ಗೋಹತ್ಯೆ ನಿಷೇಧ ಕಾಯ್ದೆಗೆ ಸುಗ್ರೀವಾಜ್ಞೆ ಹೊರಡಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಲಾಗಿದೆ.
ಬೆಂಗಳೂರಿನ ಪಿಲ್ಲಣ್ಣ ಗಾರ್ಡನ್ ನಿವಾಸಿ ಮೊಹಮ್ಮದ್ ಆರಿಫ್ ಜಮೀಲ್ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ನಂತರ, ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ: ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ – ಶೃಂಗೇರಿಯಲ್ಲಿ ದಾಖಲಾದ ಮೊದಲ ಪ್ರಕರಣವೆ ಸುಳ್ಳು?
ಈ ಸುಗ್ರೀವಾಜ್ಞೆಯ ನಿಬಂಧನೆಗಳು, ಭಾರತದ ಸಂವಿಧಾನದ 21 ನೇ ಪರಿಚ್ಚೇದದ ಅಡಿಯಲ್ಲಿ ಜೀವನೋಪಾಯದ ಹಕ್ಕಿನ ಉಲ್ಲಂಘನೆ, ವ್ಯಾಪಾರ ಅಥವಾ ವ್ಯವಹಾರದ ಹಕ್ಕಿನ ಉಲ್ಲಂಘನೆ ಮತ್ತು ಸಂವಿಧಾನದ ಆರ್ಟಿಕಲ್ 19 (ಜಿ) ಪ್ರಕಾರ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದೂ ವಾದಿಸಿದ್ದಾರೆ.
ದೇಶದಲ್ಲಿ ಪ್ರಾಣಿಗಳ ವಧೆಯನ್ನು ನಿಷೇಧಿಸುವುದರಿಂದ ಕಸಾಯಿಖಾನೆಯಲ್ಲಿರುವವರ ಉದ್ಯೋಗ ಮತ್ತು ಅವರ ವ್ಯಾಪಾರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಾಗರಿಕರು ತಮ್ಮ ಆಯ್ಕೆಯ ಆಹಾರ ಪಡೆದುಕೊಳ್ಳುವುದರಿಂದ ವಂಚಿತರಾಗುತ್ತಾರೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಗೋಹತ್ಯೆ ನಿಷೇಧ: ವಯಸ್ಸಾದ ದನಗಳನ್ನು ಸರ್ಕಾರವೇ ಖರೀದಿಸಲಿ – ಸಿದ್ದರಾಮಯ್ಯ ಸಲಹೆ
ರಾಜ್ಯದಾದ್ಯಂತ ಭಾರಿ ವಿವಾದವೆಬ್ಬಿಸಿದ್ದ “ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ-2020” (ಗೋಹತ್ಯೆ ನಿಷೇಧ ಮಸೂದೆ)ಗೆ ಸುಗ್ರೀವಾಜ್ಞೆ ಹೊರಡಿಸಿ ಜಾರಿಗೆ ತರಲಾಗಿದೆ.
ಇತ್ತೀಚೆಗಷ್ಟೇ ವಿಧಾನಸಭೆಯಲ್ಲಿ ಪ್ರಸ್ತುತ ಮಸೂದೆ ಅಂಗೀಕಾರವಾಗಿದ್ದರೂ, ವಿಧಾನ ಪರಿಷತ್ತಿನಲ್ಲಿ ಅದಕ್ಕೆ ತಡೆಯಾಗಿತ್ತು. ಮಸೂದೆ ಜಾರಿಗೊಳಿಸುವ ನಿಟ್ಟಿನಲ್ಲಿ ವಿಧಾನ ಮಂಡಲ ಜಂಟಿ ಅಧಿವೇಶನಕ್ಕೆ ದಿನಾಂಕ ನಿಗದಿಯಾಗದ ಕಾರಣ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ಸಚಿವ ಸಂಪುಟ ಅನುಮೋದನೆ ನೀಡಿತ್ತು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಮಸೂದೆ: ಆತಂಕ ವ್ಯಕ್ತಪಡಿಸಿದ ಮೃಗಾಲಯದ ಅಧಿಕಾರಿಗಳು!
ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ, “ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ 1964ರ ಕಾಯ್ದೆಯಲ್ಲಿ ಲೋಪಗಳಿದ್ದ ಹಿನ್ನೆಲೆ, ಕೆಲ ತಿದ್ದುಪಡಿ ಮಾಡಲಾಗಿದೆ. 1964 ರ ಕಾಯ್ದೆಯನ್ವಯ 12 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಹಸು, ಎಮ್ಮೆ, ಕೋಣಗಳನ್ನು ಮಾಂಸಕ್ಕಾಗಿ ವಧಿಸಲು ಅವಕಾಶವಿತ್ತು. ಈಗಿನ ತಿದ್ದುಪಡಿ ಮಸೂದೆಯ ಪ್ರಕಾರ, ಹಸು ಮತ್ತು ಎತ್ತುಗಳನ್ನು ಜೀವಿತಾವಧಿಯವರೆಗೂ ವಧಿಸಲು ನಿರ್ಬಂಧ ಹೇರಲಾಗಿದೆ. ಎಮ್ಮೆ ಮತ್ತು ಕೋಣಗಳನ್ನು 13 ವರ್ಷದ ಬಳಿಕ ವಧಿಸಲು ಅವಕಾಶ ನೀಡಲಾಗುತ್ತದೆ. ದನದ ಮಾಂಸ ತಿನ್ನುವುದಕ್ಕೆ ನಾವು ಯಾವುದೇ ನಿಷೇಧವನ್ನು ಹೇರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದರು.
“1964 ರ ಕಾಯ್ದೆಯಲ್ಲಿ ಜಾನುವಾರುಗಳ ಹತ್ಯೆ ಮತ್ತು ಸಂರಕ್ಷಣೆಗೆ ಸಂಬಂಧಿಸಿದಂತೆ ಶಿಕ್ಷೆಗೆ ಅವಕಾಶವಿರಲಿಲ್ಲ. ಇದೀಗ ಜಾನುವಾರು ಹತ್ಯೆಗೈದರೆ ಶಿಕ್ಷೆ ಹಾಗೂ ದಂಡ ವಿಧಿಸುವ ಅಧಿಕಾರವನ್ನು ತಹಶೀಲ್ದಾರ್ ಮತ್ತು ಸಂಬಂಧಪಟ್ಟ ಪೊಲೀಸರಿಗೆ ನೀಡಲಾಗಿದೆ. ಹಳೆಯ ಕಾನೂನು ಬಿಗಿಯಾಗಿರಲಿಲ್ಲ. ಈಗಿನ ಕಾಯ್ದೆಯಲ್ಲಿ ಅಕ್ರಮವಾಗಿ ಹಸುಗಳನ್ನು ಸಾಗಾಟ ಮಾಡಿದರೆ ಅದನ್ನು ವಶಕ್ಕೆ ಪಡೆಯಲಾಗುವುದು. ಅಲ್ಲದೆ, ವಾಹನವನ್ನು ಬ್ಯಾಂಕ್ ಗ್ಯಾರಂಟಿ ಮೂಲಕ ಹಿಂಪಡೆಯಬಹುದು” ಎಂದು ಮಾಧುಸ್ವಾಮಿ ತಿಳಿಸಿದ್ದರು.
ಇದನ್ನೂ ಓದಿ: ಗೋಹತ್ಯೆ ನಿಷೇಧ ಕಾಯ್ದೆ ದುರ್ಬಳಕೆ ಎಂದ ಹೈಕೋರ್ಟ್: ಮತ್ತೊಮ್ಮೆ ಗೋಹತ್ಯೆಗೆ ಜೈಲುಶಿಕ್ಷೆ ಎಂದ ಯೋಗಿ!


