ದೆಹಲಿ ಗಡಿಯಲ್ಲಿ ರೈತರ ಪ್ರತಿಭಟನೆ ಜೊತೆಗೆ ನಿಮ್ಮನ್ನು ಮತ್ತೆ ಮತ್ತೆ ಆಕರ್ಷಿಸುವುದು ಪೋಸ್ಟರ್‌ಗಳಾಗಿದೆ. ಪ್ರತಿಭಟನಾ ಸ್ಥಳದ ಉದ್ದಕ್ಕೂ ರೈತರು ತಂಗಿರುವ ಟೆಂಟ್, ಟ್ರ್ಯಾಲಿಗಳ ಮೇಲೆ ಅಂಟಿಸಲಾಗಿರುವ ಈ ಪೋಸ್ಟರ್‌ಗಳು ಕ್ಷಣ ಮಾತ್ರದಲ್ಲಿ ಗಮನ ಸೆಳೆಯುತ್ತವೆ. ಇಲ್ಲಿನ ಪ್ರತಿ ಪೋಸ್ಟರ್‌ಗಳೂ ಪ್ರತಿಭಟನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ.
ದೇಶದ ಐತಿಹಾಸಿಕ ಪ್ರತಿಭಟನೆಯಾಗಿರುವ ರೈತ ಹೋರಾಟ, ಬರೀ ರೈತರಿಗಷ್ಟೇ ಸೀಮಿತವಾಗಿಲ್ಲ ಎಂಬುದು ಪ್ರತಿಭಟನಾ ಸ್ಥಳದಲ್ಲಿ ಇರುವ ಪೋಸ್ಟರ್‍ಸ್‌ಗಳು ಹೇಳುತ್ತಿವೆ. ಸ್ವತಃ ಸ್ವಾತಂತ್ಯ್ರ ಹೋರಾಟಗಾರರೇ ಪ್ರತಿಭಟನೆಯಲ್ಲಿದ್ದಾರೆ ಎಂಬಂತಹ ಅನುಭವವ ಈ ಪೋಸ್ಟರ್‌ಗಳು ನಮಗೆ ನೀಡುತ್ತದೆ. ಯುವಜನತೆ ತಾವು ತಂಗಿರುವ ಡೇರೆಗಳ ಬಳಿ ಭಗತ್ ಸಿಂಗ್ ಚಿತ್ರಗಳನ್ನು, ಘೋಷಣೆಗಳನ್ನು ಹಾಕಿಕೊಂಡಿದ್ದಾರೆ. ಭಗತ್ ಸಿಂಗ್ ಮಾತುಗಳನ್ನು ತಮ್ಮದೇ ಧಾಟಿಯಲ್ಲಿ ರೈತ ಹೋರಾಟಕ್ಕೆ ಹೋಲಿಸಿ, ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪ್ರತಿಭಟನಾಕಾರರಲ್ಲಿ ಹುಮ್ಮಸ್ಸು ತುಂಬುವ ಕೆಲಸ ಮಾಡುತ್ತಿದ್ದಾರೆ. ರೈತರು ಭಯೋತ್ಪಾಕದಕರಲ್ಲ, ರೈತರಿಲ್ಲದಿದ್ದರೇ ಊಟವಿಲ್ಲ ಎಂಬಂತಹ ಭಿತ್ತಿಪತ್ರಗಳನ್ನು ಇಲ್ಲಿ ಕಾಣಸಿಗುತ್ತದೆ.
ಇದನ್ನೂ ಓದಿ: ’ರೈತ ಹೋರಾಟಕ್ಕೆ ಹೆಗಲು ಕೊಟ್ಟು ನಿಂತಿದೆ ಖಾಲ್ಸಾ ಏಡ್ ಸೇವಾ ಸಂಸ್ಥೆ’
ನಾವು ಯುದ್ಧದಲ್ಲಿ ಗುಂಡು ಬೀಳುವುದೆಂದು ಹಿಂದೆ ಸರಿಯುವ ರಕ್ತದವರಲ್ಲ. ನಮ್ಮಲ್ಲಿ ಹರಿಯುತ್ತಿರುವ ರಕ್ತ ಸ್ವಾಭಿಮಾನ ಮತ್ತು ಧೈರ್ಯದ್ದು. ಅನ್ಯಾಯವನ್ನು ಎದುರಿಸಲು ಯಾವ ಕ್ಷಣದಲ್ಲೂ, ಎಲ್ಲಿಯೂ ನಾವು ಸಿದ್ಧ. ಅನ್ಯಾಯ ಯಾರು ಮಾಡಿದರೂ ಅನ್ಯಾಯವೇ, ನ್ಯಾಯ ಸಿಗುವವರೆಗೂ ನಾವು ಹೋರಾಟ ನಡೆಸುತ್ತೇವೆ ಎಂದು ಪೋಸ್ಟರ್ ಹಿಡಿದ ಪ್ರತಿಭಟನಾನಿರತ ಯುವಕ ತಿಳಿಸುತ್ತಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿರುವ ಹಲವು ರೈತ ಸಂಘಟನೆಗಳು, ಸಂವಿಧಾನ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿತ್ರಗಳನ್ನು ಪ್ರದರ್ಶಿಸುತ್ತಾ ತಮಗೆ ಸಂವಿಧಾನ ನೀಡಿರುವ ಹಕ್ಕಿನ ಮೂಲಕ ಹೋರಾಟ ನಡೆಸುತ್ತಿದ್ದೇವೆ ಎಂದು ಘೋಷಣೆ ಹಾಕುತ್ತಿದ್ದಾರೆ. ತಮ್ಮ ಬ್ಯಾನರ್‌ಗಳಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮತ್ತು ಸಂವಿಧಾನದ ಪೀಠಿಕೆಗಳ ಚಿತ್ರಗಳನ್ನು ಸೇರಿಸಿರುವುದು ಗಮನಾರ್ಹವಾಗಿದೆ.
ಇದನ್ನೂ ಓದಿ: ರೈತ ಹೋರಾಟ ಅಪ್‌ಡೇಟ್ಸ್: 7ನೇ ಸುತ್ತಿನ ಮಾತುಕತೆ ವಿಫಲ – ಹೋರಾಟದ ಮುಂದೇನು ದಾರಿ?
ರೈತರು ದೆಹಲಿ ಚಲೋ ಹೋರಾಟ ಆರಂಭಿಸಿದ ದಿನದಿಂದಲೂ ಹೇಳುತ್ತಿರುವುದು ನಮ್ಮದು ಶಾಂತಿಯುತ ಪ್ರತಿಭಟನೆ ಎಂದು. ಇದಕ್ಕೆ ಪೂರಕವೆಂಬಂತೆ ಶಾಂತಿದೂತ ಬುದ್ಧನ ಚಿತ್ರಗಳು ಪ್ರತಿಭಟನಾ ಸ್ಥಳದಲ್ಲಿ ಕಾಣಸಿಗುತ್ತವೆ. ದೆಹಲಿಯ ಪ್ರಮುಖ ಗಡಿಗಳಾದ ಸಿಂಘು, ಟಕ್ರಿ ಮತ್ತು ಗಾಜಿಪುರ್‌ಗಳಲ್ಲೂ ಇದೆ ರೀತಿಯ ಪೋಸ್ಟರ್‌ಗಳಿವೆ.
ಪ್ರತಿಭಟನಾ ನಿರತ ರೈತ ಸಂಘಟನೆಗಳು ತಮ್ಮ ಸಂಘಟನೆಯ ಹೆಸರುಗಳ ಜೊತೆಗೆ ಬುದ್ಧ, ಅಂಬೇಡ್ಕರ್, ಏಸುಕ್ರಿಸ್ತ ಮತ್ತು ಭಗತ್ ಸಿಂಗ್, ಬುಡಕಟ್ಟು ನಾಯಕ ಬಿರ್ಸಾ ಮುಂಡಾ ನಾಯಕರ ಚಿತ್ರಗಳ ಪೋಸ್ಟರ್‌ಗಳನ್ನು ಹಿಡಿದು ನಿಂತಿದ್ದಾರೆ. ಇದಲ್ಲದೇ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಈ ಹಿಂದೆ ಹಲವು ಕೃಷಿ ಕಾನೂನುಗಳನ್ನು ವಿರೋಧಿಸಿ, ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಿ ಹುತಾತ್ಮರಾಗಿರುವ ರೈತ ನಾಯಕರ ಚಿತ್ರಗಳು ಇವರ ಪೋಸ್ಟರ್‌ಗಳಲ್ಲಿದೆ. ಇವರುಗಳೆ ನಮ್ಮ ಪ್ರತಿಭಟನೆಗೆ ಸ್ಫೂರ್ತಿ ಎನ್ನುತ್ತಾರೆ ಇಲ್ಲಿನ ಪ್ರತಿಭಟನಾಕಾರರು.

ಇದನ್ನೂ ಓದಿ: ರೈತ ಹೋರಾಟ – ಒಕ್ಕೂಟ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡಿದ ಸೋನಿಯ ಗಾಂಧಿ
ಇನ್ನೂ ವಿಶೇಷವೇನೆಂದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ಧ ಘೋಷಣೆಗಳಿರುವ ಹಲವು ಪೋಸ್ಟರ್‌ಗಳನ್ನು ಇಲ್ಲಿ ಕಾಣಬಹುದಾಗಿದೆ.

“ನಿಮ್ಮ ಬೇಜವಾಬ್ದಾರಿ ಕಾರಣದಿಂದ ದೇಶದ ರೈತರು ಬೀದಿಗೆ ಬಿದ್ದಿದ್ದಾರೆ. ಮೊದಲು ನಿಮ್ಮ ಕಪ್ಪು ಕಾನೂನುಗಳನ್ನು ವಾಪಸ್ ಪಡೆಯಿರಿ”, “ದೇಶದ ರೈತರ ಆರ್ಥಿಕ ಸ್ಥಿತಿ ಕೆಳಗಿಳಿಯುತ್ತಿದೆ. ಆದರೆ ಅದಾನಿ, ಅಂಬಾನಿಯವರ ಆರ್ಥಿಕ ಪರಿಸ್ಥಿತಿ ಎತ್ತರಕ್ಕೆ ಏರುತ್ತಿದ್ದೆ, ಇದಕ್ಕೆಲ್ಲಾ ಕಾರಣ ಮೋದಿ ಸರ್ಕಾರ” ಎಂಬ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳಿರುವ ಭಿತ್ತಿಪತ್ರಗಳು ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಸಾಮಾನ್ಯವಾಗಿ ಕಾಣಿಸುತ್ತಿವೆ.
ಇದನ್ನೂ ಓದಿ: ಪಂಜಾಬ್: ಬಿಜೆಪಿ ಮುಖಂಡನ ಮನೆಮುಂದೆ ಸಗಣಿ ಸುರಿದ ರೈತ ಹೋರಾಟಗಾರರು!


