ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಕಳೆದ 36 ದಿನದಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಇದುವರೆಗೂ 6 ಬಾರಿ ಮಾತುಕತೆ ನಡೆಸಿದೆ. ಆದರೆ ಎಲ್ಲಾ ಮಾತುಕತೆಗಳು ವಿಫಲವಾಗಿದ್ದು, ಏಳನೇ ಸುತ್ತಿನ ಮಾತುಕತೆ ಸೋಮವಾರ ನಡೆಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಇದೀಗ ಸಿಂಘು ಗಡಿಯ ಪ್ರತಿಭಟನಾ ಸ್ಥಳದಲ್ಲಿ ಮಾತನಾಡಿದ ರೈತ ಮುಖಂಡರು, ಜನವರಿ 4 ರಂದು ನಡೆಸುವ ಮಾತುಕತೆ ವಿಫಲವಾದರೆ, ಹರಿಯಾಣದಲ್ಲಿ ಎಲ್ಲಾ ಮಾಲ್ ಮತ್ತು ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವ ದಿನಾಂಕವನ್ನು ಘೋಷಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ರೈತ ಮುಖಂಡ ವಿಕಾಸ್, “ಸರ್ಕಾರ ಇದುವರೆಗಿನ ಮಾತುಕತೆಯಲ್ಲಿ ನಮ್ಮ 5% ವಿಷಯಗಳನ್ನಷ್ಟೇ ಚರ್ಚಿಸಿದೆ. ಜನವರಿ 4 ರಂದು ನಡೆಯುವ ಸಭೆಯು ವಿಫಲವಾದರೆ, ಹರಿಯಾಣದ ಎಲ್ಲಾ ಮಾಲ್‌ಗಳು, ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವ ದಿನಾಂಕಗಳನ್ನು ನಾವು ಪ್ರಕಟಿಸುತ್ತೇವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ರೈತರ ಕೈಯಲ್ಲಿರುವ ರೊಟ್ಟಿಯನ್ನು ಕಿತ್ತುಕೊಳ್ಳಬೇಡಿ: ಭಾವನಾತ್ಮಕ ಟ್ವೀಟ್ ಮಾಡಿದ ರೈತ ಒಕ್ಕೂಟ
ನಂತರ ಮಾತನಾಡಿದ ಸ್ವರಾಜ್ ಇಂಡಿಯಾ ಮುಖಂಡ ಯೋಗೇಂದ್ರ ಯಾದವ್, “ಹರಿಯಾಣ-ರಾಜಸ್ಥಾನ ಗಡಿಯ ಶಹಜಹಾನ್‌ಪುರದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಷ್ಟ್ರ ರಾಜಧಾನಿಯತ್ತ ಸಾಗಲಿದ್ದಾರೆ” ಎಂದು ಹೇಳಿದ್ದಾರೆ.
ಮತ್ತೊಬ್ಬ ರೈತ ನಾಯಕ ಯುಧ್ವೀರ್ ಸಿಂಗ್, “ಮುಂದಿನ ಸುತ್ತಿನ ಮಾತುಕತೆಯಲ್ಲಿ ಯಾವುದೇ ದೃಡ ನಿರ್ಧಾರ ತೆಗೆದುಕೊಳ್ಳದಿದ್ದರೆ ಜನವರಿ 6 ರಂದು ಟ್ರ್ಯಾಕ್ಟರ್ ಜಾಥಾ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.
ಬುಧವಾರ ನಡೆದ ಆರನೇ ಸುತ್ತಿನ ಮಾತುಕತೆಯಲ್ಲಿ, ವಿದ್ಯುತ್ ತಿದ್ದುಪಡಿ ಮಸೂದೆ ಮತ್ತು ವಾಯುಮಾಲಿನ್ಯ ಮಸೂದೆಯನ್ನು ಪರಿಶೀಲನೆ ನಡೆಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಆದರೆ ಮೂರು ಕೃಷಿ ಕಾನೂನುಗಳು ಮತ್ತು ಬೆಂಬಲ ಬೆಲೆ ಕಾನೂನಿನ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ಹಠವನ್ನು ಇನ್ನೂ ಮುಂದುವರೆಸಿದೆ. ಆದರೆ ರೈತರು ಈ ಬೇಡಿಕೆಗಳು ಈಡೇರದೆ ಹೋರಾಟ ಹಿಂಪಡೆಯುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪಂಜಾಬ್: 1500 ಕ್ಕೂ ಹೆಚ್ಚು ಜಿಯೋ ಟವರ್‌ಗಳಿಗೆ ಹಾನಿ ಮಾಡಿದ ರೈತ ಹೋರಾಟಗಾರರು


