“ಕೇಂದ್ರ ಸರ್ಕಾರ ಜಾರಿಗೊಳಿಸಿರುವ ರೈತ ವಿರೋಧಿ ಕಾನೂನುಗಳ ಕುರಿತು ಯಾವುದೇ ವಾಸ್ತವಿಕತೆ ಗೊತ್ತಿಲ್ಲದೆ, ಕೋತಿಯಂತೆ ಮಾತನಾಡುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯನಿಗೂ ಉತ್ತರಿಸುತ್ತೇನೆ” ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ಬೆಂಗಳೂರಿನ ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ, “ರೈತ ವಿರೋಧಿ ಕಾಯ್ದೆಗಳು, ಕರ್ನಾಟಕಕ್ಕೆ ಆಗಿರುವ ಅನ್ಯಾಯಕ್ಕೇನು ಪ್ರತಿಕ್ರಿಯೆ?” ಕುರಿತು ಹಮ್ಮಿಕೊಂಡಿದ್ದ ಸಂವಾದದಲ್ಲಿ ಬಡಗಲಪುರ ನಾಗೇಂದ್ರ ಮಾತನಾಡಿದರು.
ಇದನ್ನೂ ಓದಿ: ರೈತ ಹೋರಾಟದಲ್ಲಿ ಮಾವೋವಾದಿಗಳಿಲ್ಲ ಎಂದ ಗೃಹ ಸಚಿವಾಲಯ: ಬಿಜೆಪಿ ನಾಯಕನಿಗೆ ಮುಖಭಂಗ
“ಕೃಷಿ ಕಾಯ್ದೆಗಳ ಪರವಾಗಿ ಮಾತನಾಡುವ ಭರದಲ್ಲಿ ಕೆಲವರು ರೈತರ ಹೋರಾಟದ ನೈತಿಕ ಶಕ್ತಿಯನ್ನು ಎದುರಿಸಲಾಗದೆ ಅಪಪ್ರಚಾರ ಮಾಡುತ್ತಿದ್ದಾರೆ. ಈ ಪೈಕಿ ಬೆಂಗಳೂರಿನ ದಕ್ಷಿಣ ಕ್ಷೇತ್ರದ ಬಿಜೆಪಿ ಲೋಕಸಭಾ ಸದಸ್ಯನೂ ಒಬ್ಬ. ಹಾಗಾಗಿ, ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ದುಷ್ಪರಿಣಾಮ ಕುರಿತು ಜನವರಿ 16 ರಂದು ಬೆಂಗಳೂರಿನ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ಬಹಿರಂಗ ಸಂವಾದ ಹಮ್ಮಿಕೊಳ್ಳಲಾಗಿದ್ದು, ಕೃಷಿ ಕಾಯ್ದೆಗಳ ಪರವಾಗಿ ಮಾತನಾಡುವವರು ಈ ಬಹಿರಂಗ ಸಂವಾದದಲ್ಲಿ ಮುಕ್ತವಾಗಿ ಭಾಗವಹಿಸಬಹುದು. ಈ ಸಂವಾದದಲ್ಲಿ ಸ್ವರಾಜ್ ಇಂಡಿಯಾ ಮುಖ್ಯಸ್ಥ ಯೋಗೇಂದ್ರ ಯಾದವ್ ಸೇರಿದಂತೆ ಪಂಜಾಬ್‌ನ ರೈತ ಮುಖಂಡರು ಪಾಲ್ಗೊಳ್ಳಲಿದ್ದಾರೆ” ಎಂದು ಹೇಳಿದರು.
ತಮಿಳುನಾಡಿನ ತಮಿಳಗ ವ್ಯವಸಾಯಿಗಳ್ ಸಂಘದ ಅಧ್ಯಕ್ಷ ಸೆಲ್ವಮುತ್ತು ಮಾತನಾಡಿ, “ರೈತ ಬೆಳೆದ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಬೆಲೆ, ಸೌಕರ್ಯ ಕಲ್ಪಿಸಿ ಕೊಡುವ ಕಾನೂನು ಎಪಿಎಂಸಿಯನ್ನೇ ಬಲಿ ಪಡೆದುಕೊಳ್ಳುವ ದುರುದ್ದೇಶ ಹೊಂದಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಇಲ್ಲಿಯವರೆಗೂ ಕೃಷಿ ಉತ್ಪನ್ನ ಮಾರಾಟ ಸಮಿತಿ ಮೇಲಿನ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಿತ್ತು. ಆದರೀಗ ಕಾರ್ಪೋರೇಟ್ ಸಂಸ್ಥೆಗಳೂ ಭಾಗಿಯಾಗಿರುವುದರಿಂದ ಎಪಿಎಂಸಿಗಳು ಮುಚ್ಚುವ ಸಂಭವವಿದೆ. ಪ್ರಧಾನಿ, ಹಣಕಾಸು ಸಚಿವರು, ಕೃಷಿ ಸಚಿವರು ಒಟ್ಟಾಗಿ ಈ ಕಾನೂನಿನ ಕುರಿತು ಜನರಿಗೆ ಮಾಹಿತಿ ನೀಡುವ ಕೆಲಸ ಮಾಡಿಲ್ಲ. ಈ ಕಾನೂನು ಜಾರಿಗೆ ಬಂದರೆ ಎನೆಲ್ಲಾ ಅನುಕೂಲ ಎಂದು ರೈತರಿಗೆ ತಿಳಿಸಿಲ್ಲ. ಹೇಳಿದ್ದನ್ನಷ್ಟೇ ಮತ್ತೆ ಮತ್ತೆ ಹೇಳುತ್ತಾರೆಯೇ ವಿನಃ ಬೇರೆ ಕೆಲಸ ಮಾಡಿಲ್ಲ” ಎಂದು ಹೇಳಿದರು.
ಇದನ್ನೂ ಓದಿ: ಅಂಬಾನಿ 5G ಗಾಗಿ ಥಿಯೇಟರ್ ಓಪನ್ ಮಾಡ್ತಿಲ್ಲ; ಇದು ಬಹುದೊಡ್ಡ ಹಗರಣ ಎಂದ ನಟ…
“ಉತ್ತರ ಭಾರತ ದಕ್ಷಿಣ ಭಾರತದ ಕೃಷಿ ಮಾರುಕಟ್ಟೆಗೂ ಬಹಳಷ್ಟು ವ್ಯತ್ಯಾಸವಿದೆ. ದಕ್ಷಿಣ ಭಾರತದಲ್ಲಿ ಗುತ್ತಿಗೆದಾರರು ತೋಟಗಳಿಗೆ ಬಂದು ಜಾಗವನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಾರೆ. ಹರಿಶಿನ, ನೆಲಗಡಲೆಯನ್ನು ಹರಾಜಿಗೆ ಬಿಟ್ಟು ವ್ಯಾಪಾರ ಮಾಡುತ್ತಾರೆ.
ಉಳಿದ ಬೆಳಗಳನ್ನು ನೇರವಾಗಿ ಮಂಡಿಗಳಲ್ಲಿ ವ್ಯಾಪಾರ ಮಾಡುತ್ತಾರೆ. ಆದರೆ, ಪಂಜಾಬ್ ಹರಿಯಾಣದಲ್ಲಿ ಎಲ್ಲವನ್ನೂ ಮಂಡಿಯಲ್ಲೇ ವ್ಯಾಪಾರ ಮಾಡಬೇಕು. ಇಂತಹ ಕಾನೂನಿನಿಂದ ಎಲ್ಲಾ ಮಂಡಿಗಳು ಅಳಿಯುತ್ತವೆ ಎಂಬ ಭಯ ಆ ಜನಗಳಲ್ಲಿವೆ. ಅಲ್ಲದೆ ಕಾರ್ಪೊರೇಟ್ ಕಂಪೆನಿಗಳಿಗಳ ಜೊತೆ ಒಪ್ಪಂದ ಮಾಡಿಕೊಂಡು ವ್ಯವಸಾಯ ಮಾಡಬೇಕಾದ ಸ್ಥಿತಿ ಬರುತ್ತದೆ ಎಂಬ ಭಯ ಅವರಲ್ಲಿದೆ. ಹಾಗಾಗಿಯೇ ಅವರಿ ಇಷ್ಟು ತೀವ್ರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ” ಎಂದು ವಿವರಿಸಿದರು.
ಈ ಸಂವಾದದಲ್ಲಿ ಆಂಧ್ರದ ರೈತ ಸ್ವರಾಜ್ಯ ವೇದಿಕೆಯ ಕಿರಣ್ ಕುಮಾರ್, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ರಝಾಕ್ ಉಸ್ತಾದ್ ಸೇರಿದಂತೆ ಅನೇಕ ತಜ್ಞರು, ಹೋರಾಟಗಾರರು ಭಾಗವಹಿಸಿದ್ದರು.
ಇದನ್ನೂ ಓದಿ: ಬೆಂಗಳೂರು: ದಲಿತ ಮುಖಂಡ ಶ್ರೀನಿವಾಸ್ ಕೊಲೆ – ಪೊಲೀಸರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ


