ಪಂಜಾಬಿ ನಟ, ಕೆಂಪುಕೋಟೆ ಹಿಂಸಾಚಾರದ ಸಂಚುಕೋರ ಎಂದೇ ಕುಖ್ಯಾತನಾಗಿ ತಲೆ ಮರೆಸಿಕೊಂಡಿರುವ ದೀಪ್ ಸಿಧು, ಆ ಘಟನೆಯ ನಂತರ ಏನೇನೋ ಹೇಳಿಕೊಂಡು ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿದ್ದಾನೆ. ಈಗಲೂ ಆತನನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ!
“ಜನವರಿ 26 ರ ಘಟನೆ ನಂತರ ರೈತರ ಪ್ರತಿಭಟನೆಯ ಬಗ್ಗೆ ಸ್ಪಷ್ಟೀಕರಣಗಳನ್ನು ನೀಡುವ ಸಿಧು ವಿಡಿಯೊಗಳನ್ನು ವಿದೇಶದಲ್ಲಿರುವ ಅವನ ಗೆಳತಿ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಈ ಪ್ರಕರಣದಲ್ಲಿ ಆತನ ಬಂಧನಕ್ಕೆ ಕಾರಣವಾಗುವ ಮಾಹಿತಿ ನೀಡಿದವರಿಗೆ 1 ಲಕ್ಷ ರೂ. ಬಹುಮಾನವನ್ನು ದೆಹಲಿ ಪೊಲೀಸರು ಘೋಷಿಸಿದ್ದಾರೆ.
“ದೀಪ್ ಸಿಧುನ ಫೇಸ್ಬುಕ್ ಖಾತೆಯನ್ನು ಅವರ ಮಹಿಳಾ ಸ್ನೇಹಿತರೊಬ್ಬರು ನಿರ್ವಹಿಸುತ್ತಿದ್ದಾರೆ. ಅವನು ಆಕೆಗೆ ವೀಡಿಯೊಗಳನ್ನು ಕಳುಹಿಸುತ್ತಿದ್ದಾನೆ ಮತ್ತು ಆ ಗೆಳತಿ ಅವನ್ನು ವಿದೇಶದಿಂದ ಅಪ್ಲೋಡ್ ಮಾಡುತ್ತಾರೆ” ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಚಕ್ಕಾ ಜಾಮ್‌ಗೆ ಬೆಂಬಲ: ಹತ್ತಾರು ಕಾರ್ಮಿಕ ಮುಖಂಡರನ್ನು ಬಂಧಿಸುತ್ತಿರುವ ದೆಹಲಿ ಪೊಲೀಸರು
ದೀಪ್ ಸಿಧು ಬಿಜೆಪಿಯ ನಾಯಕರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಎಂಬುದಕ್ಕೆ ಹಲವಾರು ಫೋಟೊಗಳು ಸಾಕ್ಷಿಗಳಾಗಿವೆ. ಯಾವ ಬಿಜೆಪಿ ನಾಯಕನೂ ಈ ಫೋಟೊಗಳ ಬಗ್ಗೆ ಮಾತನಾಡಿಲ್ಲ. ದೀಪ್ ಸಿಧು ಮೋದಿ ಮತ್ತು ಶಾ ಅವರೊಂದಿಗೆ ಅತ್ಯಂತ ಸಲುಗೆಯಿಂದ ಇರುವ ಫೋಟೊಗಳು ಜ.26 ರ ಮಧ್ಯಾಹ್ನದಿಂದಲೇ ವೈರಲ್ ಆಗಿವೆ.
ದೆಹಲಿಯಲ್ಲಿ ಗಣರಾಜ್ಯೋತ್ಸವದಂದು ನಡೆದ ಹಿಂಸಾಚಾರದ ಪ್ರಮುಖ ಸಂಚುಕೋರ ದೀಪ್ ಸಿಧು ಎಂದು ಸ್ವತಂತ್ರ ಮಾಧ್ಯಮಗಳು ಆರೋಪಿಸಿದ ನಂತರ, ದೆಹಲಿ ಪೊಲೀಸರ ಅಪರಾಧ ವಿಭಾಗದ ಹಲವಾರು ತಂಡಗಳು ಸಿಧುಗೆ ನೋಟಿಸ್ ಕಳಿಸಿ, ಅವನನ್ನು ಹುಡುಕುತ್ತಿವೆ.
“ನನ್ನನ್ನು ಗದ್ದಾರ್ (ದೇಶದ್ರೋಹಿ) ಎಂದು ಹಣೆಪಟ್ಟಿ ಕಟ್ಟಲಾಗಿದ್ದರೆ, ಎಲ್ಲಾ ರೈತ ಮುಖಂಡರು ಗದ್ದಾರ್‌ಗಳು” ಎಂದು ದೀಪ್ ತನ್ನ ವೀಡಿಯೊವೊಂದರಲ್ಲಿ ಆರೋಪಿಸಿದ್ದ.
ಇದನ್ನೂ ಓದಿ: ಸ್ವಾರ್ಥ, ಹೇಡಿತನದಲ್ಲಿ ಚಿತ್ರನಟರನ್ನು ಮೀರಿಸಿದ ಕ್ರಿಕೆಟಿಗರು: ನಟ ಚೇತನ್ ಆಕ್ರೋಶ
ಏತನ್ಮಧ್ಯೆ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಜಗ್ಬೀರ್ ಸಿಂಗ್, ಬೂಟಾ ಸಿಂಗ್, ಸುಖದೇವ್ ಸಿಂಗ್ ಮತ್ತು ಇಕ್ಬಾಲ್ ಸಿಂಗ್ ಎಂಬ ನಾಲ್ವರನ್ನು ಬಂಧಿಸಲು ನೆರವಾಗುವ ಮಾಹಿತಿ ನೀಡಿದವರಿಗೆ ಪೊಲೀಸರು 50 ಸಾವಿರ ರೂ. ಬಹುಮಾನವನ್ನು ಘೋಷಿಸಿದ್ದಾರೆ.
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಟ್ರಾಕ್ಟರ್ ರ್‍ಯಾಲಿ ಸಂದರ್ಭದಲ್ಲಿ ದೀಪ್ ಸಿಧು ನೇತೃತ್ವದ ಗುಂಪು ಕೆಲವು ರೈತರನ್ನು ದಾರಿ ತಪ್ಪಿಸಿ ಕೆಂಪುಕೋಟೆ ಪ್ರವೇಶ ಮಾಡುವಂತೆ ಮಾಡಿತ್ತು. ಅಲ್ಲಿ ಸಿಧು ಗ್ಯಾಂಗ್ ಸಿಖ್ ಧ್ವಜ ಹಾರಿಸಿದ್ದರು. ಆ ಸಂದರ್ಭದಲ್ಲಿ ರೈತರು ಮತ್ತು ಪೊಲೀಸರ ನಡುವೆ ಘರ್ಷಣೆ ಸಂಭವಿಸಿ ಹಿಂಸಾಚಾರ ನಡೆದಿತ್ತು.
ಈ ಕೃತ್ಯ ತಮ್ಮ ಆಂದೋಲನವನ್ನು ಹಳಿ ತಪ್ಪಿಸುವ ಪಿತೂರಿ ಎಂದು ರೈತ ನಾಯಕರು ಆರೋಪಿಸಿದ್ದರು ಮತ್ತು ಸಿಧು “ಪಿತೂರಿ”ಯನ್ನು ಮುನ್ನಡೆಸಿದ ಸಂಚುಕೋರ ಎಂದೂ ಆರೋಪಿಸಿದ್ದರು.
ಇದನ್ನೂ ಓದಿ: ಗ್ರಾ.ಪಂ: ಮಹಿಳಾ ಸದಸ್ಯರಿಗೆ ಬೆದರಿಕೆಯೊಡ್ಡಿ ಅಧ್ಯಕ್ಷ ಸ್ಥಾನ ಕಸಿದುಕೊಂಡ ಸದಸ್ಯ?


