ಕೇಂದ್ರ ಸರ್ಕಾರದ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರೊಂದಿಗೆ ಸೇರಿಕೊಂಡ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್, “ಬಿಜೆಪಿಯೇ ನಿಜವಾದ ತುಕ್ಡೆ-ತುಕ್ಡೆ ಗ್ಯಾಂಗ್. ಈ ಪಕ್ಷ ಪಂಜಾಬ್ ಅನ್ನು ವಿಭಜಿಸಲು ಯತ್ನಿಸುತ್ತಿದೆ” ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಮಣಿಕರ್ಣಿಕಾ ವಿವಾದ: ಕಂಗನಾ ಕಾರಣಕ್ಕೆ ನಾನು ಜಗತ್ತಿಗೆ ಅಪರಿಚಿತನಾಗಿರಬಹುದು- ನಿರ್ದೇಶಕ
“ರಾಜಕೀಯ ಲಾಭಕ್ಕಾಗಿ, ದುರುದ್ದೇಶದಿಂದ ದೇಶ ಭಕ್ತಿಗೆ ಹೆಸರಾದ ಪಂಜಾಬ್ ಅನ್ನು ಕೋಮುಜ್ವಾಲೆಗೆ ತಳ್ಳುವ ಮೂಲಕ ರಾಷ್ಟ್ರೀಯ ಐಕ್ಯತೆಯನ್ನು ನಾಶಪಡಿಸುತ್ತಿದೆ. ಬಿಜೆಪಿ ನಾಚಿಕೆ ಇಲ್ಲದೆ ಮುಸ್ಲಿಮರ ವಿರುದ್ಧ ಹಿಂದೂಗಳನ್ನು ಪ್ರಚೋದಿಸುತ್ತದೆ. ಈಗ ಹತಾಶರಾಗಿ ಶಾಂತಿಪ್ರಿಯ ಪಂಜಾಬಿ ಹಿಂದೂಗಳನ್ನು ಸಿಖ್ ಸಹೋದರರ ವಿರುದ್ಧ, ವಿಶೇಷವಾಗಿ ರೈತರ ವಿರುದ್ಧ ಎತ್ತಿಕಟ್ಟುತ್ತಿದೆ” ಎಂದು ಸುಖ್‌ಬೀರ್ ಸಿಂಗ್ ಹೇಳಿದರು.
ಇತ್ತೀಚೆಗೆ ಬಿಹಾರದಲ್ಲಿ ಕೇಂದ್ರದ ಕೃಷಿ ಕಾನೂನುಗಳನ್ನು ಬೆಂಬಲಿಸಿ ಮಾತನಾಡಿದ್ದ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್, “ತುಕ್ಡೆ-ತುಕ್ಡೆ ಗ್ಯಾಂಗ್‌ನವರು ರೈತರ ಪ್ರತಿಭಟನೆಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ” ಎಂದು ಹೇಳಿದ್ದರು.
ಇದನ್ನೂ ಓದಿ: ಜಪಾನ್‌ನ ’ಟ್ವಿಟರ್ ಕಿಲ್ಲರ್’ಗೆ ಮರಣದಂಡನೆ ವಿಧಿಸಿದ ಟೋಕಿಯೊ ನ್ಯಾಯಾಲಯ
“ರೈತರ ಪ್ರತಿಭಟನೆಯನ್ನು ದಿಕ್ಕುತಪ್ಪಿಸುವುದಕ್ಕಾಗಿ ಹಿಂದೂ-ಸಿಖ್ಖರ ನಡುವೆ ಕೋಮುದ್ವೇಷವನ್ನು ಹರಡಲಾಗುತ್ತಿದೆ. ರೈತರ ಆಂದೋಲನವನ್ನು ಸಿಖ್-ಹಿಂದೂ ಸಂಘರ್ಷವನ್ನಾಗಿಸಲು ಈ ಪ್ರಯತ್ನಗಳು ನಡೆಯುತ್ತಿವೆ. ಇದು ಈಗಾಗಲೇ ದೆಹಲಿಯಲ್ಲಿ ಪ್ರಾರಂಭವಾಗಿದೆ. ಈಗ ಇದನ್ನು ಪಂಜಾಬ್‌ನಲ್ಲಿ ಪುನರಾವರ್ತಿಸಲು ಬಯಸುತ್ತಿವೆ. ಅಕಾಲಿ ದಳವು ಶಾಂತಿ ಮತ್ತು ಕೋಮು ಸಹೋದರತ್ವವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ” ಎಂದು ಅಮೃತಸರದಲ್ಲಿ ನಡೆಯುತ್ತಿರುವ ಧರಣಿಯಲ್ಲಿ ಸುಖ್‌ಬೀರ್ ಸಿಂಗ್ ಹೇಳಿದ್ದರು.
ಕೇಂದ್ರ ಸರಕಾರದ ಕೃಷಿ ಕಾನೂನುಗಳನ್ನು ವಿರೋಧಿಸಿ ಅಕಾಲಿ ದಳವು ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಇತ್ತೀಚೆಗೆ ಹೊರ ಬಂದಿತ್ತು ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: ತಬ್ಲೀಘಿ ಜಮಾತ್‌ನ 36 ವಿದೇಶಿಗರೂ ದೋಷಮುಕ್ತ ಎಂದ ಹೈಕೋರ್ಟ್: ಬಿಜೆಪಿಗೆ ಮುಖಭಂಗ
“ಎನ್‌ಡಿಎ ಸರ್ಕಾರವು ಫೆಡರಲಿಸಂ ಅನ್ನು ಮಾತ್ರವಲ್ಲದೆ ಪ್ರತಿಭಟಿಸುವ ಸ್ವಾತಂತ್ರ್ಯವನ್ನೂ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇವರ ಪರವಾಗಿರುವವರನ್ನು ದೇಶಭಕ್ತರು ಎಂಬಂತೆ, ವಿರುದ್ಧವಾಗಿರುವವರು ದೇಶ ದ್ರೋಹಿಗಳು ಎಂಬಂತೆ ಬಿಂಬಿಸಲಾಗುತ್ತಿದೆ” ಎಂದು ಆರೋಪಿಸಿದರು.
“ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕೇಂದ್ರ ಸಚಿವಾಲಯಕ್ಕೆ ರಾಜೀನಾಮೆ ನೀಡಿದ ಹರ್ಸಿಮ್ರತ್ ಕೌರ್ ಬಾದಲ್ ದೇಶ ದ್ರೋಹಿಯೇ? ತನ್ನ ಪದ್ಮವಿಭೂಷಣ ಪ್ರಶಸ್ತಿಯನ್ನು ಹಿಂದಿರುಗಿಸಿದ ಪ್ರಕಾಶ್ ಸಿಂಗ್ ಬಾದಲ್ ದೇಶದ್ರೋಹಿಯೇ? ಇವರನ್ನು ದೇಶದ್ರೋಹಿ ಎಂದು ಯಾರಾದರೂ ಹೇಳಬಹುದೇ?” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಏಮ್ಸ್ ನರ್ಸಿಂಗ್ ನೌಕರರ ಪ್ರತಿಭಟನೆಗೆ ಹೈಕೋರ್ಟ್ ತಡೆ: ಪ್ರತಿಭಟನಾಕಾರರಿಗೆ ನೋಟಿಸ್
“ಕೃಷಿ ಕಾನೂನುಗಳ ಬಗ್ಗೆ ಕೇಂದ್ರ ಸರ್ಕಾರ ನೀಡಿದ ಸಮರ್ಥನೆಯನ್ನು ರೈತರು ಒಪ್ಪದ ಕಾರಣ ಅವರನ್ನು ಉಗ್ರಗಾಮಿಗಳು ಎಂದು ಬಿಂಬಿಸಲಾಯಿತು. ಅಕಾಲಿ ದಳವು ಒಕ್ಕೂಟ ವ್ಯವಸ್ಥೆಯ ಬಗ್ಗೆ ದನಿಯೆತ್ತಿದಾಗ ಪ್ರತ್ಯೇಕತಾವಾದಿಗಳು ಎಂದು ಬ್ರಾಂಡ್ ಮಾಡಲಾಯಿತು” ಎಂದು ಸುಖ್‌ಬೀರ್ ಸಿಂಗ್ ಹೇಳಿದರು.
ಅದೇ ಸ್ಥಳದಲ್ಲಿದ್ದ ಹರ್ಸಿಮ್ರತ್ ಕೌರ್ ಬಾದಲ್ ಮಾತನಾಡಿ, “ಸರ್ಕಾರದ ಪ್ರಸ್ತಾವಗಳಿಗೆ ಒಪ್ಪದ ಕಾರಣ ರೈತರನ್ನು ನಕ್ಸಲೈಟ್ ಮತ್ತು ಭಯೋತ್ಪಾದಕರು ಎಂದು ಕರೆಯುತ್ತಿರುವುದು ದುರದೃಷ್ಟಕರ. ಇಂತಹ ತಂತ್ರಗಳು ಕೇಂದ್ರಕ್ಕೆ ಸಹಾಯ ಮಾಡುವುದಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ರಾಮ ಸಮಾಜವಾದಿ ಪಕ್ಷಕ್ಕೆ ಸೇರಿದವ, ನಾವು ರಾಮ ಭಕ್ತರು: ಅಖಿಲೇಶ್ ಯಾದವ್


