಸೆಂಬರ್ 9 ರಂದು 6ನೇ ಸುತ್ತಿನ ಮಾತುಕತೆ ನಡೆಯಬೇಕಿತ್ತು. ಆದರೆ ರೈತ ಮುಖಂಡರು ಅದನ್ನು ಬಾಯ್ಕಾಟ್ ಮಾಡಿದ್ದಾರೆ.
- ದೆಹಲಿಯ ರೈತರ ಹೋರಾಟ ಬೆಂಬಲಿಸಲು ರಾಜಸ್ಥಾನದಿಂದ ಸಾವಿರಾರು ರೈತರು ದೆಹಲಿಯತ್ತ ಹೊರಟಿದ್ದಾರೆ. ನೂರಾರು ಟ್ರಕ್ಗಳಲ್ಲಿ ಹೋರಾಟ ರೈತರನ್ನು ಹರಿಯಾಣದ ಹಲವೆಡೆ ತಡೆಯಲಾಗಿದೆ ಎಂದು ರೈತರು ಆರೋಪಿಸಿದ್ದಾರೆ.
- ರೈತರ ಹೋರಾಟದಿಂದ ಔಷಧಿ ಪೂರೈಕೆಗೆ ವ್ಯತ್ಯಯ ಉಂಟಾಗಿದೆ. ಹಾಗಾಗಿ ಹೆದ್ದಾರಿ ಬಂದ್ ಮಾಡಿರುವುದನ್ನು ನಿಲ್ಲಿಸಿ ರೈತರನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ಸಲ್ಲಿಕೆಯಾಗಿರುವ ಪಿಐಎಲ್ ಅನ್ನು ಡಿಸೆಂಬರ್ 16 ರಂದು ಆಲಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.
- ಕೇಂದ್ರದ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ, ರೈತರು ನಡೆಸುತ್ತಿರುವ ಪ್ರತಿಭಟನೆಯ ಲಾಭವನ್ನು “ಟುಕ್ಡೆ-ಟುಕ್ಡೆ ಗ್ಯಾಂಗ್” ಪಡೆಯಲು ಯತ್ನಿಸುತ್ತಿದೆ ಎಂದು ಕೇಂದ್ರ ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
- ದೇಶಕ್ಕೆ ಅನ್ನ ನೀಡುವ ರೈತರನ್ನು ದೇಶದ್ರೋಹಿಗಳು, ಭಯೋತ್ಪಾದಕರು ಎಂದು ಕರೆಯುವುದು ನಮ್ಮ ಸಂಸ್ಕೃತಿಯಲ್ಲ. ದೇಶವನ್ನು ತುಘಲಕ್ ರೀತಿಯಲ್ಲಿ ಆಳಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಕಿಡಿಕಾರಿದ್ದಾರೆ.
- ರೈತರ ದಿಟ್ಟ ಹೋರಾಟಕ್ಕೆ ದೇಶ-ವಿದೇಶಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ರೈತರ ಹೋರಾಟ ಬೆಂಬಲಿಸಿ ನಿನ್ನೆ ಪಂಜಾಬ್ನ ಕಾರಾಗೃಹಗಳ ಡಿಐಜಿ ಲಖ್ವಿಂದರ್ ಜಖರ್ ರಾಜೀನಾಮೆ ನೀಡಿದ್ದಾರೆ. “ನಾನು ಮೊದಲು ರೈತ, ನಂತರ ಪೊಲೀಸ್ ಅಧಿಕಾರಿ. ಇಂದು ನನಗೆ ಯಾವುದೇ ಸ್ಥಾನ ಸಿಕ್ಕಿದ್ದರೂ, ಅದಕ್ಕೆ ಕಾರಣ ನನ್ನ ತಂದೆ ಹೊಲಗಳಲ್ಲಿ ಕೃಷಿಕರಾಗಿ ಕೆಲಸ ಮಾಡಿದ್ದು” ಎಂದಿದ್ದಾರೆ. ವಿಶ್ವದ ಅತ್ಯಂತ ಕಿರಿಯ ಪರಿಸರ ಹೋರಾಟಗಾರ್ತಿ ಲಿಸಿಪ್ರಿಯಾ ಕಂಗುಜಾಮ್ ಸಹ ಬೆಂಬಲ ನೀಡಿದ್ದಾರೆ.
ಇದನ್ನೂ ಓದಿ: ರೈತರ ಪ್ರತಿಭಟನೆ ಬೆಂಬಲಿಸಲು ರಾಜೀನಾಮೆ ನೀಡಿದ ಪಂಜಾಬ್ ಡಿಐಜಿ!


