ಯಾರೂ ಇಲ್ಲದ ಸಮಯದಲ್ಲಿ ಹಾಡಹಗಲೇ ಕಿಡಿಗೇಡಿಗಳು ಗುಡಿಸಲಿಗೆ ಬೆಂಕಿ ಹಚ್ಚಿದ ಪರಿಣಾಮ ಎರಡು ಮೇಕೆ ಮತ್ತು ದವಸಧಾನ್ಯ ಸುಟ್ಟು ಕರಕಲಾಗಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ. ದಂಪತಿ ಕೂಲಿಗೆ ಹೋಗಿದ್ದಾಗ ಈ ಘಟನೆ ನಡೆದಿದ್ದು ಎಲ್ಲವನ್ನೂ ಕಳೆದುಕೊಂಡಿರುವ ಅವರ ರೋಧನ ಮುಗಿಲು ಮುಟ್ಟಿತ್ತು.
ತಾಲೂಕಿನ ಹರಿಹರಾಪುರ ಗ್ರಾಮದ ತಿಮ್ಮಕ್ಕ-ದೊಡ್ಡಹನುಮಂತರಾಯಪ್ಪ ಕೂಲಿಗೆ ಹೋಗಿದ್ದರು. ಮನೆ ಮುಂದೆಯೇ ಎರಡು ಮೇಕೆಗಳನ್ನು ಕಟ್ಟಿಹಾಕಿದ್ದರು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ತಿಮ್ಮಕ್ಕನ ಮನೆಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ 20 ಸಾವಿರ ಬೆಲೆ ಬಾಳುವ ಎರಡು ಮೇಕೆ, ದವಸ-ಧಾನ್ಯ, ಬಟ್ಟೆ-ಬರೆ ಎಲ್ಲವೂ ಸುಟ್ಟು ಹೋಗಿದೆ.
ಇದನ್ನೂ ಓದಿ: ರಿಹಾನ್ನಾ ಟ್ವೀಟ್ ಪರಿಣಾಮ-ರೈತ ಹೋರಾಟಕ್ಕೆ ಜಾಗತಿಕ ಮನ್ನಣೆ!
ಕೂಲಿಗೆ ಹೋಗಿದ್ದ ತಿಮ್ಮಕ್ಕಳಿಗೆ ಈ ವಿಷಯ ಮುಟ್ಟುತ್ತಿದ್ದಂತೆಯೇ ಮನೆಗೆ ಬಂದ ಆಕೆ, ಬೆಂಕಿ ಹಚ್ಚಿದವರ ವಿರುದ್ಧ ಬೈಯ್ಯುತ್ತ ಗೊಳೋ ಎಂದು ಕಣ್ಣೀರು ಸುರಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಈ ಕುಟುಂಬ, ಆದಾಯದ ಮೂಲವಾಗಿದ್ದ ಮೇಕೆಗಳನ್ನು ಮತ್ತು ವಾಸಕ್ಕಿದ್ದ ಮನೆ ಕಳೆದು ಕೊಂಡಿರುವುದಕ್ಕೆ ದುಃಖದಲ್ಲಿ ಮುಳುಗಿದೆ.
ಗ್ರಾಮದಲ್ಲಿ ಗುಡಿಸಲಿಗೆ ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆಯೇ ಅರಸಿಕೆರೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಂದಾಯ ಅಧಿಕಾರಿ ಮತ್ತು ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಗ್ರಾಮಕ್ಕೆ ಭೇಟಿ ಘಟನೆಯ ಮಾಹಿತಿ ಪಡೆದುಕೊಂಡು ಹೋಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಇದನ್ನೂ ಓದಿ: ಗಾಜಿಪುರದಲ್ಲಿರುವ ಭದ್ರತಾ ವ್ಯವಸ್ಥೆ ಪಾಕಿಸ್ತಾನ ಗಡಿಯಲ್ಲೂ ಇಲ್ಲ: ರಾಮ್ ಗೋಪಾಲ್ ಯಾದವ್


