ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಖಾಸಗೀಕರಣಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ. ಕೇಂದ್ರ ಸರ್ಕಾರವು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ 3 ವಿಮಾನ ನಿಲ್ದಾಣಗಳನ್ನು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಗ್ರೂಪ್ಸ್‌ಗೆ ಗುತ್ತಿಗೆಗೆ ನೀಡಿತ್ತು.
ಇದನ್ನು ಪ್ರಶ್ನಿಸಿ ಮತ್ತು 2019 ರಲ್ಲಿ ಸಂಸತ್ ಈ ಕುರಿತು ತೆಗೆದುಕೊಂಡ ನಿರ್ಧಾರವನ್ನು ರದ್ದುಗೊಳಿಸುವಂತೆ ಕೋರಿ ಮಂಗಳೂರಿನ ವಿಮಾನ ನಿಲ್ದಾಣ ಪ್ರಾಧಿಕಾರ ನೌಕರರ ಒಕ್ಕೂಟ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಮ್ ಅವರ ವಿಭಾಗೀಯ ಪೀಠ ಕೇಂದ್ರಕ್ಕೆ ನೋಟಿಸ್ ನೀಡಿದೆ.
ಇದನ್ನೂ ಓದಿ: ಹೊಸ ವರ್ಷ: ಪ್ರಧಾನಿ ಮೋದಿ ಸರ್ಕಾರ ಅದಾನಿ ಗ್ರೂಪ್ಸ್‌ಗೆ ನೀಡಿದ ಗಿಫ್ಟ್ ಏನು ಗೊತ್ತಾ?
ಆರು ವಿಮಾನ ನಿಲ್ದಾಣಗಳನ್ನು ಸಾರ್ವಜನಿಕ ಸಹಭಾಗಿತ್ವದಲ್ಲಿ ಮುನ್ನಡೆಸಲು ಕೇಂದ್ರ ಸಚಿವ ಸಂಪುಟ 2018 ರ ನವೆಂಬರ್ 8 ರಂದು ತಾತ್ವಿಕವಾಗಿ ಅನುಮೋದನೆ ನೀಡಿತ್ತು. ಆ ಕ್ಯಾಬಿನೆಟ್ ನಿರ್ಧಾರದ ಮೇಲೆ ಖಾಸಗೀಕರಣಕ್ಕಾಗಿ ನಡೆದ ಬಿಡ್ಡಿಂಗ್ ಪ್ರಕ್ರಿಯೆಯನ್ನು ‘ಕಾನೂನುಬಾಹಿರ, ಅನಿಯಂತ್ರಿತ ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರ ಕಾಯ್ದೆಯ ವ್ಯಾಪ್ತಿಗೆ ಮೀರಿದೆ’ ಎಂದು ಘೋಷಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.
ಕೇಂದ್ರ ಸರ್ಕಾರ ಈ ಹಿಂದೆ 12 ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ನಿರ್ಧರಿಸಿತ್ತು. ಇದರ ಬಗ್ಗೆ ಅದಾನಿ ಸಂಸ್ಥೆಯೊಂದಿಗೆ 2020 ರ ಫೆಬ್ರವರಿಯಲ್ಲಿ ಒಪ್ಪಂದ ನಡೆದಿತ್ತು. ಈ ಪ್ರಕಾರ ಮೊದಲ ಹಂತದಲ್ಲಿ 6 ವಿಮಾನ ನಿಲ್ದಾಣಗಳ ಖಾಸಗೀಕರಣಕ್ಕೆ ನಡೆದ ಟೆಂಡರ್ ಪ್ರಕ್ರಿಯೆಯಲ್ಲಿ ಅದಾನಿ ಸಮೂಹ ಸಂಸ್ಥೆ ಅತ್ಯಧಿಕ ಮೊತ್ತ ನಮೂದಿಸುವ ಮೂಲಕ ಗೆದ್ದುಕೊಂಡಿದೆ ಎಂದು ಸರ್ಕಾರ ಹೇಳಿತ್ತು.
ಇದರನ್ವಯ ಲಕ್ನೋ, ಅಹಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳನ್ನು ಗುತ್ತಿಗೆ ಮೇಲೆ ನಿರ್ವಹಿಸುವ ಹಕ್ಕನ್ನು ಅದಾನಿ ಎಂಟರ್ ಪ್ರೈಸಸ್ ಪಡೆದುಕೊಂಡಿದೆ.
ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!



ಬಡಜನರಿಗೆ ತುಂಬಾ ಕಷ್ಟರವಾಗಿದೆ ಈ ಬಿಜೆಪಿ ಸರ್ಕಾರದಿದ್ದ