ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕಳೆದ 4 ವರ್ಷಗಳಿಂದ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತ ಆಪ್ತೆ ವಿ.ಕೆ. ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬುಧವಾರ ಬಿಡುಗಡೆಯಾಗಿದ್ದಾರೆ. ಈ ಹಿಂದೆ ನ್ಯಾಯಾಲಯದ ಆದೇಶದಂತೆ 10 ಕೋಟಿ ದಂಡ ಪಾವತಿಸಿದ್ದರು.
ಕೊರೊನಾ ಸೋಂಕು ತಗುಲಿದ್ದರಿಂದ ಶಶಿಕಲಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಬಿಡುಗಡೆ ಪ್ರಕ್ರಿಯೆಯನ್ನು ಕಾರಾಗೃಹದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಯೇ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಹಾಗಾಗಿ ಶಶಿಕಲಾ ಮತ್ತೆ ಜೈಲಿಗೆ ಹೋಗುವ ಅಗತ್ಯವಿಲ್ಲ. ಈಗ ಅವರ ಜೈಲುವಾಸ ಅಧಿಕೃತವಾಗಿ ಮುಗಿದಿರುವುದರಿಂದ ವಿಕ್ಟೋರಿಯಾ ಆಸ್ಪತ್ರೆಯಿಂದಲೇ ಅವರು ಬಿಡುಗಡೆಯಾಗಿ ತಮಿಳುನಾಡಿಗೆ ತೆರಳಬಹುದು.
ಇದನ್ನೂ ಓದಿ: 10 ಕೊಟಿ ದಂಡ ಪಾವತಿಸಿದ ಜಯಲಲಿತ ಆಪ್ತೆ ಶಶಿಕಲಾ; ಜನವರಿಯಲ್ಲಿ ಬಿಡುಗಡೆ ಸಾಧ್ಯತೆ!
66 ಕೋಟಿ ರೂ. ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಯಲಲಿತಾ ಆಪ್ತೆ ವಿ.ಕೆ. ಶಶಿಕಲಾ ಫೆಬ್ರುವರಿ 2017 ರಿಂದ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.
ಈ ಪ್ರಕರಣದಲ್ಲಿ ಜಯಲಲಿತಾ, ಶಶಿಕಲಾ ಸೇರಿದಂತೆ ಇಳವರಸಿ ಹಾಗೂ ಸುಧಾಕರನ್ ಸಹ ಆರೋಪಿಗಳಾಗಿದ್ದು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ, ಅಪರಾದಿಗಳಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಸೇರಿದಂತೆ (ಜಯಲಲಿತಾಗೆ 100 ಕೋಟಿ ರೂ.) ಮೂವರಿಗೆ ತಲಾ 10 ಕೋಟಿ ರೂಪಾಯಿ ದಂಡ ವಿಧಿಸಿ 2017 ರ ಫೆ. 15ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯವು ತೀರ್ಪು ನೀಡಿತ್ತು.
ಇದನ್ನೂ ಓದಿ: ಆಘಾತಕಾರಿ ಸುದ್ದಿ: ಕೆಂಪುಕೋಟೆಯ ಮುತ್ತಿಗೆ, ಸಿಖ್ ಧ್ವಜಾರೋಹಣಕ್ಕೆ ಕಾರಣ ಬಿಜೆಪಿ ಕಾರ್ಯಕರ್ತ ದೀಪ್ ಸಿಧು


