ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರ ವೈಯಕ್ತಿಕ ಖಾತೆಯನ್ನು (realDonaldTrump) ಟ್ವಿಟರ್ ಶಾಶ್ವತವಾಗಿ ಬ್ಯಾನ್ ಮಾಡಿದೆ. ಅಮೆರಿಕ ಕ್ಯಾಪಿಟಲ್ ಮೇಲಿನ ಮತ್ತೊಂದು ದಾಳಿಯನ್ನು ತಡೆಯಲು ಈ ಕ್ರಮ ಅನಿವಾರ್ಯವಾಗಿದೆ ಎಂದು ಟ್ವಿಟರ್ ಹೇಳಿದೆ.
ಇದರಿಂದ ಕೆರಳಿದ ಟ್ರಂಪ್ ‘ಟ್ವಿಟರ್ ನನ್ನ ಮಾತನಾಡುವ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಿದೆ’ ಎಂದು ತನ್ನ ಕಾರ್ಯಕ್ರಮಗಳ ಮತ್ತು ಚುನಾವಣಾ ಪ್ರಚಾರಕ್ಕಾಗಿ ಬಳಸುತ್ತಿದ್ದ ಟೀಮ್ ಟ್ರಂಪ್ ಖಾತೆಯಿಂದ ಟ್ವೀಟ್ ಮಾಡಿದ್ದಾರೆ. ಕೂಡಲೇ ಆ ಖಾತೆಯನ್ನು ಸಹ ಟ್ವಿಟರ್ ಅಮಾನತು ಮಾಡಿದೆ.
ನಾವು ಟ್ರಂಪ್ ಟ್ವೀಟ್‌ಗಳನ್ನು ಹತ್ತಿರದಿಂದ ಅಭ್ಯಾಸ ಮಾಡಿದ್ದೇವೆ. ಮುಂದಿನ ಹಿಂಸಾತ್ಮಕ ಅಪಾಯಗಳನ್ನು ತಡೆಯಲು ಅವರ ಖಾತೆಯನ್ನು ಶಾಶ್ವತವಾಗಿ ಬ್ಯಾನ್ಯ ಮಾಡುತ್ತಿದ್ದೇವೆ ಎಂದು ಟ್ವಿಟರ್ ತಿಳಿಸಿದೆ.
ಟ್ರಂಪ್ ಆಡಳಿತವಧಿಯಲ್ಲಿ ತನ್ನ ವೈಯಕ್ತಿಕ ಖಾತೆಯ ಮೂಲಕ ಆಧಾರವಿಲ್ಲದ ಆರೋಪಗಳು, ಸುಳ್ಳು ಘೋಷಣೆಗಳು, ತಪ್ಪು ಮಾಹಿತಿಗಳನ್ನು ಹರಡಿದ್ದಾರೆ ಎಂದು ಟ್ವಿಟರ್ ಆರೋಪಿಸಿದೆ.
ಟ್ರಂಪ್ ಅಧಿಕಾರವಧಿ ಮುಗಿಯುತ್ತಿದ್ದು, ಬುಧವಾರ ನಡೆದ ಯುಸ್ ಸಂಸತ್ ಮೇಲಿನ ದಾಳಿಗೆ ಟ್ರಂಪ್ ಅನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ. ಇದೇ ಸಮಯಕ್ಕೆ ಕಾಯುತ್ತಿದ್ದ ಟ್ವಿಟರ್ ಟ್ರಂಪ್ ಖಾತೆಗಳನ್ನು ಸ್ಥಗಿತಗೊಳಿಸುವ ಮೂಲಕ ಎಚ್ಚರಿಕೆ ರವಾನಿಸಿದೆ.
ಬಹುದೊಡ್ಡ ಪ್ರಜಾಪ್ರಭುತ್ವ ಎಂದು ಹೇಳಿಕೊಳ್ಳುವ ದೇಶದ ಅಧ್ಯಕ್ಷರಾಗಿ ಟ್ರಂಪ್ ನಡೆದುಕೊಂಡಿದ್ದು, ಗಲಭೆಗೆ ಪ್ರಚೋದನೆ ನೀಡಿದ್ದು, ಅದರಿಂದಾಗಿ ಅವರ ಟ್ವಿಟರ್ ಖಾತೆ ಖಾಯಂ ಬ್ಯಾನ್ ಆಗಿದ್ದು ಎಲ್ಲವೂ ಅವರಿಗೆ ಮುಜುಗರ ಉಂಟುಮಾಡಿದೆ ಎನ್ನಲಾಗಿದೆ.
ತದನಂತರ ಟ್ರಂಪ್ ಅಧ್ಯಕ್ಷರ ಅಧಿಕೃತ ಖಾತೆ @POTUS ಮೂಲಕ ಟ್ವಿಟರ್ ಮೇಲೆ ವಾಗ್ದಾಳಿ ನಡೆಸಿದ್ದಾರೆ. ತೀವ್ರ ಎಡಪಂಥೀಯರ ಜೊತೆ ಸೇರಿ ಟ್ವಿಟರ್ ನನ್ನ ಮೇಲೆ ಪಿತೂರಿ ನಡೆಸುತ್ತಿದೆ ಎಂದು ದೂರಿದ್ದಾರೆ. ಆ ಟ್ವೀಟ್ ಅನ್ನು ಸಹ ಟ್ವಿಟರ್ ಡಿಲೀಟ್ ಮಾಡಿದೆ.
ಮತ್ತೊಂದು ಖಾತೆಯನ್ನು ಬಳಸಿ ಟ್ವಿಟರ್ ಅನ್ನು ಹಣಿಯಲು ಮುಂದಾಗುವುದು ನಮ್ಮ ನಿಯಮಗಳ ಉಲ್ಲಂಘಟನೆ ಎಂದು ಟ್ವಿಟರ್ ತಿಳಿಸಿದೆ.
ಯುಎಸ್ ಕ್ಯಾಪಿಟಲ್ ಮೇಲೆ ದಾಳಿ ನಡೆದಾಗ ತಾತ್ಕಾಲಿಕವಾಗಿ ಟ್ರಂಪ್ ಖಾತೆಯನ್ನು ಸ್ಥಗಿತಗೊಳಿಸಿತ್ತು. ಅದಕ್ಕೂ ಮೊದಲು ಟ್ರಂಪ್ “ನಾನು ಜನವರಿ 20ರ ಜೋ ಬೈಡೆನ್ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ, ನನ್ನ ಅಭಿಮಾನಿಗಳು ನನ್ನ ಮಾತು ಮೀರುವುದಿಲ್ಲ” ಎಂದು ಟ್ವೀಟ್ ಮಾಡಿದ್ದರು.
ಇದನ್ನೂ ಓದಿ: Black Lives Matter V/s ಕ್ಯಾಪಿಟಲ್ ಮುತ್ತಿಗೆ: ಇವೆರಡಕ್ಕೆ ಪೊಲೀಸರ ಪ್ರತಿಕ್ರಿಯೆಗಳು ಹೇಗಿದ್ದವು?


