ಭಾರತೀಯ ವೈದ್ಯಕೀಯ ಸಂಶೋಧನೆ ಮಂಡಳಿ(ICMR)ಯ ಸಹಯೋಗದಲ್ಲಿ ಭಾರತ್ ಬಯೊಟೆಕ್ ಅಭಿವೃದ್ಧಿಪಡಿಸಿರುವ ಕೊರೊನಾ ಲಸಿಕೆಯಾದ ‘ಕೊವ್ಯಾಕ್ಸಿನ್’ನ ಮೊದಲ ಹಂತದ ಕ್ಲಿನಿಕಲ್ ಪ್ರಯೋಗದ ಮಧ್ಯಂತರ ಪರೀಕ್ಷೆಯಲ್ಲಿ ಪರಿಣಾಮಕಾರಿ ಫಲಿತಾಂಶ ಲಭ್ಯವಾಗಿದ್ದು, ಯಾವುದೇ ರೀತಿ ಗಂಭೀರವಾದ ಅಥವಾ ಅಡ್ಡಪರಿಣಾಮ ಬೀರಿಲ್ಲ ಎನ್ನುವುದು ದಿ ಪ್ರಿಂಟ್ ವರದಿ ಮಾಡಿದೆ.
ಪ್ರಯೋಗದ ಸಮಯದಲ್ಲಿ ಒಂದು ವ್ಯತಿರಿಕ್ತ ಪರಿಣಾಮ ಬೀರಿರುವುದು ವರದಿಯಾಗಿತ್ತಾದರೂ, ಇದು ಲಸಿಕೆಗೆ ಸಂಬಂಧಿಸಿದ್ದಲ್ಲ ಎನ್ನುವುದು ಪರೀಕ್ಷೆಯ ಸಂದರ್ಭದಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ: 60 ಕೋಟಿ ಜನರಿಗೆ ಕೊರೊನಾ ಲಸಿಕೆ ನೀಡಲು ಸಿದ್ದವಾಗಿರುವ ಭಾರತ
‘ಕೊವ್ಯಾಕ್ಸಿನ್–ಬಿಬಿವಿ152’ ಸುರಕ್ಷತೆ ಮತ್ತು ದೇಹದ ಪ್ರತಿರೋಧಕ ಶಕ್ತಿಯ ಮೌಲ್ಯಮಾಪನ ಮಾಡುವ ನಿಟ್ಟಿನಲ್ಲಿ ಮೊದಲ ಹಂತದ ಕ್ಲಿನಿಕಲ್ ಪ್ರಯೋಗವನ್ನು ಕೈಗೊಳ್ಳಲಾಗಿತ್ತು. ಲಸಿಕೆಯನ್ನು 2 ಡಿಗ್ರಿ ಸೆಲ್ಸಿಯಸ್ ಮತ್ತು 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸಂಗ್ರಹಿಸಿಡಲಾಗಿತ್ತು. ಈ ಲಸಿಕೆಯ ಪ್ರಯೋಗ ಇನ್ನೂ ಮುಂದುವರಿದಿದೆ.
ಸಾಮಾಜಿಕ ಆರ್ಥಿಕ ಪರಿಸ್ಥಿತಿಗಳನ್ನು ಪರಿಗಣಿಸಿ, ದೇಶದ ವಿವಿಧ ಭಾಗಗಳಿಂದ ಜನರನ್ನು ಆಯ್ಕೆ ಮಾಡಿ 11 ಆಸ್ಪತ್ರೆಗಳಲ್ಲಿ 375 ಮಂದಿಯ ಮೇಲೆ ಈ ಲಸಿಕೆಯ ಪ್ರಯೋಗವನ್ನು ಕೈಗೊಳ್ಳಲಾಗಿತ್ತು. ಆಯ್ಕೆ ಮಾಡಿಕೊಂಡವರಿಗೆ ಲಸಿಕೆಯ ಎರಡು ಡೋಸ್‌ಗಳನ್ನು ನೀಡಲಾಗಿತ್ತು.
ಭಾರತ್ ಬಯೋಟೆಕ್ ಪ್ರಸ್ತುತ ಲಸಿಕೆಯ ಮೂರನೇ ಹಂತದ ಪ್ರಯೋಗಗಳನ್ನು ನಡೆಸುತ್ತಿದೆ. ಫೈಝೆರ್ ಮತ್ತು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಈಗಾಗಲೇ ಲಸಿಕೆಯ ತುರ್ತು ಬಳಕೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಅರ್ಜಿ ಸಲ್ಲಿಸಿದೆ.
ಇದನ್ನೂ ಓದಿ: ಕೊರೊನಾ ಲಸಿಕೆ ಬಳಕೆಗೆ ಅನುಮತಿ ಕೋರಿದ ’ಸೀರಮ್ ಇನ್ಸ್ಟಿಟ್ಯೂಟ್’


