ಹೊಸ ಕೃಷಿ ಕಾನೂನಿನ ವಿರುದ್ದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಕೇಂದ್ರ ಸರ್ಕಾರ ನಡೆಸಿದ 6 ನೇ ಸುತ್ತಿನ ಮಾತುಕತೆ ಕೂಡಾ ವಿಫಲಗೊಂಡಿದೆ. ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಿಲ್ಲ ಎಂದು ಕೇಂದ್ರವು ಅಚಲವಾಗಿ ನಿಂತಿದೆ. ಕಾನೂನುಗಳನ್ನು ಹಿಂತೆಗೆದುಕೊಳ್ಳದೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಮತ್ತೇ ಘೋಷಿಸಿದ್ದಾರೆ.
ಸೋಮವಾರ ರೈತರೊಂದಿಗೆ ಕೇಂದ್ರ ಸರ್ಕಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ. ಈ ಮಾತುಕತೆಯಲ್ಲಿ ನೂತನ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದು ಮತ್ತು ಬೆಂಬಲ ಬೆಲೆ ಕುರಿತು ಚರ್ಚೆ ನಡೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ:ರೈತರ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ: ಭಾವನಾತ್ಮಕ ಟ್ವೀಟ್ ಮಾಡಿದ ರೈತ ಒಕ್ಕೂಟ
ಈ ನಡುವೆ, ರೈತರು ಎತ್ತಿದ ನಾಲ್ಕು ಸಮಸ್ಯೆಗಳಲ್ಲಿ ಎರಡನ್ನು ಪರಿಹರಿಸಲಾಗಿದೆ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಕೃಷಿ ಕಾನೂನು ಅಧ್ಯಯನಕ್ಕಾಗಿ ವಿಶೇಷ ಸಮಿತಿಯನ್ನು ನೇಮಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ವಿದ್ಯುತ್ ತಿದ್ದುಪಡಿ ಕಾಯ್ದೆ ಮತ್ತು ವಾಯುಮಾಲಿನ್ಯ ಕಾಯ್ದೆಯನ್ನು ಪರಿಶೀಲನೆ ನಡೆಸಲಿದೆ ಎಂದು ಕೇಂದ್ರ ಸರ್ಕಾರ ರೈತರಿಗೆ ಮಾಹಿತಿ ನೀಡಿದೆ. ರೈತರು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಪಿಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸಿದರು. ಡಿಸೆಂಬರ್ 30 ರಂದು ಸರ್ಕಾರ ಕರೆದಿದ್ದ ಮಾತುಕತೆಯ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದಿದ್ದ ರೈತರು, ಮೂರು ಹೊಸ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ವಿಧಾನದ ಬಗ್ಗೆ ಮಾತ್ರ ಚರ್ಚೆ ನಡೆಯಬೇಕು ಎಂದು ಕೇಳಿಕೊಂಡಿದ್ದರು.
ಇದನ್ನೂ ಓದಿ: ಪಂಜಾಬ್: 1500 ಕ್ಕೂ ಹೆಚ್ಚು ಜಿಯೋ ಟವರ್‌ಗಳಿಗೆ ಹಾನಿ ಮಾಡಿದ ರೈತ ಹೋರಾಟಗಾರರು


