ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವುದು ಸೇರಿದಂತೆ ಹಲವು ಹಕ್ಕೊತ್ತಾಯಗಳ ಈಡೇರಿಕೆಗೆ ಒತ್ತಾಯಿಸಿ ಬಿಬಿಎಂಪಿ ಪೌರಕಾರ್ಮಿಕರ ಸಂಘದ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಪೌರಕಾರ್ಮಿಕರು ಪ್ರತಿಭಟನೆ ನಡೆಸಿದರು.
ಕಸಗುಡಿಸುವ ಪೌರಕಾರ್ಮಿಕರಿಗೆ ಮಾತ್ರ ಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ ಖಾಯಂ ಮಾಡಲಾಗಿದೆ. ಆದರೆ, ರಾಜ್ಯ ಸರ್ಕಾರವು ಗುತ್ತಿಗೆದಾರರ ಕೋರಿಕೆಗೆ ತಲೆಬಾಗುತ್ತಾ ವಾಹನ ಚಾಲಕರು, ಸಹಾಯಕರು ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಇತರೆ ಪೌರ ಕಾರ್ಮಿಕರನ್ನು ಗುತ್ತಿಗೆ ಪದ್ಧತಿಯಲ್ಲೇ ಉಳಿಸಿಕೊಂಡಿದೆ ಎಂದು ಸಂಘವು ದೂರಿದೆ.
ನೇರ ಪಾವತಿ ಸಂಭಾವನೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಇಎಸ್‌ಐ ಮತ್ತು ಪಿಎಫ್ ಸೌಲಭ್ಯಗಳು ಸರಿಯಾಗಿ ಸಿಗುತ್ತಿಲ್ಲ. ಸಮರ್ಪಕ ಕಾರಣವಿಲ್ಲದೆ ಕಾರ್ಮಿಕರನ್ನು ವರ್ಗಾವಣೆ ಮಾಡಲಾಗುತ್ತಿದೆ. ಕೆಲಸದ ಸಮಯದಲ್ಲಿ ಸಾವನ್ನಪ್ಪಿದ ಕಾರ್ಮಿಕರಿಗೆ ಪರಿಹಾರ ನೀಡುತ್ತಿಲ್ಲ, ಕೆಲಸ ಮಾಡಲು ಬೇಕಾದ ಯಂತ್ರಗಳು ಮತ್ತು ಸುರಕ್ಷಿತ ಕವಚಗಳನ್ನು ನೀಡುತ್ತಿಲ್ಲ ಎಂದು ಪೌರಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರ ನಮ್ಮನ್ನು ‘ಗುತ್ತಿಗೆ ಕಾರ್ಮಿಕರು, ನೇರ ಪಾವತಿ ಸಂಭಾವನೆ ಕಾರ್ಮಿಕರು, ಖಾಯಂ ನೌಕರರು, ಕಸ ಗುಡಿಸುವವರೂ, ವಾಹನ ಚಾಲಕರು ಮತ್ತು ಸಹಾಯಕರು’ ಎಂಬ ಹಣೆಪಟ್ಟಿಯನ್ನು ಕಟ್ಟುತ್ತಾ ನಮ್ಮನ್ನು ಬೇರ್ಪಡಿಸಲು ಯತ್ನಿಸುತ್ತಿದೆ. ಈ ಪಟ್ಟಿಗಳು ಕಾರ್ಮಿಕರ ಮಧ್ಯ ತಾರತಮ್ಯ ಮಾಡುವುದಲ್ಲದೆ ನಮ್ಮ ಮಾಲೀಕರು ನಮ್ಮನ್ನು ತುಳಿಯಲು ಸಹಾಯಕವಾಗುತ್ತಿವೆ. ಕಾರ್ಮಿಕರ ಐಕ್ಯತೆಯನ್ನು ಒಡೆಯುವುದಲ್ಲದೆ ಕಾರ್ಮಿಕರ ಶೋಷಣೆಗೆ ಹಾದಿ ಮಾಡಿಕೊಡುತ್ತದೆ. ಗುತ್ತಿಗೆ ಪದ್ಧತಿಯ ಸಂಪೂರ್ಣ ರದ್ದತಿ, ಕಾರ್ಮಿಕರಿಗೆ ಸಮಾನತೆ, ದೌರ್ಜನ್ಯ ಮತ್ತು ಶೋಷಣೆಯಿಂದ ಮುಕ್ತಿಯನ್ನು ನಾವು ಕೇಳುತ್ತಿದ್ದೇವೆ ಎಂದು ಆಗ್ರಹಿಸಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು, ಕನಿಷ್ಟ ವೇತನವನ್ನು 30,000/- ಕ್ಕೆ ಹೆಚ್ಚಳ ಮಾಡಬೇಕು, ಎಲ್ಲಾ ಪೌರಕಾರ್ಮಿಕರಿಗೆ ಉಚಿತ ವಸತಿಯನ್ನು ಕಲ್ಪಿಸಿಕೊಡಬೇಕು, ಎಲ್ಲಾ ಪೌರಕಾರ್ಮಿಕರನ್ನು ಈ ಕೂಡಲೇ ಖಾಯಂಗೊಳಿಸಬೇಕು ಮತ್ತು ವಾಹನ ಚಾಲಕರು, ಸಹಾಯಕರನ್ನು ನೇರ ಪಾವತಿ ಸಂಭಾವನೆ ವ್ಯವಸ್ಥೆಯಡಿಯಲ್ಲಿ ಸೇರಿಸಿ, ಅವರನ್ನೂ ಖಾಯಂಗೊಳಿಸಬೇಕು ಎಂದು ಪೌರಕಾರ್ಮಿಕರು ಒತ್ತಾಯಿಸಿದರು.
ಇದನ್ನೂ ಓದಿ: ದಿಶಾ ರವಿಯ ಜಾಮೀನು ಆದೇಶ: ದೇಶದ್ರೋಹದ ಬಗ್ಗೆ ನ್ಯಾಯಾಧೀಶರು ಹೇಳಿದ್ದೇನು?


