2020 ರ ಅಕ್ಟೋಬರ್‌ನಲ್ಲಿ ನಡೆದ ಹತ್ರಾಸ್ ಸಾಮೂಹಿಕ ಅತ್ಯಾಚಾರ, ಕೊಲೆ ದೌರ್ಜನ್ಯದ ವಿರುದ್ಧದ ಪ್ರತಿಭಟನೆಯಲ್ಲಿ ಮುಂಚೂಣಿಯಲ್ಲಿದ್ದ 10 ಮಹಿಳಾ ನಾಯಕಿಯರಿಗೆ ಉತ್ತರ ಪ್ರದೇಶ ಪೊಲೀಸರು ನೋಟಿಸ್ ಕಳುಹಿಸಿದ್ದಾರೆ.
ಉತ್ತರ ಪ್ರದೇಶದ ಗ್ರಾಮದಲ್ಲಿ ನಾಲ್ಕು ‘ಮೇಲ್ಜಾತಿಯ’ ಠಾಕೂರ್ ಪುರುಷರಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಗಾಯಗೊಂಡು 19 ವರ್ಷದ ದಲಿತ ಮಹಿಳೆ ಸಾವನ್ನಪ್ಪಿದ ಘಟನೆಯ ಬಗ್ಗೆ ಸರ್ಕಾರದ ಹೊಣೆಗಾರಿಕೆ ಮತ್ತು ನ್ಯಾಯಯುತ ತನಿಖೆಗಾಗಿ ಈ ನಾಯಕಿಯರು ಧ್ವನಿ ಎತ್ತಿದ್ದರು.
ನೋಟಿಸ್ ಸ್ವೀಕರಿಸಿದವರಲ್ಲಿ ಉಜ್ಮಾ ಪರ್ವೀನ್, ಸುಮಯ್ಯ ರಾಣಾ, ಮಧು ಗರ್ಗ್ ಮತ್ತು ಮೀನಾ ಸಿಂಗ್ ಅವರಂತಹ ನಾಯಕಿಯರು ಸೇರಿದ್ದಾರೆ. ಅವರು 2019 ರಲ್ಲಿ ಲಖನೌದಾದ್ಯಂತ ನಡೆದ ಸಿಎಎ ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.
2020 ರ ಅಕ್ಟೋಬರ್ 8 ರಂದು ಲಕ್ನೋದ ಗೋಮತಿ ನಗರದ ‘1090 ಕ್ರಾಸಿಂಗ್’ ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿ ನೋಟಿಸ್ ಜಾರಿ ಮಾಡಲಾಗಿದೆ. ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.
ದಿ ವೈರ್‌ನೊಂದಿಗೆ ಮಾತನಾಡಿದ ಪರ್ವೀನ್, ರಾಣಾ ಮತ್ತು ಸಿಂಗ್ ಎಲ್ಲರೂ ನೋಟಿಸ್ ಬಂದಿದ್ದು ಆಶ್ಚರ್ಯಕರವಾಗಿದೆ ಎಂದು ಹೇಳಿದ್ದಾರೆ. ಸಿಎಎ ವಿರೋಧಿ ಚಳವಳಿಯಲ್ಲಿ ಭಾಗವಹಿಸಿದ್ದ ಪರ್ವೀನ್ ಅವರಿಗೆ ಮಧ್ಯ ಲಖನೌದ ಗೌತಂಪಳ್ಳಿ ಪೊಲೀಸ್ ಠಾಣೆಯಿಂದ ಕರೆ ಬಂದಿದೆ.
ಸಿಆರ್‌ಪಿಸಿಯ ಸೆಕ್ಷನ್ 41 (ಎ) ಅಡಿಯಲ್ಲಿ ಪೊಲೀಸರು ತನ್ನನ್ನು ಕರೆಸಿಕೊಂಡು ಹತ್ರಾಸ್ ಘಟನೆಯ ವಿರುದ್ಧ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ತನ್ನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ಅವರು ಹೇಳಿದರು. ಸೆಕ್ಷನ್ 188 (ಸಾರ್ವಜನಿಕ ಸೇವಕರಿಗೆ ಅಸಹಕಾರ), 145 (ಕಾನೂನುಬಾಹಿರ ಗುಂಪುಗೂಡುವಿಕೆ ) ಮತ್ತು 353 (ಸಾರ್ವಜನಿಕ ಸೇವಕರನ್ನು ತಡೆಯಲು ಹಲ್ಲೆ) ಅಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
“ಪ್ರತಿಭಟನೆಯ ದಿನದಂದು, ಲಕ್ನೋ ಪೊಲೀಸರು ನನ್ನನ್ನು ರಸ್ತೆಯ ಮೂಲಕ ಎಳೆದೊಯ್ದರು. ಪೊಲೀಸರು ನನ್ನನ್ನು ಆರು ಗಂಟೆಗಳ ಕಾಲ ವಶಕ್ಕೆ ಪಡೆದರು. ಪೊಲೀಸರು ನನ್ನನ್ನು ಎಳೆದೊಯ್ಯುವ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಿದೆ” ಎಂದು ಪರ್ವೀನ್ ಹೇಳಿದ್ದಾರೆ. ಹಿರಿಯ ಮಹಿಳಾ ಹಕ್ಕುಗಳ ಕಾರ್ಯಕರ್ತೆ ಮತ್ತು ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘದ (ಎಐಡಿಡಬ್ಲ್ಯೂಎ) ಹಿರಿಯ ಸದಸ್ಯೆ ಮಧು ಗರ್ಗ್ ಕೂಡ ಇದೇ ರೀತಿಯ ನೋಟಿಸ್ ಸ್ವೀಕರಿಸಿದ್ದಾರೆ. ಇನ್‌ಸ್ಪೆಕ್ಟರ್ ಮಟ್ಟದ ಪೊಲೀಸ್ ಸಿಬ್ಬಂದಿ ತನ್ನ ಕಚೇರಿಗೆ ಬಂದು ವಿಚಾರಣೆ ಮಾಡಿದರು ಎಂದು ಗರ್ಗ್ ದಿ ವೈರ್‌ಗೆ ತಿಳಿಸಿದ್ದಾರೆ, 30 ನಿಮಿಷಗಳ ಕಾಲ ವಿಚಾರಣೆ ನಡೆಸಲಾಯಿತು ಎಂದು ಅವರು ಹೇಳಿದರು.
ಗರ್ಗ್ ಆಡಳಿತಾರೂಢ ಭಾರತೀಯ ಜನತಾ ಪಕ್ಷದ ತೀವ್ರ ವಿಮರ್ಶಕರಾಗಿದ್ದಾರೆ, ಮಹಿಳೆಯರ ಹಕ್ಕುಗಳಿಗಾಗಿ ಸಕ್ರಿಯ ಪ್ರಚಾರಕರಾಗಿದ್ದಾರೆ ಮತ್ತು ಕಳೆದ ಮೂರು ದಶಕಗಳಲ್ಲಿ ಅನೇಕ ಚಳುವಳಿಗಳಿಗೆ ಕಾರಣರಾಗಿದ್ದಾರೆ. ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಅವರು ಕೂಡ ಗಮನ ಸೆಳೆದ ವ್ಯಕ್ತಿಯಾಗಿದ್ದರು.
ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘದ (ಎಐಪಿಡಬ್ಲ್ಯೂಎ) ಮೀನಾ ಸಿಂಗ್ ಕೂಡ ಪೊಲೀಸರ ಮುಂದೆ ಹಾಜರಾಗಲು ಕರೆ ಸ್ವೀಕರಿಸಿದ್ದಾರೆ.. ಆದರೆ ಈವರೆಗೆ ನೋಟಿಸ್‌ನ ಭೌತಿಕ ಪ್ರತಿಯನ್ನು ಪೊಲೀಸರು ಕಳುಹಿಸದ ಕಾರಣ ಅವರು ತನ್ನ ಹೇಳಿಕೆಯನ್ನು ನೋಂದಾಯಿಸಲು ಪೊಲೀಸ್ ಠಾಣೆಗೆ ಭೇಟಿ ನೀಡಿಲ್ಲ. “ಪೊಲೀಸರು ನನಗೆ ಕಾನೂನು ನೋಟೀಸ್ ಕಳುಹಿಸುವವರೆಗೆ ನಾನು ಅಲ್ಲಿಗೆ ಹೋಗುವುದಿಲ್ಲ” ಎಂದು ಅವರು ಹೇಳಿದರು.
ಶಾಂತಿಯುತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಖ್ಯಾತ ಉರ್ದು ಕವಿ ಮುನಾವ್ವರ್ ರಾಣಾ ಅವರ ಪುತ್ರಿಯರಾದ ಸುಮಯ್ಯ ರಾಣಾ ಮತ್ತು ಫೌಜಿಯಾ ರಾಣಾ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
188, 145, ಮತ್ತು 353 ಸೆಕ್ಷನ್‌ಗಳನ್ನು ಹೊರತುಪಡಿಸಿ, ಎಲ್ಲಾ ಕಾರ್ಯಕರ್ತರ ಮೇಲೆ ಸಾಂಕ್ರಾಮಿಕ ರೋಗಗಳ ಕಾಯ್ದೆ, 1897, ಮತ್ತು ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 56 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
2020 ರ ಡಿಸೆಂಬರ್ 29 ರಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕೆಲವೇ ದಿನಗಳ ಮೊದಲು ಸುಮಯ್ಯ ರಾಣಾ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದರು. ನವೆಂಬರ್‌ನಲ್ಲಿ, ಸರ್ಕಾರದ ನೀತಿಗಳನ್ನು ವಿರೋಧಿಸಿದರು ಮತ್ತು ಸಾರ್ವಜನಿಕ ಆಕ್ರೋಶವನ್ನು ಹರಡಿದರು ಎಂದು ಕೈಸರ್ಬಾಗ್ ಪೊಲೀಸರು ಆರೋಪಿಸಿ ಅವರಿಗೆ ನೋಟಿಸ್ ಕಳುಹಿಸಿದ್ದರು. ಸಿಆರ್‌ಪಿಸಿಯ ಸೆಕ್ಷನ್ 107/116 ರ ಅಡಿಯಲ್ಲಿ ನೋಟಿಸ್ ಕಳುಹಿಸಲಾಗಿದೆ.
ಬಾಂಡ್ ತುಂಬಲು ಕೈಸರ್ಬಾಗ್ ಕೊಟ್ವಾಲಿಯಲ್ಲಿರುವ ಅವರ ಕಚೇರಿಯಲ್ಲಿ ಸಹಾಯಕ ಆಯುಕ್ತರ ಮುಂದೆ ಹಾಜರಾಗಿದ್ದೇನೆ ಎಂದು ರಾಣಾ ಹೇಳಿದ್ದಾರೆ. “ನಾನು ಸರ್ಕಾರದ ತಾರತಮ್ಯ ನೀತಿಗಳ ವಿರುದ್ಧ ಮೌನವಾಗಿ ಕುಳಿತುಕೊಳ್ಳುವುದಿಲ್ಲ” ಎಂದು ಅವರು ಹೇಳಿದರು.
ಈಗ ಸಮಾಜವಾದಿ ಪಕ್ಷದ ರಾಷ್ಟ್ರೀಯ ವಕ್ತಾರರಾಗಿರುವ ರಾಣಾ, ಬಿಜೆಪಿ ಸರ್ಕಾರವು “ಎಲ್ಲಾ ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕಲು ಬಯಸಿದೆ ಆದರೆ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದಲ್ಲಿ ಇದು ಅಸಾಧ್ಯ, ಭಾರತದ ಸಂವಿಧಾನವು ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕನ್ನು ನೀಡಿದೆ” ಎಂದು ಹೇಳಿದರು.
ಘಂಟಾ ಘರ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ರಾಣಾ ಕಾಣಿಸಿಕೊಂಡಿದ್ದರು ಮತ್ತು ಸಿಎಎ ಕುರಿತು ಭಾಷಣ ಮಾಡಲು ಇತರ ಪಟ್ಟಣಗಳಿಗೆ ಭೇಟಿ ನೀಡಿದ್ದರು. ಸಿಎಎ ವಿರೋಧಿ ಪ್ರತಿಭಟನೆಯ ಸಂದರ್ಭದಲ್ಲಿ ಅವರ ವಿರುದ್ಧವೂ ಪ್ರಕರಣಗಳು ದಾಖಲಾಗಿವೆ.
ಲಕ್ನೋದಲ್ಲಿ ದಾಖಲಾದ ಸುಮಾರು 7,000 ಪ್ರಕರಣಗಳ ಬಗ್ಗೆ ಯುಪಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತನಿಖಾ ಅಧಿಕಾರಿ ಸಂತೋಷ್ ಕುಮಾರ್ ಗೌಡ್ ಮಾತನಾಡಿ “10 ಮಹಿಳೆಯರ ವಿರುದ್ಧ ಪ್ರಕರಣಗಳು ದಾಖಲಾಗಿವೆ, ಮತ್ತು ಈಗ ಪೊಲೀಸ್ ಸಿಬ್ಬಂದಿ ಅವರನ್ನು ಕರೆದು ಹೇಳಿಕೆಗಳನ್ನು ದಾಖಲಿಸುತ್ತಿದ್ದಾರೆ” ಎಂದು ಹೇಳಿದರು.
ಸುಮಯ್ಯ ರಾಣಾ ಅವರ ನೇತೃತ್ವದಲ್ಲಿ 30 ರಿಂದ 35 ಮಹಿಳೆಯರ ಗುಂಪು “ಸರ್ಕಾರ ವಿರೋಧಿ ಮೆರವಣಿಗೆ” ನಡೆಸಿ ಸಿಆರ್‌ಪಿಸಿಯ ಸೆಕ್ಷನ್ 144 ಅನ್ನು ಉಲ್ಲಂಘಿಸಿದೆ ಎಂದು ಯುಪಿ ಪೊಲೀಸರು ತಮ್ಮ ವರದಿಯಲ್ಲಿ ಹೇಳಿಕೊಂಡಿದ್ದಾರೆ,.
ಹುಸೇನಾಬಾದ್‌ನ ಐತಿಹಾಸಿಕ ಘಂಟಾ ಘರ್‌ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಸಿದ ನಂತರ ಲಖನೌದ ಠಾಕೂರ್‌ಗಂಜ್ ಪೊಲೀಸ್ ಠಾಣೆಯಲ್ಲಿ 300 ಪ್ರತಿಭಟನಾಕಾರರ ವಿರುದ್ಧ, ಹೆಚ್ಚಾಗಿ ಮಹಿಳೆಯರ ವಿರುದ್ಧ ಸುಮಾರು 16 ಎಫ್‌ಐಆರ್ ದಾಖಲಿಸಲಾಗಿದೆ. ಸಾಂಕ್ರಾಮಿಕ ರೋಗದ ನಡುವೆಯೂ ಪ್ರತಿಭಟನಾ ನಿರತ ಮಹಿಳೆಯರು ಮಾಸ್ಕ್ ಧರಿಸಿರಲಿಲ್ಲ ಮತ್ತು ಪೊಲೀಸ್ ಅಧಿಕಾರಿಗಳೊಂದಿಗೆ ಗಲಾಟೆ ಮಾಡಿದ್ದಾರೆ ಎಂದು ಪೊಲೀಸರು ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: ದೇವಾಲಯದಲ್ಲಿ ನೀರು ಕುಡಿದ ಮುಸ್ಲಿಂ ಬಾಲಕನ ಮೇಲೆ ಕ್ರೂರ ಹಲ್ಲೆ- ಆರೋಪಿಯ ಬಂಧನ


