ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಎಂಬುದೇನೋ ಗಾದೆ. (ಇದು ಕೂಡ ಮಹಿಳೆಯರ ವಿರುದ್ಧದ ಷಡ್ಯಂತ್ರವೇ!). ಅದಿರಲಿ, ಈ ಹುಡುಗಿ ತಾನು ಪ್ರೀತಿಸಿದವನನ್ನು, ಅದಕ್ಕೂ ಹೆಚ್ಚಾಗಿ ತನ್ನ ಶ್ರೇಯೋಭಿವೃದ್ಧಿಗೆ ಎಲ್ಲ ರೀತಿಯಲ್ಲೂ ನೆರವು ನೀಡುತ್ತಿದ್ದವನನ್ನು ಮದುವೆಯಾಗಲು ಒಂದೇ ಒಂದು ಸುಳ್ಳನ್ನು ಪೋಷಕರಿಗೆ ಹೇಳಿದಳು. ತೌಫೀಕ್‌ನನ್ನು ರಾಹುಲ್ ವರ್ಮಾ ಎಂದು ಪೋಷಕರಿಗೆ ಪರಿಚಯಿಸಿ ಮದುವೆಯಾದಳು.
ಪ್ರೀತಿಗೆ ಬದ್ಧನಾಗಿದ್ದ ತೌಫಿಕ್ ಹಿಂದೂ ಸಂಪ್ರದಾಯದಂತೆ ವಿವಾಹವಾದ. ಈ ಸುಳ್ಳೇನೂ ಮಹಾಪರಾಧವಲ್ಲ ಎಂದು ನಂಬಿದ್ದ ಪ್ರಿಯಾ ಎದುರು ಧುತ್ತನೆ ಈಗ ಉತ್ತರಪ್ರದೇಶದ ಮತಾಂತರ ವಿರೋಧಿ ಕಾನೂನು ಎಂಬ ‘ಭಯಂಕರ’ ಭೂತ ಎದುರಾಗಿದೆ. ಇದರ ಪರಿಣಾಮ, ಸುಳ್ಳು ಪರಿಚಯ ಮಾಡಿಕೊಂಡು ಮತಾಂತರ ಮಾಡಲು ತೌಫಿಕ್ ಮದುವೆಯಾಗಿದ್ದ, ಇದು ಲವ್ ಜಿಹಾದ್ ಎಂದೆಲ್ಲ ಕತೆ ಕಟ್ಟಿದ ಬಿಜೆಪಿ ನಾಯಕನೊಬ್ಬ ಪ್ರಿಯಾ ಪೋಷಕರ ತಲೆ ಕೆಡಿಸಿದ.
ಈಗ ತೌಫಿಕ್ ಜೈಲಿನಲ್ಲಿ, ಪ್ರಿಯಾ ಪೋಷಕರ ಮನೆಯೆಂಬ ಜೈಲಿಗಿಂತ ಭೀಕರವಾದ ಬಂಧನದಲ್ಲಿ!
ಬರೀ ಇಂತಹ ಉಪದ್ಯಾಪಿ ಕಾನೂನುಗಳನ್ನೇ ಮಾಡುವುದಕ್ಕೆಂದೇ ಸಂಘ ಪರಿವಾರ ಸೃಷ್ಟಿಸಿರುವ ಯೋಗಿ ಆದಿತ್ಯನಾಥ ಎಂಬ ಮುಖ್ಯಮಂತ್ರಿ ಲವ್ ಜಿಹಾದ್ ‘ತಡೆಯಲು’ ಮತಾಂತರ ವಿರೋಧ ಕಾನೂನು ಜಾರಿಗೆ ತಂದರು. ಅದೀಗ ಮುಸ್ಲಿಂ ಮತ್ತು ಹಿಂದೂ ಯುವ-ಯುವತಿಯರು ಪ್ರೀತಿಸಲೇಬಾರದು ಮತ್ತು ಮದುವೆಯಾಗಲೇಬಾರದು ಎಂಬ ಅಲಿಖಿತ ಜಂಗಲ್ ರಾಜ್ ವ್ಯವಸ್ಥೆಗೆ ನಾಂದಿ ಹಾಡಿದೆ. ಬಿಜೆಪಿ ಅಧಿಕಾರವಿರುವ ಹಿಮಾಚಲ ಪ್ರದೇಶ, ಮಧ್ಯಪ್ರದೇಶಗಳಲ್ಲೂ ಈ ಜಂಗಲ್ ಕಾಯ್ದೆ ಜಾರಿಗೆ ಬಂದಿದ್ದು, ಗುಜರಾತ್ ಸರ್ಕಾರವು ಜಾರಿಗೆ ತರಲು ತಯ್ಯಾರಿ ನಡೆಸಿದೆ. ಕರ್ನಾಟಕದಲ್ಲೂ ಕೆಲವು ಸಚಿವರು ಈ ಬಗ್ಗೆ ರಾಗ ಎಳೆದಿದ್ದಾರೆ. ಡ್ರಾಫ್ಟ್ ಹೇಗೂ ಯೋಗಿ ಬಳಿ ಸಿದ್ಧವಿದೆಯಲ್ಲ? ಸುಗ್ರೀವಾಜ್ಞೆ ಎಂಬ ಜನವಿರೋಧಿ ಅಸ್ತ್ರವಿದೆಯಲ್ಲ? ಇಲ್ಲೂ ಜಾರಿಗೆ ಬರುವ ದಿನ ದೂರವಿಲ್ಲ!
ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಿಯಾ (29) ಮತ್ತು ತೌಫಿಕ್ (32) ಕಳೆದ ತಿಂಗಳಷ್ಟೇ ಪ್ರಿಯಾ ಪೋಷಕರು-ಸಂಬಂಧಿಕರ ಮತ್ತು ಪರಿಚಯಸ್ಥರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಸ್ವಲ್ಪ ದಿನಗಳ ನಂತರ ರಾಹುಲ್ ವರ್ಮಾ ಅಲ್ಲ ತೌಫಿಕ್ ಎಂದು ಗೊತ್ತಾದ ನಂತರ ಆರೆಸ್ಸೆಸ್ ಮಾಜಿ ಸದಸ್ಯ ಮತ್ತು ಬಿಜೆಪಿಯ ಹಾಲಿ ನಾಯಕನೊಬ್ಬ ಪ್ರಿಯಾ ತಂದೆ ಸರ್ವೇಶ್ ಶುಕ್ಲಾರನ್ನು ಭೇಟಿಯಾಗಿ, ಇದು ಲವ್ ಜಿಹಾದ್ ಕೇಸು, ಕೂಡಲೇ ದೂರು ದಾಖಲಿಸಿ ಎಂದು ಗಂಟುಬಿದ್ದ. ಆಗ ವಿವಾಹ ಸಂಬಂಧದ ಸಂಪ್ರದಾಯ ಆಚರಣೆಗೆಂದು ತವರಿನಲ್ಲೇ ಇದ್ದ ಪ್ರಿಯಾ ದೂರು ಕೊಡದಂತೆ ಪೋಷಕರಿಗೆ ಕಾಡಿ ಬೇಡಿದಳು.
‘ಆತ ತನಗೆ ಮೋಸ ಮಾಡಿಲ್ಲ. ನೀವು ಮುಸ್ಲಿಂನನ್ನು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ನಾನೇ ಆತನ ಹೆಸರು ಮರೆಮಾಚಿದೆ. ಆತ ಎಂದೂ ಮತಾಂತರಕ್ಕೆ ಒತ್ತಾಯಿಸಿಲ್ಲ’ ಎಂದು ವಿನಂತಿಸಿದರೂ ಕೇಳಲಿಲ್ಲ. ದೂರು ದಾಖಲಿಸಿಯೇ ಬಿಟ್ಟರು. ಪೊಲೀಸರು ಮನೆಗೆ ಬಂದು ತೌಫಿಕ್ ವಿರುದ್ಧ ಪ್ರಿಯಾ ಹೇಳಿಕೆ ಪಡೆದು ಹೋಗಿ ತೌಫಿಕನನ್ನು ಅರೆಸ್ಟ್ ಮಾಡಿದ್ದಾರೆ.
ಈಗ ಮತ್ತೊಂದು ಮದುವೆಗೆ ಪ್ರಿಯಾ ಮೇಲೆ ಒತ್ತಡ ಹಾಕಲಾಗುತ್ತಿದೆ. ಆದರೆ ಪ್ರಿಯಾ ಒಪ್ಪುತ್ತಿಲ್ಲ. ‘ದಿ ಪ್ರಿಂಟ್’ ಪ್ರತಿನಿಧಿ ಅವರ ಮನೆಗೆ ಹೋದಾಗ, ಪ್ರಿಯಾಗೆ ಮುಕ್ತವಾಗಿ ಮಾತಾಡುವ ಅವಕಾಶವನ್ನು ಪೋಷಕರು ನೀಡಲಿಲ್ಲ. ಪಕ್ಕಕ್ಕೆ ಕರೆದು ಮೆಲ್ಲಗೆ ಪ್ರತಿನಿಧಿಯ ನಂಬರ್ ಪಡೆದ ಪ್ರಿಯಾ ನಂತರ ಫೋನಿನಲ್ಲಿ ಎಲ್ಲವನ್ನೂ ವಿವರಿಸಿ, ‘ನನ್ನ ಸಲುವಾಗಿ ತೌಫಿಕ್ ಹಿಂದೂ ಧರ್ಮಕ್ಕೆ ಮತಾಂತರವಾಗಲು ಸಿದ್ಧನಾಗಿದ್ದ. ಅಂತಹ ಹುಡುಗ ಏಕೆ ನನ್ನನ್ನು ಮತಾಂತರಕ್ಕೆ ಒತ್ತಾಯಿಸುತ್ತಾನೆ? ನನ್ನ ಮಾತನ್ನು ಇಲ್ಲಿ ಕೇಳುವವರೇ ಇಲ್ಲ’ ಎಂದು ತನ್ನ ಸಂಕಟ ಹೇಳಿಕೊಂಡಿದ್ದಾಳೆ.
ಅಂದಂತೆ, ದೂರಿನಲ್ಲಿ ಎಲ್ಲೂ ಮತಾಂತರದ ಉದ್ದೇಶದ ಪ್ರಸ್ತಾಪವಿಲ್ಲ! ಇದನ್ನೂ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ‘ಆದರೆ, ಯುವತಿಯೇ ಹೇಳಿಕೆ ಕೊಟ್ಟ ಮೇಲೆ ನಾವೇನು ಮಾಡುವುದು?’ ಎಂದಿದ್ದಾರೆ.
ಆದರೆ, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ದಾಖಲಿಸದೇ ಮನೆಯಲ್ಲಿಯೇ ಹೇಳಿಕೆ ಪಡೆದ ಪೊಲೀಸರು, ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ಪಡೆದವರಂತೆ ಎಫ್‌ಐಆರ್ ತಯಾರಿಸಿದ್ದಾರೆ. ಬೇರೊಬ್ಬರ ಹೆಸರಲ್ಲಿ ಮದುವೆಯಾಗಿರುವುದು, ಮೋಸ, ದುರುದ್ದೇಶದಿಂದ ಮದುವೆ, ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ ಈ ಸೆಕ್ಷನ್‌ಗಳ ಜೊತೆಗೆ, 2020 ರ ಮತಾಂತರ ವಿರೋಧಿ ಧಾರ್ಮಿಕ ಕಾಯ್ದೆಯ 3 ಮತ್ತು 6ನೆ ಸೆಕ್ಷನ್‌ಗಳಡಿ ತೌಫಿಕ್‌ನನ್ನು ಬಂಧಿಸಲಾಗಿದೆ.
‘ಮತಾಂತರದ ಉದ್ದೇಶಕ್ಕೆ ಮದುವೆ’ಯನ್ನು ಸೆಕ್ಷನ್ 3 ನಿಷೇಧಿಸಿದರೆ, ಸೆಕ್ಷನ್ 6, ‘ಕಾನೂನುಬಾಹಿರ ಮತಾಂತರಕ್ಕೆಂದೇ ನಡೆದ ಮದುವೆ’ಯನ್ನು ನಿಷೇಧಿಸುತ್ತದೆ. ಗಮನಿಸಬೇಕಾದ ಅಂಶ ದೂರಿನಲ್ಲೆಲ್ಲೂ ಮತಾಂತರದ ವಿಷಯವೇ ಪ್ರಸ್ತಾಪವಿಲ್ಲ. ಇದು ಏನನ್ನು ಸೂಚಿಸುತ್ತದೆ? ಸ್ಥಳೀಯ ಬಿಜೆಪಿ ನಾಯಕರ ಅಣತಿಯಂತೆ ಪೊಲೀಸರು ಈ ಕಾಯ್ದೆಯನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು ಎಂಬುದನ್ನಲ್ಲವೆ?
ಪ್ರಿಯಾ ಮತ್ತು ತೌಫಿಕ್ ಏನೂ ಹದಿಹರೆಯ ಉಕ್ಕಿ ಉತ್ಸಾಹದಲ್ಲಿ ಪ್ರೀತಿಸಿದವರಲ್ಲ. ಈಗ 29 ವರ್ಷವಾಗಿರುವ ಪ್ರಿಯಾ ಮತ್ತು 32 ವರ್ಷದ ತೌಫಿಕ್ ಎರಡು ವರ್ಷದ ಹಿಂದಿನಿಂದಲೇ ಪ್ರೀತಿಸುತ್ತಿದ್ದಾರೆ. ಪ್ರಿಯಾ ಸೋಷಿಯಾಲಜಿಯಲ್ಲಿ ಡಬಲ್ ಎಂಎ ಪಡೆದಿದ್ದು, ಐಪಿಎಸ್ ಆಗುವ ಉದ್ದೇಶ ಹೊಂದಿದ್ದಾಳೆ.
‘ತೌಫಿಕ್ ಕೂಡ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸಿದ್ದು, ಇಬ್ಬರೂ ಸೇರಿ ಅಭ್ಯಾಸ ಮಾಡುವ ಗುರಿ ಹೊಂದಿದ್ದೆವು. ಆತ ನನಗೆ ಹಲವಾರು ಅಮೂಲ್ಯ ಪುಸ್ತಕಗಳನ್ನು ತಂದು ಕೊಟ್ಟಿದ್ದಾನೆ. ಆತನ ಧರ್ಮದ ವಿಷಯದಲ್ಲಿ ಹೇಳಿದ ಸುಳ್ಳು ಅವನನ್ನು ಜೈಲಿಗೆ ತಳ್ಳಲಿದೆ ಎಂಬುದನ್ನು ನಾವಿಬ್ಬರೂ ಊಹಿಸಿರಲೇ ಇಲ್ಲ’ ಎಂದು ಫೋನಿನಲ್ಲಿ ಪ್ರಿಂಟ್ ಪ್ರತಿನಿಧಿ ಎದುರು ಪ್ರಿಯಾ ಹೇಳಿಕೊಂಡಿದ್ದಾಳೆ.
ಅಸಹಾಯಕ ಸ್ಥಿತಿಯಲ್ಲಿರುವ ಆಕೆ ಪ್ರಿಂಟ್ ಪ್ರತಿನಿಧಿಯ ನೆರವನ್ನು ಕೇಳಿದ್ದಾಳೆ. ‘ಒತ್ತಡದಲ್ಲಿ ನಾನು ನೀಡಿದ ಹೇಳಿಕೆ ಪರಿಗಣಿಸಬೇಡಿ ಎಂದು ಸತ್ಯ ಹೇಳಿದ ನಂತರವೂ ದೂರು ದಾಖಲಾಗಿದೆ. ಈಗ ನನ್ನ ಗಂಡನನ್ನು ನಾನು ಭೇಟಿ ಮಾಡಬೇಕು. ಪೊಲಿಸರು ಅದಕ್ಕೆ ಅವಕಾಶ ನೀಡಲಾರರು. ಕೋರ್ಟ್ ಮೊರೆ ಹೋದರೆ ನ್ಯಾಯ ಸಿಗಬಹುದೇ? ಎಂದು ಪ್ರಿಂಟ್ ಪ್ರತಿನಿಧಿ ಜೊತೆ ಚರ್ಚಿಸಿರುವ ಪ್ರಿಯ ಕೋರ್ಟ್ ಮೆಟ್ಟಿಲೇರುವ ಉದ್ದೇಶ ಹೊಂದಿದ್ದಾಳೆ.
ಆರೆಸ್ಸೆಸ್ ಮಾಜಿ ಸದಸ್ಯ ಮತ್ತು ಈಗ ಕಾನ್ಪುರ ಮತ್ತು ಬುಂದೇಲ್‌ಖಂಡ್ ವಿಭಾಗದ ಬಿಜೆಪಿ ಮುಖ್ಯಸ್ಥನಾಗಿರುವ ವಿನಯ್ ಮತ್ತು ಆತನ ಹಿಂಬಾಲಕರ ಚಿತಾವಣೆಯಿಂದ, ಮತಾಂತರ ವಿರೋಧಿ ಕಾಯ್ದೆ ಎಂಬ ಜೀವವಿರೋಧಿ ‘ಸಿದ್ಧಾಂತ’ದಿಂದ ಉಜ್ವಲ ಕನಸುಗಳನ್ನು ಹೊತ್ತ ದಂಪತಿ ಈಗ ಬಂಧನದಲ್ಲಿದ್ದಾರೆ. ಒಂದು ಪೊಲೀಸ್ ಬಂಧನ, ಇನ್ನೊಂದು ಕೌಟುಂಬಿಕ ಬಂಧನ. ಎರಡರ ಹಿಂದೆಯೂ ಆಳುವ ಪಕ್ಷ ಉತ್ತರಪ್ರದೇಶದಲ್ಲಿ ನಿರ್ಮಿಸಿರುವ ಕಲುಷಿತ ಸಾಮಾಜಿಕ ವಾತಾವರಣವೇ ಕೆಲಸ ಮಾಡುತ್ತಿದೆ.
- ಮಲ್ಲನಗೌಡರ್ ಪಿ.ಕೆ
- ಆಧಾರ: ದಿ ಪ್ರಿಂಟ್
ಇದನ್ನೂ ಓದಿ: ನಮ್ಮ ಪ್ರೀತಿಯ ಮುಂದೆ ನಿಮ್ಮ ದ್ವೇಷದ ಸೋಲು ನಿಶ್ಚಯ- ಲವ್ ಜಿಹಾದ್ ವಿರೋಧಿಸಿ, ಪ್ರೀತಿಗಾಗಿ ಪ್ರತಿಭಟನೆ!


