ವಿದೇಶಿ ಸೆಲೆಬ್ರಿಟಿಗಳು ಮತ್ತು ಇತರ ಗಣ್ಯರು ಭಾರತದ ರೈತ ಪ್ರತಿಭಟನೆಯನ್ನು ಬೆಂಬಲಿಸಿ ಮಾಡಿದ ಟ್ವೀಟ್‌ಗಳಿಂದ ಸರ್ಕಾರಕ್ಕೆ ಜಾಗತಿಕ ಮಟ್ಟದಲ್ಲಿ ಇರಿಸುಮುರಿಸು ಉಂಟಾಗಿದೆ ಎನ್ನಲಾಗಿದೆ.
“ಭಾರತದ ಸಂಸತ್ತು ಸುದೀರ್ಘವಾಗಿ ಚರ್ಚಿಸಿಯೇ ಈ ಕಾಯ್ದೆಗಳನ್ನು ಜಾರಿಗೆ ತಂದಿದೆ. ದೇಶದ ಕೆಲವು ಭಾಗಗಳ ರೈತರ ಸಣ್ಣ ವರ್ಗವೊಂದು ಇದನ್ನು ವಿರೋಧಿಸುತ್ತಿದೆ. ಪ್ರಚೋದನಾಕಾರಿ ಪೋಸ್ಟ್, ಟ್ವೀಟ್ ಮಾಡುವ ಮೊದಲು ವಾಸ್ತವ ಅರಿಯಿರಿ” ಎಂದು ಭಾರತದ ವಿದೇಶಾಂಗ ವ್ಯವಹಾರ ಸಚಿವಾಲಯ ಇಂದು ಪ್ರಕಟಣೆ ನೀಡಿದೆ.
ಇದನ್ನೂ ಓದಿ: ರೈತ ಹೋರಾಟ ಬೆಂಬಲಿಸಿದ ರಿಹಾನ್ನಾ: ಗೌರವಾರ್ಥವಾಗಿ ಹಾಡು ಸಮರ್ಪಿಸಿದ ದಿಲ್ಜಿತ್!
ನಿನ್ನೆ ಅಂತರರಾಷ್ಟ್ರೀಯ ಪಾಪ್ ತಾರೆ ರಿಹಾನ್ನಾ ಭಾರತದ ರೈತ ಹೋರಾಟ ಬೆಂಬಲಿಸಿ ಮಾಡಿದ ಟ್ವೀಟ್ ನಂತರ, ಕಿರಿಯ ಪರಿಸರ ಹೋರಾಟಗಾರ್ತಿ ಗ್ರೇಥಾ ಥನ್‌ಬರ್ಗ್ ಮತ್ತು ಜಗತ್ತಿನ ವಿವಿಧ ಭಾಗಗಳ ಜನಪ್ರತಿನಿಧಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ರೈತ ಹೋರಾಟಕ್ಕೆ ಅಪಾರ ಬೆಂಬಲವನ್ನು ನೀಡಿದ್ದಾರೆ.

ಬ್ರಿಟನ್ ಸಂಸದೆ ಕ್ಲೌಡಿಯಾ ವೆಬ್ಬೆ, ಅಮೆರಿಕದ ವಿದೇಶಾಂಗ ಸಮಿತಿಯ ಸದಸ್ಯ ಡೆಮಾಕ್ರಟ್ ಜಿಮ್ ಕೋಸ್ಟಾ ಮುಂತಾದವರು ರೈತ ಹೋರಾಟ ಬೆಂಬಲಿಸಿದ್ದರು.
ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!
“ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಪಡಿಸುವ ಪ್ರಚೋದನಾಕಾರಿ ಸಂದೇಶ, ಹ್ಯಾಷ್‌ಟ್ಯಾಗ್‌ಗಳು ಜವಾಬ್ದಾರಿಯಿಂದ ಕೂಡಿರುವುದಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಭಾರತದ ವಿರುದ್ಧ ಜಾಗತಿಕ ಸಮುದಾಯವನ್ನು ಎತ್ತಿಕಟ್ಟುವ ಪ್ರಯತ್ನ ನಡೆಸಿವೆ. ಇದು ಖಂಡನೀಯ. ಈ ಕಾನೂನುಗಳು ರೈತರ ಹಿತ ಕಾಪಾಡುತ್ತವೆ. ರೈತರ ಸಂಶಯ ನಿವಾರಿಸಲು 11 ಸುತ್ತಿನ ಮಾತುಕತೆ ನಡೆಸಲಾಗಿದೆ. ಮಾತುಕತೆಗೆ ಇನ್ನೂ ಬಾಗಿಲು ತೆರೆದಿದೆ” ಎಂದು ವಿದೇಶಾಂಗ ಸಚಿವಾಲಯ ಅಬಿಪ್ರಾಯಪಟ್ಟಿದೆ.
ವಿದೇಶಿ ಗಣ್ಯರ ಟ್ವೀಟ್‌ಗಳು ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮುಜುಗರ ಉಂಟು ಮಾಡಿದ ಪರಿಣಾಮ ವಿದೇಶಾಂಗ ಸಚಿವಾಲಯ ಈ ಪ್ರಕಟಣೆ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಗ್ರೇಥಾ ಥನ್‌ಬರ್ಗ್ ಮತ್ತು ಪಾಪ್ ಗಾಯಕಿ ರಿಹಾನ್ನಾ ಬೆಂಬಲ; ನೆಟ್ಟಿಗರ ಪ್ರತಿಕ್ರಿಯೆಯೇನು?


