ವಿಶ್ವಸಂಸ್ಥೆಯ ಮಾನವ ಅಭಿವೃದ್ದಿ ಸೂಚ್ಯಂಕದಲ್ಲಿ ಭಾರತವು ಮತ್ತೆರೆಡು ಸ್ಥಾನ ಕುಸಿದಿದೆ ಎಂದು ವರದಿ ಹೇಳಿದೆ. 189 ದೇಶಗಳಲ್ಲಿ ಕಳೆದ ವರ್ಷ 129ನೇ ಸ್ಥಾನದಲ್ಲಿದ್ದ ಭಾರತ ಈ ವರ್ಷ 131ನೇ ಸ್ಥಾನಕ್ಕೆ ಕುಸಿದಿದೆ. ಆದರೆ ಪ್ರತಿ ರಾಷ್ಟ್ರದ ಅಭಿವೃದ್ಧಿಯಿಂದ ಉಂಟಾಗುವ ಗ್ರಹದ ಮೇಲಾಗುವ ಒತ್ತಡವನ್ನು ನಿರ್ಣಯಿಸಲು ಸೂಚ್ಯಂಕವನ್ನು ಸರಿಹೊಂದಿಸಿದರೆ, ಭಾರತವು ಶ್ರೇಯಾಂಕದಲ್ಲಿ ಎಂಟು ಸ್ಥಾನಗಳನ್ನು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಯುನೈಟೆಡ್ ನೇಷನ್ಸ್ ಡೆವಲಪ್ಮೆಂಟ್ ಪ್ರೋಗ್ರಾಂ ಡಿಸೆಂಬರ್ 15 ರಂದು ಪ್ರಕಟಿಸಿದ ವರದಿಯ ಪ್ರಕಾರ, ಭಾರತದ ಒಟ್ಟು ರಾಷ್ಟ್ರೀಯ ಆದಾಯದ ಕೊಳ್ಳುವ ಶಕ್ತಿಯ ಸಾಮ್ಯತೆಯು 2018ರಲ್ಲಿ 6829 ಡಾಲರ್ ಇದ್ದುದು 2019 ರಲ್ಲಿ, 6,681 ಡಾಲರ್‌ಗೆ ಇಳಿದಿದೆ ಎಂದು ಪಿಟಿಐ ವರದಿ ಮಾಡಿದೆ.
ನೂತನ ವರದಿಯ ಪ್ರಕಾರ ಏಷ್ಯಾ ರಾಷ್ಟ್ರಗಳಾದ ರಷ್ಯಾ 52, ಶ್ರೀಲಂಕಾ 72, ಚೀನಾ 85, ಭಾರತ 131, ಬಾಂಗ್ಲಾದೇಶ 133, ನೇಪಾಳ 152 ಮತ್ತು ಪಾಕಿಸ್ತಾನ 154ನೇ ಸ್ಥಾನದಲ್ಲಿವೆ ಎಂದು ದಿ ಹಿಂದು ವರದಿ ಮಾಡಿದೆ.

ಮಾನವ ಅಭಿವೃದ್ದಿ ಸೂಚ್ಯಂಕ (ಎಚ್‌ಡಿಐ)ವು ರಾಷ್ಟ್ರದ ಆರೋಗ್ಯ, ಶಿಕ್ಷಣ ಮತ್ತು ಜೀವನಮಟ್ಟದ ಮೌಲ್ಯಮಾಪನವಾಗಿದೆ. ಈ ವರ್ಷದ ವರದಿಯು 2019 ವರ್ಷವನ್ನು ಮಾತ್ರ ಒಳಗೊಂಡಿದ್ದು COVID 19 ನ ಪ್ರಭಾವವನ್ನು ಪರಿಗಣಿಸಿಲ್ಲ. ಕೋವಿಡ್ ಕಾರಣಕ್ಕೆ 2020 ರ ಜಾಗತಿಕ ಎಚ್‌ಡಿಐ ಸೂಚ್ಯಂಕವು ಮೂರು ದಶಕಗಳಲ್ಲಿ ಮೊದಲ ಬಾರಿಗೆ ಕೆಳಗಿಳಿಯುತ್ತದೆ ಎಂದು ಅದು ಊಹಿಸಿದೆ.
ಮೊದಲ ಬಾರಿಗೆ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮವು ಪ್ರತಿ ದೇಶದ ತಲಾ ಇಂಗಾಲದ ಹೊರಸೂಸುವಿಕೆ ಮತ್ತು ಅದರಿಂದ ಉಂಟಾಗುವ ಪರಿಣಾಮವನ್ನು ಪ್ರತಿಬಿಂಬಿಸಲು ಹೊಸ ಮೆಟ್ರಿಕ್ ಅನ್ನು ಪರಿಚಯಿಸಿದೆ. ಇದು ಪಳೆಯುಳಿಕೆ ಇಂಧನಗಳು, ಲೋಹಗಳು ಮತ್ತು ಸರಕುಗಳನ್ನು ತಯಾರಿಸಲು ಬಳಸುವ ಇತರ ಸಂಪನ್ಮೂಲಗಳ ಪ್ರಮಾಣವನ್ನು ಅಳೆಯುತ್ತದೆ ಎನ್ನಲಾಗಿದೆ.
ಪ್ಯಾರಿಸ್ ಒಪ್ಪಂದದ ಪ್ರಕಾರ, ಭಾರತವು ತನ್ನ ಜಿಡಿಪಿಯ ಹೊರಸೂಸುವಿಕೆಯ ತೀವ್ರತೆಯನ್ನು 2005 ರ ಮಟ್ಟದಿಂದ 2030 ರ ವೇಳೆಗೆ 33-35% ರಷ್ಟು ಕಡಿಮೆ ಮಾಡಲು ಮತ್ತು 2030 ರ ವೇಳೆಗೆ ಪಳೆಯುಳಿಕೆ ರಹಿತ ಇಂಧನ ಮೂಲಗಳಿಂದ 40% ವಿದ್ಯುತ್ ಶಕ್ತಿಯ ಸಾಮರ್ಥ್ಯವನ್ನು ಪಡೆಯುವುದಾಗಿ ಪ್ರತಿಜ್ಞೆ ಮಾಡಿದೆ ಎಂದು ವರದಿ ಹೇಳಿದೆ.
“ಯೋಜನೆಯ ಭಾಗವಾಗಿ, ಪಳೆಯುಳಿಕೆ ಇಂಧನ ಆಧಾರಿತ ಆಯ್ಕೆಗಳೊಂದಿಗೆ ಸೌರಶಕ್ತಿಯನ್ನು ಸ್ಪರ್ಧಾತ್ಮಕವಾಗಿಸಲು ವಿದ್ಯುತ್ ಉತ್ಪಾದನೆ ಮತ್ತು ಇತರ ಬಳಕೆಗಳಿಗೆ ಸೌರ ಶಕ್ತಿಯನ್ನು ಉತ್ತೇಜಿಸುವ ಉದ್ದೇಶವನ್ನು ರಾಷ್ಟ್ರೀಯ ಸೌರ ಮಿಷನ್ ಹೊಂದಿದೆ. ಭಾರತದಲ್ಲಿ ಸೌರ ಸಾಮರ್ಥ್ಯವು ಮಾರ್ಚ್ 2014 ರಲ್ಲಿ 2.6 ಗಿಗಾವಾಟ್‌ನಿಂದ 2019 ರ ಜುಲೈನಲ್ಲಿ 30 ಗಿಗಾವಾಟ್‌ಗೆ ಏರಿತು, ನಿಗದಿತ ಸಮಯಕ್ಕಿಂತ ನಾಲ್ಕು ವರ್ಷಗಳ ಮುಂಚಿತವಾಗಿ 20 ಗಿಗಾವಾಟ್‌ಗಳ ಗುರಿಯನ್ನು ಸಾಧಿಸಿತು. ಸ್ಥಾಪಿತ ಸೌರ ಸಾಮರ್ಥ್ಯಕ್ಕಾಗಿ 2019 ರಲ್ಲಿ ಭಾರತ ಐದನೇ ಸ್ಥಾನದಲ್ಲಿದೆ ”ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: ‘PM-CARES’ ಖಾಸಗಿ ನಿಧಿ- ದಾಖಲೆಗಳು ಬಿಚ್ಚಿಟ್ಟ ವೈರುಧ್ಯ!, ದೇಶಕ್ಕೆ ಇಷ್ಟು ದೊಡ್ಡ ಸುಳ್ಳು ಹೇಳಿದರೇ ಮೋದಿ?


