“ಸರ್ಕಾರಿ ಸ್ವಾಮ್ಯದ ಉದ್ಯಮಗಳನ್ನು ಹಾಗೇ ಮುಂದುವರೆಸಬೇಕು ಎಂದೇನಿಲ್ಲ” ಎಂದು ಪ್ರಧಾನಿ ನರೇಂದ್ರ ಮೋದಿ ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆ ಖಾಸಗೀಕರಣ ಕುರಿತಾದ ವೆಬಿನಾರ್‌ನಲ್ಲಿ ಹೇಳಿದ್ದಾರೆ.
2021ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ಹಲವು ಸುಧಾರಣಾ ಕ್ರಮಗಳ ಕುರಿತು ಮಾತನಾಡಿದ ಪ್ರಧಾನಿ, “ವ್ಯಾಪಾರ ವ್ಯವಹಾರಕ್ಕೆ ಬೆಂಬಲ ನೀಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಆದರೆ ಕೇಂದ್ರ ಸರ್ಕಾರವೇ ನೇರವಾಗಿ ವ್ಯಾಪಾರ ವಹಿವಾಟು ನಡೆಸಬೇಕು, ಕಂಪನಿ ನಡೆಸಬೇಕು ಎನ್ನುವ ಅವಶ್ಯಕತೆ ಇಲ್ಲ. ಈ ಹಿಂದೆ ಕಾಲದ ಅಗತ್ಯಕ್ಕೆ ತಕ್ಕಂತೆ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಸ್ಥಾಪಿಸಲಾಗಿತ್ತು, ಜೊತೆಗೆ ಅವುಗಳನ್ನು ಸ್ಥಾಪಿಸಿದ ಉದ್ದೇಶವೂ ವಿಭಿನ್ನವಾಗಿತ್ತು. 50-60 ವರ್ಷಗಳಷ್ಟು ಹಳೆಯ ಕಾಯ್ದೆಗಳನ್ನು ಈಗ ಸುಧಾರಣೆ ಮಾಡಲು ಸಾಧ್ಯವಿದೆ. ನಾವು ಈಗ ಸುಧಾರಣೆಯನ್ನು ತರುತ್ತಿದ್ದೇವೆ. ಹಾಗಾಗಿ ಸಾರ್ವಜನಿಕರ ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಲು ನಾವು ಆದ್ಯತೆ ನೀಡಿದ್ದೇವೆ” ಎಂದು ಹೇಳಿದ್ದಾರೆ.
Speaking on various reforms undertaken in this year’s Budget. Watch. https://t.co/RjP4EEEtet
— Narendra Modi (@narendramodi) February 24, 2021
“ಕೇಂದ್ರ ಸರ್ಕಾರಿ ಸ್ವಾಮ್ಯದ 4 ಪ್ರಮುಖ ಕ್ಷೇತ್ರಗಳ ಕಂಪನಿಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿರುವ ಸುಮಾರು 100 ಕಂಪನಿಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ ಎಂಬುದಾಗಿ ಲೈವ್ ಮಿಂಟ್ ವರದಿ ಮಾಡಿದೆ.
“ಹಲವು ವರ್ಷಗಳಿಂದ ಸರ್ಕಾರಿ ಸ್ವಾಮ್ಯದ ಕಂಪನಿಗಳನ್ನು ಕೇಂದ್ರ ಸರ್ಕಾರ ನಡೆಸಿಕೊಂಡು ಬಂದಿದೆ ಎಂಬ ಮಾತ್ರಕ್ಕೆ ನಾವು ಅದನ್ನು ಮುಂದುವರೆಸಬೇಕು ಎಂದೇನಿಲ್ಲ. ಸಮಾಜದ ಕಲ್ಯಾಣ ಮತ್ತು ದೇಶದ ಜನತೆಗೆ ಸಂಬಂಧಿಸಿದ ನೀತಿ ನಿಯಮಗಳ ಮೇಲೆ ಮಾತ್ರ ಸರ್ಕಾರದ ಗಮನ ಇರಬೇಕು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಅಧಿಕಾರಿಗಳು ತಮ್ಮ ಸಾಮರ್ಥ್ಯವನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ವ್ಯವಹಾರ ಮಾಡಲು ವಿನಿಯೋಗಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ವಿಜ್ಞಾನಿಗಳು, ಶಿಕ್ಷಣತಜ್ಞರ ಆಕ್ಷೇಪ: ವೆಬಿನಾರ್ ನಿರ್ಬಂಧ ಹಿಂಪಡೆದ ಕೇಂದ್ರ ಸರ್ಕಾರ
“ಹಲವು ಸರ್ಕಾರಿ ಸ್ವಾಮ್ಯದ ಕಂಪನಿಗಳು ನಷ್ಟದಲ್ಲಿವೆ. ಹಲವು ಕಂಪನಿಗಳಿಗೆ ಜನರ ಹಣದಿಂದ ಬೆಂಬಲ ನೀಡಬೇಕಾದ ಸ್ಥಿತಿ ಇದೆ. ಹಲವು ವರ್ಷಗಳ ಹಿಂದೆ ಯಾರದೋ ಪ್ರಿಯ ಯೋಜನೆಯಾದ ಈ ಕಂಪನಿಗಳನ್ನು ಜನರ ಹಣದಿಂದ ನಡೆಸಬೇಕಾದ ಅವಶ್ಯಕತೆ ಇಲ್ಲ. ಕೇಂದ್ರ ಸರ್ಕಾರ ವ್ಯವಹಾರ ನಡೆಸಲು ಬಯಸುವುದಿಲ್ಲ. ಸರ್ಕಾರ ಖಾಸಗೀಕರಣ ಮಾಡಿದಾಗ ಖಾಸಗಿ ಕಂಪನಿಗಳು ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಹೂಡಿಕೆ ಮಾಡುತ್ತವೆ. ಖಾಸಗಿ ಕಂಪನಿಗಳು ಬಂಡವಾಳವನ್ನು ತರುತ್ತವೆ ಮತ್ತು ವಿಶ್ವದರ್ಜೆಯ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತವೆ ಮತ್ತು ಹೆಚ್ಚು ಹೆಚ್ಚು ಉದ್ಯೋಗವನ್ನು ಒದಗಿಸುತ್ತವೆ” ಎಂದು ಸ್ಪಷ್ಟನೆ ನೀಡಿದರು.
ಕೇಂದ್ರ ಸರ್ಕಾರವು ಸರ್ಕಾರಿ ಸ್ವಾಮ್ಯದ 100 ಉದ್ಯಮಗಳನ್ನು ಖಾಸಗೀಕರಣಗೊಳಿಸುವ ಮೂಲಕ 2.5 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿ ಹೊಂದಿದೆ. ಖಾಸಗೀಕರಣ ಪ್ರಕ್ರಿಯೆಯಿಂದ ಸಂಗ್ರಹವಾಗುವ ಹಣವನ್ನು ಗ್ರಾಮೀಣ ಭಾಗದಲ್ಲಿ ರಸ್ತೆ ಅಭಿವೃದ್ಧಿಗೆ, ಸ್ವಚ್ಛ ಕುಡಿಯುವ ನೀರು ಪೂರೈಕೆಗೆ ಮತ್ತು ಎಲ್ಲರಿಗೂ ಸೂರು ಕಲ್ಪಿಸಿಕೊಡುವ ಯೋಜನೆಗಳಲ್ಲಿ ವಿನಿಯೋಗಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಈ ನಿರ್ಧಾರಗಳ ವಿರುದ್ಧ ಮೊದಲಿನಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಸರ್ಕಾರಿ ಸ್ವಾಮ್ಯದಲ್ಲಿರುವ ಮತ್ತು ಹೆಚ್ಚು ಲಾಭ ಗಳಿಸುತ್ತಿರುವ ಬಹುತೇಕ ಉದ್ಯಮಗಳನ್ನು ಖಾಸಗಿಯವರಿಗೆ ಮಾರಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಅಂದರೆ ಕೇವಲ ಅಂಬಾನಿ-ಅದಾನಿಗಾಗಿ ಸರ್ಕಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಇತ್ತೀಚೆಗೆ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದು “ನಾವಿಬ್ಬರು-ನಮಗಿಬ್ಬರು” ಎನ್ನುವ ಸರ್ಕಾರ ಎಂದು ಛೇಡಿಸಿದ್ದರು.
ಇತ್ತೀಚೆಗೆ ವಿಮಾನ ನಿಲ್ದಾಣ ಮತ್ತು ರೈಲುಗಳನ್ನು ಖಾಸಗೀಕರಣಗೊಳಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರದಿಂದ ಮತ್ತೊಂದು ಅಚ್ಚರಿಯ ಸುದ್ದಿ ಹೊರಬಿದ್ದಿದೆ.
ಇದನ್ನೂ ಓದಿ: ‘ಮೋದಿ ಉದ್ಯೋಗ ಕೊಡಿ, ಇಲ್ಲ ಕುರ್ಚಿ ಬಿಡಿ’ ವಿಶ್ವದಾದ್ಯಂತ ಟ್ವಿಟರ್ ಟ್ರೆಂಡ್


