ಸಿಂಘು ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಇಲ್ಲಿವರೆಗೂ ಪುರುಷರು ಮುಂಚೂಣಿಯಲ್ಲಿದ್ದರು. ಆದರೆ ತಮ್ಮ ಪ್ರೀತಿಪಾತ್ರರನ್ನು ಬಂಧಿಸಲಾಗುವುದು ಎಂಬ ಆತಂಕ, ಬೆಂಬಲವನ್ನು ತೋರಿಸುವ ದೃಢ ನಿಶ್ಚಯ ಮತ್ತು ಯುಪಿಯ ಗಾಜಿಪುರ ಗಡಿಯಿಂದ ಬಿಕೆಯು ನಾಯಕ ರಾಕೇಶ್ ಟಿಕಾಯತ್ ಮಾಡಿದ ಭಾವನಾತ್ಮಕ ಮನವಿ-ಈ ಮೂರು ಕಾರಣಗಳಿಂದ ಕಳೆದ ಮೂರು ದಿನಗಳಲ್ಲಿ ನೂರಾರು ಮಹಿಳಾ ರೈತರು ಪ್ರತಿಭಟನೆಯನ್ನು ಸೇರಿಕೊಂಡಿದ್ದಾರೆ. ಬಹುಪಾಲು ಮಹಿಳೆಯರಿಗೆ ಇಂಥದ್ದು ಮೊದಲ ಅನುಭವ.
ರವಿವಾರ ಸಿಂಘು ಪ್ರತಿಭಟನಾ ಸ್ಥಳಕ್ಕೆ ಅಗಮಿಸಿದ ರೈತಾಪಿ ಮಹಿಳೆಯರ ಗುಂಪೊಂದು ಪ್ರತಿಭಟನಾ ಸ್ಥಳದ ಸುತ್ತಲೂ ಮಿನಿರ‍್ಯಾಲಿಗಳನ್ನು ನಡೆಸಿತು. ಮುಖ್ಯ ವೇದಿಕೆಯ ಬಳಿ ಘೋಷಣೆಗಳನ್ನು ಕೂಗಿದರು. ಸ್ವಯಂಸೇವಕರಿಗೆ ಭದ್ರತೆಯಲ್ಲಿ ಸಹಾಯ ಮಾಡುವಾಗ ತಾವೇ ಕೈಗೆ ಲಾಠಿಗಳನ್ನು ತೆಗೆದುಕೊಂಡರು. ಊಟದ ಮನೆಯಲ್ಲಿ ಕುಳಿತು ತಮ್ಮ ಆತಂಕಗಳನ್ನು ಚರ್ಚಿಸಿದರು.
ಹಲವಾರು ಮಹಿಳಾ ಪ್ರತಿಭಟನಾಕಾರರು ಸಿಂಘು ತಲುಪಲು ತಾವು 10 ಕಿ.ಮೀ.ವರೆಗೆ ನಡೆಯಬೇಕಾಯಿತು ಎಂದು ಹೇಳಿದರು. ಚಳುವಳಿಯಲ್ಲಿ ಸೇರಲು ಹೊಲಗಳನ್ನು ಬಿಟ್ಟು ಬಂದಿದ್ದೇವೆ ಎಂದು ಕೆಲವರು ತಿಳಿಸಿದರು.
ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧದ ಆಂದೋಲನ ಮುಂದುವರಿಯುತ್ತದೆ ಎಂದು ಘೋಷಿಸುತ್ತ ಟಿಕಾಯತ್ ಅಳುವ ವೀಡಿಯೊವನ್ನು ನೋಡಿದ ನಂತರ ನಾನು ಮತ್ತು ನನ್ನ ಸ್ನೇಹಿತರು ಶನಿವಾರ ಸಿಂಘುಗೆ ಬಂದಿದ್ದೇವೆ ಎಂದು ಪಂಜಾಬ್‌ನ ಸಂಗ್ರೂರ್‌ನ ಕೃಷಿ ಕಾರ್ಮಿಕರಾದ ಬಬ್ಲಿ (40) ಹೇಳಿದ್ದಾರೆ.
“ಪೊಲೀಸರು ನಮ್ಮನ್ನು ಪ್ರಾಣಿಗಳಂತೆ ಪರಿಗಣಿಸಲು ಸಾಧ್ಯವಿಲ್ಲ. ನನ್ನ ಪತಿ ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಮೆರವಣಿಗೆಯ ಭಾಗವಾಗಿದ್ದರು. ಸಿಂಘು ಗಡಿಯ ಹೊರಗೆ ಪೊಲೀಸರು ನನ್ನ ಪತಿಯನ್ನು ಥಳಿಸಿದರು. ಅವರು ದೆಹಲಿಗೆ ಹೋಗಲಾಗಲಿಲ್ಲ. ಅವರು ಧ್ವಜವನ್ನು ಹಾರಿಸಿದ ಗುಂಪಿನ ಭಾಗವಾಗಿರಲಿಲ್ಲ” ಎಂದು ಬಬ್ಲಿ ತಿಳಿಸಿದರು.
‘ಗಾಜಿಪುರದಲ್ಲಿ ಪೊಲೀಸರು ಟಿಕಾಯತ್ ಅವರಿಗೆ ಕಿರುಕುಳ ನೀಡಿದರು. ನಮಗೆ ಅವಮಾನವಾಗಿದೆ. ನಮ್ಮನ್ನು ಗುರಿಯಾಗಿಸಲಾಗಿದೆ. ನಾನು ನನ್ನ ಸ್ನೇಹಿತರೊಂದಿಗೆ ಇಲ್ಲಿಯೇ ಇರುತ್ತೇನೆ. ನನ್ನ ತಾಯಿ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾರೆ. ನಾವು ಪ್ರತಿಭಟನಾಕಾರರಿಗೆ ಅಡುಗೆ ಸಿದ್ಧ ಮಾಡಿ ಕೊಡುತ್ತಲೇ ಪ್ರತಿಭಟನೆಯಲ್ಲಿ ಹಾಜರಾಗುತ್ತೇವೆ ಎಂದು ಬಬ್ಲಿ ಮತ್ತು ಗೆಳತಿಯರು ತಿಳಿಸಿದರು.

ಪಟಿಯಾಲ ಮೂಲದ ರೈತ ಮಹಿಳೆ ದಲ್ಬೀರ್ ಕೌರ್ (47) ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಶನಿವಾರ ಸಂಜೆ ಸಿಂಘು ಪ್ರತಿಭಟನಾ ಸ್ಥಳಕ್ಕೆ ಬಂದಿದ್ದಾರೆ. ‘ಬಿಕೆಯುನ ರೈತ ಮುಖಂಡರು ಮತ್ತು ಇತರ ಒಕ್ಕೂಟಗಳ ಮುಖಂಡರ ಭಾಷಣಗಳನ್ನು ಕೇಳಿದ ನಂತರ ಸಿಂಘುಗೆ ಬಂದೆವು. ನನ್ನ ಪತಿ ಸುಮಾರು ಎರಡು ತಿಂಗಳಿಂದ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ’ ಎನ್ನುತ್ತಾರೆ ದಲ್ಬೀರ್ ಕೌರ್.
‘ನಮ್ಮದು ಕಬ್ಬಿನ ಗದ್ದೆ ಇದೆ ಮತ್ತು ತರಕಾರಿಗಳನ್ನು ಸಹ ಬೆಳೆಯುತ್ತೇವೆ. ನಿನ್ನೆ, ನಾನು ನನ್ನ ಇಬ್ಬರು ಗಂಡು ಮಕ್ಕಳನ್ನು ಕರೆದುಕೊಂಡು ಇಲ್ಲಿಗೆ ಬಂದೆ. ಭಿತ್ತಿಪತ್ರಗಳನ್ನು ಹಿಡಿದು ವೇದಿಕೆಯ ಬಳಿ ಮೆರವಣಿಗೆ ನಡೆಸಿದೆವು. ನಾನು ನಾಳೆ ಹೊರಡಬೇಕಾಗುತ್ತದೆ, ಆದರೆ ನನ್ನನ್ನು ಲೆಕ್ಕಿಸಬೇಡಿ. ಈ ಆಂದೋಲನಕ್ಕಾಗಿ ನನ್ನ ಪ್ರಾಣ ತ್ಯಾಗ ಮಾಡಲು ನಾನು ಸಿದ್ಧ. ಪೊಲೀಸರು ಮತ್ತು ಸರ್ಕಾರವು ನಮಗೆ ಕಿರುಕುಳ ನೀಡಬಹುದು, ಆದರೆ ನಾವು ಜಯ ಸಿಗುವವರೆಗೂ ವಿಶ್ರಮಿಸುವುದಿಲ್ಲ”ಎಂದು ದಲ್ಬೀರ್ ಹೇಳಿದರು.
ದಲ್ಬೀರ್ ಕೌರ್ ಮತ್ತು 8-10 ಮಹಿಳೆಯರ ಗುಂಪು ಪೊಲೀಸ್ ದೌರ್ಜನ್ಯ ಮತ್ತು ಹೊಸ ಕೃಷಿ ಕಾನೂನುಗಳ ವಿರುದ್ಧ ಘೋಷಣೆಗಳನ್ನು ಕೂಗಿತು.
ಗಣರಾಜ್ಯೋತ್ಸವದ ಘರ್ಷಣೆಯಲ್ಲಿ ಗಾಯಗೊಂಡ ರೈತರಿಗೆ ಸಹಾಯ ಮಾಡಲು ತಾನು ಬಂದಿದ್ದೇನೆ ಎಂದು ಮತ್ತೊಬ್ಬ ರೈತ ಮಹಿಳೆ ಮಂದೀಪ್ (50) ಹೇಳಿದ್ದಾರೆ. “ನಾನು ಎರಡು ಪಾತ್ರೆಗಳು ಮತ್ತು ಒಣ ಹಣ್ಣುಗಳನ್ನು ಖರೀದಿಸಿದ್ದೇನೆ. ಕಪುರ್ಥಾಲಾದ ನನ್ನ ಅನೇಕ ರೈತ ಸಹೋದರರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದಾಗ ನನಗೆ ಆಘಾತವಾಯಿತು. ನಾವಿಬ್ಬರೂ ರೈತರಿಗೆ ಸಹಾಯ ಮಾಡಲು ಬಯಸಿದ್ದರಿಂದ ನಾನು ನನ್ನ ಗಂಡನೊಂದಿಗೆ ಬಂದಿದ್ದೇನೆ. ನಾವು ಟಿಕಾಯತ್‌ಜಿ ಅವರನ್ನು ಗೌರವಿಸುತ್ತೇವೆ. ಹೊಸ ಕಾನೂನುಗಳನ್ನು ರದ್ದುಗೊಳಿಸುವವರೆಗೆ ಇಲ್ಲಿ ಪ್ರತಿಭಟಿಸುತ್ತೇವೆ. ಪೊಲೀಸರು ಪ್ರಕರಣಗಳನ್ನು ದಾಖಲಿಸಬಹುದು ಮತ್ತು ನಮ್ಮನ್ನು ಭಯೋತ್ಪಾದಕರು ಎಂದು ಕರೆಯಬಹುದು. ನಾವು ಅವರೊಂದಿಗೆ ಹೋರಾಡುತ್ತೇವೆ. ನಾವು ಬಿಡುವುದಿಲ್ಲ” ಎಂದು ಅವರು ಹೇಳಿದರು.
ಇದನ್ನೂ ಓದಿ; ಮಥುರಾ, ಬಾಗ್‌ಪತ್‌ನಲ್ಲಿ ಬೃಹತ್ ಮಹಾಪಂಚಾಯತ್: ಬಿಜೆಪಿಗೆ ಸಾಮಾಜಿಕ ಬಹಿಷ್ಕಾರ ನಿರ್ಣಯ


