ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತರು ಕಳೆದ ಒಂದು ತಿಂಗಳಿನಿಂದ ಮಾಡುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ, ದೇಶದಾದ್ಯಂತ ಇರುವ ಆರು ಪ್ರಮುಖ ಮಹಿಳಾ ಸಂಘಟನೆಗಳು ಜನವರಿ 18 ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿವೆ.
ಕೃಷಿ ಕಾನೂನುಗಳ ಜೊತೆಗೆ ತಮ್ಮ ಇತರ ಬೇಡಿಕೆಗಳಾದ ಆಹಾರ, ಕೆಲಸ, ಆರೋಗ್ಯ ಸೇವೆಗಳು, ಸ್ವಸಹಾಯ ಸಂಘಗಳ ಸಾಲ ಮನ್ನಾ, ಎಂಎಫ್‌ಐಗಳಿಂದ ಕಿರುಕುಳ ವಿರುದ್ಧ ಕ್ರಮ ಸೇರಿದಂತೆ ಮುಂತಾದ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ್ ಸಂಘಟನ್ (AIMSS) ಸೇರಿದಂತೆ, ನ್ಯಾಷನಲ್ ಫೆಡರೇಶನ್ ಆಫ್ ಇಂಡಿಯನ್ ವುಮೆನ್ (NFIW), ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘ (AIDWA), ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘ (AIPWA), ಪ್ರಗತಿಶೀಲ್ ಮಹಿಳಾ ಸಂಘಟನ್ (PMS), ಅಖಿಲ ಭಾರತ ಅಗ್ರಗಾಮಿ ಮಹಿಳಾ ಸಮಿತಿಗಳು (AIAMS) ಪ್ರತಿಭಟನೆ ನಡೆಸಲು ನಿರ್ಧರಿಸಿವೆ.
ಇದನ್ನೂ ಓದಿ: ಟ್ರಂಪ್ ಖಾತೆಯನ್ನು ಶಾಶ್ವತವಾಗಿ ಬ್ಯಾನ್ ಮಾಡಿದ ಟ್ವಿಟರ್: ಅಮಾನತ್ತಾದ ಟೀಮ್‌ಟ್ರಂಪ್ ಖಾತೆ!
ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ʼಮಹಿಳಾ ಕಿಸಾನ್ ದಿವಸ್ʼ ಕರೆಯ ಭಾಗವಾಗಿ ಈ ಪ್ರತಿಭಟನೆಗಳು ನಡೆಯಲಿವೆ. ಜನವರಿ 18 ರಂದು ಸಹಸ್ರಾರು ಸಂಖ್ಯೆಯ ಮಹಿಳೆಯರು ಸೇರಿ ರಾಜ್ಯ ರಾಜಧಾನಿಗಳಲ್ಲಿ ರಾಜಭವನಕ್ಕೆ ಮೆರವಣಿಗೆ, ವಿವಿಧ ಭಾಗಗಳಲ್ಲಿ ಧರಣಿ, ಜಿಲ್ಲಾ ಮಟ್ಟಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದಾರೆ.
ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ರೈತರು ರಾಷ್ಟ್ರ ರಾಜಧಾನಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸಲು ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ 8 ಸುತ್ತಿನ ಮಾತುಕತೆಗಳು ನಡೆದಿವೆ. ಆದರೆ ಅವುಗಳೆಲ್ಲವೂ ವಿಫಲವಾಗಿವೆ.
ಶುಕ್ರವಾರ (ಜ.8) 8ನೇ ಸುತ್ತಿನ ಮಾತುಕತೆ ನಡೆದಿದ್ದು ಕೇಂದ್ರ ಸರ್ಕಾರದ ಪರವಾಗಿ ಸಚಿವರಾದ ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯಲ್ ಮತ್ತು ಸೋಮ್‌ಪ್ರಕಾಶ್ ಭಾಗವಹಿಸಿದ್ದರು. 40 ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದು, ಇಂದು ಸಹ ಸಭೆ ಯಾವುದೇ ತಾರ್ಕಿಕ ತೀರ್ಮಾನಗಳಿಗೆ ಬಂದಿಲ್ಲ. ಕೇಂದ್ರ ಸರ್ಕಾರ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವುದಿಲ್ಲವೆಂದು ಹಠ ಹಿಡಿದರೆ, ಹೋರಾಟ ನಿಲ್ಲಿಸುವುದಿಲ್ಲವೆಂದು ರೈತರು ಪಟ್ಟು ಹಿಡಿದಿದ್ದಾರೆ. ಹಾಗಾಗಿ ಜನವರಿ 15ಕ್ಕೆ ಮುಂದಿನ ಸಭೆ ನಿಗಧಿಗೊಳಿಸಲಾಗಿದೆ.
ಇದನ್ನೂ ಓದಿ: Black Lives Matter V/s ಕ್ಯಾಪಿಟಲ್ ಮುತ್ತಿಗೆ: ಇವೆರಡಕ್ಕೆ ಪೊಲೀಸರ ಪ್ರತಿಕ್ರಿಯೆಗಳು ಹೇಗಿದ್ದವು?
ಮಾತುಕತೆಯಲ್ಲಿ ‘ನೀವು ಕಾಯ್ದೆ ವಾಪ್ಸಿ ಮಾಡಿದರೆ ಮಾತ್ರ ನಾವು ಘರ್ ವಾಪ್ಸಿ ಮಾಡುತ್ತೇವೆ’ ಎಂದು ರೈತ ಮುಖಂಡರೊಬ್ಬರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾಗಿ ಪಿಟಿಐ ವರದಿ ಮಾಡಿದೆ.
ರೈತ ಮುಖಂಡರೊಬ್ಬರು “ಒಂದೋ ಗೆಲ್ಲುತ್ತೇವೆ ಇಲ್ಲ ಸಾಯುತ್ತೇವೆ” ಎಂಬ ಫ್ಲಕಾರ್ಡು ಹಿಡಿಯುವ ಮೂಲಕ ಸಭೆಯಲ್ಲಿ ಗಮನ ಸೆಳೆದರು. ಅಂದರೆ ಈ ಮೂಲಕ ಕೃಷಿ ಕಾಯ್ದೆಗಳ ವಿಚಾರದಲ್ಲಿ ರೈತರು ಪಟ್ಟು ಬಿಡುವುದಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಜನವರಿ 4 ರಂದು ನಡೆದ 7 ಸುತ್ತಿನ ಮಾತುಕತೆ ವಿಫಲವಾದಾಗ ರೈತರು ಜನವರಿ 7 ರಂದು ಟ್ರಾಕ್ಟರ್ ರ್ಯಾಲಿ ನಡೆಸುವುದಾಗಿ ಘೋಷಿಸಿ, ಅಂತೆಯೇ ನಡೆಸಿದರು. ಈಗ 8ನೇ ಸುತ್ತಿನ ಮಾತುಕತೆಯೂ ಸಹ ವಿಫಲವಾಗಿದ್ದು ರೈತರು ಯಾವ ರೀತಿಯ ಹೋರಾಟಕ್ಕೆ ಅಣಿಯಾಗುತ್ತಾರೆ ಎಂದು ಕಾದುನೋಡಬೇಕಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶ ದೇವಸ್ಥಾನದಲ್ಲಿ ಅತ್ಯಾಚಾರ, ಕೊಲೆ: ಅರ್ಚಕನ ಬಂಧನ


