ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ 73 ದಿನಗಳಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟಿಸುತ್ತಿರುವ ರೈತರು ಇಂದು ದೇಶಾದ್ಯಾಂತ ಚಕ್ಕಾ ಜಾಮ್ (ಸಂಚಾರ ಸ್ಥಗಿತ ಹೋರಾಟ) ಗೆ ಕರೆ ನೀಡಿದ್ದಾರೆ. ಈ ರೈತ ಹೋರಾಟವನ್ನು ಬೆಂಬಲಿಸಿ ಹತ್ತಾರು ಕಾರ್ಮಿಕ ಸಂಘಟನೆಗಳು ಹೇಳಿಕೆ ನೀಡಿದ್ದವು. ಅಲ್ಲದೇ ಚಕ್ಕಾ ಜಾಮ್‌ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ನಿರ್ಣಯಿಸಿದ್ದವು. ಇದನ್ನು ಹತ್ತಿಕ್ಕಲು ದೆಹಲಿ ಪೊಲೀಸರು ಶುಕ್ರವಾರ ರಾತ್ರಿಯಿಂದಲೇ ಹತ್ತಾರು ಕಾರ್ಮಿಕ ಮುಖಂಡರನ್ನು ಬಂಧಿಸಿದ್ದಾರೆ.
ದೆಹಲಿಯ ಐಟಿಒನ ಶಹೀದ್ ಪಾರ್ಕ್‌ನಲ್ಲಿ ಇಂದು ಬೃಹತ್ ಹೋರಾಟ ನಡೆಸಲು ಕಾರ್ಮಿಕ ಸಂಘಟನೆಗಳು ನಿರ್ಧಿರಿಸದ್ದವು. ಈ ಕುರಿತು ದೆಹಲಿ ಪೊಲೀಸರ್ ನೋಟಿಸ್ ಸಹ ನೀಡಲಾಗಿತ್ತು. ಆದರೆ ಕಳೆದ ರಾತ್ರಿಯಿಂದ ಟ್ರೇಡ್ ಯೂನಿಯನ್ ಮುಖಂಡರನ್ನು ಪೊಲೀಸರು ಸಿಕ್ಕ ಸಿಕ್ಕಲ್ಲಿ ಬಂಧಿಸುತ್ತಿದ್ದಾರೆ. ಉತ್ತರ ದೆಹಲಿ ಸಿಐಟಿಯು ಕಾರ್ಯದರ್ಶಿಯಾಗಿರುವ ವಿಪಿನ್ ಅವರನ್ನು ಬದ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಎಐಯುಟಿಯುಸಿ ರಾಜ್ಯ ಕಾರ್ಯದರ್ಶಿ ಚೌರಾಸಿಯಾ ಅವರನ್ನು ಬುರಾರಿ ಪೊಲೀಸರು ವಶಕ್ಕೆ ಪಡೆದ ನಂತರ ಅವರನ್ನು ಗೃಹಬಂಧನದಲ್ಲಿರಿಸಿದ್ದಾರೆ. ಇಂದು ಬೆಳಿಗ್ಗೆ 5 ಗಂಟೆಗೆ ದೆಹಲಿಯ ಐಎಫ್‌ಟಿಯು ರಾಜ್ಯ ಕಾರ್ಯದರ್ಶಿ ಕಾಮ್ರೇಡ್ ಅನಿಮೆಶ್ ಅವರನ್ನು ಸಿ.ಆರ್ ಪಾರ್ಕ್‌ನಲ್ಲಿರುವ ಅವರ ಮನೆಯಿಂದ ಬಂಧಿಸಲಾಗಿದೆ. ಐಎಫ್‌ಟಿಯುಗೆ ಸಂಬಂಧಿಸಿದ ಪ್ರಗತಿಶೀಲ್ ಮಹಿಳಾ ಸಂಘಟನ್‌ನ ಪೂನಮ್ ಕೌಶಿಕ್ ರವರನ್ನು ಗೃಹಬಂಧನದಲ್ಲಿಡಲಾಗಿದೆ. ಪೊಲೀಸರು ಅವರ ಮನೆಯ ಹೊರಗೆ ಕಾವಲು ಕಾಯುತ್ತಿದ್ದಾರೆ. ಎಐಸಿಸಿಟಿಯುನ ಸೂರ್ಯ ಪ್ರಕಾಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮಜ್ದೂರ್ ಸಹಯೋಗ್ ಕೇಂದ್ರದ ಸಂಚಾಲಕರಾದ ನಯನ್‌ರವರು ಆರೋಪಿಸಿದ್ದಾರೆ.
ಇಂದು ನಾವು ಐಟಿಓದಲ್ಲಿ ಚಕ್ಕಾ ಜಾಮ್ ನಡೆಸುತ್ತಿರಲಿಲ್ಲ. ಬದಲಿಗೆ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದೆವು. ಇದು ಶಹೀದ್ ಪಾರ್ಕ್ ಒಳಗೆ ನಡೆಯುವ ಶಾಂತಿಯುತ ಪ್ರತಿಭಟನೆಯಾಗಿತ್ತು. ಅಲ್ಲಿ ಸಾಮಾನ್ಯವಾಗಿ ಅನೇಕ ಕಾರ್ಯಕ್ರಮಗಳು ನಡೆಯುತ್ತವೆ. ಆದರೆ ಆ ಕಾರ್ಯಕ್ರಮವನ್ನು ತಡೆಯುವುದಕ್ಕಾಗಿ ಈ ಬಂಧನಗಳನ್ನು ಪೊಲೀಸರು ಮಾಡಿದ್ದಾರೆ. ಅಲ್ಲದೆ ಅದಕ್ಕೆ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದು ಎಲ್ಲಾ ಕಾರ್ಮಿಕ ಸಂಘಗಳು, ವಿದ್ಯಾರ್ಥಿ ಸಂಘಟನೆಗಳು, ಮಹಿಳಾ ಸಂಘಟನೆಗಳು, ಪ್ರಜಾಪ್ರಭುತ್ವ ಹಕ್ಕುಗಳ ಸಂಘಟನೆಗಳ ಜಂಟಿ ಪ್ರತಿಭಟನೆಯಾಗಿತ್ತು. ಇದೇ ರೀತಿಯಾಗಿ ಈಗಾಗಲೇ ದೆಹಲಿ ಫಾರ್ ಫಾರ್ಮರ್ಸ್ ಹೆಸರಿನಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ನಡೆದಿವೆ. ಅವುಗಳೆಲ್ಲದರ ಸಮಾರೋಪ ಕಾರ್ಯಕ್ರಮವಾಗಿ ಇಂದು ನಾವು ಶಹೀದ್ ಪಾರ್ಕ್‌ನ ಒಳಗೆ ಕಾರ್ಯಕ್ರಮ ನಡೆಸಲು ಯೋಜಿಸಿದ್ದೆವು. ಆದರೆ ಪೊಲೀಸರು ಸಹ ಅಡ್ಡಿಪಡಿಸುತ್ತಿದ್ದಾರೆ ಮತ್ತು ನಮಗೆ ಅವಕಾಶ ನೀಡುತ್ತಿಲ್ಲ ಎಂದು ಅವರು ದೂರಿದ್ದಾರೆ.
ದೆಹಲಿಯಲ್ಲಿ ಇಂದು ಸುಮಾರು 50 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ದೆಹಲಿಯ ಗಡಿಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ರಸ್ತೆಗಳಿಗೆ ಮುಳ್ಳಿನ ಸರಳುಗಳನ್ನು ನೆಡುವುದು, ಕಾಂಕ್ರೀಟ್ ಗೋಡೆಗಳನ್ನು ಕಟ್ಟುವುದು, ಮುಳ್ಳು ತಂತಿ ಬೇಲಿ ಮತ್ತು ದೊಡ್ಡ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಸರ್ಕಾರದ ಈ ದಮನ ಕ್ರಮಕ್ಕೆ ಪ್ರಪಂಚಾದ್ಯಂತ ಟೀಕೆ ವ್ಯಕ್ತವಾಗಿತ್ತು. ಈಗ ಪೊಲೀಸರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಕಾರ್ಮಿಕ ಮುಖಂಡರು ಸಹ ತಮ್ಮ ಪ್ರಜಾತಾಂತ್ರಿಕ ಹೋರಾಟ ನಡೆಸಲು ಬಿಡುತ್ತಿಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಪೊಲೀಸರು ಮುಳ್ಳು ನೆಟ್ಟ ಜಾಗದಲ್ಲಿಯೇ ಹೂವಿನ ಗಿಡ ನೆಟ್ಟ ರೈತನಾಯಕ ರಾಕೇಶ್ ಟಿಕಾಯತ್!


