ಪಶ್ಚಿಮ ಉತ್ತರ ಪ್ರದೇಶದ ಬಾಗ್ಪತ್ ಜಿಲ್ಲೆಯ ಸರೂರ್ಪುರ ಕಲಾ ಗ್ರಾಮಸ್ಥರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸದ ರಾಜಕಾರಣಿಗಳಿಗೆ ತಮ್ಮ ಗ್ರಾಮಕ್ಕೆ ಪ್ರವೇಶವಿಲ್ಲ ಎಂದು ಘೋಷಿಸಿದ್ದಾರೆ. ಸುಮಾರು 25 ಸಾವಿರ ಜನಸಂಖ್ಯೆ ಇರುವ ಗ್ರಾಮದ 36 ಜಾತಿ ಗುಂಪುಗಳ ಪಂಚಾಯತ್ ಬುಧವಾರ ಈ ನಿರ್ಧಾರ ಕೈಗೊಂಡಿದೆ.
ಈ ನಿರ್ಧಾರ ತೆಗೆದುಕೊಂಡ ಪಂಚಾಯಿತಿಯಲ್ಲಿ ಹಾಜರಿದ್ದ ರೈತ ಸುಭಾಷ್ ನೈನ್ “ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೇಶಾದ್ಯಂತ ನಡೆಯುತ್ತಿರುವ ಆಂದೋಲನಕ್ಕೆ ತಮ್ಮ ಬೆಂಬಲವನ್ನು ನೀಡದ ನಾಯಕರನ್ನು (ರಾಜಕೀಯ ಪಕ್ಷಗಳ ಅಥವಾ ರೈತ ಸಂಘಟನೆಗಳ) ಇಡೀ ಪಂಚಾಯತ್ ಸರ್ವಾನುಮತದಿಂದ ಖಂಡಿಸಿತು ಮತ್ತು ಗ್ರಾಮಕ್ಕೆ ಅವರ ಪ್ರವೇಶವನ್ನು ನಿಷೇಧಿಸಲು ಸರ್ವಾನುಮತದಿಂದ ನಿರ್ಧರಿಸಿತು” ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಅಲ್ಲದೆ ಜನವರಿ 16 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಪಡಿತರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲು ಪಂಚಾಯಿತಿ ನಿರ್ಧರಿಸಿದೆ. ಆಂದೋಲನಕ್ಕೆ ಬೆಂಬಲವಾಗಿ ಗ್ರಾಮದ ಪ್ರತಿಯೊಂದು ಕುಟುಂಬಗಳು ಜಾತಿ, ಸಮುದಾಯ ಬೇಧವಿಲ್ಲದೆ ದೇಣಿಗೆ ಮತ್ತು ದವಸ ಧಾನ್ಯಗಳನ್ನು ನೀಡಬಹುದು ಎಂದು ಪಂಚಾಯಿತಿ ನಿರ್ಧರಿಸಿದೆ.
“ಗ್ರಾಮಸ್ಥರು ಇಲ್ಲಿಯವರೆಗೆ 4.5 ಲಕ್ಷ ರೂ ದೇಣಿಗೆ ನೀಡಿದ್ದಾರೆ ಮತ್ತು ಪಡಿತರ ಮತ್ತು ಇತರ ಸರಕುಗಳನ್ನು (ಮುಖ್ಯವಾಗಿ ಕಟ್ಟಿಗೆಗಳು – ಚಳಿಯಿಂದ ರಕ್ಷಿಸಿಕೊಳ್ಳಲು) ಕೊಂಡ್ಯೊಯ್ಯಲು ಕನಿಷ್ಠ ಒಂಬತ್ತು ಟ್ರಾಕ್ಟರುಗಳನ್ನು ನೀಡಿದ್ದಾರೆ. ಗ್ರಾಮ ಪ್ರಧಾನ್ ಜೀತ್ ಸಿಂಗ್ ಅವರು 21,000 ರೂಗಳ ದೇಣಿಗೆ ಮತ್ತು ದೆಹಲಿಗೆ ತೆರಳಲು ತಮ್ಮ ಟ್ರ್ಯಾಕ್ಟರ್ ನೀಡಿದ್ದಾರೆ” ಎಂದು ವರದಿಯಾಗಿದೆ.
ಮಾಜಿ ಪ್ರಧಾನ್ ತೇಜ್ವೀರ್ ಸಿಂಗ್ ಮತ್ತು ಜಗ್ವೀರ್ ಸಿಂಗ್ ಕ್ರಮವಾಗಿ 5,000 ಮತ್ತು 2,100 ರೂಗಳ ದೇಣಿಗೆ ನೀಡಿದ್ದಾರೆ. ಪ್ರತಿಭಟನಾ ನಿರತ ರೈತರಿಗೆ ಬೆಂಬಲವಾಗಿ ಇತರ ಗ್ರಾಮಸ್ಥರು ಸಹ ದೇಣಿಗೆ ನೀಡಿದ್ದಾರೆ ಎಂದು ನೈನ್ ತಿಳಿಸಿದ್ದಾರೆ. ಅಲ್ಲದೇ ಗ್ರಾಮಸ್ಥರು ನಮಗೂ ರಾಜಕೀಯ ಪಕ್ಷಗಳಿಗೂ ಸಂಬಂಧವಿಲ್ಲ. ಆದರೆ ನ್ಯಾಯಯುತ ಬೇಡಿಕೆಗಳನ್ನು ಇಟ್ಟು ಹೋರಾಟ ನಡೆಸುತ್ತಿರುವ ರೈತರ ಮಾತು ಕೇಳದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಉತ್ತರ ಪ್ರದೇಶ ಹಲವೆಡೆ ಕೇಂದ್ರದ ಕಾನೂನುಗಳ ವಿರುದ್ಧ ಅನಿರ್ದಿಷ್ಟಾವಧಿ ಧರಣಿಗಳು ನಡೆಯುತ್ತಿವೆ. ಜನವರಿ 26 ರಂದು ಗಣರಾಜ್ಯೋತ್ಸವದ ದಿನದ ಹೋರಾಟಕ್ಕೆ ಅವರೆಲ್ಲರೂ ಬೆಂಬಲ ನೀಡುವುದಾಗಿ ತಿಳಿಸಿವೆ.
ದೆಹಲಿಯಲ್ಲಿ ನಡೆಯುತ್ತಿರುವ ರೈತ ಹೋರಾಟ 50 ನೇ ದಿನಕ್ಕೆ ಕಾಲಿಟ್ಟಿದೆ. ನಾಳೆ ಕೇಂದ್ರ ಸರ್ಕಾರದೊಂದಿಗೆ 9 ನೇ ಸುತ್ತಿನ ಮಾತುಕತೆ ನಡೆಯಲಿದೆ.
ಇದನ್ನೂ ಓದಿ: ರೈತರ ಪ್ರತಿರೋಧದ ಹಿನ್ನೆಲೆ: ಸುಪ್ರೀಂ ಸಮಿತಿಯಿಂದ ಸ್ವಯಂ ಹೊರನಡೆದ ಭೂಪಿಂದರ್ ಮನ್


