ಕೇರಳದಲ್ಲಿ ಈಗ ಚುನಾವಣೆ ನಡೆದರೆ ಭಾರತೀಯ ಕಮ್ಯುನಿಷ್ಟ್ ಪಕ್ಷ(ಮಾರ್ಕ್ಸ್‌ವಾದಿ) ನೇತೃತ್ವದ ಎಲ್‌ಡಿಎಫ್ ಸರ್ಕಾರ ರಾಜ್ಯದಲ್ಲಿ ಮತ್ತೇ ಅಧಿಕಾರಕ್ಕೆ ಬರಲಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಹೀಗಾದರೆ ಕೇರಳದ 40 ವರ್ಷಗಳ ರಾಜಕೀಯ ಸಂಪ್ರದಾಯವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸರ್ಕಾರ ಮುರಿಯಲಿದೆ.
1980 ರಿಂದೀಚೆಗೆ, ಕೇರಳವು ಯಾವುದೇ ಪಕ್ಷ ಅಥವಾ ಮೈತ್ರಿ ಕೂಟಕ್ಕೆ ರಾಜ್ಯದಲ್ಲಿ ಮತ್ತೆ ಅಧಿಕಾರ ನೀಡಿಲ್ಲ.
ಏಷ್ಯಾನೆಟ್ ನ್ಯೂಸ್-ಸಿಫೋರ್ ಸಮೀಕ್ಷೆಯ ಪ್ರಕಾರ, 140 ಸದಸ್ಯರ ವಿಧಾನಸಭೆಯಲ್ಲಿ ಎಲ್‌ಡಿಎಫ್ 72-78 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ. ಸರ್ಕಾರ ಬಹುಮತ ಪಡೆಯಲು 71 ಸ್ಥಾನಗಳು ಸಾಕಾಗುತ್ತದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗೆ ಕೇವಲ 59-65 ಸ್ಥಾನಗಳಷ್ಟೇ ಸಿಗುತ್ತದೆ ಎಂದು ಅದು ತಿಳಿಸಿದೆ. ಯುಡಿಎಫ್ 2016 ರಲ್ಲಿ 47 ಸ್ಥಾನಗಳನ್ನು ಪಡೆದಿತ್ತು. ಬಿಜೆಪಿ ನೇತೃತ್ವದ ಎನ್‌ಡಿಎ 3-7 ಸ್ಥಾನಗಲು ಪಡೆಯುತ್ತದೆ ಎಂದು ಅದು ಹೇಳಿದೆ.
ಇದನ್ನೂ ಓದಿ: ಸಿಎಎ ಜಾರಿ ಮಾಡುವುದಿಲ್ಲ: ಅಮಿತ್ ಶಾಗೆ ಸ್ಪಷ್ಟ ಉತ್ತರ ನೀಡಿದ ಕೇರಳ ಮುಖ್ಯಮಂತ್ರಿ
ಉತ್ತರ ಮತ್ತು ದಕ್ಷಿಣ ಕೇರಳದಲ್ಲಿ ಯುಡಿಎಫ್ ಸ್ಥಾನಗಳನ್ನು ಕಳೆದುಕೊಳ್ಳಲಿದ್ದು ಅದು ಎಲ್‌ಡಿಎಫ್ ಪಾಲಾಗಲಿದೆ, ಆದರೆ ಮಧ್ಯ ಕೇರಳದಲ್ಲಿ ಯುಡಿಎಫ್ ಪ್ರಬಲವಾಲಿದೆ ಎಂದು ಎಂದು ಸಮೀಕ್ಷೆಯು ಊಹಿಸಿದೆ.
ಸಮೀಕ್ಷೆಯ ಪ್ರಕಾರ ಸುಮಾರು 39% ರಷ್ಟು ಜನರು ಪಿಣರಾಯಿ ವಿಜಯನ್ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಿ ಮರಳಬೇಕೆಂದು ತಿಳಿಸಿದ್ದಾರೆ. ಮಾಜಿ ಸಿಎಂ ಮತ್ತು ಕಾಂಗ್ರೆಸ್ ಮುಖಂಡ ಉಮ್ಮನ್ ಚಾಂಡಿ ಅವರನ್ನು 18% ಜನರಷ್ಟೇ ಆಯ್ಕೆ ಮಾಡಿಕೊಂಡರೆ, ಅವರ ಸಹೋದ್ಯೋಗಿ ಮತ್ತು ತಿರುವನಂತಪುರ ಸಂಸದ ಶಶಿ ತರೂರ್ ಅವರು 9% ಮತಗಳನ್ನು ಪಡೆದ್ದಾರೆ. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ 7% ಮತಗಳನ್ನು ಪಡೆದರೆ, ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್ 6% ಮತಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಕೇರಳ, ಗೋವಾದ ಬೀಫ್ ಗೋಮಾತೆಯಲ್ಲವೆ: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ
ಸಮೀಕ್ಷೆಯ ಪ್ರಕಾರ, 34% ರಷ್ಟು ಜನರು ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಿದ್ದು ಎಲ್‌ಡಿಎಫ್ ಸರ್ಕಾರದ ದೊಡ್ಡ ಸಾಧನೆ ಎಂದು ಹೇಳಿದ್ದಾರೆ. ಪ್ರತಿಕ್ರಿಯಿಸಿದವರಲ್ಲಿ 27% ಜನರು ಕಲ್ಯಾಣ ಪಿಂಚಣಿ ನೀಡಿದ್ದು ದೊಡ್ಡ ಸಾಧನೆ ಎಂದಿದ್ದರೆ, 18% ಜನರು ಸರ್ಕಾರದ ಕೊರೊನಾ ನಿರ್ವಹಣೆಯನ್ನು ಶ್ಲಾಘಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.
ಕಳೆದ ವರ್ಷ ಜೂನ್‌ನಲ್ಲಿ ಏಷ್ಯಾನೆಟ್ ನ್ಯೂಸ್-ಸಿಫೋರ್ ನಡೆಸಿದ ಇದೇ ರೀತಿಯ ಸಮೀಕ್ಷೆಯು ಚುನಾವಣೆಗಳನ್ನು ನಡೆಸಿದರೆ ಎಲ್‌ಡಿಎಫ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಊಹಿಸಿತ್ತು. ಅದರಂತೆ ಡಿಸೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಲ್‌ಡಿಎಫ್ ಬಹುಪಾಲು ಪಂಚಾಯಿತಿಗಳು, ಬ್ಲಾಕ್ ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು ಮತ್ತು ಕಾರ್ಪೋಷನ್‌ಗಳನ್ನು ಗೆಲ್ಲುವ ಮೂಲಕ ಭಾರಿ ಜಯಗಳಿಸಿತ್ತು.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧದ ನಿರ್ಣಯ ಬೆಂಬಲಿಸಿದ ಕೇರಳದ ಬಿಜೆಪಿ ಶಾಸಕ!


