ಪುದುಚೇರಿ ವಿಧಾನಸಭೆಗೆ ಇನ್ನೂ ಮೂವರು ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ ಎಂದು ಬಿಜೆಪಿಯ ಪ್ರಮುಖ ಮುಖಂಡ ಶುಕ್ರವಾರ ಹೇಳಿದ್ದು, ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ ವಿ ನಾರಾಯಣಸಾಮಿ ಸರ್ಕಾರವು ವಿಶ್ವಾಸ ಮತವನ್ನು ಕಳೆದುಕೊಳ್ಳುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಅಲ್ಲಿ ಈಗಾಗಲೇ ಆಡಳಿತ ಪಕ್ಷದ ನಾಲ್ಕು ಶಾಸಕರು ರಾಜೀನಾಮೆ ನೀಡಿದ್ದು, ಅದರಲ್ಲಿ ಕಾಂಗ್ರೆಸ್‌ನ ಎ. ನಮಶ್ಶಿವಾಯಂ ಮತ್ತು ಇ. ಥೀಪೈಂಥನ್ ಈಗಾಗಲೇ ಬಿಜೆಪಿಗೆ ಸೇರಿದ್ದಾರೆ.
ಇತರ ಇಬ್ಬರು ಕಾಂಗ್ರೆಸ್ ಶಾಸಕರಾದ ಮಲ್ಲಾಡಿ ಕೃಷ್ಣ ರಾವ್ ಮತ್ತು ಎ. ಜಾನ್ ಕುಮಾರ್, ಜೆ.ಪಿ. ನಡ್ಡಾ ನೇತೃತ್ವದಲ್ಲಿ ಪಕ್ಷಕ್ಕೆ ಸೇರಲಿದ್ದಾರೆ ಎಂದು ಪುದುಚೇರಿಯ ಬಿಜೆಪಿ ಉಸ್ತುವಾರಿ ನಿರ್ಮಲ್ ಕುಮಾರ್ ಸುರಾನಾ ಹೇಳಿದ್ದಾರೆ.
ಇದನ್ನೂ ಓದಿ: ‘2014 ರಲ್ಲಿ ನಿಮ್ಮನ್ನು ನಾನೂ ನಂಬಿದ್ದೆ, ಆದರೆ…!’ – ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಶಂಕರ ಬಿದರಿ
ಈಗ ಮತ್ತೇ ವಿಧಾನಸಭಾ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿರುವ ಕಾಂಗ್ರೆಸ್ ಶಾಸಕರ ಹೆಸರನ್ನು ಹೇಳಲು ಸುರಾನಾ ನಿರಾಕರಿಸಿದ್ದಾರೆ. “ಈ ಬಗ್ಗೆ ಈಗ ಮಾತನಾಡಲು ಸಾಧ್ಯವಿಲ್ಲ. ಅವರು ಮುಖ್ಯಮಂತ್ರಿ ನಾರಾಯಣಸಾಮಿಯ ಬಗ್ಗೆ ಅಸಮಾಧಾನ ಹೊಂದಿದ್ದು, ಅವರು ರಾಜೀನಾಮೆ ನೀಡಲು ಬಯಸುತ್ತಾರೆ. ಆದರೆ ನೂರಕ್ಕೆ ನೂರು ಶೇಕಡಾ ಅವರು ರಾಜೀನಾಮೆ ನೀಡಲಿದ್ದಾರೆ” ಎಂದು ಸುರಾನ ಹೇಳಿದ್ದಾರೆ.
ಹೊಸದಾಗಿ ರಾಜೀನಾಮೆ ನೀಡುತ್ತಿರುವ ಈ ಮೂವರು ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಸುರಾನಾ, “ಬಿಜೆಪಿಯ ಸಿದ್ಧಾಂತವನ್ನು ಒಪ್ಪಿಕೊಂಡು, ಪುದುಚೇರಿಯ ಅಭಿವೃದ್ಧಿ ಬಯಸುವವರನ್ನು ಪಕ್ಷವು ತೆಗೆದುಕೊಳ್ಳಲು ಸಿದ್ಧವಾಗಿದೆ” ಎಂದು ಹೇಳಿದರು.
ಪುದುಚೇರಿಗೆ ಹೊಸದಾಗಿ ನೇಮಕಗೊಂಡ ಲೆಫ್ಟಿನೆಂಟ್-ಗವರ್ನರ್ ತಮಿಳಿಸೈ ಸುಂದರರಾಜನ್ ಅವರು ವಿಶ್ವಾಸ ಮತ ಯಾಚನೆಗಾಗಿ ಫೆಬ್ರವರಿ 22 ರಂದು ಸದನವನ್ನು ಕರೆಯುವಂತೆ ವಿಧಾನಸಭೆ ಸಚಿವಾಲಯಕ್ಕೆ ನಿರ್ದೇಶನ ನೀಡಿದ್ದಾರೆ. ಪುದುಚೇರಿ ಮತ್ತು ನೆರೆಯ ತಮಿಳುನಾಡಿನಲ್ಲಿ ಮೇ ವೇಳೆಗೆ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಪಂಜಾಬ್ ಚುನಾವಣೆ – ಬಿಜೆಪಿಗಿಂತ ಹೆಚ್ಚು ಮತ ಪಡೆದ NOTA


