Homeಮುಖಪುಟಜಾತಿಯ ವಿಚಾರದಲ್ಲೂ ಸುಳ್ಳು ಹೇಳಿದರೇಕೆ ಮೋದಿ?

ಜಾತಿಯ ವಿಚಾರದಲ್ಲೂ ಸುಳ್ಳು ಹೇಳಿದರೇಕೆ ಮೋದಿ?

- Advertisement -
- Advertisement -

/ಮಾಚಯ್ಯ/

(ಪೂರಾ ಓದಿದರೆ ಆಶ್ಚರ್ಯಕರ ವಿವರಗಳಿವೆ)

ಮಹಾರಾಷ್ಟ್ರದ ಅಕ್ಲುಜ್‍ನ ಚುನಾವಣಾ ರ್ಯಾಲಿಯಲ್ಲಿ ಭಾಷಣ ಮಾಡುತ್ತಾ ಪ್ರಧಾನಿ ಮೋದಿಯವರು ಕಾಂಗ್ರೆಸ್ ಮೇಲೆ ಮಾಡಿದ ಒಂದು ಆರೋಪ ಈಗ ದೊಡ್ಡ ಚರ್ಚೆಯಾಗಿದೆ. ಕಾಂಗ್ರೆಸ್ ಪರಿವಾರ ನನ್ನನ್ನು ಅವಮಾನಿಸುವ ಮೂಲಕ ಇಡೀ ಹಿಂದುಳಿದ ಸಮುದಾಯವನ್ನೇ ಅವಮಾನಿಸಿದೆ, ಹಿಂದುಳಿದ ಸಮುದಾಯವನಾಗಿ ನಾನು ಸಾಕಷ್ಟು ನೋವು ಅನುಭವಿಸಿದ್ದೇನೆ, ನನ್ನ ಸಮುದಾಯದ ಕಾರಣಕ್ಕೆ ಕಾಂಗ್ರೆಸ್ ನನ್ನನ್ನು ಹಲವು ವರ್ಷಗಳಿಂದ ಅಪಖ್ಯಾತಿಗೊಳಿಸುತ್ತಾ ಬಂದಿದೆ ಅನ್ನೋದು ಮೋದಿಯವರ ಒಟ್ಟಾರೆ ಆರೋಪದ ಸಾರಾಂಶ. Well, ಮೋದಿಯವರ ಚುನಾವಣಾ ತಂತ್ರಗಾರಿಕೆ, ಎಲೆಕ್ಷನ್ ಗೆಲ್ಲಲು ಅವರು ಬಳಸುವ ಎಮೋಷನಲ್ ಟೂಲ್‍ಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ಕಂಡು ಆಘಾತಗೊಂಡಿರುವವರಿಗೆ ಇದರಲ್ಲಿ ಅಚ್ಚರಿಗೊಳ್ಳುವಂತಹ ಹೊಸದೇನೂ ಇಲ್ಲ. ಆದರೆ, ರಾಜಕಾರಣವನ್ನು ಮತ್ತು ರಾಜಕೀಯ ಹುನ್ನಾರಗಳನ್ನು ತುಂಬಾ ದೂರದಿಂದ ನೋಡಿ, ಅರೆಬರೆಯಾಗಿ ಗ್ರಹಿಸಿ ಅಭಿಪ್ರಾಯ ರೂಪಿಸಿಕೊಳ್ಳುವಂತಹ ದೊಡ್ಡ ಜನಸಮುದಾಯವೇ ಇವತ್ತಿನ ನಿರ್ಣಾಯಕ ಮತದಾರರಾಗಿರುವುದರಿಂದ (ಮತ್ತು ಇವರೆಲ್ಲ ಈ ದೇಶದ ಜಾತಿ ಹೆಣಿಗೆಯಲ್ಲಿ ಸಿಲುಕಿದ ಬಲಿಪಶುಗಳೇ ಆಗಿರುವುದರಿಂದ) ಮೋದಿಯವರ ಈ ಮಾತಿನ ಹಿನ್ನೆಲೆ, ಪ್ರಭಾವ, ಪರಿಣಾಮ ಮತ್ತು ಉದ್ದೇಶಿತ ಲೆಕ್ಕಾಚಾರಗಳನ್ನು ಜನರೆದುರು ತೆರೆದಿಡಲೇಬೇಕಿದೆ.

ಅಷ್ಟಕ್ಕೂ ಮೋದಿಯವರು ಈ ಆರೋಪ ಮಾಡಲು ಕಾಂಗ್ರೆಸ್ ಒದಗಿಸಿಕೊಟ್ಟ ಆಹಾರವೆಂದರೆ, ಇತ್ತೀಚೆಗೆ ರಾಹುಲ್ ಗಾಂಧಿಯವರು ನೀಡಿದ್ದ ಒಂದು ಹೇಳಿಕೆ. “ನನಗೊಂದು ಪ್ರಶ್ನೆಯಿದೆ. ಯಾಕೆ ಎಲ್ಲಾ ಕಳ್ಳರ ಹೆಸರಿನಲ್ಲೂ `ಮೋದಿ’ ಇದೆ. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ…. ಇನ್ನೂ ಇಂಥಾ ಎಷ್ಟು ಮೋದಿಗಳು ಹೊರಬರುತ್ತಾರೋ ಗೊತ್ತಿಲ್ಲ” ಇದು ರಾಹುಲ್ ಗಾಂಧಿ ಹೇಳಿದ್ದ ಮಾತು. ನೋ ಡೌಟ್, ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ ಅಜಮಾಸು ಹನ್ನೊಂದು ಸಾವಿರ ಕೋಟಿ ವಂಚಿಸಿ ಓಡಿಹೋದ ನೀರವ್, ಐಪಿಎಲ್ ಹಗರಣದ ಭಾಗೀದಾರ ಲಲಿತ್ ಮೋದಿ ಮತ್ತು ಇದೀಗ ಕೇಳಿ ಬರುತ್ತಿರುವ ಹೆಚ್ಚೂಕಮ್ಮಿ 60,000 ಕೋಟಿ ಗಾತ್ರದ ರಫೇಲ್ ಹಗರಣದಲ್ಲಿ ಸ್ವತಃ ಪ್ರಧಾನಿಯವರ ಹೆಸರೇ ನುಸುಳಿರುವುದರಿಂದ ರಾಹುಲ್ ಕೇಳಿದ ಈ ಪ್ರಶ್ನೆಯಲ್ಲಿ ಒಂದು ವ್ಯಂಗ್ಯಪೂರಿತ ಗಂಭೀರತೆ ಇತ್ತು. ಆದರೆ ಮೋದಿಯವರು ಅಲ್ಲಿದ್ದ ವ್ಯಂಗ್ಯ ಮತ್ತು ಗಾಂಭೀರ್ಯ ಎರಡನ್ನೂ ಬಿಟ್ಟು, ಕ್ಷುಲ್ಲಕ ಜಾತಿ ರಾಜಕಾರಣವನ್ನು ಚರ್ಚೆಗೆ ಎಳೆದು ತಂದಿದ್ದಾರೆ ಅನ್ನೋದು ಎಂತವರಿಗೂ ಅರ್ಥವಾಗುವ ವಿಚಾರ.

ಅಲ್ಲಿಗೆ, ಯಾವ ಜಾತಿ ರಾಜಕಾರಣದ ನೆಪದಲ್ಲಿ ಕಾಂಗ್ರೆಸನ್ನು ಟೀಕಿಸುತ್ತಾ, ಅದಕ್ಕೆ ವೋಟ್ ಬ್ಯಾಂಕ್ ಪೊಲಿಟಿಕ್ಸ್‍ನ ಹಣೆಪಟ್ಟಿ ಕಟ್ಟಿ ತನ್ನನ್ನು ತಾನು Party with difference ರೂಪದಲ್ಲಿ Present ಮಾಡಿಕೊಂಡಿತ್ತೊ, ಆ ಬಿಜೆಪಿ ಮತ್ತು ಮೋದಿ, ಇಬ್ಬರೂ ಕಡೆಗೆ ಅದೇ ಜಾತಿ ರಾಜಕಾರಣವನ್ನೇ ತುಳಿಯುವಂತಾಗಿರೋದು ವಿಪರ್ಯಾಸ. ಈ ಅಭಿಪ್ರಾಯಕ್ಕೆ ಕೆಲವರು ತಕರಾರು ಎತ್ತಬಹುದು. `ಬಿಜೆಪಿಗೆ ಜಾತಿ ರಾಜಕಾರಣವೇನೂ ಹೊಸದಲ್ಲ, ಅದರ ಬೇರುಗಳಿರುವುದೇ ಜಾತಿ ರಾಜಕಾರಣದಲ್ಲಿ, ಅದರ ಮಾತೃ ಸಿದ್ಧಾಂತವೇ ಒಂದು ನಿರ್ದಿಷ್ಟ ಸಮುದಾಯದ (ಜಾತಿ) ಕಲ್ಯಾಣಕ್ಕಾಗಿ’ ಎಂಬ ವಾದ ಅವರದಾಗಿರುತ್ತೆ. ಹೌದು, ಆದರೆ ಇಷ್ಟು ದಿನ ಮೇಲ್ಜಾತಿಗಳ ಹೆಸರಿನಲ್ಲಿ ಅಂತಹ ರಾಜಕಾರಣ ಮಾಡುತ್ತಿದ್ದ ಬಿಜೆಪಿ ಇದೀಗ ಮೋದಿಯವರಿಂದಾಗಿ ನೇರಾನೇರ ಹಿಂದುಳಿದ ವರ್ಗ¬ದ `ವೋಟ್ ಬ್ಯಾಂಕ್ ಪೊಲಿಟಿಕ್ಸ್’ಗೆ ಪಾದಾರ್ಪಣೆ ಮಾಡಿದೆ. ಆದರೆ ಇಲ್ಲಿ ಚರ್ಚಿಸಬೇಕಿರುವ ಸಂಗತಿ ಇದಲ್ಲ.

ಮೋದಿ ತನ್ನ ರಾಜಕೀಯ ಜೀವನದಲ್ಲಿ ಯಾವತ್ತಾದರು ಹಿಂದುಳಿದ ವರ್ಗದ ಪ್ರತಿನಿಧಿಯಾಗಿ ವರ್ತಿಸಿದ್ದಾರಾ? ಅವರ ಮುಖದಲ್ಲಿ ಹಿಂದುಳಿದ ವರ್ಗದ ವೇದನೆಯ ಗೆರೆಗಳು ಕಾಣಿಸುತ್ತವಾ? ಗುಜರಾತ್ ಮುಖ್ಯಮಂತ್ರಿಯಾಗಿದ್ದ ಹದಿಮೂರು ವರ್ಷಗಳ ಮಾತು ಒತ್ತಟ್ಟಿಗಿರಲಿ, ಪ್ರಧಾನಿಯಾದ ಈ ಐದು ವರ್ಷದಲ್ಲಿ ಮೋದಿಯವರು ಹಿಂದುಳಿದವರ ಉದ್ದಾರಕ್ಕೆಂದು ವಿಶೇಷವಾಗಿ ಏನು ಮಾಡಿದ್ದಾರೆ? ಮೋದಿಯವರು ಜಾತಿಯ ಟ್ರಂಪ್ ಕಾರ್ಡ್ ಬಳಸುತ್ತಿರೋದು ಇದೇ ಮೊದಲಾ? ಎಲ್ಲಕ್ಕಿಂತ ಮುಖ್ಯವಾಗಿ, ಮೋದಿಯವರು ನಿಜಕ್ಕೂ ಹಿಂದುಳಿದ ವರ್ಗದವರಾ? ಎಂಬ ಪ್ರಶ್ನೆಗಳಿಗೆ ಉತ್ತರ ಕೆದಕುತ್ತಾ ಸಾಗಿದರೆ ಮೋದಿಯವರ ಮುಖವಾಡ ಬಯಲು ಮಾಡುವ ರೋಚಕ ಇತಿಹಾಸಗಳು ತೆರೆದುಕೊಳ್ಳುತ್ತವೆ.

ಮೊದಲನೆಯದಾಗಿ, ಇವತ್ತು ತನ್ನ ರಾಜಕೀಯ ವಿರೋಧಿಗಳು ನನ್ನನ್ನು ಟೀಕಿಸುವುದರ ಮೂಲಕ ಇಡೀ ಹಿಂದುಳಿದ ಸಮುದಾಯದವರನ್ನೇ ಅವಮಾನಿಸಿದ್ದಾರೆ ಎಂದೇಳುವ ಮೋದಿಯವರು ರಾಜಕೀಯ ನಾಯಕನಾಗಿ ರೂಪುಗೊಂಡದ್ದೇ ಹಿಂದುಳಿದ ವರ್ಗಗಳ ವಿರುದ್ಧ ಹೋರಾಟದಿಂದ! ಇದು ಖಂಡಿತ ಸತ್ಯ. ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸಿದ ಮಂಡಲ್ ಆಯೋಗವನ್ನು ವಿರೋಧಿಸಿ ಮತ್ತು ಒಟ್ಟಾರೆ ಮೀಸಲಾತಿ ಕಲ್ಪನೆಯನ್ನೇ ಧಿಕ್ಕರಿಸಿ ಬ್ರಾಹ್ಮಣರ ಪ್ರಾಬಲ್ಯವಿರುವ ಆರೆಸೆಸ್ ಸಂಘಟಿಸಿದ `ಅನಾಮತ್ ಆಂದೋಲನ’ದಲ್ಲೇ (ಜಾತಿ ಆಧಾರಿತ ಮೀಸಲಾತಿಯನ್ನು ಧಿಕ್ಕರಿಸಿದ ಆಂದೋಲನ) ಮೋದಿಯವರ ಸಿದ್ಧಾಂತಗಳು ರೂಪುಗೊಂಡದ್ದು. ಅದರಲ್ಲೂ 1980ರ ದಶಕದಲ್ಲಿ, ನಿರ್ದಿಷ್ಟವಾಗಿ ಗುಜರಾತ್‍ನಲ್ಲಿ ಅಂದಿನ ಮುಖ್ಯಮಂತ್ರಿ, ಹಿಂದುಳಿದ ವರ್ಗಗಳ ಪ್ರಭಾವಿ ಕಾಂಗ್ರೆಸ್ ನಾಯಕ ಮಾಧವ್‍ಸಿನ್ಹ ಸೋಲಂಕಿಯವರು `ಖಾಮ್’ – KHAM (ಕ್ಷತ್ರಿಯ, ಹರಿಜನ, ಆದಿವಾಸಿ ಮತ್ತು ಮುಸ್ಲಿಂ) ಒಕ್ಕೂಟವನ್ನು ರಚಿಸಿದಾಗ, ಮೋದಿಯವರು ಅದನ್ನು ವಿರೋಧಿಸಿ ಹೋರಾಟಕ್ಕಿಳಿದಿದ್ದರು.

ಮಾಧವ್ ಸಿಂಗ್ ಸೋಲಂಕಿ

ನೆನಪಿರಲಿ ಗುಜರಾತ್‍ನ ಆರ್ಥಿಕ-ರಾಜಕೀಯ-ಸಾಮಾಜಿಕ ಕ್ಷೇತ್ರವನ್ನು ಆವರಿಸಿದ್ದ ಮೇಲ್ಜಾತಿಗಳಾದ ಬ್ರಾಹ್ಮಣ, ಬನಿಯಾ, ಪಟೇಲ್ ಸಮುದಾಯಗಳ ವಿರುದ್ಧ ಶೋಷಿತ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಿ, ಅವರಿಗೆ ಶೇ.27ರಷ್ಟು ಮೀಸಲಾತಿ ಕಲ್ಪಿಸಲು ಸೋಲಂಕಿ ಕಟ್ಟಿದ್ದ ಹೋರಾಟವದು. ಅಂದಿನ ಗುಜರಾತ್ ಬಿಜೆಪಿಯ ಹಿರಿಯ ನಾಯಕರಾಗಿದ್ದ ಅಶೋಕ್ ಭಟ್ ನೇತೃತ್ವದಲ್ಲಿ ಬಿಜೆಪಿಯು ಮೇಲ್ಜಾತಿಗಳ ಪರವಾಗಿ, ಹಿಂದುಳಿದ ವರ್ಗಗಳ ಮೀಸಲಾತಿ ವಿರುದ್ಧ ಹೋರಾಟ ನಡೆಸಿದರು. ಆಗ ಅಹ್ಮದ್‍ನಗರದ ಮಣಿನಗರ್ ಆರೆಸೆಸ್ ಶಾಖೆಯಲ್ಲಿ ಪ್ರಚಾರಕ್ ಆಗಿದ್ದ ಮೋದಿ `ಖಾಮ್’ ವಿರೋಧಿ ಹೋರಾಟ ಸಂಘಟಿಸುವಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು ಎಂದು ಗುಜರಾತ್‍ನ ಹಿರಿಯ ಕಾಂಗ್ರೆಸ್ ಮುಖಂಡ ಮೋದವಾಡಿಯಾ ರೆಡಿಫ್.ಕಾಂ ಸುದ್ದಿ ಸಂಸ್ಥೆಗೆ ತಿಳಿಸಿದ್ದರು.

ಅಂದಹಾಗೆ, ರಾಹುಲ್ ಗಾಂಧಿ `ಮೋದಿ’ ಹೆಸರನ್ನು ಉಲ್ಲೇಖಿಸಿ ನೀಡಿದ ಹೇಳಿಕೆಯನ್ನು ಮುಂದಿಟ್ಟುಕೊಂಡು ಇಡೀ ಹಿಂದುಳಿದ ಜಾತಿಗಳಿಗೇ ಅವಮನವಾಗಿದೆ ಎಂದು ಮೋದಿ ಹೇಳುತ್ತಿದ್ದಾರೆ. ವಾಸ್ತವವೇನೆಂದರೆ `ಮೋದಿ’ ಅಥವಾ `ಮೋದ್’ ಎನ್ನುವುದು ಒಂದು ಜಾತಿಯಲ್ಲ! 80ರ ದಶಕದಲ್ಲಿ ಮೀಸಲಾತಿ-ಪರ ಹೋರಾಟ ಸಮಿತಿಯ ಸದಸ್ಯರಾಗಿದ್ದ, ಈಗಲೂ ಅದರ ಟ್ರಸ್ಟಿಯಾಗಿರುವ, ಅಚ್ಯುತ್ ಯಾಗ್ನಿಕ್ ಅವರು ಹೇಳುವ ಪ್ರಕಾರ ಉತ್ತರ ಗುಜರಾತ್‍ನಲ್ಲಿ ಮೋದೇಶ್ವರಿ ದೇವಿ ಎನ್ನುವ ಸ್ತ್ರೀ ದೇವರೊಂದು ಹೆಚ್ಚು ಮನ್ನಣೆ ಗಳಿಸಿದೆ. ಆ ದೇವರನ್ನು ಆರಾಧಿಸುವ ಭಕ್ತರ ಪಂಥವನ್ನು ಮೋದ್ ಪಂಥ ಎಂದು ಕರೆಯಲಾಗುತ್ತದೆ. ಈ ಪಂಥದಲ್ಲಿ ಎಲ್ಲಾ ಜಾತಿಯವರೂ ಇದ್ದಾರೆ. ಮೋದ್ ಬನಿಯಾ, ಮೋದ್ ಬ್ರಾಹ್ಮಣ, ಮೋದ್ ಗಾಂಚಿಯಾ (ಮೋದಿಯವರದು ಎಂದು ಹೇಳಲಾಗುತ್ತಿರುವ ಜಾತಿ), ಮೋದ್ ಪಟೇಲ್, ಮೋದ್ ಮೋದಿ ಎಂಬ ಬೇರೆಬೇರೆ ಜಾತಿಗಳು ಬರುತ್ತವೆ. ಅಂದರೆ `ಮೋದ್’ ಅಥವಾ `ಮೋದಿ’ ಎನ್ನುವುದು ಹಿಂದುಳಿದ ವರ್ಗದ ಒಂದು ಜಾತಿಯಲ್ಲ, (ಹಾಗಿದ್ದರೆ ಅದರಲ್ಲಿ ಬ್ರಾಹ್ಮಣರು ಬರುತ್ತಿರಲಿಲ್ಲ) ಒಂದು ಪಂಥ. ಹಾಗಿರುವಾಗ `ಮೋದಿ’ಯನ್ನು ಹಿಂದುಳಿದ ವರ್ಗದ ಪ್ರತೀಕವಾಗಿಸಲು ಹೊರಟಿರುವ ಮೋದಿಯವರ ಆಶಯದ ಹಿಂದೆ ಒಂದು ನಿರ್ದಿಷ್ಟ ರಾಜಕೀಯ ಲೆಕ್ಕಾಚಾರ ಇರುವುದು ಖಾತ್ರಿಯಾಗುತ್ತದೆ.

ಇಂಟರೆಸ್ಟಿಂಗ್ ವಿಚಾರ ಅಂದ್ರೆ, ಮೋದಿಯವರು ಈ ಹಿಂದುಳಿದ `ಮೋದ್ ಗಾಂಚಿಯಾ’ ಸಮುದಾಯಕ್ಕೂ ಸೇರುವುದಿಲ್ಲ, ಅವರು `ಮೋದ್ ಬನಿಯಾ’ ಮೇಲ್ಜಾತಿಯವರು ಎಂದು ಗುಜರಾತ್‍ನ ಭಾವನಗರದಲ್ಲಿರುವ `ಮೋದ್ ವಣಿಕ್ ಸಮಾಜ’ (ಮೋದ್ ಪಂಥೀಯರ ಒಕ್ಕೂಟ)ದ ಹಿರಿಯ ನಾಯಕರೊಬ್ಬರು `ಮೋದಿ ಹಿಂದುಳಿದ ವರ್ಗದವರಲ್ಲ, ಮೇಲ್ಜಾತಿ ಮೋದ್ ಬನಿಯಾ ಜಾತಿಗೆ ಸೇರಿದವರು, 1998-99ರ ಸಾಲಿನಲ್ಲಿ ಅವರು ಬಿಜೆಪಿಯ ರಾಷ್ಟ್ರೀಯ ಸಹಕಾರ್ಯದರ್ಶಿಯಾಗಿದ್ದಾಗ ನಾವು ಮೋದ್ ಸಮುದಾಯದ ಇತಿಹಾಸವನ್ನು ಸಂಶೋಧಿಸಿದ ಒಂದು ಗ್ರಂಥವನ್ನು ಭಾವನಗರದಲ್ಲಿ ಪ್ರಕಟಿಸಿ ಬಿಡುಗಡೆ ಮಾಡಿದ್ದೆವು. ಆಗ ಮೋದಿಯವರು `ಮೋದ್-ಮೋದಿ’ (ಮೋದ್ ಗಾಂಚಿಯಾ ಜಾತಿಯಲ್ಲ) ಜಾತಿಯ ಪರವಾಗಿ ಆ ಸಮಾರಂಭದಲ್ಲಿ ಹಾಜರಿದ್ದರೇ ಹೊರತು ಮೋದ್ ಗಾಂಚಿಯಾ ಜಾತಿಯ ಪ್ರತಿನಿಧಿಯಾಗಿ ಅಲ್ಲ. ಅವತ್ತಿನ ಸಭೆಯಲ್ಲಿ ಮೋದ್ ಬ್ರಾಹ್ಮಣ ಜಾತಿಯನ್ನು ಕತಾಕರ್ ರಮೇಶ್ ಓಝಾ ಅವರು ಪ್ರತಿನಿಧಿಸಿದ್ದರು’ ಎಂದು ತನ್ನ ಬಳಿ ಹೇಳಿರುವುದಾಗಿ ರೆಡಿಫ್.ಕಾಂ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಹಿಂದೆ ಕಾಂಗ್ರೆಸ್ ಕೂಡಾ ಮೋದಿಯವರ ಬಗ್ಗೆ ಈ ಆರೋಪ ಮಾಡಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

ಕೇಶುಭಾಯ ಪಟೇಲ್

ಇನ್ನು ಎಣ್ಣೆ ತೆಗೆಯುವ ಕಾಯಕದ `ಮೋದ್ ಗಾಂಚಿಯಾ’ ಜಾತಿಯೂ ಹಿಂದುಳಿದ ಜಾತಿಯಲ್ಲ, ಅದು ಮುಂದುವರೆದ ಜಾತಿ ಎಂದು ಹೇಳುತ್ತಾರೆ. ಅವರ ಪ್ರಕಾರ, ನ್ಯಾಯಮೂರ್ತಿ ಬಕ್ಸಿಯವರ ನೇತೃತ್ವದ ಆಯೋಗ 1978ರಲ್ಲಿ ತಯಾರಿಸಿದ 82 ಹಿಂದುಳಿದ ವರ್ಗದ ಜಾತಿಯ ಪಟ್ಟಿಗೆ ಗಾಂಚಿಯಾ ಜಾತಿಯನ್ನು ಸೇರಿಸಿರಲಿಲ್ಲ. ಆದರೆ ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿದ್ದಾಗ ಜಾರಿಗೊಂಡ ಮಂಡಲ್ ಆಯೋಗದ ವರದಿಯ ತರುವಾಯ ಮೀಸಲಾತಿ ಕಾರಣಕ್ಕೆ ಹಿಂದುಳಿದ ವರ್ಗದ ಪಟ್ಟಿಗೆ ಸೇರಲು ಪೈಪೋಟಿ ಶುರುವಾದಾಗ ಜುಲೈ 25, 1994ರಲ್ಲಿ ಗುಜರಾತ್ ಸರ್ಕಾರ ಗಾಂಚಿಯಾ ಜಾತಿಯನ್ನು ಹಿಂದುಳಿದ ಪಟ್ಟಿಗೆ ಸೇರಿಸಿತ್ತು. ಆದಾಗ್ಯೂ ಕೇಂದ್ರ  ಸರ್ಕಾರದ ಪಟ್ಟಿಯಲ್ಲಿ ಅದು ಸ್ಥಾನ ಗಿಟ್ಟಿಸಿಕೊಂಡಿರಲಿಲ್ಲ. ಆದರೆ ಅಧಿಕಾರಕ್ಕಾಗಿ ಬಿಜೆಪಿ ಸ್ಟಾಲ್‍ವಾರ್ಟ್ ಕೇಶುಭಾಯ್ ಪಟೇಲ್ ಜೊತೆ ಮೋದಿಗೆ ತಿಕ್ಕಾಟ ಶುರುವಾದಾಗ, ಪ್ರಬಲ ಪಟೇಲ್ ಜಾತಿಯ ಕೇಶುಭಾಯ್‍ರನ್ನು ಓವರ್‍ಟೇಕ್ ಮಾಡಲು ಮೋದಿಯವರು ಹಿಂದುಳಿದ ವರ್ಗದ ಸೇಫ್‍ಗಾರ್ಡ್ ಪಡೆಯಲು ಗಾಂಚಿಯಾ ಸಮುದಾಯವನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಲು ಪ್ರಯತ್ನಿಸಿದರು ಎನ್ನುತ್ತಾರೆ, 1994ರಲ್ಲಿ ಗುಜರಾತ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದ ಶಕ್ತಿ ಸಿನ್ಹ ಗೋಯಲ್ ಅವರು. ತಮ್ಮ ಹೇಳಿಕೆಗೆ ಪೂರಕವಾಗಿ ಎರಡು ಅಂಶಗಳನ್ನು ಪ್ರಸ್ತಾಪಿಸುತ್ತಾರೆ. ಮೊದಲನೆಯದು, ಕೇಂದ್ರ ಸರ್ಕಾರ ಆ ಜಾತಿಯನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಿದ ವಿಶೇಷ ಗೆಜೆಟ್ 246 ಅನ್ನು ಹೊರಡಿಸಿದ್ದು. ಅದಾಗಿದ್ದು, ಸೆಪ್ಟೆಂಬರ್ 6, 2001ರಂದು (ಮೋದಿ ಮೊದಲ ಬಾರಿ ಕೇಶುಭಾಯ್ ಪಟೇಲರನ್ನು ಇಳಿಸಿ ಮುಖ್ಯಮಂತ್ರಿಯಾಗುವುದಕ್ಕೂ ಒಂದು ತಿಂಗಳು ಮುನ್ನ). ಆಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ವಾಜಪೇಯಿ ನೇತೃತ್ವದ ಎನ್‍ಡಿಎ ಸರ್ಕಾರ. ಹಾಗಾಗಿ ಮೋದಿಯವರು ತನ್ನ ಪ್ರಭಾವ ಬಳಸಿ ಆ ಕಾರ್ಯಸಾಧಿಸಿರುತ್ತಾರೆ ಎನ್ನುವ ಶಕ್ತಿ ಸಿನ್ಹ, ಎರಡನೆಯ ರೋಚಕ ಅಂಶವನ್ನೂ ಹೀಗೆ ಮುಂದಿಡುತ್ತಾರೆ. `ಮೋದಿಯವರು ಗುಜರಾತ್ ಸಿಎಂ ಆದ ತಕ್ಷಣ ಮಾಡಿದ ಮೊದಲು ಮುಖ್ಯ ಕೆಲಸವೆಂದರೆ, ತಾನು ಅಧಿಕಾರಕ್ಕೇರಿದ ಕೇವಲ ಒಂದು ತಿಂಗಳ (1 ಜನವರಿ 2002) ಅಂತರದಲ್ಲೇ ಕೇಂದ್ರದ ಗೆಜೆಟ್ ಆಧರಿಸಿ ಗುಜರಾತ್ ಸರ್ಕಾರ ಹೊಸ ಒಬಿಸಿ ಪಟ್ಟಿ ಪ್ರಕಟಿಸುವಂತೆ ನೋಡಿಕೊಂಡರು. ಆ ಹೊಸ ಪಟ್ಟಿಯಲ್ಲಿ ಗಾಂಚಿಯಾ ಸಮುದಾಯ ಒಬಿಸಿ ಪಟ್ಟಿಗೆ ಅಧಿಕೃತವಾಗಿ ಸೇರ್ಪಡೆಗೊಂಡಿತ್ತು’!. ಗುಜರಾತ್ ಬಿಜೆಪಿ ಪಾಲಿಗೆ ಅದ್ವಿತೀಯ ನಾಯಕನೆನಿಸಿಕೊಂಡಿದ್ದ ಕೇಶುಭಾಯ್‍ರ ವಿರುದ್ಧ ದಿಲ್ಲಿಯಿಂದಲೇ ಪಿತೂರಿ ಮಾಡಿ ಹೀನಾಯವಾಗಿ ಕೆಳಗಿಳಿಸಿ ಪಟ್ಟಕ್ಕೇರಿದ ಮೋದಿಯವರು ತಮ್ಮ ವಿರುದ್ಧ ತಿರುಗಿಬೀಳಬಹುದಾದ ಪ್ರಧಾನ ಪಾಟೀದಾರ್ (ಪಟೇಲ್) ಸಮುದಾಯವನ್ನು ಕೌಂಟರ್ ಮಾಡಲು ಸೋಲಂಕಿ ಅವಧಿಯಲ್ಲಿ ಏಕೀಕೃತಗೊಂಡಿದ್ದ ಹಿಂದುಳಿದ ವರ್ಗದ ಶಕ್ತಿಯನ್ನು ಗುರಾಣಿಯಾಗಿ ಬಳಸಲು ಹಿಂದುಳಿದ ಜಾತಿಯಲ್ಲದ ಗಾಂಚಿಯಾವನ್ನು ಹಿಂದುಳಿದ ಪಟ್ಟಿಗೆ ಸೇರಿಸಿ, ನಿಜವಾದ ಹಿಂದುಳಿದ ಜಾತಿಗಳಿಗೆ ಸಿಗಬೇಕಿದ್ದ ಸೌಲಭ್ಯಗಳಿಗೆ ಕತ್ತರಿ ಹಾಕಿದರು ಎನ್ನುವುದು ಸಿನ್ಹಾ ಅವರ ಒಟ್ಟಾರೆ ಮಾತಿನ ಸಾರಾಂಶ.

ಆದರೆ, ಮೀಸಲಾತಿ ಪರ ಹೋರಾಟದ ಅಚ್ಯುತ್ ಯಾಗ್ನಿಕ್ ಅವರು, ಯಾವುದೇ ಬಗೆಯ ರಾಜಕೀಯ ಹುನ್ನಾರಗಳ ಕುರಿತು ಮತ್ತು ಮೋದಿಯವರ ನಿಜವಾದ ಜಾತಿಯ ಬಗೆಗಿನ ತಮ್ಮ ಅಸ್ಪಷ್ಟ ತಿಳಿವಳಿಕೆಯನ್ನು ಒಪ್ಪಿಕೊಳ್ಳುತ್ತಲೇ `ಸಮಾಜೋಆರ್ಥಿಕ ನೆಲೆಗಟ್ಟಿನಿಂದ ನೋಡಿದಾಗ ಗುಜರಾತ್ ಸಾಮಾಜಿಕ ಪಿರಮಿಡ್‍ನಲ್ಲಿ ಗಾಂಚಿಯಾ ಸಮುದಾಯ ನಿಜವಾಗಲೂ ಹಿಂದುಳಿದ ವರ್ಗಕ್ಕೇ ಸೇರಲು ಅರ್ಹವಾದದ್ದು, ಅದು ಮುಂದುವರೆದ ಜಾತಿಯಲ್ಲ’ ಎಂದು ಸ್ಪಷ್ಟಪಡಿಸುತ್ತಾರೆ.

ಹೀಗೆ ಹಿಂದುಳಿದ ವರ್ಗಗಳ ಹಿತಾಸಕ್ತಿಗೆ ವಿರುದ್ಧವಾದ ನೆಲೆಯಲ್ಲಿ ರೂಪುಗೊಂಡ ಮೋದಿಯವರು ಈಗ ಹಿಂದುಳಿದ ಜಾತಿಯನ್ನು ಚುನಾವಣಾ ಪ್ರಚಾರದಲ್ಲಿ ಅಸ್ತ್ರವಾಗಿಸಿಕೊಳ್ಳುತ್ತಿರುವುದು ನಿಜಕ್ಕೂ ಆರೋಗ್ಯಕರ ರಾಜಕಾರಣದ ಲಕ್ಷಣವಲ್ಲ. ಹೋಗಲಿ, ಪ್ರಧಾನಿಯಾದ ಮೇಲಾದರು ಮೋದಿಯವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಬೆವರು ಹರಿಸಿದ್ದಾರಾ ಅಂತ ನೋಡಿದರೆ ಆಗಲೂ ಅವರಿಗೆ ಪೂರಕವಾಗದ ಉತ್ತರವೇ ಎದ್ದು ಬರುತ್ತೆ. ಯಾವುದೇ ಮೀಸಲಾತಿ ಪ್ರವರ್ಗಕ್ಕೆ ಒಳಪಡದ, ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಗಳಿಗೆ ಶೇ.10ರಷ್ಟು ಮೀಸಲಾತಿ ಘೋಷಿಸಿದ ಅವರ ಸರ್ಕಾರದ ನಡೆಯೇ ಹಿಂದುಳಿದ ವರ್ಗಗಳಿಗೆ ದೊಡ್ಡ ಲುಕ್ಸಾನು ಉಂಟು ಮಾಡುವಂತದ್ದು. 1992ರಲ್ಲಿ 9 ಜಡ್ಜ್‍ಗಳ ಸುಪ್ರಿಂ ನ್ಯಾಯಪೀಠ, ಮೀಸಲಾತಿ ಯಾವುದೇ ಕಾರಣಕ್ಕೆ ಶೇ.50ನ್ನು ಮೀರಬಾರದು ಎಂದು ತೀರ್ಪು ಪ್ರಕಟಿಸಿ ನರಸಿಂಹರಾವ್ ಸರ್ಕಾರ ತಂದಿದ್ದ ಶೇ.10 ಮೀಸಲಾತಿಯನ್ನು ವಜಾ ಮಾಡಿತ್ತು. ಈಗಾಗಲೇ ಎಸ್ಸಿ, ಎಸ್ಟಿ, ಒಬಿಸಿ ಹೀಗೆ ವಿವಿಧ ಪ್ರವರ್ಗ ಮತ್ತು ಪಂಗಡಗಳಿಗೆ ನೀಡಿರುವ ಒಟ್ಟು ಮೀಸಲಾತಿ ಶೇ.49ರಷ್ಟು ಇದೆ. ಶೇ.10 ಎಂದರೆ ಶೇ.59ರ ಗಡಿ ತಲುಪುತ್ತೆ. ಅದು ಯಾವ ಕಾರಣಕ್ಕೂ ಸಾಧ್ಯವಿಲ್ಲ ಮತ್ತು ಇದು ಅಸಾಂವಿಧಾನಿಕವೆಂದು ಹೇಳಿತ್ತು. ಹಾಗಾದರೆ ಹೊಸ ಶೇ.10 ಮೀಸಲಾತಿಯನ್ನು ಹೇಗೆ ಹೊಂದಿಸಬೇಕು. ಈಗಾಗಲೇ ಬೇರೆಬೇರೆ ಪ್ರವರ್ಗಗಳಿಗೆ ಚಾಲ್ತಿಯಲ್ಲಿರುವ ಮೀಸಲಾತಿಗಳನ್ನೇ ಕಡಿತಗೊಳಿಸಿ ಮೇಲ್ಜಾತಿಯವರಿಗೆ ಮೀಸಲಾತಿ ಕೊಡಬೇಕು. ಆಗ ಸಹಜವಾಗಿಯೇ ಹಿಂದುಳಿದ ವರ್ಗಗಳ ಮೀಸಲಾತಿ ಪ್ರಮಾಣಕ್ಕೆ ಕತ್ತರಿ ಬೀಳಲಿದೆ. ಇದನ್ನು ಅಲ್ಲಗಳೆಯುತ್ತಿರುವ ಸರ್ಕಾರ ತಾನು ಹಳೆಯ ಮೀಸಲಾತಿಗೆ ಕೈಹಾಕದೆ ಹೊಸದಾಗಿ ಮೀಸಲಾತಿ ಕೊಡುತ್ತೇನೆ ಎನ್ನುತ್ತಿದೆಯಾದರು ಅದು ಸಾಧ್ಯವಿಲ್ಲದ ಮಾತು. ಹೀಗೆ ಹಿಂದುಳಿದ ವರ್ಗಗಳ ಸೌಲಭ್ಯಕ್ಕೆ ಅಡ್ಡಿಯಾದ ಮೋದಿಯವರು ಇವತ್ತು ತನ್ನ ರಾಜಕೀಯ ಹತಾಶೆಯ ಕಾರಣಕ್ಕೆ ಅದನ್ನು ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ.

ಅಷ್ಟಕ್ಕೂ ಮೋದಿಯವರು, ಹೀಗೆ ಜಾತಿಯನ್ನು ತನ್ನ ಕಡೆಯ ಅಸ್ತ್ರವಾಗಿ ಬಳಸುತ್ತಿರೋದು ಇದೇ ಮೊದಲೇನಲ್ಲ. 2014ರ ಚುನಾವಣೆಯಲ್ಲೂ ಇಂಥದ್ದೇ ಪ್ರಯತ್ನ ಮಾಡಿದ್ದರು. ಮೋದಿಯವರ ಚುನಾವಣಾ ಕೆಳಮಟ್ಟದ ಪ್ರಚಾರ ವೈಖರಿಯನ್ನು ವಿರೋಧಿಸಿ ಪ್ರಿಯಾಂಕ ಗಾಂಧಿಯವರು “ಅವರದು ನೀಚ ರಾಜಕೀಯ” ಎಂದಿದ್ದರು. ತನ್ನ ತಂದೆ ದಿವಂಗತ ರಾಜೀವ್ ಗಾಂಧಿಯವರನ್ನು ಅವರು ಸ್ಪರ್ಧಿಸುತ್ತಿದ್ದ ಅಮೇಥಿಯ ಪ್ರಚಾರ ರ್ಯಾಲಿಯಲ್ಲೇ ಮೋದಿಯವರು ಟೀಕಿಸಿದ್ದರಿಂದ ಪ್ರಿಯಾಂಕ `ಇದು ಕೆಳಮಟ್ಟದ ರಾಜಕಾರಣ’ ಎಂಬರ್ಥದಲ್ಲಿ ಆ ಮಾತನ್ನಾಡಿದ್ದರು. ಆದರೆ ಮೋದಿಯವರು ಅದಕ್ಕೆ ಪ್ರತಿಕ್ರಿಯಿಸುತ್ತಾ “ಅವರು ನನ್ನನ್ನು ನೀಚ ಜಾತಿಯವನು ಎಂದು ಮೂದಲಿಸಿದ್ದಾರೆ. ಹೌದು ನಾನು ನೀಚ ಜಾತಿಯವನೇ. ನೀಚ ಜಾತಿಯಲ್ಲಿ ಹುಟ್ಟುವುದು ಅಪರಾಧವೇ?” ಎಂದು ಪ್ರಶ್ನಿಸುವ ಮೂಲಕ ಉತ್ತರ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ದಲಿತರ ಜೊತೆಗೆ ತನ್ನನ್ನು ಸಮೀಕರಿಸುವ ಪ್ರಯತ್ನ ಮಾಡಿದ್ದರು. ಆಗ ಗುಜರಾತ್‍ನ ಚುನಾವಣಾ ಉಸ್ತುವಾರಿಯಾಗಿದ್ದ, ಈಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾರವರು ಮೋದಿಯವರ ಈ ಹೇಳಿಕೆಯನ್ನು ತಳಮಟ್ಟಕ್ಕೆ ಪಸರಿಸುವಂತೆ ಮಾಡಿ ನಿರೀಕ್ಷೆ ಮೀರಿದ ಫಲಿತಾಂಶ ಪಡೆದರು. ಮುಜಾಫರಬಾದ್‍ನಂತಹ ಕೋಮುಗಲಭೆ ಒಂದುಕಡೆ ದೃವೀಕರಣ ಮಾಡಿದರೆ, ದಲಿತ ಸಮುದಾಯಗಳು ಸಾರಾಸಗಟಾಗಿ ತಮ್ಮ ಪಾರಂಪರಿಕ ಬಿಎಸ್‍ಪಿಯನ್ನು ಅಗಲಿ ಬಿಜೆಪಿಯತ್ತ ಹರಿದುಹೋದದ್ದರಿಂದ ಇದು ದೊಡ್ಡ  ಪ್ರಭಾವ ಬೀರಿತ್ತು. ಇಲ್ಲವಾದರೆ ಮಾಯಾವತಿಯವರು ಶೂನ್ಯ ಸಾಧನೆಗೆ ಕುಸಿಯುತ್ತಿರಲಿಲ್ಲ.

ಮೋದಿಯವರಿಗೆ ಈ ಸಲ ಸೋಲಿನ ಭೀತಿ ಆವರಿಸಿರುವುದರಿಂದ ಹತಾಶೆಯಲ್ಲಿ ಅವರು ಮತ್ತೆ ಜಾತಿಯ ಟ್ರಂಪ್‍ಕಾರ್ಡ್ ಕೂಡಾ ಬಳಸುವಷ್ಟು ಸಣ್ಣ ರಾಜಕಾರಣಕ್ಕೆ ಇಳಿದಿದ್ದಾರೆ ಎಂದು ಹಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಇದು ಎಷ್ಟರಮಟ್ಟಿಗೆ ವಾಸ್ತವವೋ ಗೊತ್ತಿಲ್ಲ. ಈಗಾಗಲೇ ತನ್ನ ಕುರಿತು ಹಲವು ಸುಳ್ಳುಗಳನ್ನು ಬಿತ್ತರಿಸಿಕೊಂಡಿರುವ ಮೋದಿ, ತನ್ನ ಜಾತಿಯ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆಂದು ಭಾವಿಸಲೂ ಕಾರಣಗಳಿವೆ. ಜೊತೆಗೆ ಹಿಂದುಳಿದ ಸಮುದಾಯಗಳ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಲೇ, ರಾಜನೀತಿಗಳನ್ನು ಜಾರಿಗೆ ತರುತ್ತಲೇ ಬಂದ ವ್ಯಕ್ತಿ ಈಗ ಅದೇ ಹಿಂದುಳಿದ ವರ್ಗವನ್ನು ತನ್ನ ಗುರಾಣಿಯಾಗಿ ಬಳಸಿಕೊಳ್ಳಲು ಮುಂದಾಗುತ್ತಿರುವುದು ಈ ನೆಲದ ದೊಡ್ಡ ದುರಂತ. ಅಷ್ಟು ಮಾತ್ರ ಸತ್ಯ.

 

ಹೆಚ್ಚಿನ ಮಾಹಿತಿಗೆ

https://www.rediff.com/news/column/ls-election-sheela-says-is-narendra-modi-really-an-obc/20140510.htm

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...