ವಾಷಿಂಗ್ಟನ್‌ನ ಅಮೆರಿಕ ಸಂಸತ್ (ಕ್ಯಾಪಿಟಲ್) ಮೇಲೆ ಡೊನಾಲ್ಡ್ ಟ್ರಂಪ್ ಬೆಂಬಲಿಗರು ಅನಿರೀಕ್ಷಿತ ದಾಳಿ ನಡೆಸಿ ಗಲಭೆ ಉಂಟು ಮಾಡಿದ ಬೆನ್ನಲ್ಲೆ ಫೇಸ್‌ಬುಕ್, ಇನ್ಸ್ಟಾಗ್ರಾಮ್ ಮತ್ತು ಟ್ವಿಟರ್ ಟ್ರಂಪ್ ಅವರ ಖಾತೆಗಳನ್ನು ಸ್ಥಗಿತಗೊಳಿಸಿವೆ.
ನವೆಂಬರ್ 03 ರಂದು ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರನ್ನು ಪ್ರಾಮಾಣೀಕರಿಸುವ ಕಾರ್ಯಕ್ರಮ ಇಂದು ನಿಗಧಿಯಾಗಿತ್ತು. ಅದಕ್ಕಾಗಿ ಹಲವಾರು ಶಾಸಕರು ಸೇರಿದ್ದರು. ಈ ವೇಳೆ ಸಂಸತ್ ಹೊರಗಿದ್ದ ಟ್ರಂಪ್ ಬೆಂಬಲಿಗರು ಬಲವಂತವಾಗಿ ಬ್ಯಾರಿಕೇಡ್ ಮುರಿದು ಒಳ ಪ್ರವೇಶಿಸಿದ್ದಾರೆ. ಇದರಂದ ಗೊಂದಲ ಉಂಟಾಗಿದ್ದು ಪೊಲೀಸರು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟಿದ್ದಾನೆ.
ಈ ಹಿನ್ನೆಲೆಯಲ್ಲಿ ಟ್ರಂಪ್‌ರವರ ಮೂರು ಆಕ್ಷೇಪಾರ್ಹ ಟ್ವೀಟ್‌ಗಳನ್ನು ತೆಗೆದುಹಾಕಬೇಕೆಂದು ಟ್ವಿಟರ್ ಹೇಳಿದೆ. 12 ಗಂಟೆಗಳ ಒಳಗಾಗಿ ಟ್ವೀಟ್‌ಗಳನ್ನು ತೆಗೆದುಹಾಕದಿದ್ದರೆ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ. ಅಲ್ಲದೇ ಟ್ರಂಪ್ ಚುನಾವಣಾ ಫಲಿತಾಂಶಗಳನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಇದರಿಂದಾಗಿಯೇ ಸಂಸತ್‌ನಲ್ಲಿ ಗಲಭೆ ನಡೆದಿದೆ ಎನ್ನಲಾಗಿದೆ.
ಫೇಸ್‌ಬುಕ್‌ನ ಸಾಮುದಾಯಿಕ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿ 24 ಗಂಟೆಗಳ ಕಾಲ ಟ್ರಂಪ್ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ತಿಳಿಸಿದೆ.
ಚುನಾವಣಾ ಫಲಿತಾಂಶಗಳನ್ನು ತಿರುಚುವಂತೆ ಟ್ರಂಪ್ ಆದೇಶಿಸುತ್ತಿರುವ ವಿಡಿಯೋವೊಂದನ್ನು ಫೇಸ್‌ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಗೂಗಲ್ ತೆಗೆದುಹಾಕಿವೆ. ಇನ್ಸ್ಟಾಗ್ರಾಮ್ ಖಾತೆಯನ್ನು 24 ಗಂಟೆಗಳ ಕಾಲ ನಿಷ್ಕ್ರಿಯಗೊಳಿಸಲಾಗಿದೆ.
ಬುಧವಾರ ಸಂಸತ್ ಭವನದ ಗಲಭೆಯ ವೇಳೆ ಗುಂಡಿನ ದಾಳಿಯಲ್ಲಿ ಒಬ್ಬ ಮೃತಮಟ್ಟಿದ್ದು ಹಲವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಲ್ಲದೆ ಒಬ್ಬ ಮಹಿಳೆಯ ಭುಜಕ್ಕೆ ಗುಂಡು ತಗುಲಿದ್ದ ರಕ್ತಸಿಕ್ತ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಡೊನಾಲ್ಡ್ ಟ್ರಂಪ್ ವಿರುದ್ಧ 306-232ರಿಂದ ಅಂತರದಿಂದ ಜಯಗಳಿಸಿದ್ದಾರೆ. ಆದರೆ ಇದನ್ನು ಟ್ರಂಪ್ ಒಪ್ಪುತ್ತಿಲ್ಲ. ಹಾಗಾಗಿ ಟ್ರಂಪ್ ಬೆಂಬಲಿಗರು ಇಂದು ಸಂಸತ್ ಮೇಲೆ ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಅಮೆರಿಕ ಸಂಸತ್ ಮೇಲೆ ಟ್ರಂಪ್ ಬೆಂಬಲಿಗರ ದಾಳಿ: ಒಬ್ಬನ ಮರಣ, ಹಲವರಿಗೆ ಗಾಯ


