ನೀವು ಮೋದಿ ಸರ್ಕಾರ ಪಾಸು ಮಾಡಿರುವ ಮೂರು ಕೃಷಿ ಮಸೂದೆಗಳನ್ನು ಓದಿದರೆ ಅರ್ಥವಾಗುತ್ತದೆ: ಈ ಕಾಯ್ದೆಗಳು ಕೇವಲ ರೈತರಿಗಷ್ಟೇ ಮಾರಕವಲ್ಲ, ಬದಲಿಗೆ ನಮ್ಮ ನಿಮ್ಮಂತಹ ಸಾಮಾನ್ಯ ಜನರ ಬದುಕಿಗೂ ಕೊಳ್ಳಿ ಇಡಲಿವೆ ಎಂಬ ಸತ್ಯ. ಮಾರುಕಟ್ಟೆಗಳು ಬೃಹತ್ ಕಾರ್ಪೋರೇಟ್ ತಿಮಿಂಗಲುಗಳ ವಶವಾಗಲಿದ್ದು, ಈ ಮಾರುಕಟ್ಟೆಗಳು ಅವರ ಬಿಗಿ ಹಿಡಿತಕ್ಕೆ ಒಳಗಾಗಲಿವೆ. ಏಕೆಂದರೆ ಈ ಕಾಯ್ದೆಗಳ ಪರಿಣಾಮವಾಗಿ ಕಾರ್ಪೊರೇಟ್‌ಗಳು ಆಹಾರ ಪದಾರ್ಥಗಳನ್ನು ಅನಿಯಮಿತವಾಗಿ ಸಂಗ್ರಹಿಸಬಹುದು, ಅದೂ ಕಾನೂನಾತ್ಮಕ ಬೆಂಬಲದಿಂದ ಸಂಗ್ರಹಿಸಬಹುದು. ಈ ದೊಡ್ಡ ಕಾರ್ಪೊರೇಟ್‌ಗಳ ಕುತ್ತಿಗೆ ಹಿಸುಕುವ ಬೆಲೆ ಸ್ಪರ್ಧೆಯಿಂದಾಗಿ ರೈತರು ಕೃಷಿಯನ್ನೇ ತೊರೆಯಬಹುದು.
ಈ ಕಾಯ್ದೆಯ ಉಪ-ವಿಭಾಗ 1-ಎ ನ ಕ್ಲಾಜ್ ‘ಬಿ’ ಅನ್ನು ಒಮ್ಮೆ ಓದಿ ನೋಡಿ. ಸಂಗ್ರಹಣಾ ಮಿತಿಯನ್ನು ನಿಯಂತ್ರಿಸುವ ಆದೇಶವು ಯಾವುದೇ ಕೃಷಿ ಉತ್ಪನ್ನಗಳ ನಿರ್ವಹಣೆ ಅಥವಾ ಮೌಲ್ಯ ವರ್ಧನೆಯಲ್ಲಿ ಭಾಗಿಯಾಗುವವರಿಗೆ ಅನ್ವಯಿಸುವುದಿಲ್ಲ. ಅಂತಹ ವ್ಯಕ್ತಿಯ ಸಂಗ್ರಹಣಾ (ಸ್ಟಾಕ್) ಮಿತಿಯು ಸಂಸ್ಕರಿಸಿದ ಸಾಮರ್ಥ್ಯದ ಒಟ್ಟಾರೆ ಸೀಲಿಂಗ್ ಅನ್ನು ಮೀರದಿದ್ದರೆ ಅಥವಾ ರಫ್ತುದಾರನಾಗಿದ್ದಲ್ಲಿ ರಫ್ತು ಬೇಡಿಕೆಯನ್ನು ಮೀರದಿದ್ದಲ್ಲಿ ಆತ ಸುರಕ್ಷಿತ.
ಮೌಲ್ಯ ಸರಪಳಿಯಲ್ಲಿ (ವ್ಯಾಲ್ಯೂ ಚೈನ್) ಭಾಗಿಯಾಗುವವರನ್ನು ಕಾಯ್ದೆಯಲ್ಲಿ ಹೀಗೆ ವ್ಯಾಖ್ಯಾನಿಸಲಾಗಿದೆ: ಯಾವುದೇ ಕೃಷಿ ಉತ್ಪನ್ನಕ್ಕೆ ಸಂಬಂಧಿಸಿದಂತೆ “ಮೌಲ್ಯ ಸರಪಳಿ ಭಾಗಿದಾರರರು” ಎಂಬ ಅಭಿವ್ಯಕ್ತಿ, ಯಾವುದೇ ಉತ್ಪಾದನೆಯಿಂದ ಭಾಗವಹಿಸುವವರ ಗುಂಪನ್ನು ಅರ್ಥೈಸುತ್ತದೆ ಮತ್ತು ಅವರನ್ನು ಒಳಗೊಂಡಿದೆ. ಅದು ಕೃಷಿ ಕ್ಷೇತ್ರದಲ್ಲಿ ಕೃಷಿ ಉತ್ಪನ್ನಗಳ ಅಂತಿಮ ಬಳಕೆಯವರೆಗೂ ವ್ಯಾಪಿಸಿದೆ. ಸಂಸ್ಕರಣೆ, ಪ್ಯಾಕೇಜಿಂಗ್, ಸಂಗ್ರಹಣೆ, ಸಾರಿಗೆ ಮತ್ತು ವಿತರಣೆಯನ್ನು ಒಳಗೊಂಡಿರುತ್ತದೆ, ಅಲ್ಲಿ ಪ್ರತಿ ಹಂತದಲ್ಲೂ ಉತ್ಪನ್ನಕ್ಕೆ ಮೌಲ್ಯವನ್ನು ಸೇರಿಸಲಾಗುತ್ತದೆ “.
ಇತರ ರೈತರಿಗೆ ಕೆಲವು ನಿರ್ಬಂಧ ಹೇರಲಾಗಿದೆ. ಯಾಕೀ ತಾರತಮ್ಯ? ರೈತರು ಮತ್ತು ಗ್ರಾಹಕರು ಈ ಕಾರ್ಪೊರೇಟ್‌ಗಳ ಮರ್ಜಿಗೆ ಬಿದ್ದು, ಬಿಗ್ ಕಾರ್ಪೊರೇಟ್‌ಗಳಿಗೆ ಕೃಷಿಯ ಮೇಲೆ ನಿಯಂತ್ರಣ ಸಾಧಿಸಲು ಈ ಕಾಯ್ದೆ ಅವಕಾಶ ನೀಡುತ್ತದೆ.
‘ಕ್ಲಾಜ್ ‘ಬಿ’ ಅನ್ವಯ, ಸಂಗ್ರಹಣಾ ಮಿತಿಯನ್ನು ಹೇರುವ ಯಾವುದೇ ಕ್ರಮವು ಬೆಲೆ ಏರಿಕೆಯನ್ನು ಆಧರಿಸುತ್ತದೆ. ಯಾವುದೇ ಕೃಷಿ ಉತ್ಪನ್ನಗಳ ಸಂಗ್ರಹಣೆಯ ಮಿತಿ ಮೇಲೆ ನಿರ್ಬಂಧ ಹೇರುವುದು ಈ ಕೆಳಗಿನ ಅಂಶಗಳನ್ನು ಅವಲಂಭಿಸಿದೆ:
1. ತೋಟಗಾರಿಕಾ ಉತ್ಪನ್ನಗಳ ಚಿಲ್ಲರೆ ಮಾರಾಟ ದರದಲ್ಲಿ ಶೇ. 100ರಷ್ಟು ಏರಿಕೆಯಾದ ಸಂದರ್ಭದಲ್ಲಿ. ಅಥವಾ
2. ನಾಶವಾಗದ ಕೃಷಿ ಆಹಾರ ಪದಾರ್ಥಗಳ ಚಿಲ್ಲರೆ ಬೆಲೆಯಲ್ಲಿ ಶೇ. 50ರಷ್ಟು ಏರಿಕೆಯಾದ ಸಂದರ್ಭದಲ್ಲಿ.
ಈ ಎರಡು ಸಂದರ್ಭಗಳಲ್ಲಿ. ಹನ್ನೆರಡು ತಿಂಗಳುಗಳ ಹಿಂದಿನ ಚಾಲ್ತಿಯಲ್ಲಿರುವ ಬೆಲೆ ಅಥವಾ ಕಳೆದ ಐದು ವರ್ಷಗಳ ಸರಾಸರಿ ಚಿಲ್ಲರೆ ಬೆಲೆ, ಯಾವುದು ಕಡಿಮೆ ಇರುತ್ತದೋ ಅದು ಲಾಗೂ ಆಗುತ್ತದೆ.
1955ರ ಅಗತ್ಯ ವಸ್ತುಗಳ ಕಾಯ್ದೆಗೆ ತಂದ ತಿದ್ದುಪಡಿಯ ಪ್ರಕಾರ,
ಎ.) ಅಸಾಧಾರಣ ಸಂದರ್ಭಗಳಲ್ಲಿ (ಯುದ್ಧ, ಕ್ಷಾಮ, ಅಸಾಧಾರಣ ಬೆಲೆ ಏರಿಕೆ ಮತ್ತು ನೈಸರ್ಗಿಕ ವೈಪರೀತ್ಯ) ಮಾತ್ರ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳು, ಆಲೂಗಡ್ಡೆ, ಈರುಳ್ಳಿ, ಖಾದ್ಯ ಎಣ್ಣೆಕಾಳುಗಳು ಮತ್ತು ತೈಲಗಳು ಸೇರಿದಂತೆ ಅಂತಹ ಆಹಾರ ಪದಾರ್ಥಗಳ ಪೂರೈಕೆಯನ್ನು ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ನಿರ್ದಿಷ್ಟಪಡಿಸಿ, ಅಧಿಸೂಚನೆಯ ಮೂಲಕ ಮಾತ್ರ ನಿಯಂತ್ರಿಸಬಹುದು.
ವಿವರಣೆ: ಕೃಷಿಗೆ ಸಂಬಂಧಿಸಿದಂತೆ ‘ಮೌಲ್ಯ ಸರಪಳಿಯ ಭಾಗಿದಾರರು’ : ಜಮೀನಿನಲ್ಲಿ ಉತ್ಪನ್ನವಾಗುವುದರಿಂದ ಹಿಡಿದು ಕೊನೆಯ ಗ್ರಾಹಕರು ಇದರ ವ್ಯಾಪ್ತಿಗೆ ಬರುತ್ತಾರೆ. ಇದರಲ್ಲಿ ಸಂಸ್ಕರಣೆ, ಪ್ಯಾಕೇಜಿಂಗ್, ಸಂಗ್ರಹಣೆ, ಸಾಗಾಣಿಕೆ ಮತ್ತು ವಿತರಣೆಯ ಹಂತಗಳಿವೆ. ಪ್ರತಿ ಹಂತದಲ್ಲೂ ಮೌಲ್ಯ ವರ್ಧನೆ ಆಗುತ್ತದೆ.
ಇದರ ಒಟ್ಟು ತಾತ್ಪರ್ಯವೆಂದರೆ, ಯಾವುದನ್ನೂ ಕುರುಡಾಗಿ ನಂಬಬೇಡಿ, ನಿಮ್ಮ ಶಿಕ್ಷಣ ಮತ್ತು ಬುದ್ಧಿಯನ್ನು ಬಳಸಿ ಒಂದು ಮಾಹಿತಿಯುಕ್ತ ಅಭಿಪ್ರಾಯವನ್ನು ಸೃಷ್ಟಿಸಿ.
ಗ್ರಾಹಕರಾಗಿ ನಾವು ಪ್ರತಿಭಟಿಸುತ್ತಿರುವ ರೈತರಿಗೆ ಕೃತಜ್ಞರಾಗಿರಬೇಕು ಮತ್ತು ತುಂಬು ಹೃದಯದಿಂದ ಅವರ ಹೋರಾಟವನ್ನು ಬೆಂಬಲಿಸಬೇಕು.
ಈ ಮೂರು ಕಾಯ್ದೆಗಳು ಕೇವಲ ರೈತರಿಗಷ್ಟೇ ಅಲ್ಲ, ನಮ್ಮ-ನಿಮ್ಮಂತಹ ಗ್ರಾಹಕರಿಗೂ ಮಾರಕವಾಗಿವೆ. ಏಕೆಂದರೆ, ‘ಮೌಲ್ಯ ಸರಪಳಿ ಭಾಗಿದಾರರು” ಎಂದು ಕರೆಯಲ್ಪಡುವ ಈ ದೊಡ್ಡ ಕಂಪನಿಗಳು ಯಾವುದೇ ಮಿತಿಗಳಿಲ್ಲದೆ ಸಂಗ್ರಹಿಸಬಹುದು. ಆದರೆ ಮಿತಿಗಳು ರೈತರಿಗೆ ಮಾತ್ರ ಅನ್ವಯಿಸುತ್ತವೆ. ಇದು ಹೊಸ ತಿದುಪಡಿಯ ಅಂಶ.
ಅಂತಿಮವಾಗಿ, ಈ ದೊಡ್ಡ ಕಾರ್ಪೋರೇಟ್‌ಗಳು ಬೃಹತ್ತಾಗಿ ಸಂಗ್ರಹಿಸಿಡುತ್ತವೆ ಮತ್ತು ರೈತರಿಗೆ ಕಡಿಮೆ ಬೆಲೆಯನ್ನು ನೀಡುವ ಮೂಲಕ ಪೂರೈಕೆಯನ್ನು ನಿಯಂತ್ರಿಸುತ್ತವೆ. ಇನ್ನೊಂದು ಕಡೆ ಅನಿಯಮಿತ ಸಂಗ್ರಹಣೆ ಮೂಲಕ ಕೊರತೆಯನ್ನು ಉಂಟು ಮಾಡಿ ಗ್ರಾಹಕರ ಬೇಡಿಕೆಯ ಮೇಲೆ ನಿಯಂತ್ರಣ ಹೊಂದುತ್ತವೆ.
- ಆದರ್ಶ್ ಆರ್ ಅಯ್ಯರ್

(ಆದರ್ಶ್ ಆರ್ ಅಯ್ಯರ್ ರವರು ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷರು)
ಇದನ್ನೂ ಓದಿ: ಸರ್ಕಾರದ ಮಾತುಕತೆ ನಾಟಕ: ರೈತರಿಂದ ಹೊಸ ‘ಅಸಹಕಾರ’ ಚಳವಳಿ


