ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ದಿನೇ ದಿನೇ ಕಾವೇರುತ್ತಿದೆ. ಅಂಕಣಕಾರ ಸ್ವಪನ್ ದಾಸ್‌ಗುಪ್ತಾ ಬಿಜೆಪಿಯಿಂದ ತಾರಕೇಶ್ವರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಹಿನ್ನೆಲೆಯಲ್ಲಿ ಸಂವಿಧಾನದ ನಿಯಮಗಳನ್ನು ಉಲ್ಲೇಖಿಸಿ ಅವರನ್ನು ರಾಜ್ಯಸಭಾ ಸ್ಥಾನದಿಂದ ಅನರ್ಹಗೊಳಿಸುವಂತೆ ಟಿಎಂಸಿ ಆಗ್ರಹಿಸಿದ ಕೆಲವೇ ಗಂಟೆಗಳಲ್ಲಿ ದಾಸ್‌ಗುಪ್ತಾರವರು ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.
ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ವ್ಯಕ್ತಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವಂತಿಲ್ಲ. ಆದರೆ ಸ್ವಪನ್ ದಾಸ್‌ಗುಪ್ತಾರವರು ಬಿಜೆಪಿಯಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದರಿಂದ ಅವರನ್ನು ರಾಜ್ಯಸಭಾ ಸ್ಥಾನದಿಂದ ಅನರ್ಹಗೊಳಿಸುವಂತೆ ಟಿಎಂಸಿ ಪಕ್ಷ ಒತ್ತಾಯಿಸಿತ್ತು. ಈ ಕುರಿತು ಟಿಎಂಸಿ ಸಂಸದೆ ಮೊಹುವ ಮೊಯಿತ್ರ ಟ್ವೀಟ್ ಮಾಡಿದ್ದರು. ಇದೇ ಸಂದರ್ಭದಲ್ಲಿ ಸ್ವಪನ್ ದಾಸ್‌ಗುಪ್ತಾ, “ಉತ್ತಮ ಬಂಗಾಳದ ಹೋರಾಟಕ್ಕೆ ಸಂಪೂರ್ಣವಾಗಿ ಬದ್ಧರಾಗುವ ನಿಟ್ಟಿನಲ್ಲಿ ನಾನು ಇಂದು ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ತಾರಕೇಶ್ವರ ವಿಧಾನಸಭಾ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಭರವಸೆ ಇದೆ. ಅಷ್ಟರೊಳಗೆ ಎಲ್ಲಾ ಕಾನೂನು ತೊಡಕುಗಳನ್ನು ಮುಗಿಸುವ ವಿಶ್ವಾಸವೂ ಇದೆ” ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
I have resigned from the Rajya Sabha today to commit myself totally to the fight for a better Bengal. I hope to file my nomination as BJP candidate for the Tarakeshwar Assembly seat in the next few days.
— Swapan Dasgupta (@swapan55) March 16, 2021
65 ವರ್ಷದ ಸ್ವಪನ್ ದಾಸ್‌ಗುಪ್ತಾ ಅವರನ್ನು 2016 ರಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಮೇಲ್ಮನೆಗೆ ನಾಮ ನಿರ್ದೇಶನ ಮಾಡಿದ್ದರು. ಅವರ ರಾಜ್ಯಸಭಾ ಅವಧಿ ಏಪ್ರಿಲ್ 2022 ರವರೆಗೆ ಇತ್ತು. ಆದರೆ ಬಿಜೆಪಿ ಅಭ್ಯರ್ಥಿಯಾಗಿ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಇಂದು ರಾಜೀನಾಮೆ ಸಲ್ಲಿಸಿದ್ದಾರೆ. ನಾಳೆ ಅವರ ರಾಜೀನಾಮೆ ಸ್ವೀಕಾರಗೊಳ್ಳಲಿದೆ ಎನ್ನಲಾಗಿದೆ.
ನಾನು ರಾಜ್ಯಸಭೆಗೆ ರಾಜೀನಾಮೆ ನೀಡಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಈ ಎರಡು ವಿಷಯಗಳಲ್ಲಿ ಕೆಲ ಗೊಂದಲಗಳಿರುವುದು ನಿಜ. ವಿಧಾನಸಭೆಗೆ ನಾಮಪತ್ರ ಸಲ್ಲಿಸುವ ವೇಳೆಗೆ ಈ ಗೊಂದಲಗಳನ್ನು ನಿವಾರಿಸಲಾಗುತ್ತದೆ. ನಾನಿನ್ನು ನಾಮಪತ್ರ ಸಲ್ಲಿಸಿಲ್ಲ. ಈ ಗುರುವಾರ ಅಥವಾ ಶುಕ್ರವಾರ ಸಲ್ಲಿಸುತ್ತೇನೆ. ಅಷ್ಟರಲ್ಲಿ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ದಾಸ್‌ಗುಪ್ತಾ ಹೇಳಿದ್ದಾರೆ.
Swapan Dasgupta Resigns From Rajya Sabha.
Thank you Sir- we wish you well for the upcoming WB pollshttps://t.co/8kMHzTV6qz— Mahua Moitra (@MahuaMoitra) March 16, 2021
ದಾಸ್‌ಗುಪ್ತಾ ರಾಜೀನಾಮೆ ನಂತರ ಪ್ರತಿಕ್ರಿಯಿಸಿರುವ ಟಿಎಂಸಿ ಸಂಸದೆ ಮೊಹುವ ಮೊಯಿತ್ರ “ರಾಜೀನಾಮೆ ನೀಡಿದ್ದಕ್ಕೆ ಧನ್ಯವಾದಗಳು ಸರ್. ಮುಂಬರುವ ಬಂಗಾಳ ಚುನಾವಣೆಗೆ ನಾವು ಶುಭಕೋರುತ್ತೇವೆ” ಎಂದು ಟ್ವೀಟ್ ಮಾಡುವು ಮೂಲಕ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ‘ಆರೋಪಿ ನಂಬರ್ 1’ – ಆಂಧ್ರ ಮಾಜಿ ಮುಖ್ಯಮಂತ್ರಿಗೆ ನೋಟಿಸ್ ನೀಡಿದ ಸಿಐಡಿ!


